लाइव कैलेंडर

February 2025
M T W T F S S
 123
45678910
11121314151617
18192021222324
25262728293031
11/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಾಲಕರೆಂಬ ಮಧ್ಯವರ್ತಿ ಜೀವಂತ ವಾಹನಗಳು ಮತ್ತು ಮಾಧ್ಯಮಗಳು ಹಾಗು ಚಾಲನೆ ಎಂಬ ಕಲೆ……….

1 min read

ಚಾಲಕರೆಂಬ ಮಧ್ಯವರ್ತಿ ಜೀವಂತ ವಾಹನಗಳು ಮತ್ತು ಮಾಧ್ಯಮಗಳು ಹಾಗು ಚಾಲನೆ ಎಂಬ ಕಲೆ……….

ಇಡೀ ದೇಶದಲ್ಲಿ ಅಥವಾ ವಿಶ್ವದಲ್ಲಿ ಮನುಷ್ಯರ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವುದು ಈ ಆಧುನಿಕ ಕಾಲದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಯುಗದಲ್ಲಿ ಟೆಲಿಫೋನ್, ಮೊಬೈಲ್, ಸಾಮಾಜಿಕ ಜಾಲತಾಣಗಳು ಮುಂತಾದ ಕೆಲವನ್ನು ಹೆಸರಿಸಲಾಗುತ್ತದೆ. ಆದರೆ ಅದರಷ್ಟೇ ಪ್ರಾಮುಖ್ಯತೆ ಪಡೆದು ಅದಕ್ಕಿಂತ ಪ್ರಮುಖವಾಗಿ ಇಡೀ ಜನ ಸಮೂಹವನ್ನು ಫಿಸಿಕಲಿ ಅಂದ್ರೆ ಭೌತಿಕವಾಗಿ ಒಗ್ಗೂಡಿಸುವುದು ಬೃಹತ್ ಸಂಪರ್ಕ ಜಾಲ ವ್ಯವಸ್ಥೆ ಹೊಂದಿರುವ ಚಾಲಕರು ಎಂಬ ಚಲಿಸುವ ಜೀವಂತ ವಾಹನಗಳು. ಹೌದು, ಖಂಡಿತವಾಗಲೂ ಚಾಲಕರಿಗೆ ಜೀವಂತ ವಾಹನಗಳು ಎಂದು ಆತ್ಮಸಾಕ್ಷಿಯಾಗಿ ಕರೆಯಲೇಬೇಕಾಗುತ್ತದೆ.

ಭಾರತದಂತಹ ಅತ್ಯಂತ ಸಂಕೀರ್ಣ ಭೌಗೋಳಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಚಾಲಕರು ಬಹು ಮುಖ್ಯಪಾತ್ರ ವಹಿಸುತ್ತಾರೆ. ಹೇಗೆ ಶಿಕ್ಷಕರು, ವೈದ್ಯರು, ಸೈನಿಕರು ಮುಂತಾದ ಅತ್ಯಂತ ಅವಶ್ಯಕ ವೃತ್ತಿಗಳಂತೆ ಚಾಲನಾ ವೃತ್ತಿಯು ಒಂದು ಮತ್ತು ಚಾಲಕರು ಅತ್ಯಂತ ಮಹತ್ವ ಪಡೆದಿದ್ದಾರೆ.

ಚಾಲಕರಿಲ್ಲದ ದೇಶವನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಹಾಗೆಯೇ ಚಾಲಕರಿಲ್ಲದೆ ದೇಶವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಅಷ್ಟೊಂದು ಮಹತ್ವದ ಪಾತ್ರ ನಿರ್ವಹಿಸುವುದು ಚಾಲಕರು.

ಹಾಗಾದರೆ ಭಾರತದಲ್ಲಿ ಚಾಲಕರ ಪರಿಸ್ಥಿತಿ ಹೇಗಿದೆ ? ಆತ್ಮ ವಂಚನೆ ಮಾಡಿಕೊಳ್ಳದೆ ಈ ವಿಷಯವನ್ನು ಸೂಕ್ಷ್ಮವಾಗಿ, ಸಂವೇದನಾಶೀಲರಾಗಿ ಗಮನಿಸ ಬೇಕಾಗುತ್ತದೆ.

ಸಾಮಾನ್ಯವಾಗಿ ಚಾಲಕ ವೃತ್ತಿ ಒಂದು ರೀತಿ ಎರಡನೆಯ ದರ್ಜೆಯ ವೃತ್ತಿಯಂತೆ ಮತ್ತು ಚಾಲಕರನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ ನೋಡಲಾಗುತ್ತದೆ. ಅಂದರೆ ಸಾಮಾನ್ಯವಾಗಿ ಬಹುತೇಕ ಎಲ್ಲರೂ ಅಲ್ಲ, ಕೆಲವರು ಏಕವಚನದಲ್ಲಿಯೇ ಮಾತನಾಡಿಸುತ್ತಾರೆ ಮತ್ತು ಚಾಲಕರು ಎಂಬ ವೃತ್ತಿ ಅಷ್ಟೇನೂ ಪ್ರಾಮುಖ್ಯವಲ್ಲದ, ಕೆಲವೊಮ್ಮೆ ಕೂಲಿ ಕಾರ್ಮಿಕರಂತೆ ನಡೆಸಿಕೊಳ್ಳುವುದೂ ಉಂಟು.

ಅದಕ್ಕೆ ಕಾರಣ ಚಾಲಕರ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿಗಳು. ಈ ಮೂರು ಪ್ರಮುಖ ಕಾರಣಗಳಿಂದಾಗಿ ಚಾಲಕರನ್ನು ಸ್ವಲ್ಪ ಕೆಳಮಟ್ಟದಲ್ಲಿ ಗುರುತಿಸಲಾಗುತ್ತದೆ. ಚಾಲಕರು ಸ್ವಲ್ಪಮಟ್ಟಿಗೆ ಸಂಘಟಿತರಾದರೂ ಬಹುತೇಕ ಅಸಂಘಟಿತ ಕಾರ್ಮಿಕರೆಂದೇ ಕರೆಯಬೇಕಾಗುತ್ತದೆ.

ಏಕೆಂದರೆ ಚಾಲಕ ವೃತ್ತಿ ತುಂಬಾ ವೈವಿಧ್ಯಮಯವಾಗಿದೆ. ಸಣ್ಣ ವಾಹನಗಳಿಂದ ಪ್ರಾರಂಭವಾಗಿ ಖಾಸಗಿ ಮತ್ತು ವಾಣಿಜ್ಯ ವಾಹನಗಳ ಚಾಲನೆ, ಸರ್ಕಾರಿ ವಾಹನ ಚಾಲಕರು, ವೈಯಕ್ತಿಕವಾಗಿ ಒಬ್ಬ ವ್ಯಕ್ತಿ, ಒಂದು ಕುಟುಂಬ ಅಥವಾ ಒಂದು ಸಂಸ್ಥೆಗೆ ಚಾಲನೆ ಮಾಡುವ ರೀತಿಯಲ್ಲಿ ವಿಭಿನ್ನತೆ ಹೊಂದಿರುವುದರಿಂದ ಮತ್ತು ಚಾಲಕರ ವೇತನದಲ್ಲಿ ಸಹ ಸಾಕಷ್ಟು ವ್ಯತ್ಯಾಸ ಇರುವುದರಿಂದ ಚಾಲಕರು ಒಂದು ಸಂಘಟನಾತ್ಮಕವಾಗಿ ಬೆಳೆಯಲು ಸಾಧ್ಯವಾಗಲಿಲ್ಲ.

ಹಾಗೆಯೇ ಚಾಲಕರಿಗೆ ಸಮಯದ ಒತ್ತಡ ತುಂಬಾ ಇದೆ. ಇಂದಿನ ಆಧುನಿಕ ಕಾಲದಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆಯಿಂದ ಚಾಲಕರು ಬಹಳಷ್ಟು ಸಮಯವನ್ನು ರಸ್ತೆಗಳಲ್ಲಿಯೇ ಕಳೆಯುತ್ತಾರೆ ಮತ್ತು ಬಹುದೂರದ ಪ್ರಯಾಣವನ್ನು ಸಹ ಮಾಡಬೇಕಾಗಿರುವುದರಿಂದ ಚಾಲಕರಲ್ಲಿ ಸಮಯದ ಅಭಾವ ಬಹುಮುಖ್ಯ ಪಾತ್ರ ವಹಿಸುತ್ತಿದೆ.

ಹಾಗೆಯೇ ಒಂದು ರೀತಿಯಲ್ಲಿ ಚಾಲಕರಲ್ಲಿ ಸಾಮಾನ್ಯ ಜನರಿಗಿಂತ ಆರೋಗ್ಯದ ಸಮಸ್ಯೆ ಎರಡು ಪಟ್ಟು ಹೆಚ್ಚಾಗಿರುತ್ತದೆ. ಏಕೆಂದರೆ ಚಾಲನೆ ಎಂಬುದು ಅತ್ಯಂತ ಒತ್ತಡದ ಕೆಲಸ ಮತ್ತು ನಮಗೆಲ್ಲಾ ತಿಳಿದಿರುವಂತೆ ಕೃತಜ್ಞತೆ ಇಲ್ಲದ ಕೆಲಸವೂ ಹೌದು. ಚಾಲಕರಿಗೆ ಕೃತಜ್ಞತಾ ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುವುದು ತುಂಬಾ ಕಡಿಮೆ.

ಆದ್ದರಿಂದ ಈಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚಾಲಕರ ಪರಿಸ್ಥಿತಿಯ ಬಗ್ಗೆ ಶೀಘ್ರವಾಗಿಯೇ ಗಮನಹರಿಸಬೇಕಾಗಿದೆ. ಅವರ ಬದುಕು ಬವಣೆ, ಕುಟುಂಬ, ಸಾಮಾಜಿಕ ಮಾನ್ಯತೆ ಇವುಗಳ ಬಗ್ಗೆ ಮತ್ತು ಇವುಗಳನ್ನು ಮೇಲ್ದರ್ಜೆಗೆ ಏರಿಸಲು ಗಂಭೀರವಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಚಾಲಕರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಒಂದು ಅಧ್ಯಯನ ಸಮಿತಿಯನ್ನು ರಚಿಸಬೇಕಾಗಿದೆ. ಅದು ಕಾಲಮಿತಿಯೊಳಗೆ ನೀಡುವ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಏಕೆಂದರೆ,

ಚಾಲಕ – ಚಾಲನಾ ಎಂಬ ವೃತ್ತಿ ಮತ್ತು ಕಲೆ……

ಡ್ರೈವಿಂಗ್ ಎಂಬುದು ಒಂದು ಯೋಜನಾ ಬದ್ದ ಮತ್ತು ಯೋಚನಾ ಬದ್ದ ವೃತ್ತಿ – ಕಲೆ…….‌‌‌‌‌….‌‌‌‌‌

ಮುಖ್ಯವಾಗಿ ರಸ್ತೆ ಮೇಲಿನ ವಾಹನಗಳ ಚಾಲನೆಗೆ ಸಂಬಂಧಿಸಿದಂತೆ ಈ ಅಭಿಪ್ರಾಯ……….

ಬೆಂಗಳೂರು – ಚೆನ್ನೈ,
ಬೆಂಗಳೂರು – ಮುಂಬಯಿ,
ಬೆಂಗಳೂರು – ಹೈದರಾಬಾದ್,
ಬೆಂಗಳೂರು – ಮೈಸೂರು,
ಬೆಂಗಳೂರು – ಮಂಗಳೂರು,
ಬೆಂಗಳೂರು – ತಿರುಪತಿ
ಸೇರಿ ಯಾವುದೇ ಮುಖ್ಯ ರಸ್ತೆಯಲ್ಲಿ ನೀವು ಪ್ರಯಾಣಿಸಿದರೆ 90/1೦೦ ಕಿಲೋಮೀಟರ್ ಒಳಗೆ ಕನಿಷ್ಠ ಒಂದಾದರೂ ಸಣ್ಣ/ದೊಡ್ಡ ಪ್ರಮಾಣದ ಅಪಘಾತವಾಗಿರುವ ದೃಶ್ಯಗಳನ್ನು ದಿನನಿತ್ಯ ಕಾಣಬಹುದು.

ಹಾಗೆಯೇ ನಗರ ಪ್ರದೇಶದಲ್ಲಿ ಓಡಾಡುವ ಎಲ್ಲಾ ವರ್ಗದ ಬಹುತೇಕ ವಾಹನಗಳು ಸ್ವಲ್ಪವಾದರೂ ಏಟು ತಿಂದಿರುವ ಲಕ್ಷಣಗಳನ್ನು ಗಮನಿಸಬಹುದು ಮತ್ತು ಅಲ್ಲಿನ ಜನರ ಅಪಘಾತಗಳ ನೆನಪುಗಳನ್ನು ಕೇಳಬಹುದು.

ಇಷ್ಟೊಂದು ವ್ಯಾಪಕವಾದ ಅಪಘಾತಗಳಿಗೆ ಅಪರೂಪದ ತಾಂತ್ರಿಕ ಮತ್ತು ಆಕಸ್ಮಿಕ ಅಂಶಗಳನ್ನು ಹೊರತುಪಡಿಸಿ ನಮ್ಮ ಜನಗಳ ಒಟ್ಟು ವ್ಯಕ್ತಿತ್ವವೇ ಬಹುಮುಖ್ಯ ಕಾರಣವಾಗಿದೆ……..

ಚಾಲನೆ ಎಂಬುದು ಒಂದು ಕಲಿಕೆಯ ಕ್ರಮ. ಶಿಕ್ಷಣ, ಸಂಗೀತ, ಸಾಹಿತ್ಯ, ಕ್ರೀಡೆ, ನಟನೆಯಂತೆ, ವೈದ್ಯಕೀಯ, ಇಂಜಿನಿಯರಿಂಗ್, ಕಟ್ಟಡ ನಿರ್ಮಾಣ ಮುಂತಾದ ವೃತ್ತಿಗಳಂತೆ ಚಾಲನೆ ಕೂಡ ಅತ್ಯಂತ ಹೆಚ್ಚಿನ ಕುಶಲತೆ ಮತ್ತು ಏಕಾಗ್ರತೆ ಬಯಸುವ ಒಂದು ಕಲೆ ಮತ್ತು ವೃತ್ತಿ.

ಕೇವಲ ಒಂದಷ್ಟು ಅಭ್ಯಾಸದ ನಂತರ ಸ್ಟೀರಿಂಗ್ ಹಿಡಿದು ಕ್ಲಚ್ ಮುಖಾಂತರ ಗೇರ್ ಬದಲಾಯಿಸಿ ವಾಹನವನ್ನು ಮುಂದಕ್ಕೆ ಓಡಿಸಿದ ಮಾತ್ರಕ್ಕೆ ಯಾರೂ ಚಾಲಕರಾಗುವುದಿಲ್ಲ. ಏಕೆಂದರೆ ರಸ್ತೆಗಳಲ್ಲಿ ನಾವು ಮಾತ್ರ ಓಡಾಡಲು ಇದು ನಮ್ಮ ಸ್ವಂತ ಆಸ್ತಿಯಲ್ಲ. ಅಲ್ಲಿ ವಾಸಿಸುವ ಪ್ರತಿ ಜೀವಿಗೂ ಅದರಲ್ಲಿ ಪಾಲಿದೆ.

ಚಾಲಕನಾದವನು ಆ ಎಲ್ಲಾ ಸಂಕೀರ್ಣ ವ್ಯವಸ್ಥೆಯನ್ನು ಅರಿತು ಯಾರಿಗೂ ಹಾನಿಯಾಗದಂತೆ ಅತ್ಯಂತ ಎಚ್ಚರಿಕೆಯಿಂದ ವಾಹನ ಮುನ್ನಡೆಸಬೇಕು. ಅದೊಂದು ಯೋಜನಾಬದ್ಧ ಕಲೆಗಾರಿಕೆ.

ಆದರೆ ನಮ್ಮಲ್ಲಿ ಈ ಬಗ್ಗೆ ತುಂಬಾ ಕೆಳಮಟ್ಟದ ಭಾವನೆ ಇದೆ. ಯಾರು ಬೇಕಾದರೂ ವಾಹನವನ್ನು ಸುಲಭವಾಗಿ ಚಲಾಯಿಸಬಹುದು ಎಂಬ ಅಭಿಪ್ರಾಯವಿದೆ. ಅದರ ಫಲವೇ ಇಡೀ ದೇಶದಲ್ಲಿ ಪ್ರತಿ ನಿಮಿಷಕ್ಕೆ ಹಲವಾರು ಪ್ರಾಣಗಳ ಮಾರಣ ಹೋಮ. ಮನೆಯಿಂದ ಹೊರಗೆ ಹೋದ ವ್ಯಕ್ತಿ ಮನೆಗೆ ಬರುವವರೆಗೂ ಅಭದ್ರತೆಯಿಂದ ಕಾಯುವ ಆತಂಕದ ನರಕಯಾತನೆ.

ಇದಕ್ಕೆ ಕೆಲವು ಉದಾಹರಣೆ ಗಮನಿಸಿ…….

ಎಷ್ಟೋ ಜನ ವಾಹನ ಖರೀದಿಸಿದ ನಂತರ ಚಾಲನಾ ಪರವಾನಗಿ ಪಡೆದು ಆಮೇಲೆ ರಸ್ತೆಗಳ ಮೇಲೆ ಪ್ರಯೋಗ ಮಾಡುತ್ತಾರೆ.

ವಾಹನವನ್ನು ಮುಂದಕ್ಕೆ ಹಿಂದಕ್ಕೆ ಚಲಿಸುವುದು ಕಲಿತ ಮಾತ್ರಕ್ಕೆ ನಮಗೆ ಚಾಲನೆ ಬರುತ್ತದೆ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ.

ವಾಣಿಜ್ಯ ವಾಹನಗಳನ್ನು ತೀರ್ಥ ಯಾತ್ರೆಯ ಅಥವಾ ಪ್ರೇಕ್ಷಣೀಯ ಅಥವಾ ಸಮಾರಂಭಗಳಿಗೆ ತೆಗೆದುಕೊಂಡು ಹೋಗುವವರು ಅವರ ಸಮಯದ ಅನುಕೂಲಕ್ಕೆ ತಕ್ಕಂತೆ ಚಾಲಕನ ನಿದ್ರೆ ಮತ್ತು ಊಟವನ್ನು ನಿಯಂತ್ರಿಸುತ್ತಾರೆ. ರಾತ್ರಿ ವೇಳೆ ಪ್ರಯಾಣ ಮಾಡಿ ದಿನವಿಡೀ ಓಡಾಡಿಸಿ ಏನೋ ಮಹಾ ಉಪಕಾರ ಮಾಡಿದಂತೆ ಚಾಲಕರಿಗೆ ಒಂದೆರೆಡು ಗಂಟೆಗಳ ನಿದ್ರೆಗೆ ಅವಕಾಶ ನೀಡಿ ಮತ್ತೆ ರಾತ್ರಿಯ ವೇಳೆ ವಾಹನ ಚಲಾಯಿಸುವಂತೆ ಮಾಡುತ್ತಾರೆ. ಚಾಲಕ ಏನು ಸೂಪರ್ ಮ್ಯಾನ್ ಅಲ್ಲವಲ್ಲ. ಸಾಮಾನ್ಯವಾಗಿ ಹಗಲಿನಲ್ಲಿ ಎಷ್ಟೇ ನಿದ್ದೆ ಮಾಡಿದರು ರಾತ್ರಿ 12/4 ಗಂಟೆಯ ನಡುವೆ ನಿದ್ರೆ ಎಳೆಯುವುದು ದೇಹದ ಸಹಜ ನಡವಳಿಕೆ.

ದಿನಕ್ಕೆ 8 ಗಂಟೆಗಳು ಮಾತ್ರ ಚಾಲನೆ, ಒಟ್ಟು ಸಮಾಜದ ಮನೋಭಾವ, ವ್ಯಕ್ತಿಗಳ ಸಂಪೂರ್ಣ ಮಾಗಿದ ವ್ಯಕ್ತಿತ್ವ, ಚಾಲನಾ ವೃತ್ತಿಗೆ ಗೌರವ, ಹದ್ದು ಮೀರಿದ ಚಾಲಕನಿಗೆ ತಕ್ಷಣವೇ ಲೈಸೆನ್ಸ್ ಅಮಾನತು, ಖಾಸಗಿ ವಾಹನಗಳ Fitness ಗೆ ತುಂಬಾ ಮಹತ್ವ ಮುಂತಾದ ಅನೇಕ ಕ್ರಮಗಳನ್ನು ಕೈಗೊಂಡರೆ ಮಾತ್ರ ಅಪಘಾತಗಳು ಕಡಿಮೆಯಾಗಬಹುದು.

ಕೇವಲ ಘಟನೆ ನಡೆದಾಗ ಯಾರೋ ಒಬ್ಬ RTO ಅಥವಾ ಡ್ರೈವರ್ ಅಥವಾ ವಾಹನ ಮಾಲೀಕ ಅಥವಾ ‌ರಸ್ತೆ ನಿರ್ಮಿಸಿದವ ಅಥವಾ ವಾಹನ ನಿರ್ಮಿಸಿದವನ ಮೇಲೆ ಕ್ರಮ ಕೈಗೊಂಡರೆ ಅಪಘಾತಗಳು ನಿಲ್ಲುವುದಿಲ್ಲ. ಎಂದಿನಂತೆ ಸಾವು ಗೋಳಾಟ ವಿಧಿಲೀಲೆ ದುರಾದೃಷ್ಟ ಎಂದು ಸಮಾಧಾನ ಮಾಡಿಕೊಳ್ಳಬೇಕಷ್ಟೆ.

ನೀವು ಯಾವುದೇ ರೀತಿಯ ವಾಹನ ಚಾಲಕರಾಗಿದ್ದರೂ ದಯವಿಟ್ಟು ವಾಹನ ಚಾಲನೆ ಒಂದು ಬಹುದೊಡ್ಡ ಕಲೆ ಮತ್ತು ಅದೇ ಸಮಯದಲ್ಲಿ ಒಂದು ದೊಡ್ಡ ಜವಾಬ್ದಾರಿ ಎಂಬ ಮನೋಭಾವದಿಂದ ವಾಹನ ಚಲಾಯಿಸಿ. ಆಗ ಕನಿಷ್ಠ ಇದರಿಂದಾಗುವ ಅನಾಹುತ ತಪ್ಪಿಸಬಹುದು.

ಚಾಲಕರ ಕೆಲವು ಪ್ರಮುಖ ಬೇಡಿಕೆಗಳು
*********************
1) ಚಾಲಕರ ಎಲ್ಲಾ ಸಮಸ್ಯೆಗಳ ಪರಿಹಾರ ಒಂದೇ ಕಡೆ ಸಿಗುವಂತೆ ಚಾಲಕ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು

2) ಚಾಲಕರಿಗೆ ಜೀವ ವಿಮೆ ಮತ್ತು ಆರೋಗ್ಯ ವಿಮೆ ಕಡ್ಡಾಯಗೊಳಿಸಬೇಕು. ಅದನ್ನು ಸರ್ಕಾರವೇ ಒಂದು ಯೋಜನೆಯ ಮೂಲಕ ಖಾತರಿ ಪಡಿಸಬೇಕು.

3) ದೇಶದಾದ್ಯಂತ ಸಂಚರಿಸುವ ವಾಹನಗಳ ಚಾಲಕರಿಗೆ ಮಧ್ಯೆ ಮಧ್ಯೆ ವಿಶ್ರಾಂತಿಗಾಗಿ ಚಾಲಕ ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕು.

4) ಅಪಘಾತದ ಸಂದರ್ಭದಲ್ಲಿ ಚಾಲಕರನ್ನು ಸಾರ್ವಜನಿಕರು ಮನಸೋ ಇಚ್ಛೆ ಹಲ್ಲೆ ನಡೆಸುವುದನ್ನು ನಿಷೇಧಿಸಬೇಕು ಮತ್ತು ಚಾಲಕರನ್ನು ಪೊಲೀಸರಿಗೆ ಒಪ್ಪಿಸುವ ಕೆಲಸವನ್ನು ಮಾತ್ರ ಸಾರ್ವಜನಿಕರು ಮಾಡುವಂತಿರಬೇಕು.

5) ಯಾವುದೇ ಚಾಲಕರನ್ನು ಪೊಲೀಸರಾಗಲಿ, ಸಾರಿಗೆ ಅಧಿಕಾರಿಗಳಾಗಲಿ, ಸಾರ್ವಜನಿಕರೇ ಆಗಲಿ ಏಕವಚನದಲ್ಲಿ ಸಂಬೋಧಿಸುವ ಚಾಳಿಯನ್ನು ನಿಷೇಧಿಸಬೇಕು. ಅವರಿಗೂ ಎಲ್ಲರಂತೆ ಗೌರವ ಮರ್ಯಾದೆ ನೀಡಬೇಕು.

ಚಾಲಕರು ನಿಜಕ್ಕೂ ಸಂಪೂರ್ಣ ನೆಮ್ಮದಿಯಿಂದ ತಮ್ಮ ಕಾರ್ಯ ನಿರ್ವಹಿಸಿದರೆ ರಾಜ್ಯ ಮತ್ತು ದೇಶದ ಪ್ರಗತಿ ಇನ್ನಷ್ಟು ವೇಗ ಪಡೆಯುತ್ತದೆ ಮತ್ತು ಬಲಗೊಳ್ಳುತ್ತದೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು, ಕಾರ್ಮಿಕ ಸಚಿವರು, ಸಾರಿಗೆ ಸಚಿವರು ಈ ಬಗ್ಗೆ ಗಮನ ಹರಿಸಿ ಚಾಲನೆ ಚಾಲಕ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ಕೊಡಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ. ಧನ್ಯವಾದಗಳು

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……

About Author

Leave a Reply

Your email address will not be published. Required fields are marked *

You may have missed