ತೇಜಸ್ವಿಯವರ ಕುರಿತು ಹಿರೇಮಗಳೂರು ಕಣ್ಣನ್ ರವರ ಮಾತುಗಳು.
1 min readತೇಜಸ್ವಿಯವರ ಕುರಿತು ಹಿರೇಮಗಳೂರು ಕಣ್ಣನ್ ರವರ ಮಾತುಗಳು.
ಕನ್ನಡನಾಡಿನಿಂದ ಕಣ್ಮರೆಯಾದ ಕನ್ನಡ ಕಳಬ `ಪೂಚಂತೇ’ ರವರು ಯಾರಂತೆ? ಅವರು ಇದ್ದದ್ದು ಹೀಗಂತೆ!? ಹೇಗಂತೆ?…ಹಾಗಂತೆ! ಎಂದೆಲ್ಲಾ ಅಂತೆಕಂತೆಗಳ ಮೂಲಕ ಅವರವರ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿದ ಜನರೇ ಬಹಳ. ಆದರೆ ಅವರು ಯಾರಂತೆಯೂ ಅಲ್ಲ! ಅವರು ಅವರಂತೆಯೇ ಬಾಳಿದ ವ್ಯಕ್ತಿ. ಅವರಿಗನಿಸಿದಂತೆಯೇ ಬದುಕಿದ್ದ ವ್ಯಕ್ತಿ. ಅವರ ಅಂತರಂಗಕ್ಕೆ ನೇರ ನಡೆದ ವ್ಯಕ್ತಿ. ಅವರಷ್ಟಕ್ಕವರೇ ಅವರಿಗೆ ತೋಚಿದ ರೀತಿಯಲ್ಲಿ ಸಾಗಿದ ವ್ಯಕ್ತಿ. ಒಂದರ್ಥದಲ್ಲಿ ಕಾಡಿನಲ್ಲಿ ಹಿಂಡನಗಲಿದ ಕಾಡಾನೆಯಂತೆ ಓಡಾಡಿದ ಜೀವ.
ಯಾವ ಸಂಕೋಲೆಗೂ ಸಿಲುಕದ, ಯಾವ ಸಂಕುಚಿತವೂ ಇಲ್ಲದ, ಯಾರ ಸಂಪರ್ಕವನ್ನೂ ಅತಿಯಾಗಿ ಹಚ್ಚಿಕೊಳ್ಳದೆ ಬಿಡುಬೀಸಾಗಿ ಬದುಕಿದ ಜೀವ. ಜೀವನ ಪರ್ಯಂತ ಪ್ರಕೃತಿಯ ಹಾಗೂ ಪ್ರಪಂಚದ ರಹಸ್ಯವನ್ನರಿಯಲು ಜೀವ ಸವೆಸಿದ ಒಂಟಿ ಸಲಗ. ಕಣ್ಣು ಮುಚ್ಚುವವರೆಗೂ ಕಣ್ಣು ಮಿಟುಕಿಸದೆ ಜಗತ್ತಿನ ಆಗುಹೋಗುಗಳನ್ನು ಗಮನಿಸುತ್ತಾ ಜತೆಯಲ್ಲಿದ್ದವರಿಗೂ ಕಣ್ ತೆರೆಸುತಿದ್ದ ವಿಚಾರಿ. ಸರಳವಾದ ಬದುಕು, ನೇರನಡೆ, ನೇರನುಡಿ ಇವರ ಅಭಿಜಾತ ಗುಣ. `ಕುವೆಂಪು’ರವರ ಮಗನಾದ `ಪೂಚಂತೇ’ ತಮ್ಮದೇ ಆದಂಥ ರೀತಿನೀತಿಗಳನ್ನು ಸೃಷ್ಟಿಸಿಕೊಂಡು ವಿಶಿಷ್ಠ ರೀತಿಯಲ್ಲಿ ಅಪೂರ್ವವೆನಿಸುವಂಥ ಸಾಹಿತ್ಯವನ್ನು ಕೃತಿರೂಪದಲ್ಲಿ ನಾಡಿಗೆ ವೊರೆದಿತ್ತ ಲೇಖಕರು. ಯಾವ ಸಂಗತಿಯೇ ಆಗಲಿ ಕೂಲಂಕುಷವಾಗಿ ಪರಾಮರ್ಶಿಸದೆ ಒಪ್ಪುತ್ತಿರಲಿಲ್ಲ. ಕಾಲ್ಪನಿಕ ಸಂಗತಿಗಳಿಗೆ ಕಿವಿಗೊಟ್ಟು ಕೂರುತ್ತಿರಲಿಲ್ಲ.
ದೇವರ, ಧರ್ಮ, ಜಾತಿಯ ಸಂಕುಚಿತ ಬೇಲಿಯಲ್ಲಿ ಎಂದೂ ಸಿಲುಕಿಕೊಂಡವರಲ್ಲ. ಕಂದಾಚಾರ, ಆಟಾಟೋಪ, ಮೂಢನಂಬಿಕೆಯ ಹಜಾರದಿಂದ ಗಾವುದ ದೂರ ಇವರ ಹೆಜ್ಜೆ. ಖಂಡತುಂಡ ಮಾತುಗಳಲ್ಲೇ ಈ ಆವರಣದೊಳಗಿರುವವರಿಗೆ ಕಡ್ಡಿಮುರಿದಂತೆ ಉತ್ತರಕೊಡುತ್ತಿದ್ದ ಭೀಮ. `ಆನೆ ನಡೆದುದೇ ಹಾದಿ-ನಡೆದುದೇ ಬೀದಿ’ ಎನ್ನುವ ಮಾತಿನಂತೆ ಅಕ್ಷರಶ: ತನ್ನ ಕೈಯ್ಯಾರೆ ಸೃಷ್ಟಿಸಿದ ರಾಜಮಾರ್ಗದಲ್ಲಿ ಸಾಗಿದ ಕಲಿ ಇವರು. ಇಂತಹ ವ್ಯಕ್ತಿಯನ್ನು ಹತ್ತಿರದಿಂದ ಬಲ್ಲವರಲ್ಲಿ ಶ್ರೀ ಧನಂಜಯರವರು ಒಬ್ಬರು. `ಮೂಡಿ’ ಮನುಷ್ಯನ ಮನದಗೆರೆಗೆ ಮೂಡಿಗೆರೆಯಲ್ಲಿ ಧನಂಜಯರವರು ನೇರ ಸ್ನೇಹ ಸಂಪಾದಿಸಿದವರು. ಅಷ್ಟೇ ಅಲ್ಲ ಪೂರ್ಣಚಂದ್ರ ತೇಜಸ್ವಿಯವರ ನೇಹಿಗರಾಗಿ ಅವರೊಡನೆ ಗುಡ್ಡ-ಬೆಟ್ಟ, ಕಾಡು-ಮೇಡುಗಳನ್ನು ಅಲೆದವರು. ಆನೆ ಜೊತೆ ಮರಿಯಾನೆಯಂತೆ ತಿರುಗಾಡಿದವರು. ನಿರಂತರ ಸಂಪರ್ಕದಲ್ಲಿ ನಿತ್ಯನಿರತರಾಗಿ ತೇಜಸ್ವಿ ಜೊತೆ ಅವರನುಭವಿಸಿದ ಚಳಿ-ಮಳೆ-ಗಾಳಿ ಹಾಗೂ ಮಾತಿನ ಹೊಡೆತವನ್ನು ನಗುನಗುತ್ತಾ ಸತತವಾಗಿ ಅನುಭವಿಸಿದ ಗೆಳೆಯರು. ತೇಜಸ್ವಿಯವರು ಅಗಲುವವರೆಗೂ ಅಲುಗದೆ, ನಲುಗದೇ ಅವರೊಡನೆ ವಿಚಾರ ಮಂಥನ-ವಿಶಿಷ್ಠ ಪಯಣದ ಸ್ವಾರಸ್ಯ ಮೆದ್ದ ವ್ಯಕ್ತಿ. ನಿಜಕ್ಕೂ ಧನಂಜಯರಿಗೆ ಬದುಕಿನಲ್ಲಿ ಇಂತಹ `ಪೂಚಂತೇ’ ಸ್ನೇಹ ಸಂಪದದ ಒಡನಾಟ ದೊರೆತದ್ದು ರೋಚಕ ಸಂಗತಿಯೇ ಹೌದು.
ಅಂತಹ ಧೀಮಂತ ಮಹಿಮನ ಜೊತೆಯಲ್ಲಿ ಅನುಭವಿಸಿದ ಅನೇಕ ಸಂಗತಿಗಳನ್ನು ಯಾವುದೇ ಬಣ್ಣನೆಯ ಮಾತಿನಿಂದ ರಂಜಿಸಲು ಪ್ರಯತ್ನಿಸದೇ ತಮ್ಮದೇ ಆದ ಶೈಲಿಯಲ್ಲಿ ಕೃತಿಯ ಮೂಲಕ ಇಲ್ಲಿ ಓದುಗರ ಕೈಗೆ ಬಾಗಿನವಾಗಿತ್ತಿದ್ದಾರೆ. ಬ್ಯಾಂಕಿನ ಅಧಿಕಾರಿಯಾದ ಶ್ರೀ ಧನಂಜಯರವರು ತಾವೇ ಸ್ವತ: ತಮ್ಮನುಭವದ ಮೂಸೆಯಲ್ಲಿ ತಮ್ಮನುಭವಕ್ಕೆಟಕಿದಷ್ಟು ಸಹಜಕೃಷಿಯಲ್ಲಿ ತಮ್ಮ ಕೈಯಾರೆ ಘಟನೆಗಳ ಬೆಳೆ ಬೆಳೆದಿದ್ದಾರೆ, ಕಳೆ ಕಿತ್ತಿದ್ದಾರೆ, ಕಾಳು ಕೊಟ್ಟಿದ್ದಾರೆ, ನೆನಪಿನ ಕಣಜವನ್ನು ತುಂಬಿದ್ದಾರೆ.
ಇದು ಅವರು ತಮ್ಮ ಖುಷಿಗಾಗಿ ಪ್ರಕಟಿಸಿದ ಕೃತಿ. ಪೂಚಂತೇ ಜತೆಯಲ್ಲಿನ ಸಂಗತಿಗಳನ್ನು ಹಸಿರಾಗಿಸಲು ಇವರೇ ಇಲ್ಲಿ ತಳೆದಿದ್ದಾರೆ ಧೃತಿ. ಸತ್ಯ ಸಂಗತಿಗಳೆಂದೂ ಕೃತಿಗಳ ಮೂಲಕ ಓದುಗರ ನೆನಪಿನಲ್ಲಿ ಉಳಿಯಲೆಂದು ಪ್ರಕಟಿಸಿದೆ ಅವರ ಸ್ಮೃತಿ. ಇಂತಹ ಕಾರ್ಯಕ್ಕೆ ಸಂಕಲ್ಪಿಸಿದ ಧನಂಜಯರನ್ನು ನಾನು ಮನ:ಪೂರ್ವಕವಾಗಿ ಅಭಿನಂದಿಸುತ್ತೇನೆ. ಆತ್ಮೀಯ ಧನಂಜಯರ ಇಂತಹ ಪ್ರಯತ್ನ ಅದೂ ಅಕ್ಷರ ಲೋಕದಲ್ಲಿ ಅಪೂರ್ವವೆಂದೇ ಹೇಳಬೇಕು. ಆರ್ಥಿಕ ಲಾಭದ ಕನಸೇ ಇಲ್ಲದೇ, ಸಾರ್ಥಕ ಮನಸ್ಸಿನ ಸಾಹಿತ್ಯಕಾರ್ಯ ಕೈಗೊಂಡಿರುವ ಇವರ ಶ್ರೀಮಂತಹೃದಯಕ್ಕೆ ನೂರು ನೂರು ನಮಸ್ಕಾರ ಹೇಳಲೇಬೇಕು.
`ಪೂಚಂತೇ’ರವರ ಒಡನಾಟ ಕೆಲವಾರು ವರ್ಷ ನನಗೂ ಲಭ್ಯವಿದ್ದು, ಅವರ ನಡವಳಿಕೆ ನನಗೆ ಸಾಮಿಪ್ಯದಲ್ಲೇ ಕಂಡುಂಡ ಅನುಭವವಾಗಿರುವುದರಿಂದ ಧನಂಜಯರ ಕೃತಿಯಲ್ಲಿನ ಇವರೀರ್ವರ ನಡೆದಾಟ-ನುಡಿಕಾಟಗಳು ಕಾಣದ ಕಾಲ್ಪನಿಕ ಸಂಗತಿಗಳೇನಲ್ಲ.
ಒಟ್ಟಾರೆ ದೈತ್ಯ ಪ್ರತಿಭೆಯಿಂದ ಓರ್ವ ಮಹಾಸಾಹಸಿಯಂತೆ ಸಮಾಜದಲ್ಲಿ
ಧೀರೋದಾತ್ತವಾಗಿ ಬದುಕಿದ ಎಂಟೆದೆಯ ಶ್ರೀ ಪೂಚಂತೇರವರ ಜತೆಯಲ್ಲಿನ ಜತೆಗಾರರಿಗೆ ಅವರ ಜಟ್ಟಿತನದ ಸಂಗತಿಗಳು ಇಂತಹ ಕೃತಿಯಿಂದ ಎಂದೂ ಕರಗದ
ಗಟ್ಟಿತನದ ಘಟನೆಗಳೇ ಹೌದು.
ಆ ದೃಷ್ಟಿಯಿಂದ ಧನಂಜಯರ ಕೃತಿಯಲ್ಲಿನ ವಿಚಾರಗಳು ತೇಜಸ್ವಿಯವರ ಒಡನಾಟವನ್ನು ನೆನಪಿಸುತ್ತಾ `ಮೇದಷ್ಟೂ ಚಿಗುರ್ತದೆ’ ಎನ್ನುವ ಮಾತಿಗೆ ಹತ್ತಿರವೆನಿಸಿದೆ.
ವಿಚಾರವನ್ನು ಬಿತ್ತು, ಕೃತಿಯನ್ನು ಬೆಳೆಸು.
ಕೃತಿಯನ್ನು ಬಿತ್ತು, ಸ್ವಭಾವವನ್ನು ಬೆಳೆಸು.
ಸ್ವಭಾವವನ್ನು ಬಿತ್ತು, ಚಾರಿತ್ರ್ಯವನ್ನು ಬೆಳೆಸು.
ಚಾರಿತ್ರ್ಯವನ್ನು ಬಿತ್ತು, ಭವಿಷ್ಯವನ್ನು ಬೆಳೆಸು.
………. ವಂದನೆಗಳೊಂದಿಗೆ,
ಹಿರೇಮಗಳೂರು ಕಣ್ಣನ್ ಕನ್ನಡ ಪೂಜಾರಿ.