लाइव कैलेंडर

February 2025
M T W T F S S
 12
3456789
10111213141516
17181920212223
2425262728  
05/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸದಾ ನೆನಪಾಗುತ್ತಾರೆ ಇವರು………..

ಎಂತಹ ಅತ್ಯಂತ ಕೆಟ್ಟ ಕೊಳಕ ರಾಜಕೀಯ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ ಮತ್ತು ಅದಕ್ಕೆ ಜೀವಂತ ಸಾಕ್ಷಿಯಾಗಿದ್ದೇವೆ ಎಂಬುದೇ ನಮ್ಮ ನೈತಿಕತೆ ಮತ್ತು ಆತ್ಮವಿಶ್ವಾಸ ಕುಸಿಯುವಂತೆ ಮಾಡುತ್ತಿದೆ.

ಎಲ್ಲಾ ಪಕ್ಷಗಳ ಅಧಿಕಾರದಾಹದ ಈ ಭಿನ್ನಮತೀಯ ಚಟುವಟಿಕೆಗಳ ದಿನನಿತ್ಯದ ನಿರಂತರ ಸುದ್ದಿಗಳನ್ನು ಕೇಳುತ್ತಾ ಮನಸ್ಸು ಏನೇನೋ ಯೋಚಿಸುತ್ತಿದೆ.

ರಾಜಕೀಯ ಎಂಬ ಸೇವಾ ವಲಯವನ್ನು ಪುಂಡ ಪೋಕರಿಗಳ, ಬೀದಿ ಜಗಳಗಳ ಮಟ್ಟಕ್ಕೆ ಇಳಿಸಿದ್ದಾರೆ. ಇವರಿಗೆ ಕ್ಷಮೆಯೇ ಇಲ್ಲ.

ಛೆ…. ಏನೂ ಮಾಡಲು ಸಾಧ್ಯವಾಗುತ್ತಿಲ್ಲ…….

ಇವರೇನು ಜನ ಪ್ರತಿನಿಧಿಗಳೋ ಅಥವಾ ರೇಸು ಕುದುರೆಗಳೋ…………..

ದಿನದ 24 ಗಂಟೆ ಕೆಲಸ ಮಾಡಿದರೂ ಮುಗಿಯದಷ್ಟು ಸಮಸ್ಯೆಗಳು ತುಂಬಿ ತುಳುಕುತ್ತಿದ್ದರೂ,
7 ಕೋಟಿ ಜನರಲ್ಲಿ ಕೇವಲ 224 ಜನರಿಗೆ ಮಾತ್ರ ಸಿಗಬಹುದಾದ ಅತ್ಯುತ್ತಮ ಸ್ಥಾನ ದೊರೆತಿದ್ದರೂ, ಇನ್ನೂ ಹಣ ಅಧಿಕಾರ ದುರಹಂಕಾರಕ್ಕೆ ಬಲಿಯಾಗುತ್ತಿದ್ದಾರಲ್ಲ ಇವರಿಗೆ ಏನು ಮಾಡುವುದು.

ಇವರನ್ನು ಮರೆತು ನೆಮ್ಮದಿಯಾಗಿ ಇರೋಣವೆಂದರೆ………

ಆಸ್ಪತ್ರೆಗಳ ಅವ್ಯವಸ್ಥೆ ಕಂಡಾಗ ಇವರು ನೆನಪಾಗುತ್ತಾರೆ.

ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ಮತ್ತು ಅದರ ಖರ್ಚು ನೆನಪಾದಾಗ ಇವರೇ ಕಾಡುತ್ತಾರೆ.

ಬಸ್ ರೈಲು ನಿಲ್ದಾಣದ ಆ ಕೆಟ್ಟ ದೃಶ್ಯಗಳನ್ನು ನೋಡಿದಾಗಲೂ ಇವರೇ ನೆನಪಾಗುತ್ತಾರೆ.

ರಸ್ತೆಯ ಆ ಧೂಳು ಆ ವಾಹನ ಭರಾಟೆಗಳನ್ನು ಕಂಡಾಗ ನೆನಪಾಗುವುದೇ ಇವರು.

ಆಹಾರದಲ್ಲಿ ಕಲಬೆರಕೆ ವಾಸನೆ ಮೂಡಿದಾಗಲೂ ಇವರೇ ನೆನಪಾಗುತ್ತಾರೆ.

ಪ್ರಕೃತಿಯ ವಿಕೋಪದ ಅನಾಹುತಗಳಲ್ಲಿಯೂ ಇವರದೇ ನೆನಪು.

ವಿದ್ಯುತ್ – ನೀರಿನ ಸಮಸ್ಯೆಗಳು ತಲೆದೋರಿದಾಗಲೂ ಇವರೇ ಕಾಡುತ್ತಾರೆ.

ನಮ್ಮ ಮಕ್ಕಳ ಭವಿಷ್ಯ ನೆನಪಾದಾಗಲೂ ಇವರೇ ಕಾಡುತ್ತಾರೆ.

ಒಟ್ಟಿನಲ್ಲಿ ನಮ್ಮ ಇಡೀ ಬದುಕನ್ನು ನಿಯಂತ್ರಿಸುವುದೇ ಇವರು.

ಈ ಜನ ಪ್ರತಿನಿಧಿಗಳ ಗುಣಮಟ್ಟದ ಮೇಲೆಯೇ ನಮ್ಮ ಜೀವನಮಟ್ಟ ಅವಲಂಬಿಸಿದೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದು ಒಂದು ಭ್ರಮೆ ಅಷ್ಟೆ. ನಿಜವಾದ ಮಾಲಿಕರು ಇವರೇ.

ಚುನಾವಣಾ ಸಂಧರ್ಭದಲ್ಲಿ ಜನಪ್ರಿಯ ವ್ಯಕ್ತಿಗಳು ಮಹಾ ಮೇಧಾವಿಗಳಂತೆ
” ಮತದಾನ ಒಂದು ಪವಿತ್ರ ಕರ್ತವ್ಯ. ನಿಮ್ಮ ಮತ ಚಲಾಯಿಸಿ ಪ್ರಜಾಪ್ರಭುತ್ವ ಉಳಿಸಿ ” ಎಂದು ಹೇಳುವವರನ್ನು ಜೈಲಿಗೆ ಕಳಿಸಬೇಕು ಎಂಬಷ್ಟು ಕೋಪ ಬರುತ್ತದೆ.

ಏಕೆಂದರೆ ಈ ಜನ ಪ್ರತಿನಿಧಿಗಳ ಹುಚ್ಚಾಟಕ್ಕೆ ಅವರೂ ಪರೋಕ್ಷವಾಗಿ ಬೆಂಬಲ ನೀಡಿದಂತೆ ಆಗುತ್ತಿದೆ‌.

ಪ್ರಜಾಪ್ರಭುತ್ವದ ನಿಜ ಯಶಸ್ಸು ಅಡಗಿರುವುದೇ ಜನರ ಜಾಗೃತಿಯ, ಜ್ಞಾನದ ಮಟ್ಟದಲ್ಲಿ ಏರಿಕೆಯಾದಾಗ ಮಾತ್ರ ಸಾಧ್ಯ.

ಅಲ್ಲಿಯವರೆಗೂ ಇದನ್ನು ಸಹಿಸುವ ಅನಿವಾರ್ಯ ನಮ್ಮೆಲ್ಲರದು……..

ಬದಲಾಗಬೇಕಿದೆ ವ್ಯವಸ್ಥೆ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068………

About Author

Leave a Reply

Your email address will not be published. Required fields are marked *