ನಿಂತ ನೀರಾದ ಚಿಕ್ಕಮಗಳೂರು ನಗರದ ಅಭಿವೃದ್ಧಿ: ಹೊಲದಗದ್ದೆ ಗಿರೀಶ್.
1 min readನಿಂತ ನೀರಾದ ಚಿಕ್ಕಮಗಳೂರು
ನಗರದ ಅಭಿವೃದ್ಧಿ: ಹೊಲದಗದ್ದೆ ಗಿರೀಶ್.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಾ ಬಂದರೂ ಚಿಕ್ಕಮಗಳೂರು ನಗರದ ಅಭಿವೃದ್ಧಿ ಮಾತ್ರ ನಿಂತ ನೀರಾಗಿದೆ. ಶಾಸಕರು, ಸಚಿವರು ಜನತೆಗೆ ಕೇವಲ ಗ್ಯಾರಂಟಿ ಗಂಟನ್ನು ತೋರಿಸುತ್ತಾ ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹೊಲದಗದ್ದೆ ಗಿರೀಶ್ ಆರೋಪಿಸಿದ್ದಾರೆ.
ಸರ್ಕಾರ ಬದಲಾದರೂ ನಗರದ ಚಹರೆ ಮಾತ್ರ ಬದಲಾಗಲೇ ಇಲ್ಲ. ಬದಲಾಗಿ ರಸ್ತೆ, ಚರಂಡಿ, ಕುಡಿಯುವ ನೀರು ಇನ್ನಿತರೆ ಮೂಲ ಸೌಕರ್ಯಗಳ ಪರಿಸ್ಥಿತಿ ಸಹ ಹಾಗೇ ಇದೆ. ಇಲ್ಲವೇ ಇನ್ನಷ್ಟು ಸಮಸ್ಯೆ ಹೆಚ್ಚಾಗಿದೆ ಎಂದಿದ್ದಾರೆ.
ಕಳೆದ ವರ್ಷ ಕುಡಿಯುವ ನೀರಿಗೆ ಪ್ರಮುಖ ಮೂಲವಾದ ಯಗಚಿ ಯೋಜನೆಯ ಜಾಕ್‌ವೆಲ್‌ನ ಮೋಟಾರ್ ಕೆಟ್ಟು ನಗರಕ್ಕೆ ಸುಮಾರು 15 ದಿನಗಳ ಕಾಲ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಇದೇ ಸಂದರ್ಭಕ್ಕೆ ನಗರಕ್ಕೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಮೋಟಾರ್ ಖರೀದಿ ಸೇರಿದಂತೆ ನಗರದಲ್ಲಿ ಕುಡಿಯುವ ನೀರಿನ ಸಂಪರ್ಕ ಜಾಲವನ್ನು
ಬಲ ಪಡಿಸಲು ತುರ್ತಾಗಿ 32 ಕೋಟಿ ಬಿಡುಗಡೆ ಮಾಡುವುದಾಗಿ ನೀಡಿದ್ದ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದೆ.
ಅಂದು 15 ದಿನಗಳಲ್ಲಿ ಪ್ರಸ್ತಾವನೆಯನ್ನು ಕಳಿಸಿಕೊಡುವಂತೆ ಜಿಲ್ಲಾಧಿಕಾರಿಗಳು, ಕೆಯುಡಬ್ಲ್ಯುಎಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರಲ್ಲದೆ ಪ್ರಸ್ತಾವನೆ ಬಂದ ತಕ್ಷಣ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಘೋಷಣೆ ಮಾಡಿ ಹೋಗಿದ್ದರು. ಆದರೆ ಈ ವಿಷಯ ಪತ್ರಿಕೆಗಳಲ್ಲಿ ಪ್ರಚಾರಕ್ಕಷ್ಟೇ ಸೀಮಿತವಾಯಿತು. ಅಷ್ಟೇ ಅಲ್ಲ. ಸಚಿವರು ನೀಡಿದ ಭರವಸೆಯ ವಿಷಯದ ಬಗ್ಗೆ ನಂತರ ಎಲ್ಲೂ ಪ್ರಸ್ತಾಪವೇ ಆಗುತ್ತಿಲ್ಲ. ಈಗಾಗಲೇ ಬೇಸಿಗೆ ದಿನಗಳು ಮತ್ತೆ ಕಾಲಿಡುತ್ತಿವೆ. ಮತ್ತೆ ಮೋಟಾರ್‌ಗಳ ಸಮಸ್ಯೆ ತಲೆದೋರುವ ಸಾಧ್ಯತೆಗಳು ಇವೆ. ಆದರೂ ಈ ವಿಷಯವನ್ನು ನಗರಸಭೆಯಾಗಲಿ, ಜಿಲ್ಲಾಡಳಿತವಾಗಲಿ ಗಂಭೀರವಾಗಿ ಪರಿಗಣಿಸದಿರುವುದು ವಿಪರ್ಯಾಸವಾಗಿದೆ ಎಂದು ಹೇಳಿದಿದ್ದಾರೆ.
ಅಮೃತ್ ಹಾಗೂ ಒಳಚರಂಡಿ ಯೋಜನೆಗಳ ಅಸಮರ್ಪಕ ಅನುಷ್ಠಾನದ ಕುರಿತು ಬಿಜೆಪಿಯನ್ನು ತೆಗಳುತ್ತಾ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಅದನ್ನು ಸರಿಪಡಿಸುವ ವಿಚಾರದಲ್ಲಿ ನಿರ್ಲಕ್ಷ್ಯತೆ ವಹಿಸಿದೆ. ದಿನೇ ದಿನೇ ರಸ್ತೆಗಳ ಸ್ಥಿತಿ ಹದಗೆಡುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರೇ ಜಿಲ್ಲಾಧಿಕಾರಿ * ವರೆಗೆ ದೂರು ಕೊಂಡೊಯ್ಯುವ ಸ್ಥಿತಿ ನಿರ್ಮಾಣವಾಗಿದೆ. ಅಮೃತ್ ಹಾಗೂ ಒಳಚರಂಡಿ ಯೋಜನೆಗಳ ಪ್ರಗತಿ ಪರಿಶೀಲನೆಗೆಂದೇ ವಿಶೇಷ ಸಭೆ ನಡೆಸಿ ಭರವಸೆ ನೀಡಿ ಹೋದ ನಗರಾಭಿವೃದ್ಧಿ ಸಚಿವರು ಅದನ್ನು ಈಡೇರಿಸದಿರುವುದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ದೂರಿದ್ದಾರೆ.
ಇತ್ತ ಜಿಲ್ಲಾ ಉಸ್ತುವಾರಿ ಸಚಿವರು ಸಹ ಚಿಕ್ಕಮಗಳೂರಿನ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ವಿಶೇಷ ಅನುದಾನ ತಂದು ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಅವರು, ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಬೇಕು ಎಂದು ಆಗ್ರಹಿಸಿದ್ದಾರೆ.