लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

2019 ರ ಜನವರಿ 21 ರಂದು ನಮ್ಮನ್ನಗಲಿದ ಸಿದ್ದಗಂಗಾ ಮಠದ ಶ್ರೀಗಳನ್ನು ನೆನೆಯುತ್ತಾ……

1 min read

2019 ರ ಜನವರಿ 21 ರಂದು ನಮ್ಮನ್ನಗಲಿದ ಸಿದ್ದಗಂಗಾ ಮಠದ ಶ್ರೀಗಳನ್ನು ನೆನೆಯುತ್ತಾ……

ಇಬ್ಬರು ಮನುಷ್ಯರ ಆಯಸ್ಸನ್ನು ಒಬ್ಬರೇ ಪಡೆದ ಅದೃಷ್ಟವಂತರ ಸಾಧನೆಯ ಒಂದು ನೋಟ…..

ನಡೆದಾಡುವ ದೇವರಲ್ಲ,
ನಲಿದಾಡುವ – ನುಡಿದಾಡಿದ ಜೀವಪ್ರೀತಿಯ ನಿಜ ಮನುಷ್ಯನಾಗಿದ್ದ ಸಿದ್ದಗಂಗೆಯ
ಶಿವಕುಮಾರ ಸ್ವಾಮಿ ಎಂಬ ಶಿವಣ್ಣ……………

ಸಾಧಾರಣ ಕುಟುಂಬದ ಬಾಲಕನೊಬ್ಬ ಉಚಿತ ವಸತಿ ಶಾಲೆಯ ವಿದ್ಯಾರ್ಥಿಯಾಗಿ ತನ್ನ ವಿನಯ, ಪ್ರತಿಭೆ, ಜ್ಞಾನ, ನಡವಳಿಕೆಯಿಂದ – ಪರಿಸ್ಥಿತಿ ನಿರ್ಮಿಸಿದ ಅವಕಾಶದಿಂದ ಸನ್ಯಾಸತ್ವ ಸ್ವೀಕರಿಸಿ ಸಿದ್ದಗಂಗೆ ಎಂಬ ಸ್ಥಳದ ಸಣ್ಣ ಮಠ ಒಂದಕ್ಕೆ ಮಠಾಧಿಪತಿಯಾಗುತ್ತಾನೆ.

ನಂತರ ಅವನು ಅವರಾಗಿ, ಸ್ವಾಮಿಗಳಾಗಿ ತನ್ನ ಕಾಯಕ ಪ್ರಾರಂಭಿಸುತ್ತಾರೆ.

ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಮತ್ತು ಸ್ವಾತಂತ್ರ್ಯ ನಂತರವು ಕೂಡ ವಿದ್ಯೆ ಮತ್ತು ಊಟಕ್ಕೆ ನಿಕಟ ಸಂಬಂಧವಿರುತ್ತದೆ. ಬಡತನದ ಕಾರಣದಿಂದಾಗಿ ಮೊದಲು ಊಟ ನಂತರ ಶಾಲೆ ‌ಎಂಬ ವಾತಾವರಣ. ಇದನ್ನು ಗ್ರಹಿಸಿದ ಶಿವಕುಮಾರ ಸ್ವಾಮಿಗಳು ತನ್ನ ಮಠದ ಮೂಲ ಧ್ಯೇಯವಾದ ಅನ್ನ ದಾಸೋಹ ಮತ್ತು ಅಕ್ಷರ ದಾಸೋಹದ ಜೊತೆಗೆ ಆಶ್ರಯ ದಾಸೋಹದ ಮಹತ್ವ ಅರಿತು ಅದಕ್ಕಾಗಿ ಇಡೀ ಬದುಕನ್ನು ಸಮರ್ಪಿಸುತ್ತಾರೆ. ತ್ರಿವಿಧ ದಾಸೋಹಿ ಎಂಬ ಹೆಸರು ಗಳಿಸುತ್ತಾರೆ.

ಖಾವಿ ತೊಟ್ಟು ಬಹುತೇಕ ಭಿಕ್ಷೆಗೆ ಹತ್ತಿರದ ದಾನ ಬೇಡುತ್ತಾ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ವಸತಿ ಮತ್ತು ಶಿಕ್ಷಣದ ಅವಕಾಶ ಕಲ್ಪಿಸುತ್ತಾರೆ.

ಒಂದು ಹಂತದ ನಂತರ ‌ಆ ಸಂಸ್ಥೆ ತಾನಾಗಿಯೇ ಬೆಳೆಯುತ್ತಾ ಬೃಹದಾಕಾರ ತಾಳುತ್ತದೆ. ಅಲ್ಲಿ ಕಲಿತ ಅನೇಕರು ವಿಶ್ವದ ನಾನಾ ಕಡೆ ಒಳ್ಳೆಯ ಸ್ಥಾನಮಾನ ಗಳಿಸುತ್ತಾರೆ.

ಭಾರತದಲ್ಲಿ ‌ಸಿದ್ದಗಂಗೆ ಶಿಕ್ಷಣ ಮತ್ತು ಅನ್ನದಾನದಲ್ಲಿ ಮಹತ್ವದ ಸ್ಥಾನ ಗಳಿಸುತ್ತದೆ. ಬಹುತೇಕ ಎಲ್ಲಾ ರಾಷ್ಟ್ರಪತಿ, ಪ್ರಧಾನಿಗಳು ಸಹ ಇಲ್ಲಿಗೆ ಭೇಟಿ ನೀಡುತ್ತಾರೆ. ರಾಜ್ಯದ ಎಲ್ಲಾ ಅಧಿಕಾರಸ್ಥರು ಸಹ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆಯಲು ಬರುತ್ತಾರೆ.

ಮುಂದೆ ಸಂಸ್ಥೆ ದೊಡ್ಡದಾಗಿ ಹಣಕಾಸಿನ ವ್ಯವಹಾರ ಹೆಚ್ಚಾದಂತೆ ‌ಸಹಜವಾಗಿ ಭ್ರಷ್ಟರು ಮತ್ತು ರಾಜಕಾರಣಿಗಳು ಒಳ ನುಸುಳುತ್ತಾರೆ. ಉತ್ತರಾಧಿಕಾರಿ ಗೌರಿಶಂಕರ ಸ್ವಾಮಿಗಳು ಮತ್ತು ಇವರ ಮಧ್ಯೆ ಗಲಾಟೆ ಗಲಭೆ ಗೊಂದಲ ಹೊಡೆದಾಟ ಪೋಲೀಸ್ ನ್ಯಾಯಾಲಯ ಹೀಗೆ ಸುಮಾರು ಒಂದು ದಶಕದಷ್ಟು ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುತ್ತದೆ. ಕಾಲಾ ನಂತರದಲ್ಲಿ ಅದು ಒಂದಷ್ಟು ಹೊಂದಾಣಿಕೆಯಿಂದ ತಹ ಬಂದಿಗೆ ಬರುತ್ತದೆ.

ಆದರೆ ಅಲ್ಲಿಂದ ಮಠದ ಮೇಲೆ ಒಂದಷ್ಟು ಪಕ್ಷ ರಾಜಕೀಯವೂ ನಿಯಂತ್ರಣ ‌ಸಾಧಿಸುತ್ತದೆ.

ಏನೇ ಆದರೂ ಬದುಕಿನ ಕೆಲವು ವರ್ಷಗಳನ್ನು ಹೊರತುಪಡಿಸಿ ಶಿವಕುಮಾರರು ಉಳಿದ ಬಹುತೇಕ ಸಮಯದಲ್ಲಿ ತಟಸ್ಥ ನೀತಿಯನ್ನು ಅನುಸರಿಸಿ ಯಾವುದೇ ಪಕ್ಷಪಾತಕ್ಕೆ ಬಹಿರಂಗವಾಗಿ ಅವಕಾಶ ಕೊಡುವುದಿಲ್ಲ.

ಶಿಸ್ತಿನ ಬದುಕಿನಿಂದ ತಮಗೆ ಲಭಿಸಿದ ದೀರ್ಘಕಾಲದ ಆಯಸ್ಸು ಮತ್ತು ಆರೋಗ್ಯವನ್ನು ಸಂಪೂರ್ಣವಾಗಿ ಮತ್ತು ಅತ್ಯುತ್ತಮ ‌ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಾರೆ.

ಒಬ್ಬ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಸಾಧನೆ ಇದು ಎಂದು ಮುಂದಿನ ಪೀಳಿಗೆಗೆ ಅರ್ಥವಾಗಬೇಕೆ ಹೊರತು ಅವರು ದೇವರೆಂಬ ಪವಾಡ ಪುರುಷ ‌ಎಂದು ಬಿಂಬಿತವಾಗಬಾರದು. ಅದು ಅಪಾಯಕಾರಿ ಮತ್ತು ಐತಿಹಾಸಿಕ ವಂಚನೆಯಾಗುತ್ತದೆ.

ಹೇಗೆಂದರೆ,
ನಮ್ಮ ಜನರಲ್ಲಿ ದೇವರೆಂಬ ಕಲ್ಪನೆ…

ಅತಿಮಾನುಷ, ಸರ್ವಶಕ್ತ, ಸರ್ವಾಂತರ್ಯಾಮಿ, ಮಾಯಾವಿ, ಬೇಡಿದ್ದನ್ನು ಪೂರೈಸುವವನು.
ಆತ ಅದೃಶ್ಯವಾಗಿಯೇ ಎಲ್ಲವನ್ನೂ ನಿಯಂತ್ರಿಸ ಬಲ್ಲ ಶಕ್ತಿ ಎಂದು ನಂಬಲಾಗಿದೆ. ಅದಕ್ಕೆ ಮೂರ್ತರೂಪ ನೀಡಿ ಭಕ್ತಿಯ ಕಡ್ಡಿ ಕರ್ಪೂರ ಹೂವಿನ ಅಲಂಕಾರ ಮಾಡಿ ನಮಸ್ಕರಿಸಲಾಗುತ್ತದೆ. ಆರಾಧನಾ ಭಾವ ಮಾತ್ರ ಅಲ್ಲಿ ಉಳಿಯುತ್ತದೆ.

ಆದರೆ ಈ ಬಡ ಶಿವಣ್ಣ ಆ ಕಲ್ಪನೆಯ ‌ದೇವರು ಮಾಡದ ಕೆಲಸವನ್ನು ಮಾಡಿದ್ದಾರೆ. ಆ ದೇವರು ಕೊಡಲು ಸಾಧ್ಯವಾಗದ ಅನ್ನ, ಆಹಾರ, ಶಿಕ್ಷಣ, ಆಶ್ರಯ, ಉದ್ಯೋಗವನ್ನು ಲಕ್ಷಾಂತರ ಬಡ ನಿರ್ಗತಿಕ ಜನರಿಗೆ ನೀಡಿ ವಾಸ್ತವದಲ್ಲಿ ಮನುಷ್ಯನೊಬ್ಬ ಸಹಜವಾಗಿಯೇ ಇದನ್ನು ಸಾಧಿಸಬಹುದು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ.

ಅದನ್ನು ನಾವು ಅರ್ಥಮಾಡಿಕೊಂಡು ಅದರಿಂದ ಸ್ಪೂರ್ತಿ ಪಡೆದು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕೆ ಹೊರತು ನಡೆದಾಡುವ ದೇವರೆಂದು, ಅವರ ಸಹಜ, ಸ್ವಾಭಾವಿಕ ಮತ್ತು ಅಪರೂಪದ ದೀರ್ಘಾಯುಷ್ಯವನ್ನು ಅತಿಯಾಗಿ ರಂಜಿಸಿ ಇಚ್ಚಾ ಮರಣಿ ಎಂದು ಹೇಳುತ್ತಾ ಜನ ಸಾಮಾನ್ಯರಿಂದ ದೂರ ಮಾಡಿ ಪವಾಡ ಪುರುಷರೆಂದು ಬಿಂಬಿಸಿದರೆ ಈ ಆಧುನಿಕ ಕಾಲದಲ್ಲೂ ನಾವು ಇತಿಹಾಸವನ್ನು ತಪ್ಪಾಗಿ ಚಿತ್ರಿಸುತ್ತಿದ್ದೇವೆ ಎಂದಾಗುತ್ತದೆ.

ಸಿದ್ದಗಂಗಾ ಶ್ರೀಗಳು ಬಹುದೊಡ್ಡ ಚಿಂತಕರಲ್ಲ, ಜ್ಞಾನಿಗಳಲ್ಲ, ಹೋರಾಟಗಾರರಲ್ಲ, ಬಸವಣ್ಣನವರಂತ ಕ್ರಾಂತಿಕಾರಿಗಳಲ್ಲ ಪವಾಡ ಪುರುಷರಂತು ಅಲ್ಲವೇ ಅಲ್ಲ. ಆದರೆ..‌.‌

ನಿರಂತರ – ನಿಶ್ಯಬ್ದ – ನಿಷ್ಕಲ್ಮಶ – ನಿರುಪದ್ರವಿ ಕಾಯಕ ಯೋಗಿ. ತಮ್ಮ ಪಾಲಿನ ಕೆಲಸವನ್ನು ತಲೆ ಬಗ್ಗಿಸಿ ನಿರ್ವಂಚನೆಯಿಂದ – ಪ್ರೀತಿಯಿಂದ ಮಾಡುತ್ತಾ ಹೋದರು. ಅದು ಅವರ ಬಹುದೊಡ್ಡ ಸಾಮರ್ಥ್ಯ ಮತ್ತು ಸಾಧನೆ. ಇದು ಭಾರತದ ಮತ್ತು ಎಲ್ಲಾ ದೇಶಗಳ ಸಮಾಜ ಸೇವಕರಿಗೆ ಸ್ಪೂರ್ತಿಯೂ ಹೌದು.

ಎಂದಿನಂತೆ ಮುಗ್ದತೆಯ ಜೊತೆ ಒಂದಷ್ಟು ಮೌಡ್ಯ, ಅಧಿಕಾರಸ್ತರ ಒಡನಾಟ, ಅನಿವಾರ್ಯವಾಗಿ ಕೆಲವು ಭ್ರಷ್ಟರ ಸಹವಾಸ ಇದ್ದರೂ ಅವು ಇಂದಿನ ಸಮಯದಲ್ಲಿ ನಿರ್ಲಕ್ಷಿಸಬಹುದಾದ ವಿಷಯಗಳು. ಪರಿಪೂರ್ಣತೆ ಮನುಷ್ಯ ಮಾತ್ರರಿಂದ‌ ಸಾಧ್ಯವೇ ಇಲ್ಲ.

ಇರಲಿ, ಇಂದಿನ ಭ್ರಷ್ಟಾಚಾರದ, ಜಾತಿವಾದಿ, ಕೋಮುವಾದಿ ಸನ್ನಿವೇಶದಲ್ಲಿ
ನಾವು ಅವರ ಕಾಯಕದ ಒಂದು ಸಣ್ಣ ಅಂಶವನ್ನು ಪ್ರಾಮಾಣಿಕವಾಗಿ ಅಳವಡಿಸಿಕೊಳ್ಳುವ ಮುಖಾಂತರ ಅವರಿಗೆ ಗೌರವ ಸಲ್ಲಿಸಬಹುದು. ಅದೇ ನಾವು ಅವರಿಗೆ ಕೊಡುವ ಕಾಣಿಕೆಯೂ ಸಹ‌……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068………

About Author

Leave a Reply

Your email address will not be published. Required fields are marked *