ವೈಚಾರಿಕ ಚಿಂತನೆಯ ಮಳೆ ಹರಿಸಿ ಜನಶಕ್ತಿಯ ಬೆಳೆತೆಗೆದ ನಮ್ಮ ನಡಿಗೆ ವಿಜ್ಞಾನದಡೆಗೆ ಪಾದಯಾತ್ರೆ••••••*
1 min read*ವೈಚಾರಿಕ ಚಿಂತನೆಯ ಮಳೆ ಹರಿಸಿ ಜನಶಕ್ತಿಯ ಬೆಳೆತೆಗೆದ ನಮ್ಮ ನಡಿಗೆ ವಿಜ್ಞಾನದಡೆಗೆ ಪಾದಯಾತ್ರೆ••••••*
ನಾವು ಅದೆಷ್ಟೇ ದೂರ ಕ್ರಮಿಸಿದರು ,ಅದೆಂತಹದ್ದೇ ಮಹತ್ವವಾದ ಗುರಿ ಮುಟ್ಟಿದರೂ ಸಹ ಅದರ ಆರಂಭವಾಗುವುದು ತನ್ನ ಮೊದಲ ಹೆಜ್ಜೆಯಿಂದಲೇ…
ಹಾಗಾಗಿ ನಾವಿಡುವ ಅ ಮೊದಲ ಹೆಜ್ಜೆಗೆ ಸರಿಯಾದ ಪ್ರಜ್ಞೆ, ಮಹತ್ವವಾದ ಮೌಲ್ಯ ಮತ್ತು ಅ ನೆಡೆಗೆಗೆ ಇಡೀ ಜನಕಲ್ಯಾಣದ ಹಿತವಿರಬೇಕು.
ಅಂದು,
ತನ್ನ ಹುಟ್ಟೂರು ಹೊಸೂರಿನಿಂದ ರಾಜ್ಯದ ರಾಜಧಾನಿ ಬೆಂಗಳೂರಿನವರೆಗೆ ಕಾಲ್ನಡಿಗೆಯಲ್ಲಿ ನಡೆದು ಬಂದವರು ಬಾಲಕ ನರಸಿಂಹಯ್ಯನವರು.
ಇಂದು ಬೆಂಗಳೂರಿನಿಂದ ಹೊಸೂರಿಗೆ ಪಾದಯಾತ್ರೆ ಮೂಲಕ ನಡೆದು ಹೋದವರು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸಂಗಾತಿಗಳು.
ವಿಚಾರವಾದಿ,ಸಮಾಜವಾದಿ, ಗಾಂಧಿವಾದಿ,ಚಿಂತಕ, ಶಿಕ್ಷಣ ತಜ್ಞ ಪದ್ಮಭೂಷಣ ಡಾ.ಹೆಚ್. ನರಸಿಂಹಯ್ಯನವರ ಜನ್ಮಶತಮಾನೋತ್ಸವದ ಅಂಗವಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಿಂದ ಅವರ ಜನ್ಮಸ್ಥಳ ಹೊಸೂರಿನವರೆಗೆ ನಮ್ಮ ನಡಿಗೆ ವಿಜ್ಞಾನದಡೆಗೆ ಎಂಬ ಘೋಷವಾಕ್ಯದಡಿ ಪಾದಯಾತ್ರೆಯನ್ನು,ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ವಿವಿಧ ಸಂಘಗಳ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಐದು ದಿನಗಳ ಕಾಲ ಸುಮಾರು 90 ರಿಂದ 100 ಕಿಲೋಮೀಟರ್ ದೂರ, ನೂರಾರು ಹಳ್ಳಿಗಳನ್ನು ಹಾದು, ಸಾವಿರಾರು ಜನರನ್ನು ನೇರವಾಗಿ ಮುಟ್ಟಿ, ಸಹಸ್ರಾರು ಜನರನ್ನು ಪರೋಕ್ಷವಾಗಿ ತಲುಪಿ, ಮನೆ ಮನೆಗೆ, ಶಾಲಾ ಕಾಲೇಜುಗಳಿಗೆ ವೈಚಾರಿಕ ಚಿಂತನೆ, ವೈಜ್ಞಾನಿಕ ನಡಿಗೆಯ ಮಹತ್ವವನ್ನು ಸಾರಿದ ಐತಿಹಾಸಿಕ ನಡಿಗೆ ಈ ಕಾಲ್ನಡಿಗೆ.
ವಿಭಿನ್ನವಾದದ್ದನ್ನು ಕಟ್ಟಿ, ಸಂವೇದನಾಶೀಲತೆಯನ್ನು ಬೆಳೆಸಿ, ಮೌಲ್ಯ ಕಂದಾಚಾರಗಳ ವಿರುದ್ಧ ಜನಧನಿಯಾದವರು ವಿಚಾರವಾದಿ ಡಾ. ನರಸಿಂಹಯ್ಯನವರು. ಜನರ ನಿಜವಾದ ಕಲ್ಯಾಣ ಅಗಲೇ ಬೇಕಾದರೆ ಬಹಳ ಮಹತ್ವವಾಗಿ ನಾವು ಧರಿಸಿಕೊಳ್ಳಬೇಕಾದದ್ದು ಅಳವಡಿಸಿಕೊಳ್ಳಬೇಕಾದದ್ದು ವೈಚಾರಿಕತೆ ಮತ್ತು ವೈಜ್ಞಾನಿಕತೆ ಎಂಬುದನ್ನು ಬಲವಾಗಿ ನಂಬಿ, ತಾನು ನಂಬಿದ್ದನ್ನು ದೃಢವಾಗಿ ಪ್ರತಿಪಾದನೆ ಮಾಡುತ್ತಾ, ಅದನ್ನು ಸದೃಢವಾಗಿ ಜನಮಾನಸದಲ್ಲಿ ಮಿಡಿಯುತ್ತ ಮಿಂದೆದ್ದು ವಿಚಾರಕ್ರಾಂತಿಗೆ ಕರೆಕೊಟ್ಟ ಡಾ. ಹೆಚ್.ನರಸಿಂಹಯ್ಯನವರ ಚಿಂತನೆಗಳನ್ನು ವರ್ತಮಾನದ ದಿನದಲ್ಲಿ ಹೆಚ್ಚೆಚ್ಚು ಪಸರಿಸಿ, ಜಾಗೃತಿಗೊಳಿಸುವ ನಿಟ್ಟಿನಲ್ಲಿ ಈ ಪಾದಯಾತ್ರೆ ದಾರಿಯುದ್ಧಕ್ಕೂ ಸದ್ದು ಮಾಡುತ್ತಾ ಈ ನೆಲದ ವಿಚಾರಕ್ರಾಂತಿಯನ್ನು ಜನಧ್ವನಿಯೊಂದಿಗೆ ಮೊಳಗಿಸಿತು.
ವಿದ್ಯಾರ್ಥಿ ಯುವ ಜನರು. ಉಪನ್ಯಾಸಕರು ಶಿಕ್ಷಕರು, ರಾಜಕಾರಣಿಗಳು ಸಾರ್ವಜನಿಕರು, ಚಳುವಳಿಗಾರರು, ಕವಿಗಳು, ಕಲಾವಿದರು,ಸಾಹಿತಿಗಳು ಲೇಖಕರು ಇನ್ನೂ ವಿಭಿನ್ನಸ್ಥರದಲ್ಲಿ ಜನ ಮುಖಿಯಾಗಿ ಯೋಚಿಸುವ ಸಾವಿರಾರು ಜನರು, ಪಕ್ಷಾತೀತವಾಗಿ, ಈ ಐತಿಹಾಸಿಕವಾದ ಪಾದಯಾತ್ರೆಗೆ ಸಾಕ್ಷಿಯಾಗಿ, ಡಾ. ಹೆಚ್ ನರಸಿಂಹಯ್ಯನವರ ತೆರೆದ ಮನವನ್ನು ಓದುತ್ತಾ, ಅಲ್ಲಲ್ಲಿ ನಿಂತು ಎದುರಾದ ಸಂಗತಿಗಳಿಗೆಲ್ಲ ಕವಿತೆಯನ್ನು ಸಹ ಕಟ್ಟುತ್ತಾ, ಕಟ್ಟಿದ್ದನ್ನೆಲ್ಲ ಹದವಾಗಿ ಬಿತ್ತುತ್ತಾ, ವೈಚಾರಿಕತೆ ಮತ್ತು ವೈಜ್ಞಾನಿಕತೆಯ ಪಥದಲ್ಲಿ ಸಾಗಿ,ವಿಚಾರವಾದಿ ನರಸಿಂಹಯ್ಯನವರ ನಾಡಿನಲ್ಲಿ ಇಟ್ಟ ಪ್ರತಿಯೊಂದು ಈ ಹೆಜ್ಜೆಗಳೆಲ್ಲವೂ ಸಾರ್ಥಕವಾದ ಹೆಜ್ಜೆಗಳೇ ಆಗಿದ್ದವು. ತಮ್ಮ ತಮ್ಮ ಬದುಕಿನ ಅಮೂಲ್ಯವಾದ ಕ್ಷಣಗಳಾಗಿದ್ದವು.
•••••••••••••••••✒️ಬರಹ
ಡಿ.ಎಂ.ಮಂಜುನಾಥಸ್ವಾಮಿ