लाइव कैलेंडर

February 2025
M T W T F S S
 123
45678910
11121314151617
18192021222324
25262728293031
07/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಉನ್ನತ ಶಿಕ್ಷಣದಲ್ಲಿ ಜಾತಿ ಮತ್ತು ಭ್ರಷ್ಟಾಚಾರ…….

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರಕ್ಕಿಳಿದ ಉನ್ನತ ಶಿಕ್ಷಣದ ವಿಶ್ವವಿದ್ಯಾಲಯಗಳು……

ಭಾರತದ ವಿಶ್ವವಿದ್ಯಾಲಯಗಳಿಗೆ ಐತಿಹಾಸಿಕ ಮಹತ್ವವಿದೆ. ಭಾರತದಲ್ಲಿ ಅಜ್ಞಾನ, ಅನಕ್ಷರತೆ ಬಹಳ ಹಿಂದಿನಿಂದಲೂ ತಾಂಡವವಾಡುತ್ತಿದ್ದರೂ, ಶೋಷಿತ ವರ್ಗಗಳನ್ನು ಶಿಕ್ಷಣದಿಂದ ದೂರ ಇಟ್ಟಿದ್ದರೂ, ಕೆಲವು ವರ್ಗಗಳಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮವಾಗಿಯೇ ಇತ್ತು. ಗುರುಕುಲ ಶಿಕ್ಷಣದ ಜೊತೆಗೆ ಭಾರತದಲ್ಲಿ ಬಹಳ ಹಿಂದೆಯೇ ನಳಂದ, ತಕ್ಷಶಿಲಾ ಮುಂತಾದ ವಿಶ್ವವಿದ್ಯಾಲಯಗಳಿದ್ದವು. ಸ್ವಾತಂತ್ರ ಪೂರ್ವದಲ್ಲಿಯೇ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪಿತವಾಯಿತು. ಸ್ವಾತಂತ್ರ್ಯ ನಂತರದಲ್ಲಿ ಶಿಕ್ಷಣ ಎಲ್ಲಾ ಸಾಮಾನ್ಯರ ಮೂಲಭೂತ ಹಕ್ಕಾದ ಮೇಲೆ ಕಲ್ಕತ್ತಾ, ಮುಂಬೈ, ಮದ್ರಾಸ್, ದೆಹಲಿ, ಬೆಂಗಳೂರು ಮುಂತಾದ ನಗರಗಳಲ್ಲಿ ವಿಶ್ವವಿದ್ಯಾಲಯಗಳು ಬಹಳ ದೊಡ್ಡ ಕ್ರಾಂತಿಯನ್ನೇ ಉಂಟುಮಾಡಿದವು…..

ಆಗೆಲ್ಲಾ ತಾಲ್ಲೂಕಿಗೆ ಒಬ್ಬರು ಅಥವಾ ಇಬ್ಬರು ಮಾತ್ರ ಉನ್ನತ ಶಿಕ್ಷಣದ ಹಂತ ತಲುಪುತ್ತಿದ್ದರು. ಮುಂದೆ ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಅನೇಕ ವಿಶ್ವವಿದ್ಯಾಲಯಗಳು ಪ್ರಾರಂಭವಾದವು. ಆಗ ನಿಜಕ್ಕೂ ಡಾಕ್ಟರೇಟ್ ಪ್ರಬಂಧಗಳು ಅಥವಾ ಸ್ನಾತಕೋತ್ತರ ವಿದ್ಯಾರ್ಥಿಗಳ ಅಧ್ಯಯನದ ಗುಣಮಟ್ಟ ತುಂಬಾ ಮೇಲ್ದರ್ಜೆಯದಾಗಿತ್ತು. ಎಷ್ಟೋ ಜನ ಅವರವರ ವಿಷಯಗಳಲ್ಲಿ ಸಾಕಷ್ಟು ಪ್ರಾವೀಣ್ಯತೆ ಪಡೆಯುತ್ತಿದ್ದರು. ಸಮಾಜವು ಅಂತಹವರನ್ನು ಬುದ್ಧಿವಂತರೆಂದು ಗುರುತಿಸುತ್ತಿತ್ತು……

ಆದರೆ ಎಲ್ಲೋ, ಯಾವಾಗಲೋ ಇದು ಹಾದಿ ತಪ್ಪಿದೆ. ನಿರ್ದಿಷ್ಟವಾಗಿ ಇಂತಹದೇ ಕಾಲಘಟ್ಟ ಎಂದು ಗುರುತಿಸಲು ಸಾಧ್ಯವಿಲ್ಲ. ಆದರೆ ಭಾರತದ ಜಾತಿ ವ್ಯವಸ್ಥೆ ಚುನಾವಣಾ ರಾಜಕೀಯದ ಹೆಸರಿನಲ್ಲಿ ವಿಶ್ವವಿದ್ಯಾನಿಲಯಗಳನ್ನು ಪ್ರವೇಶಿಸಿತು. ಉನ್ನತ ಶಿಕ್ಷಣದಲ್ಲಿ ಬಹುತೇಕ ಜಾತಿ ಆಧಾರದ ಮೇಲೆಯೇ ಕುಲಪತಿಗಳು, ಪ್ರೊಫೆಸರ್ ಗಳು, ಸಂಶೋಧನಾ ವಿದ್ಯಾರ್ಥಿಗಳು ಎಲ್ಲರನ್ನೂ ಆಯ್ಕೆಮಾಡುವ ಮಟ್ಟಕ್ಕೆ ಬೆಳೆಯಿತು. ಎಷ್ಟೋ ಯುವಕರಿಗೆ ತಾವು ಯಾವ ಜಾತಿ ಎಂಬುದು ಅರಿವಿಗೆ ಬರುತ್ತಿದ್ದುದೇ ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯಗಳನ್ನು ಪ್ರವೇಶಿಸಿದಾಗ. ಅಲ್ಲಿಯವರೆಗೂ ಕೇವಲ ಸರ್ಟಿಫಿಕೇಟ್ ಗಳಲ್ಲಿ ಮಾತ್ರ ಜಾತಿ ನಮೂದಾಗಿರುತ್ತಿತ್ತು ಮತ್ತು ಅದನ್ನು ನಿರ್ಲಕ್ಷಿಸಲಾಗುತ್ತಿತ್ತು….

ತದನಂತರದಲ್ಲಿ ಜಾತಿಯನ್ನು ಮೀರಿ ಭ್ರಷ್ಟಾಚಾರ ಮತ್ತು ಕೆಟ್ಟ ರಾಜಕೀಯ ವಿಶ್ವವಿದ್ಯಾಲಯಗಳ ಪ್ರವೇಶ ಪಡೆಯಿತು. ಜಾತಿ ಮತ್ತು ಭ್ರಷ್ಟಾಚಾರ ಎರಡೂ ಸಮ್ಮಿಲನಗೊಂಡು ವಿಶ್ವವಿದ್ಯಾಲಯಗಳು ನಿಜವಾದ ಜ್ಞಾನ ಕೇಂದ್ರಗಳಾಗದೆ ದಾರಿ ತಪ್ಪಿದವು….

ಹೌದು ಒಂದು ಹಂತಕ್ಕೆ ವಿಶ್ವವಿದ್ಯಾಲಯಗಳು ಅತ್ಯುತ್ತಮ ಗುಣಮಟ್ಟದ ಚಿಂತನೆಗಳನ್ನು ಸಾಮಾಜಿಕ ಹೋರಾಟಗಾರರನ್ನು, ಆಡಳಿತಗಾರರನ್ನು, ವಿಜ್ಞಾನಿಗಳನ್ನು ನೀಡಿದೆ ಮತ್ತು ನೀಡುತ್ತಲೂ ಇದೆ. ಆದರೆ ಇತ್ತೀಚೆಗೆ ಬಯಲಾದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ ಅಂದರೆ ನ್ಯಾಕ್ ಎ, ಎ ಪ್ಲಸ್, ಎ ಎ ಪ್ಲಸ್ ಗ್ರೇಡ್ ನೀಡಲು ಲಂಚ ಪಡೆಯುತ್ತಿದ್ದ ವಿಷಯ ಬಹಿರಂಗವಾದ ಸುದ್ದಿಯನ್ನು ಕೇಳಿದ ನಂತರ ಮನಸ್ಸು ಕುಸಿದು ಹೋಯಿತು. ಇದು ಹೊಸದೇನು ಅಲ್ಲ ನಿಜ. ಒಳಗೊಳಗೆ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಆದರೆ ಇಷ್ಟೊಂದು ಬಹಿರಂಗವಾಗಿದ್ದು ನಿಜಕ್ಕೂ ಭಾರತದ ಉನ್ನತ ಶಿಕ್ಷಣದ ಬಗ್ಗೆ ಕಾಳಜಿ ಇರುವ ಎಲ್ಲರಿಗೂ ನೋವಿನ ವಿಷಯವೇ….

ಒಂದು ದೇಶದ ಅಭಿವೃದ್ಧಿಯ ಮಾನದಂಡಗಳಲ್ಲಿ ಆ ದೇಶದ ಯುವಜನತೆ ಪಡೆದಿರುವ ಉನ್ನತ ಶಿಕ್ಷಣದ ಸಂಖ್ಯೆಗಳ ಆಧಾರವೂ ಒಂದು. ಅದರ ಮೇಲೆಯೂ ಅಭಿವೃದ್ಧಿಯನ್ನು ಅಳೆಯಲಾಗುತ್ತದೆ. ಉನ್ನತ ಶಿಕ್ಷಣ ಪಡೆದ ಪ್ರಜೆಗಳು ದೇಶದ ಆಧಾರ ಸ್ತಂಭಗಳು ಮತ್ತು ಬಹುದೊಡ್ಡ ಆಸ್ತಿ. ಈ ಹಿನ್ನೆಲೆಯಲ್ಲಿ…..

ಉನ್ನತ ಶಿಕ್ಷಣದಲ್ಲಿ ಓದುವ, ಅಧ್ಯಯನ ಮಾಡುವ ಆ ವಾತಾವರಣದ ಗುಣಮಟ್ಟವೇ ಬೇರೆ ಎತ್ತರದಲ್ಲಿರುತ್ತದೆ.
ಅದೊಂದು ಅದ್ಭುತ ಅನುಭವ. ಕಾರಣ ಸಾಮಾನ್ಯವಾಗಿ ಉನ್ನತ ಶಿಕ್ಷಣ ಪಡೆಯುವ ವಯಸ್ಸು 20/25 ಈಗಿನ ಕಾಲದಲ್ಲಿ ನಮ್ಮ ಚಿಂತನೆಗಳು ನಿಜಕ್ಕೂ ಒಂದು ದಿಕ್ಕನ್ನು ಮೂಡಿಸುವ ಯೌವ್ವನ ಅದಾಗಿರುತ್ತದೆ. ಬಿಸಿ ರಕ್ತದ ಯುವಕ ಯುವತಿಯರಲ್ಲಿ ಧೈರ್ಯ ಮನೆ ಮಾಡಿರುತ್ತದೆ. ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕುವ ಬುದ್ಧಿಮತ್ತೆ, ಸಾಮರ್ಥ್ಯ ಆ ಕ್ಷಣದಲ್ಲಿ ಆ ಸಮಯದಲ್ಲಿ ಇರುತ್ತದೆ. ಆದ್ದರಿಂದ ಉನ್ನತ ಶಿಕ್ಷಣವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಹಾಗಾದಾಗ ಯುವಶಕ್ತಿಯೇ ದಾರಿ ತಪ್ಪುತ್ತದೆ……

ಇದೇ ಸಂದರ್ಭದಲ್ಲಿ ಕುಲಪತಿಗಳ ಆಯ್ಕೆಯ ಮಾನದಂಡಕ್ಕಾಗಿ ಯುಜಿಸಿ ಹೊಸ ನಿಯಮಗಳನ್ನು ರೂಪಿಸಿ ಬಹುತೇಕ ಕೇಂದ್ರವೇ ಅದನ್ನು ನಿಯಂತ್ರಿಸುವ ನಿಯಮಗಳನ್ನು ಜಾರಿಗೆ ತರುತ್ತಿದೆ. ಇದು ಅಪಾಯಕಾರಿಯಾಗಬಹುದು. ಏಕೆಂದರೆ ಶಿಕ್ಷಣ ಸಂವಿಧಾನದ ಮೂಲದಲ್ಲಿ ಸಮವರ್ತಿ ಪಟ್ಟಿಯಲ್ಲಿದೆ. ಅಂದರೆ ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರಗಳ ಸಮ ನಿಯಂತ್ರಣದಲ್ಲಿದೆ. ಅದನ್ನು ನೇರವಾಗಿ ಕೇಂದ್ರದ ಆಯ್ಕೆಗೆ ಬಿಡುವುದು ಒಕ್ಕೂಟ ವ್ಯವಸ್ಥೆಯಲ್ಲಿ ಒಳ್ಳೆಯ ಲಕ್ಷಣವಲ್ಲ. ಸ್ಥಳೀಯ ವಿಷಯಗಳಿಗೆ ಮಹತ್ವ ಇರಬೇಕು. ಈಗಾಗಲೇ ಕುಲಪತಿಗಳ ಆಯ್ಕೆಯಲ್ಲಿ ಜಾತಿ, ಹಣ ತುಂಬಿ ತುಳುಕುತ್ತಿದೆ. ಅಲ್ಲಿನ ಸರ್ಕಾರಗಳು ಮತ್ತು ರಾಜ್ಯಪಾಲರು ತಮ್ಮ ತಮ್ಮ ಪಕ್ಷಗಳ ಸೈದ್ಧಾಂತಿಕ ನೆಲೆಯಲ್ಲಿ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದಲ್ಲದೆ ಕೋಟಿ ಕೋಟಿ ಹಣದ ಸೂಟ್ ಕೇಸ್ ಸಂಸ್ಕೃತಿಯೂ ಬಲವಾಗಿ ಬೆಳೆದಿದೆ……

ಉನ್ನತ ಶಿಕ್ಷಣದಲ್ಲಿಯೇ ಇಷ್ಟೊಂದು ಜಾತಿ ಮತ್ತು ಭ್ರಷ್ಟಾಚಾರ ನಡೆದರೆ ಭಾರತದ ನಿಜವಾದ ಆಧಾರ ಸ್ತಂಭಗಳು ಮಲಿನವಾದರೆ ದೇಶ ಆಂತರಿಕವಾಗಿ ಕುಸಿಯ ತೊಡಗುತ್ತದೆ. ಏಕೆಂದರೆ ಉನ್ನತ ಶಿಕ್ಷಣದ ಪಡೆದ ವ್ಯಕ್ತಿಗಳೇ ಇಷ್ಟೊಂದು ಜಾತಿವಾದಿ ಮತ್ತು ಭ್ರಷ್ಟಾಚಾರಿಗಳಾದರೆ ಅದನ್ನು ತಡೆಯುವುದು ಕಷ್ಟ. ಅದು ಇಡೀ ವ್ಯವಸ್ಥೆಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಪ್ರತಿಭಾ ಪಲಾಯನ ಉಂಟಾಗುತ್ತದೆ. ದೇಶದ ಶ್ರೇಯೋಭಿವೃದ್ಧಿಗೆ ಬೇಕಾದ ಅತ್ಯುತ್ತಮ ಸಂಶೋಧನಾ ವರದಿಗಳು ಮೂಲೆಗುಂಪಾಗುತ್ತವೆ. ಡಾಕ್ಟರೇಟ್ ಗಳು ಹಾದಿ ಬೀದಿಯಲ್ಲಿ ಬಿಕರಿಯಾಗುತ್ತದೆ. ಆಗ ದೀರ್ಘಕಾಲದಲ್ಲಿ ದೇಶದ ಶೈಕ್ಷಣಿಕ ವ್ಯವಸ್ಥೆ ಹಾಳಾಗುತ್ತದೆ……

ಈಗಲೂ ಸಹ ವಿಶ್ವಮಟ್ಟದ ಉನ್ನತ ಶಿಕ್ಷಣದ ಸಂಶೋಧನೆಗಳು ನಮ್ಮ ದೇಶದ ಸಾಮರ್ಥ್ಯಕ್ಕೆ ತಕ್ಕಂತೆ ಬೆಳವಣಿಗೆಯಾಗುತ್ತಿಲ್ಲ. ನೊಬೆಲ್ ಅಥವಾ ಇತರ ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೊರೆಯುತ್ತಿಲ್ಲ. ಏಕೆಂದರೆ ಮತ್ತದೇ ಜಾತಿ ಮತ್ತು ಭ್ರಷ್ಟಾಚಾರ. ಈ ಬಗ್ಗೆ ಇಡೀ ದೇಶದ ಎಲ್ಲಾ ಶಿಕ್ಷಣ ಸಚಿವರು ಕುಳಿತು ಏನನ್ನಾದರೂ ಕ್ರಮ ಕೈಗೊಳ್ಳುವುದು ತೀರಾ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ. ಇಲ್ಲದಿದ್ದರೆ ಉನ್ನತ ಶಿಕ್ಷಣವು ದುಷ್ಟ ವ್ಯವಸ್ಥೆಯ ಭಾಗವಾಗಿ ನಮ್ಮ ಮಕ್ಕಳ ಭವಿಷ್ಯ ಸಂಕಷ್ಟಕ್ಕೆ ಸಿಲುಕುತ್ತದೆ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….

About Author

Leave a Reply

Your email address will not be published. Required fields are marked *