ಇಡಿ ಅಧಿಕಾರಿ ಸೋಗಿನಲ್ಲಿ ದರೋಡೆ ಪ್ರಕರಣ : ಅಂತರಾಜ್ಯ ದರೋಡೆಕೋರ ಅರೆಸ್ಟ್
1 min readಇಡಿ ಅಧಿಕಾರಿ ಸೋಗಿನಲ್ಲಿ ದರೋಡೆ ಪ್ರಕರಣ : ಅಂತರಾಜ್ಯ ದರೋಡೆಕೋರ ಅರೆಸ್ಟ್
ಬಂಟ್ವಾಳ: ಇ ಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆ ಮಾಡಿದ ಪ್ರಕರಣದಲ್ಲಿ ಅಂತರಾಜ್ಯ ದರೋಡೆಕೋರನನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಪೆರಿನಾಡ್, ತ್ರಿಕ್ಕಡವೂರ್, ಟ್ರಿನಿಟಿ ವಿಲ್ಲಾ ಚಿರಕರ್ ಜಂಕ್ಷನ್ ಮಾತಿಲಿಲ್ ಅಂಚೆಯ ಅನಿಲ್ ಫರ್ನಾಂಡಿಸ್ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಬಂಧಿಸಿ, ಕೃತ್ಯಕ್ಕೆ ಉಪಯೋಗಿಸಿದ KL-02-BP-1104ನೇ ನೊಂದಣಿ ನಂಬ್ರದ ಎರ್ಟಿಗಾ ಕಾರು, 5,00,000 ರೂ ನಗದು ಹಾಗೂ ನಕಲಿ ಕೃತ್ಯ ನಡೆಸುವಾಗ ಕಾರಿಗೆ ಅಳವಡಿಸಿದ್ದ ನಕಲಿ TN-20-DB-5517ನೇ ನಂಬರ ಪ್ಲೇಟ್‌ನ್ನು ವಶಪಡಿಸಿಕೊಂಡಿದ್ದು, ಸ್ವಾದೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಒಟ್ಟು ಮೊತ್ತ ಹಾಗೂ ವಾಹನದ ಒಟ್ಟು ಮೌಲ್ಯ- 11,00,000ರೂ ಅಂದಾಜಿಸಲಾಗಿದೆ.
ಬಂಟ್ವಾಳ ತಾಲೂಕು, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ನಾರ್ಶ ಎಂಬಲ್ಲಿ, ಉದ್ಯಮಿಯೊಬ್ಬರ ಮನೆಗೆ 06 ಜನ ಅಪರಿಚಿತರು ಇ ಡಿ ಅಧಿಕಾರಿಗಳೆಂದು ನಂಬಿಸಿ, ಮನೆಯ ಶೋಧನೆ ನಡೆಸಿ, ಸುಮಾರು 30 ಲಕ್ಷ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 02/2025 ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್, ಐ.ಪಿ.ಎಸ್ ರವರ ಅದೇಶದ ಮೇರೆಗೆ ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತನಿಖಾ ತಂಡ ರಚಿಸಿ, ಅಪರಾಧಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಯಿತು.ಪ್ರಕರಣದಲ್ಲಿ ಉಳಿದ ಆರೋಪಿಗಳ ಪತ್ತೆಗಾಗಿ ತನಿಖೆ ಕಾರ್ಯಚರಣೆ ನಡೆದಿದೆ.
ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವಿವಿಧ ಠಾಣೆಗಳಿಂದ, ಅಪರಾಧ ಪ್ರಕರಣಗಳಲ್ಲಿ ನುರಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ನಾಲ್ಕು ವಿಶೇಷ ತನಿಖಾ ತಂಡ ಕಾರ್ಯನಿರ್ವಹಿಸುತ್ತಿದೆ.