ಶೀಘ್ರದಲ್ಲೇ ತುಮಕೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೆ ಚಾಲನೆ;ಜೆ.ಎಸ್.ರಘು ಮಾಹಿತಿ
1 min read
ಮೂಡಿಗೆರೆ:ಶೀಘ್ರದಲ್ಲೇ ತುಮಕೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೆ ಚಾಲನೆ;ಜೆ.ಎಸ್.ರಘು ಮಾಹಿತಿ.
ಹೆದ್ದಾರಿ ಅಭಿವೃದ್ದಿಪಡಿಸುವ ಸಲುವಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 1700ಕೋಟಿ ರೂ ಅನುದಾನ ಬಿಡುಗಡೆಗೊಳಿಸಿದ್ದು ಇದನ್ನು ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ ಬೇಲೂರು ಮಾರ್ಗವಾಗಿ ಬಾಣಾವರದವರೆಗೆ ಹಾದುಹೋಗುವ ರಾ. ಹೆದ್ದಾರಿ ಅಭಿವೃದ್ದಿಗೆ ಬಳಕೆ ಮಾಡಲಾಗುವುದು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೆ.ಸಿ.ರಘು ಮಾಹಿತಿ ನೀಡಿದ್ದಾರೆ.
ಈ ಹಿಂದೆ ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆಯನ್ನು 2011ರಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸ ಲಾಯಿತು. ಆದರೆ ಹೆದ್ದಾರಿ ಅಗಲೀಕರಣ ಇದುವರೆಗೂ ಕಡತದಲ್ಲಿತ್ತೇ ವಿನಹ ಕಾರ್ಯಗತಗೊಂಡಿರುವುದಿಲ್ಲ. ಈ ಬಗ್ಗೆ ಮತ್ತು ಇತರೆ ವಿವಿಧ ರಾ.ಹೆದ್ದಾರಿ ಅಗಲೀಕರಣದ ಕುರಿತು ಜಿಲ್ಲಾ ಬಿಜೆಪಿ ವತಿಯಿಂದ ಚರ್ಚಿಸಿ ನಿರ್ಣಯ ಕೈಗೊಂಡು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರಲ್ಲಿ ಪ್ರಸ್ತಾಪಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಂಸದರು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿದ ಪರಿಣಾಮ ಅನುದಾನ ಬಿಡುಗಡೆಯಾಗಿದೆ. ಸದ್ಯದಲ್ಲೇ ಈ ಕುರಿತು ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಕಡೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಈಗಾಗಲೇ 410 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರ ಟೆಂಡರ್ ಪ್ರಕ್ರಿಯೆ ಆರಂಭಗೊoಡಿದ್ದು ಭೂಮಿ ಸರ್ವೆ ಕಾರ್ಯ ಮುಗಿದಿದೆ. ಗ್ರಾಮೀಣ ಭಾಗದಲ್ಲಿ 45ಅಡಿ ಮತ್ತು ನಗರ ಪ್ರದೇಶದಲ್ಲಿ 35ಅಡಿ ರಸ್ತೆ ವಿಸ್ತರಣೆಗೆ ಅಧಿಕಾರಿಗಳು ನೀಲಿ ನಕ್ಷೆ ಸಿದ್ದಪಡಿಸಿದ್ದಾರೆ. ತುಮಕೂರು ಮಂಗಳೂರು ಹೆದ್ದಾರಿ ಹ್ಯಾಂಡ್ ಪೋಸ್ಟ್ ನಿಂದ ಬಾಣಾವರದವರೆಗಿನ ಅಗಲೀಕರಣದ ಅಳತೆ ಇನ್ನೂ ನಿಗದಿಗೊಳಸಿರುವುದಿಲ್ಲ ಎಂದು ಅವರು ಶುಕ್ರವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಚಾರ್ಮಾಡಿ ಘಾಟ್ ಹೆದ್ದಾರಿ 13 ಕಿ.ಮಿ.ಅಗಲೀಕರಣಕ್ಕೆ ಕೇಂದ್ರದಿoದ ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಉಳಿದ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ 13 ಕಿ.ಮಿ.ಹೆದ್ದಾರಿ ಅಗಲೀಕರಣಕ್ಕೆ ಸದ್ಯದಲ್ಲೇ ಅನುದಾನ ಬಿಡುಗಡೆಯಾಗಲಿದೆ. ಅದಕ್ಕಾಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಬಿಜೆಪಿಯ ಎಲ್ಲಾ ಪ್ರತಿನಿಧಿಗಳೂ ಪ್ರಯತ್ನ ಪಡುತ್ತಿದ್ದಾರೆ. ಅನುಮೋದನೆ ದೊರೆತ ಬಳಿಕ ಟೆಂಡರ್ ಪ್ರಕ್ರಿಯೆ ನಡೆದು ಘಾಟ್ ರಸ್ತೆ ದ್ವಿಪಥದಲ್ಲಿ ನಿರ್ಮಾಣವಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯದಿಂದಲೂ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಿಗರು ಧಾಂಗುಡಿಯಿಡುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ರಸ್ತೆಗಳಲ್ಲಿ ವಾಹನದ ದಟ್ಟಣೆ ಹೇರಳವಾಗಿದೆ. ವಾರಾಂತ್ಯದಲ್ಲಿ ನಿಭಾಯಿಸಲಾಗದಷ್ಟರ ಮಟ್ಟಿಗೆ ವಾಹನ ಸಂಚಾರವಿರುತ್ತದೆ. ಈಗಿರುವ ಕಿರಿದಾದ ರಸ್ತೆಯಲ್ಲಿ ಅಷ್ಟೊಂದು ಸಂಖ್ಯೆಯಲ್ಲಿ ವಾಹನಗಳು ಸುಗಮವಾಗಿ ಸಂಚರಿಸಲು ಹರಸಾಹಸ ಪಡಬೇಕಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಬಿಜೆಪಿ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಣಯ ಕೈಗೊಂಡು ಬಿಜೆಪಿಯ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಲಾಗಿತ್ತು. ಜಿಲ್ಲೆಯ ಪ್ರತಿನಿಧಿಗಳ ಪ್ರಯತ್ನದಿಂದ ಎಲ್ಲಾ ಹೆದ್ದಾರಿಗಳ ಅಭಿವೃದ್ದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿಷ್ಕ್ರೀಯಗೊಂಡಿದೆ. ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡಲು ಖಜಾನೆ ಖಾಲಿಯಾಗಿದೆ. ಪಂಚ ಗ್ಯಾರಂಟಿ ಯೋಜನೆಯಿoದಾಗಿ ಹೊರೆಯಾಗಿರುವ ಆರ್ಥಿಕ ಮುಗ್ಗಟ್ಟಿನಿಂದ ಚೇತರಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಗ್ಯಾರಂಟಿ ಯೋಜನೆಯನ್ನು ಕೈಬಿಡಲು ಅನೇಕ ಕಾಂಗ್ರೆಸ್ ಶಾಸಕರು ಮತ್ತು ಸಚಿವರೇ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ಅವರಿಗೆ ಬಿಸಿ ತುಪ್ಪವಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಯಿಂದಾಗಿ ರಸ್ತೆಗಳ ಗುಂಡಿಮುಚ್ಚಲೂ ಅನುದಾನ ಸಿಗದಂತಾಗಿದೆ. ಇದರಿoದ ಜನ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ. ಜನರ ಸಿಟ್ಟು ಸ್ಪೋಟಗೊಳ್ಳುವ ಮೊದಲು ಎಚ್ಚೆತ್ತುಕೊಳ್ಳದಿದ್ದರೆ
ಸರ್ಕಾರದ ಪತನ ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.