लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

” ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ…..”

ಮೈಕ್ರೋ ಫೈನಾನ್ಸ್ ಅಂದರೆ ಸಣ್ಣ ಹಣಕಾಸು ಖಾಸಗಿ ಸಂಸ್ಥೆಗಳು ಮಾಡುತ್ತಿರುವ ದೌರ್ಜನ್ಯ ಕುರಿತಾಗಿ ಇತ್ತೀಚೆಗೆ ಮಾಧ್ಯಮಗಳು ಜನರ ಮತ್ತು ಸರ್ಕಾರದ ಗಮನ ಸೆಳೆಯುತ್ತಿವೆ….

ಹಣ ಎಂಬ ಮಾಧ್ಯಮ ಚಲಾವಣೆಗೆ ಬಂದ ನಂತರ ಮಾನವ ಜಗತ್ತು ಒಂದು ರೀತಿ ತೀವ್ರ ಬದಲಾವಣೆಯತ್ತ ಸಾಗಿತು. ಬಹುಶಃ ಅಲ್ಲಿಯವರೆಗೂ ಇದ್ದ ಮಾನವೀಯ ಸಂಬಂಧಗಳು, ವಸ್ತು ವಿನಿಮಯ ಸಂದರ್ಭದ ಭಾವನಾತ್ಮಕತೆ, ಹಣದ ಪ್ರಾರಂಭದೊಂದಿಗೆ ನಿಧಾನವಾಗಿ ಶಿಥಿಲವಾಗ ತೊಡಗಿ ಇದೀಗ “ಹಣವೇ ನಿನ್ನಯ ಗುಣ ” ಎನ್ನುವಲ್ಲಿಗೆ ಬಂದು ನಿಂತಿದೆ. ಎಲ್ಲ ಸಂಬಂಧಗಳನ್ನು ಹಣದಿಂದಲೇ ಅಳೆಯಲಾಗುತ್ತದೆ.

ಆದ್ದರಿಂದ ಹಣ ಈ ಸಮಾಜದ ಬಹುಮುಖ್ಯ ಜೀವ ದ್ರವ್ಯವಾಗಿದೆ. ಬಹುಶಃ ಗಾಳಿ, ನೀರು, ಆಹಾರ, ವಸತಿಯದು ಒಂದು ತೂಕವಾದರೆ, ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಅಜ್ಜ ಅಜ್ಜಿ ಮಗ ಮಗಳದು ಮತ್ತೊಂದು ತೂಕವಾದರೆ, ಅಧಿಕಾರ, ಅಂತಸ್ತು, ಒಡವೆ, ಜಮೀನು, ಆಸ್ತಿ, ವಾಹನಗಳದು ಮಗದೊಂದು ತೂಕದಾದರೆ, ಪ್ರೀತಿ ಪ್ರೇಮ ಪ್ರಣಯ ತ್ಯಾಗ ಕರುಣೆ ಕ್ಷಮೆ ಸಹಕಾರ ಸಮನ್ವಯಗಳದು ಇನ್ನೊಂದು ತೂಕವಾದರೆ, ಜಾಗತೀಕರಣದ ನಂತರ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಭಾರತದ ಮಟ್ಟಿಗೆ ಹೇಳುವುದಾದರೆ ಈ ಎಲ್ಲಾ ಭಾರಕ್ಕಿಂತ ಹಣವೆಂಬ ಭಾರವೇ ಅತ್ಯಂತ ಹೆಚ್ಚಾಗಿದೆ.

ಇಂತಹ ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ ಎಂಬ ಸಾಲದ ಶೂಲ ಸಾಮಾನ್ಯ ಜನರನ್ನು ಹಿಂಡುತ್ತಿದೆ ಮತ್ತು ಇರಿಯುತ್ತಿದೆ. ಇದು ಶಾಕಿಂಗ್ ನ್ಯೂಸ್ ಅಥವಾ ಬ್ರೇಕಿಂಗ್ ನ್ಯೂಸ್ ಅಲ್ಲವೇ ಅಲ್ಲ. ಸೂಕ್ಷ್ಮ ಸಂವೇದನೆಯ ಎಲ್ಲರಿಗೂ ಅತ್ಯಂತ ಸಹಜ ಮತ್ತು ನಿರೀಕ್ಷಿತ. ಏಕೆಂದರೆ ಮನೆ ಮನೆಗೆ, ರಸ್ತೆ ರಸ್ತೆಗೆ ಸಾಲ ಬೇಕೆ ಸಾಲ ಬೇಕೆ ಎಂದು ಒತ್ತಾಯ ಮಾಡಿ ಸಾಲ ನೀಡಿ, ಕೊನೆಗೆ ಆ ಸಾಲ ವಸೂಲಿಗೆ ಅಮಾನುಷ ಕೃತ್ಯಗಳನ್ನು ಕೈಗೊಳ್ಳುತ್ತಾ ಇಡೀ ಸಮಾಜವೇ ಬಹುತೇಕ ಪ್ರತ್ಯಕ್ಷ ಅಥವಾ ಪರೋಕ್ಷ ಸಾಲದ ಬಲೆಯೊಳಗೆ ಸಿಲುಕಿದೆ.

ಇದನ್ನೇ ಬಹಳ ಹಿಂದೆ ಸರ್ವಜ್ಞ ಕವಿ ವಿವರಿಸಿದ್ದಾರೆ.

ಇದಕ್ಕೆ ಎರಡು ಮುಖವಿದೆ. ಮೊದಲನೆಯದಾಗಿ ದೇಶದ ಅಭಿವೃದ್ಧಿಗೆ ಇಂದಿನ ಆಧುನಿಕ ಕಾಲದಲ್ಲಿ ಹಣದ ಅರಿವು ಹೆಚ್ಚಾಗಿರಬೇಕಾಗುತ್ತದೆ. ಪ್ರತಿಯೊಬ್ಬರ ಅವಶ್ಯಕತೆಗಳಿಗೂ ಒಂದಷ್ಟು ಹಣ ಬೇಕಾಗುತ್ತದೆ. ಅದನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ. ಇದು ಒಂದು ಮುಖವಾದರೆ ಇನ್ನೊಂದು ಅವಶ್ಯಕತೆ ಇಲ್ಲದಿದ್ದರೂ ಮನುಷ್ಯನ ಸಹಜ ಸ್ವಭಾವವನ್ನು ದುರುಪಯೋಗಪಡಿಸಿಕೊಂಡು ಅವರಿಗೆ ಒತ್ತಾಯಪೂರ್ವಕವಾಗಿ ಸಾಲ ನೀಡಿ ಕೊನೆಗೆ ಆ ಸಾಲದೊಂದಿಗೆ ಅವರನ್ನು ಶೂಲಕ್ಕೇರಿಸುವ ಆರ್ಥಿಕ ನೀತಿಗಳು.

ಇದನ್ನು ಚರ್ಚಿಸುತ್ತಾ ಹೋದರೆ ಇದೊಂದು ಬಗೆಹರಿಯದ ಸಮಸ್ಯೆಯಾಗಿದೆ. ಆಳುವ ಸರ್ಕಾರಗಳು ಜನರನ್ನು ನಿಯಂತ್ರಣದಲ್ಲಿಡಲು ಅವರ ಆರ್ಥಿಕ ಪರಿಸ್ಥಿತಿಯನ್ನು ಪರೋಕ್ಷವಾಗಿ ಸಾಲದ ಅನಿವಾರ್ಯ ಸ್ಥಿತಿಗೆ ತಳ್ಳುತ್ತಲೇ ಇರುತ್ತವೆ. ಅವರ ಅವಶ್ಯಕತೆಗಳನ್ನು ಹೆಚ್ಚಿಸುತ್ತಾ ಬೆಲೆಗಳು ಸದಾ ಗಗನ ಮುಖಿಯಾಗಿರುವಂತೆ ನೋಡಿಕೊಳ್ಳುತ್ತವೆ. ಇದಕ್ಕೆ ಬಂಡವಾಳಶಾಹಿ ವ್ಯವಸ್ಥೆ ಸದಾ ಪೂರಕವಾಗಿ ಕೆಲಸ ಮಾಡುತ್ತದೆ.

ಆದ್ದರಿಂದ ಇದನ್ನು ಅಷ್ಟು ಸುಲಭವಾಗಿ ಪರಿಹರಿಸಲು ಸಾಧ್ಯವಿಲ್ಲ. ಏನೋ ನೆಪ ಮಾತ್ರಕ್ಕೆ ಕೆಲವು ಸುಧಾರಣಾ ಕಾನೂನುಗಳನ್ನು ತರಬಹುದಷ್ಟೇ. ಅದರಿಂದ ತೊಂದರೆಗಳು ಸ್ವಲ್ಪ ಕಡಿಮೆಯಾಗಬಹುದೇನೋ. ಎಲ್ಲಿಯವರೆಗೆ ಈ ನಾಗರಿಕ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಹಣಕಾಸಿಗಿಂತ ಹೆಚ್ಚು ಮೇಲುಗೈ ಪಡೆಯುವುದಿಲ್ಲವೋ ಅಲ್ಲಿಯವರೆಗೆ ಈ ರೀತಿಯ ಸಮಸ್ಯೆಗಳು ನಿರಂತರ.

ಯಾವುದೇ ಆರ್ಥಿಕ ತಜ್ಞರು, ಏನೇ ಯೋಜನೆಗಳನ್ನು ರೂಪಿಸಿದರು ಜನರ ಮಾನವೀಯ ಮೌಲ್ಯಗಳ ಅನುಷ್ಠಾನ ಸರಿಯಾಗಿ ಇಲ್ಲದಿದ್ದರೆ ಈ ರೀತಿಯ ಅವ್ಯವಸ್ಥೆ ಸದಾ ಮತ್ತು ನಿರಂತರವಾಗಿರುತ್ತದೆ. ಮನುಷ್ಯರ ವ್ಯಕ್ತಿತ್ವಗಳೇ ಸರಿ ಇಲ್ಲದಿದ್ದರೆ ಮೈಕ್ರೋ ಫೈನಾನ್ಸ್ ಅಥವಾ ಇನ್ನಾವುದೇ ಕ್ಷೇತ್ರಗಳು ಆರೋಗ್ಯಕರವಾಗಿರಲು ಸಾಧ್ಯವಿಲ್ಲ.

ವ್ಯಕ್ತಿಗಳು ಒಳ್ಳೆಯವರಾದರೆ ಮಾತ್ರ ಸಮಾಜ ಈ ರೀತಿಯ ಸಮಸ್ಯೆಗಳಿಂದ, ಗೊಂದಲಗಳಿಂದ ಮುಕ್ತವಾಗಲು ಸಾಧ್ಯ. ಇಲ್ಲದಿದ್ದರೆ “ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ” ಎಂಬಂತೆ ಸಾಲ, ಅವಮಾನ, ಆತ್ಮಹತ್ಯೆ, ದೌರ್ಜನ್ಯ ಇವೆಲ್ಲವೂ ನಡೆಯುತ್ತಲೇ ಇರುತ್ತದೆ. ಮೈಕ್ರೋ ಫೈನಾನ್ಸ್ ನಿಲ್ಲಿಸಿದರೂ ಕಷ್ಟ ಮುಂದುವರಿಸಿದರೂ ಕಷ್ಟ. ನಿಯಂತ್ರಣ ಹೇರಬಹುದು. ಕಳ್ಳರ ಸಂತೆಯಲ್ಲಿ ಅದು ಎಷ್ಟು ದಿನ, ಯಾವ ರೀತಿ ಪರಿಣಾಮ ಬೀರಬಹುದು ನೀವೇ ಯೋಚಿಸಿ. ಮನುಷ್ಯರ ಸ್ವಾರ್ಥದ ಅಭಿವೃದ್ಧಿಯ ಯೋಜನೆಗಳು ಭಸ್ಮಾಸುರನಂತೆ ತಮ್ಮ ನಾಶಕ್ಕೆ ತಾವೇ ಕಾರಣವಾಗುತ್ತಿರುವ ಕಾಲಘಟ್ಟದಲ್ಲಿ ನಾವು ನೀವು.

ಒಮ್ಮೆ, ಮತ್ತೊಮ್ಮೆ ದಯವಿಟ್ಟು ಯೋಚಿಸಿ.
ಇಡೀ ಸಮಾಜವನ್ನು ಒಂದಷ್ಟು ಮೌಲ್ಯಯುತವಾಗಿ ಕಟ್ಟಲು ಪ್ರಯತ್ನಿಸೋಣ. ಕೆಟ್ಟ ಹಣದ ಮಹತ್ವವನ್ನು ಕಡಿಮೆ ಮಾಡೋಣ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….

About Author

Leave a Reply

Your email address will not be published. Required fields are marked *