लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮನರಂಜನೆಯ ಹೆಸರಿನ ಟಿವಿ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಬಗ್ಗೆ ಎಚ್ಚರವಿರಲಿ…….

1 min read

ಮನರಂಜನೆಯ ಹೆಸರಿನ ಟಿವಿ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಬಗ್ಗೆ ಎಚ್ಚರವಿರಲಿ…….

ಉಪ್ಪಿನಕಾಯಿಯೇ ಊಟವಾಗುತ್ತಿರುವ ಸಂದರ್ಭದಲ್ಲಿ…………….

ಹತ್ತು ಹಲವಾರು ಮನರಂಜನಾ ಕಾರ್ಯಕ್ರಮಗಳು ಅತಿಹೆಚ್ಚು ಜನಪ್ರಿಯತೆ ಮತ್ತು ಅತ್ಯಂತ ದುಬಾರಿಯಾಗಿ ಸಾಕಷ್ಟು ಹಣ ಮತ್ತು ಹೆಸರು ಗಳಿಸುತ್ತಿವೆ. ಅದೇ ರೀತಿ ಧಾರವಾಹಿಗಳು ಸಹ ಪ್ರತಿ ಮನೆಯ – ಮನಸ್ಸುಗಳ ಅವಿಭಾಜ್ಯ ಅಂಗವಾಗಿದೆ. ಮಧ್ಯಮ ವರ್ಗದ ಜನರಿಂದ ಇದಕ್ಕೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದೆ. ಬೃಹತ್ ಉದ್ಯಮವಾಗಿ ಇದು ಬೆಳೆಯುತ್ತಿದೆ. ಸಾಕಷ್ಟು ಜನರಿಗೆ ಉದ್ಯೋಗಾವಕಾಶಗಳನ್ನು ಸಹ ಸೃಷ್ಡಿಸಿದೆ. ಇದು ಒಳ್ಳೆಯ ಬೆಳವಣಿಗೆ.

ಆದರೆ…….

ಮನರಂಜನೆ ಬದುಕಿನ ಒಂದು ಸಣ್ಣ ಭಾಗ ಮಾತ್ರ. ಅದೇ ಬದುಕಲ್ಲ. ದುಡಿದು ದಣಿವ ದೇಹಕ್ಕೆ ಮನರಂಜನೆ ಅತ್ಯವಶ್ಯಕ. ಆದರೆ ಮನರಂಜನೆ ಸಮಯ ಕೊಲ್ಲುವ ಸೋಮಾರಿಗಳ ವಿಶ್ರಾಂತ ಧಾಮವಾಗುತ್ತಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ.

ಟಿವಿ, ಮೊಬೈಲುಗಳ‌ ವೀಕ್ಷಕರ ಸಂಖ್ಯೆ ಗಮನಿಸಿದರೆ ಈ ರೀತಿಯ ಕಾರ್ಯಕ್ರಮಗಳಲ್ಲಿ ಬಹಳಷ್ಟು ಜನರು ತಮ್ಮ ದೈನಂದಿನ ಸಾಕಷ್ಟು ಸಮಯವನ್ನು ಕಳೆಯುತ್ತಿರುವುದು ಕಂಡುಬರುತ್ತಿದೆ. ಆರ್ಥಿಕ ಅಭದ್ರತೆ, ಮಾನಸಿಕ ಗೊಂದಲಗಳಿಗೆ ಈ ಮನರಂಜನಾ ಕಾರ್ಯಕ್ರಮಗಳು ತಾತ್ಕಾಲಿಕ ಪರಿಹಾರದ ರೂಪದಲ್ಲಿ ಜನರಿಗೆ ಕಾಣುತ್ತಿವೆ ಎಂಬುದು ಸ್ವಲ್ಪ ಆತಂಕಕಾರಿ ವಿಷಯ.

ಈ ಕ್ಷಣಕ್ಕೆ ಇದರಿಂದ ಹೆಚ್ಚು ತೊಂದರೆ ಇಲ್ಲದಿರಬಹುದು. ಆದರೆ ದೇಶದ ಒಟ್ಟು ಉತ್ಪಾದನಾ ಸಾಮರ್ಥ್ಯಕ್ಕೆ ಭವಿಷ್ಯದಲ್ಲಿ ಇದರಿಂದ ಬಲವಾದ ಪೆಟ್ಟು ಬೀಳುವ ಸಾಧ್ಯತೆ ಇದೆ. ಕೊರೋನಾ ನಂತರದ ದಿನಗಳಲ್ಲಿ ಮತ್ತೆ ದೇಶದ ಆರ್ಥಿಕ ಭವಿಷ್ಯ ಚಿಗುರೊಡೆಯಬೇಕಾದರೆ ಜನ ಸಮೂಹ ಹೆಚ್ಚು ಹೆಚ್ಚು ಸಮಯವನ್ನು ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಜನರ ಸಮಯದ ಸದುಪಯೋಗ ಅತ್ಯಮೂಲ್ಯ.

ಒಮ್ಮೆ ದಿನದ ಗಂಟೆಗಟ್ಟಲೆ ಒಂದು ಮನರಂಜನಾ ಕಾರ್ಯಕ್ರಮಗಳಲ್ಲಿ ದೀರ್ಘಕಾಲ ಅದಕ್ಕೆ ಅಡಿಕ್ಟ್ ಆಗಿಬಿಟ್ಟರೆ ಮುಂದೆ ಮನಸ್ಸು, ದೇಹ ಸ್ವಲ್ಪ ಕಷ್ಟದ ಕೆಲಸ ಮಾಡಲು ಒಪ್ಪುವುದಿಲ್ಲ. ಗ್ರಾಮೀಣ ಭಾಷೆಯಲ್ಲಿ ಹೇಳುವುದಾದರೆ ಮೈ ಬಗ್ಗುವುದಿಲ್ಲ.

ಹಗಲುಗನಸಿನಲ್ಲಿಯೇ ವಿಹರಿಸುತ್ತಾ ಅಲ್ಲಿನ ಪಾತ್ರಗಳೊಂದಿಗೆ ಕಷ್ಟ ಸುಖ ಮಾತನಾಡಿಕೊಳ್ಳುತ್ತಾ ವ್ಯಕ್ತಿಗಳು ಕಳೆದು ಹೋಗುವ ಸಾಧ್ಯತೆಯೇ ಹೆಚ್ಚು. ಇದು ದಿನದ ಹೆಚ್ಚು ಹೆಚ್ಚು ಸಮಯ ತೆಗೆದುಕೊಂಡಂತೆ ಸೋಮಾರಿತನವೂ ಹೆಚ್ಚಾಗುತ್ತದೆ. ಇದರ ಲಾಭ ಪಡೆದ ಸಂಸ್ಥೆಗಳು ಮತ್ತಷ್ಟು ಆಕರ್ಷಕ ಕಾರ್ಯಕ್ರಮಗಳನ್ನು ಮಾಡುತ್ತಾ ಒಂದು ಭಾವನಾತ್ಮಕ ಸುಳಿಯಲ್ಲಿ ವೀಕ್ಷಕರನ್ನು ಬಂಧಿಸುತ್ತಾರೆ.

ಮನರಂಜನಾ ಉದ್ಯಮ ಮತ್ತು ಅದರಲ್ಲಿ ಭಾಗವಹಿಸುವವರಿಗೆ ಇದರಿಂದ ಹೆಚ್ಚು ಅನುಕೂಲವಾಗುವಂತೆ ವೀಕ್ಷಕರಿಗೆ ಪರೋಕ್ಷ ಮತ್ತು ಅರಿವಿಗೆ ಬಾರದ ತೊಂದರೆಯಾಗತೊಡಗುತ್ತದೆ. ಒಟ್ಟು ಶ್ರಮ ಸಂಸ್ಕೃತಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಸಿಯತೊಡಗುತ್ತದೆ.

ಕೇವಲ ಇಷ್ಟು ಮಾತ್ರವಲ್ಲದೇ ಹಳ್ಳಿ ಪಟ್ಟಣಗಳ ಭೇದವಿಲ್ಲದೆ ಕೆಲಸ ಮಾಡಿ ಮನೆಗೆ ಹಿಂದುರಿಗಿದ ತಕ್ಷಣ ಟಿವಿ ಅಥವಾ ಮೊಬೈಲ್‌ ಮನರಂಜನೆಯಲ್ಲಿ ಮುಳುಗಿ ಮನೆ ಮಕ್ಕಳು ತಂದೆ ತಾಯಿಗಳ ಇತರ ಜವಾಬ್ದಾರಿ ಅಥವಾ ರಾತ್ರಿ ಊಟದ ನಂತರದ ಸಣ್ಣ ನಡಿಗೆ ಅಥವಾ ಗೆಳೆಯರು ಮತ್ತು ಅತಿಥಿ ಸತ್ಕಾರದಲ್ಲೂ ಸಾಕಷ್ಟು ಕೊರತೆ ಉಂಟಾಗುತ್ತಿದೆ. ಧಾರಾವಾಹಿ ಮತ್ತು ರಿಯಾಲಿಟಿ ಶೋಗಳು ಹೆಚ್ಚು ಜನಪ್ರಿಯವಾದಷ್ಟು ನಮ್ಮ ಕೆಲವು ಮೂಲ ಮತ್ತು ಅತ್ಯವಶ್ಯಕ ಸಂಸ್ಕೃತಿಗೇ ಧಕ್ಕೆಯಾಗುತ್ತಿದೆ.

ಈ ಅಭಿಪ್ರಾಯ ಮನರಂಜನೆಗೆ ವಿರುದ್ಧವಲ್ಲ. ಆದರೆ ಅದಕ್ಕೆ ಉಪಯೋಗಿಸುವ ದಿನದ ಸಮಯದ ಬಗ್ಗೆ ಮಾತ್ರ ಸ್ವಲ್ಪ ಅಸಮಾಧಾನ. ಮನರಂಜನೆ ಹೆಚ್ಚಾಗಿ ಅಧ್ಯಯನ ಚಿಂತನೆ ಚರ್ಚೆ ಸ್ವಾಗತಿಸುವ ಮನೋಭಾವ ಕೌಟುಂಬಿಕ ವಾತಾವರಣ ಕ್ರಿಯಾತ್ಮಕ ಚಟುವಟಿಕೆಗಳು ಎಲ್ಲವೂ ಕುಸಿಯುತ್ತಿರುವ ಸಂದರ್ಭದಲ್ಲಿ ಕೆಲವೇ ಸಂಸ್ಥೆಗಳು ಅದನ್ನು ಮತ್ತಷ್ಟು ಉತ್ತೇಜಿಸಿ ಅದರಲ್ಲಿ ಭಾಗವಹಿಸುವ ನಟನಟಿಯರನ್ನೇ ಸಮಾಜದ ಆದರ್ಶದ ಪ್ರತಿರೂಪವಾಗಿ ಬಿಂಬಿಸುತ್ತಿರುವುದು ಮತ್ತಷ್ಟು ಆತಂಕಕಾರಿ.

ರಿಯಾಲಿಟಿ ಶೋಗಳ ಮುಕ್ತತೆ ಸಹನೀಯವೇ………..

ದೈಹಿಕ ಮುಕ್ತತೆ, ಮಾನಸಿಕ ಮುಕ್ತತೆ, ಕೌಟುಂಬಿಕ ಮುಕ್ತತೆ, ನೈತಿಕ ಮುಕ್ತತೆ, ಸಂಭಾಷಣೆಗಳ ಮುಕ್ತತೆ, ಭಾವನೆಗಳ ಮುಕ್ತತೆ ಬಹುಶಃ ಒಂದಷ್ಟು ಉಡುಗೆ ತೊಡುಗೆ ಹೊರತುಪಡಿಸಿ ಎಲ್ಲವೂ ಮುಕ್ತವಾಗುತ್ತಿರುವ ಅನುಭವ ಈ ಕೆಲವು ರಿಯಾಲಿಟಿ ಶೋಗಳನ್ನು ನೋಡಿದಾಗ ಆಗುತ್ತಿದೆ.

ಇದು ಸರಿಯೇ ಅಥವಾ ತಪ್ಪೇ ?
ಇದರ ಪರಿಣಾಮ ಸಮಾಜದ ಮೇಲೆ ಉತ್ತಮವಾಗುತ್ತದೆಯೇ ಅಥವಾ ಕೆಟ್ಟದ್ದಾಗುತ್ತದೆಯೇ ?

ಸಾಮಾನ್ಯವಾಗಿ ಸಂಪ್ರದಾಯವಾದಿಗಳು ಮುಕ್ತತೆಯ ವಿರೋಧಿಗಳು ಹಾಗೆಯೇ ಪ್ರಗತಿಪರರು ಮುಕ್ತತೆಯ ಪರವಾಗಿರುವವರು. ಜೊತೆಗೆ ಅನೇಕ ಇತರ ವಿಷಯಗಳಲ್ಲಿ ಇಬ್ಬರಲ್ಲಿಯೂ ಸಾಕಷ್ಟು ಗೊಂದಲಗಳಿವೆ.

ಆದರೆ ರಿಯಾಲಿಟಿ ಶೋಗಳ ಮುಕ್ತತೆ ಕೃತಕ – ಅಸಹಜ – ಮನರಂಜನೆ ಮತ್ತು ವಾಣಿಜ್ಯೀಕರಣದ ಉದ್ದೇಶ ಹೊಂದಿರುತ್ತದೆ. ಇಲ್ಲಿನ ಮುಕ್ತತೆಯಲ್ಲಿ ವೈಚಾರಿಕ ಚಿಂತನೆಗಿಂತ ಪ್ರದರ್ಶನ ಮನೋಭಾವವೇ ತುಂಬಿರುತ್ತದೆ.

ಇಲ್ಲಿ ಮತ್ತೊಂದು ಗಮನಸೆಳೆಯುವ ವಿಷಯವೆಂದರೆ ಈ ಮುಕ್ತತೆ ಕೇವಲ ಮನರಂಜನೆಗೆ ಮಾತ್ರ ಸೀಮಿತ. ಅದನ್ನು ನಿಜ ಬದುಕಿನಲ್ಲಿ ಅಥವಾ ಸಮಾಜದಲ್ಲಿ ಅಳವಡಿಸಿಕೊಂಡರೆ ಸಾಮಾನ್ಯ ಜನ ಇಷ್ಟಪಡುವುದಿಲ್ಲ. ಅಷ್ಟೇ ಏಕೆ ರಿಯಾಲಿಟಿ ಶೋಗಳ ಪಾತ್ರಧಾರಿಗಳು ಮತ್ತು ತೀರ್ಪುಗಾರರು ಸಹ ಒಪ್ಪುವುದಿಲ್ಲ. ಈ ನಡವಳಿಕೆ ಸಾಮಾನ್ಯರ ಜೀವನದಲ್ಲಿ ಅಶ್ಲೀಲ ಅಥವಾ ಅತಿರೇಕದಂತೆ ಕಾಣುತ್ತದೆ.

ವಾಸ್ತವ ಮತ್ತು ಭ್ರಮೆಯ ನಡುವಿನ ವ್ಯತ್ಯಾಸವನ್ನು ಗುರುತಿಸುವಲ್ಲಿ ಸಾಮಾನ್ಯ ಜನ ಸೋಲುತ್ತಾರೆ. ಆಗ ಈ ರೀತಿಯ ಕಾರ್ಯಕ್ರಮಗಳ ದುಷ್ಪರಿಣಾಮ ಗೋಚರಿಸುತ್ತದೆ.

ಮೇಲ್ನೋಟಕ್ಕೆ ಮತ್ತು ತಕ್ಷಣಕ್ಕೆ ಇದು ಕಾಣಬರುವುದಿಲ್ಲ. ಆದರೆ ನಿಧಾನವಾಗಿ ಮನಸ್ಸುಗಳಲ್ಲಿ ಇದು
ಬೇರೂರತೊಡಗುತ್ತದೆ.

ವಾರಾಂತ್ಯದಲ್ಲಿ ರಾತ್ರಿಯ ವೇಳೆ ಈ ಕಾರ್ಯಕ್ರಮಗಳು ಪ್ರಸಾರವಾಗುವುದರಿಂದ ಇದರ ವೀಕ್ಷಕರು ಜಾಸ್ತಿ ಮತ್ತು ಹೆಚ್ಚು ಜನಪ್ರಿಯತೆ ಪಡೆದಿವೆ. ಬಹುತೇಕ ಮನೆಗಳ‌ ಟಿವಿಗಳಲ್ಲಿ ಇದೇ ಕಾರ್ಯಕ್ರಮಗಳನ್ನು ನೋಡುತ್ತಿರುತ್ತಾರೆ.

ಸಂಗೀತ, ನೃತ್ಯ, ಜ್ಞಾನಾರ್ಜನೆಯ ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳು ಸ್ವಾಗತಾರ್ಹ. ಆದರೆ ಅದಕ್ಕಿಂತ ಭಿನ್ನವಾದ ಕೆಲವು ಕಾರ್ಯಕ್ರಮಗಳು ಒಂದು ರೀತಿಯಲ್ಲಿ ಅಪಾಯಕಾರಿ ಹಂತವನ್ನು ದಾಟಿ ಮಿತಿಮೀರಿದ ಪ್ರಮಾಣದಲ್ಲಿ ಮುಂದುವರೆದಿವೆ. ಹಾಸ್ಯ ಮನರಂಜನೆಯ ಹೆಸರಿನಲ್ಲಿ ಸಮಾಜದ ವಿರುದ್ಧ ಮೌಲ್ಯಗಳಿಗೆ ಮಾನ್ಯತೆ ದೊರೆಯುವಂತೆ ಮಾಡುತ್ತಿವೆ.

ಹೆಣ್ಣು ಗಂಡಿನ ಸಂಬಂಧಗಳನ್ನು ಬಿಂಬಿಸುವ ಅವರ ವರ್ತನೆಗಳನ್ನು ಪ್ರದರ್ಶಿಸುವ ಸನ್ನಿವೇಶಗಳಲ್ಲಿ ಈ ಮುಕ್ತತೆ ಹೆಚ್ಚು ವ್ಯಾಪಕವಾಗಿದೆ. ಇನ್ನೂ ಮದುವೆಯಾಗದ, ಮದುವೆಯ ಬಗ್ಗೆ ಕನಸುಗಳನ್ನು ಕಾಣುತ್ತಿರುವ ಯುವಕ ಯುವತಿಯರ ಮನಸ್ಸುಗಳಲ್ಲಿ ಇದು ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಏಕೆಂದರೆ ಸಾಮಾನ್ಯ ಮನುಷ್ಯರ ದೇಹ ಮತ್ತು ಮನಸ್ಸುಗಳ ವಾಸ್ತವ ಪರಿಸ್ಥಿತಿ ಇಲ್ಲಿಗಿಂತ ಬೇರೆಯದೇ ಆಗಿರುತ್ತದೆ. ಈ ಕಾಲ್ಪನಿಕ ಲೋಕದ ಸನ್ನಿವೇಶಗಳು ವಾಸ್ತವವನ್ನು ಭ್ರಮೆಯಾಗಿಸಿ ವಂಚಿಸುತ್ತವೆ.

ನೋಡಲು‌ ಹಾಸ್ಯ ಮತ್ತು ಮನರಂಜನೆ ಎನಿಸಿದರೂ ಮನದಾಳದಲ್ಲಿ ನಮ್ಮನ್ನೇ ನಾವು ಪಾತ್ರವಾಗಿಸಿ ಆ ದೃಶ್ಯಗಳನ್ನು ಕಲ್ಪಿಸಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಇವೆ.

ಆದ್ದರಿಂದ ಹೆಚ್ಚು ಈ ರೀತಿಯ ರಿಯಾಲಿಟಿ ಶೋಗಳನ್ನು ನೋಡುವವರು ದಯವಿಟ್ಟು ಅದನ್ನು ನಕ್ಕು ಅಲ್ಲಿಯೇ ಮರೆತು ಬಿಡಿ. ನಿಜವಾದ ಬದುಕಿನ ರಿಯಾಲಿಟಿ ಶೋನಲ್ಲಿ ವಾಸ್ತವ ಜಗತ್ತಿನ ಅಪ್ಪ, ಅಮ್ಮ, ಸಂಬಂಧಿಕರು, ಸುತ್ತಮುತ್ತಲಿನ ಜನರುಗಳ ಜೀವನಶೈಲಿಯೇ ಆಗಿರುತ್ತದೆ. ಆದರೆ ಈ ಸೆಲೆಬ್ರಿಟಿಗಳದು ರಿಯಾಲಿಟಿ ಶೋ ಅಲ್ಲ ರಿಯಾಲಿಟಿ ಹೆಸರಿನ ಡೂಪ್ಲಿಕೇಟ್ ಶೋಗಳು.
ಅದರ ಬಗ್ಗೆ ಎಚ್ಚರಿಕೆಯಿಂದಿರಿ.

ಅವರನ್ನು ನಿಯಂತ್ರಿಸುವುದು ಕಷ್ಟ. ಆದ್ದರಿಂದ ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳೋಣ……..

ಹೌದು ಬದಲಾವಣೆ ಜಗದ ನಿಯಮ ನಿಜ. ಆದರೆ ಬದಲಾವಣೆ ಉತ್ತಮ ಮತ್ತು ಪ್ರಗತಿಯೆಡೆಗೆ ಇದ್ದರೆ ಮಾತ್ರ ಅದು ಸ್ವಾಗತಾರ್ಹ ಮತ್ತು ಪ್ರಶಂಸನೀಯ. ವಿನಾಶ ಅಥವಾ ಅಪಾಯಕಾರಿಯಾಗಿದ್ದರೆ ಆ ನಿಟ್ಟಿನಲ್ಲಿ ಸಮಾಜ ಮತ್ತೊಮ್ಮೆ ತನ್ನ ನಡವಳಿಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂಬ ಕಳಕಳಿಯಿಂದ ಈ ಬಗ್ಗೆ ಗಮನ ಸೆಳೆಯುವ ಸಣ್ಣ ಪ್ರಯತ್ನ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…….

About Author

Leave a Reply

Your email address will not be published. Required fields are marked *