13ನೇ ಅಖಿಲ ಭಾರತ ಶರಣ ಸಾಹಿತ್ಯ ರಾಷ್ಟ್ರ ಸಮ್ಮೇಳನ
1 min read13ನೇ ಅಖಿಲ ಭಾರತ ಶರಣ ಸಾಹಿತ್ಯ ರಾಷ್ಟ್ರ ಸಮ್ಮೇಳನ*
*ಇದೇ 2025ರ ಜನವರಿ 18ಮತ್ತು 19ರಂದು ಓಬವ್ವನ ನಾಡು ಶರಣರ ಬೀಡು ಕೋಟೆ ನಗರ ಚಿತ್ರದುರ್ಗದಲ್ಲಿ 13ನೇ ಅಖಿಲ ಭಾರತ ಶರಣ ಸಾಹಿತ್ಯ ರಾಷ್ಟ್ರ ಸಮ್ಮೇಳನ*
ಬೀದರ್ ನ ಬಸವಯೋಗ ಮತ್ತು ಶರಣ ತತ್ವ ಪ್ರಸಾರ ಕೇಂದ್ರದ *ಪೂಜ್ಯ ಡಾ. ಶ್ರೀ ಸಿದ್ದರಾಮ ಬೆಲ್ದಾಳ ಶರಣರು* ಸಮ್ಮೇಳನದ ಸರ್ವಾಧ್ಯಕ್ಷರು.
ಜಾತಿ ಮತ ಕುಲದ ಕಟ್ಟಳೆಗಳನ್ನೆಲ್ಲ ಮೀರಿ ಶಾಲೆಗೆ ಮಗುವೊಂದು ಸೇರಿದಂತೆ ಮಠವೊಂದಕ್ಕೆ ಪೂಜ್ಯರಾದವರು ನಮ್ಮ ಸಿದ್ದರಾಮ ಬೆಲ್ದಾಳ ಶರಣರು.
ಇದು13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಹೊತ್ತು. ಈಗ ಮೌನ ಸಾದು ಅಲ್ಲ, ಮಾತನಾಡಬೇಕಾದ ಕಾಲ, ಮಾತನಾಡಲೇಬೇಕಾದ ಸಂದರ್ಭವಿದು ಅಂತ ಅನಿಸುತಿದೆ.
*ಕಾರಣ*,
ವರ್ತಮಾನದ ಹೆಚ್ಚಿನ ನಿರೂಪಣೆಗಳು ಆರೋಗ್ಯಕರವಲ್ಲದ ಸಂಗತಿಗಳನ್ನು ಕಟ್ಟುತ್ತಾ ಬಿತ್ತುತ್ತಾ ಸಾಗುತ್ತಿದ್ದಾವೆ.
ನಿಜ ಬದುಕಿಗೆ ಬೇಡವಾದ ಅನೇಕ ಸಂಗತಿಗಳ ಬೆನ್ನ ಹಿಂದೆ ಬಿದ್ದಿದ್ದಾವೆ,ಇಂತಹ ನಿರೂಪಣೆಗಳ ಹಿಂದೆ ಇಡೀ ಯುವ ಸಮೂಹ ಗೊತ್ತು ಗುರಿಯಿಲ್ಲದಂತೆ ಸಾಗುತ್ತಿದೆ,ಅನೇಕರು ಸುಳ್ಳನ್ನೇ ಬಿತ್ತಿ, ಆ ಸುಳ್ಳನ್ನೇ ಬೆಳೆ ಮಾಡಿ ಹಸನಾಗಿ ಎಲ್ಲ ಕಡೆ ಇದೇ ಸತ್ಯ ಎಂದು ಹಂಚುತ್ತಿದ್ದಾರೆ. ಈ ಕಾರಣಕ್ಕಾಗಿ ಯಾವುದೇ ಹಿಕ್ಮತ್ತುಗಳಿಗೂ ಸಿಗದೆ, ಇತರೆ ಯಾವುದೇ ವೈಯಕ್ತಿಕ ಹಿತಾಸಕ್ತಿಗೆ ಒಳಗಾಗದೆ ಕಲ್ಯಾಣ ನಾಡಿನ ಶರಣರ ನಿಜ ಆಶಯಗಳನ್ನು ಸಮ್ಮೇಳನದ ಮೂಲಕ ನಿಖರ ಮತ್ತು ನಿರ್ದಿಷ್ಟವಾಗಿ ಪಸರಿಸಬೇಕಾಗಿದೆ. ಮೂಲ ಧರ್ಮ ಎಂಬುದು ಇಲ್ಲದಿರುವುದೇ ನಿಜವಾದ ಧರ್ಮ ಎಂಬ ಮಾನವತಾ ವಾದವನ್ನು ಪ್ರತಿಪಾದಿಸಿದ ಎಲ್ಲಾ ಮಹಾಶಯರ ಮಾತಿಗೆ ಮತ್ತೊಮ್ಮೆ ಹಿಂತಿರುಗಿ, ಒಂದು ಬದಲಾವಣೆಗಾಗಿ ಕಿವಿಗೊಡಬೇಕಾಗಿದೆ.
ಈ ಬದಲಾವಣೆ ಪ್ರಕ್ರಿಯೆ ಎಂಬುದು 12ನೇ ಶತಮಾನದ ಕಲ್ಯಾಣದ ಸತ್ಕ್ರಾಂತಿಯ ಸಂದರ್ಭದಲ್ಲಿಯೇ ಆರಂಭವಾಗಿದೆ, ಅಂದಿನ 12ನೇ ಶತಮಾನದಿಂದ ಇಂದಿನ 21ನೇ ಶತಮಾನದುದ್ದಕ್ಕೂ ಈ ಮನುಕುಲ ವಿವಿಧ ಘಟ್ಟಗಳಲ್ಲಿ, ವಿಧವಿಧವಾದ ತೆರನಾಗಿ ಹಾಯ್ದು ಬಂದಿದ್ದರೂ ಸಹ, ಕಲ್ಯಾಣದ ಶರಣರ ನಿಜ ಆಶಯಗಳನ್ನು ಸಮರ್ಪಕವಾಗಿ ಜಾರಿಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಆ ಆಶಯಗಳ ಹಾದಿಯಲ್ಲಿ ನುಗ್ಗಿ, ಸೀಳಿಕೊಂಡು ಹಾದುಹೋಗುವ ಬಗ್ಗೆ ಶರಣ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾದ ಪೂಜ್ಯ ಡಾ. ಸಿದ್ದರಾಮ ಬೆಲ್ದಾಳ ಶರಣರು ವರ್ತಮಾನದ ಆಗುಹೋಗುಗಳ ಬಗ್ಗೆ ಚಿಂತನ ಮಂಥನ ನಡೆಸಿ, ಒಂದು ಪ್ರಖರತೆಯೊಂದಿಗೆ ಬೆಳಕು ಚೆಲ್ಲಿ, ಸರ್ವಾಧ್ಯಕ್ಷರ ನುಡಿಗಳನ್ನು ಎದೆಗೆ ತಾಕುವಂತೆ ಮಿಡಿಯಬೇಕಾಗಿದೆ.
77ವರ್ಷದ ಪೂಜ್ಯ ಸಿದ್ದರಾಮ ಬೆಲ್ದಾಳ ಶರಣರು ಆರ್ಥಿಕವಾಗಿ ಅತ್ಯಂತ ಕಡುಬಡತನದ ಶೋಷಿತ ಸಮುದಾಯದ ಕುಟುಂಬದ ಮಧ್ಯೆ ತಂದೆ ಹಾಲಪ್ಪ ತಾಯಿ ಲಕ್ಷ್ಮಿ ದೇವಿ ಯವರ ಸುಪುತ್ರರಾಗಿ ಬೀದರ್ ಜಿಲ್ಲೆ ಔರದ್ ತಾಲೂಕಿನ ಬೆಲ್ದಾಳ ಗ್ರಾಮದಲ್ಲಿ ಹುಟ್ಟಿದವರು. ಪೂಜ್ಯರ ಮೂಲ ಹೆಸರು ವಿಠಲ ಎಂದು.
ಸಿದ್ದರಾಮೇಶ್ವರರ ಜಯಂತಿಯ ದಿನದಂದು ಜನರ ಒತ್ತಾಯಕ್ಕೆ ಮಣಿದು ತುಂಬಿದ ಸಭೆಯಲ್ಲಿ ವೇದಿಕೆ ಮೇಲಿಂದ ಅತ್ಯಂತ ಪರಿಣಾಮಕಾರಿಯಾಗಿ ಮಾತನಾಡಿದ ವಿಠಲರು ,ತಮ್ಮ ಮಾತಿನ ವಾಕ್ಚಾತುರ್ಯದಿಂದ ಬಸವಕಲ್ಯಾಣ ಅನುಭವ ಮಂಟಪದ ಶತಾಯುಷಿ ಪೂಜ್ಯ ಚನ್ನಬಸಪ್ಪ ಅಪ್ಪಗಳವರಿಗೆ ಆಕರ್ಷಿತರಾಗಿ, ಮುಂದೆ ಈ ಪೂಜ್ಯ ಚನ್ನಬಸಪ್ಪ ಅಪ್ಪನವರಿಂದಲೇ ಲಿಂಗ ದೀಕ್ಷೆಯನ್ನು ಪಡೆದು ನಂತರ ಡಾ. ಶ್ರೀ ಸಿದ್ದರಾಮ ಬೆಲ್ದಾಳ ಶರಣರಾಗಿ ಪರಿವರ್ತನೆಯಾದದ್ದು ಈಗ ಇತಿಹಾಸವಾಗಿದೆ.
ತದನಂತರ ಬೀದರ್ ನ ಬಸವ ಯೋಗ ಮತ್ತು ಶರಣ ತತ್ವ ಪ್ರಸಾರ ಕೇಂದ್ರದ ಪೂಜ್ಯರಾಗಿ ಸಾಗಿ ಬಂದಿದ್ದು ಒಂದು ಸಾಧನೆಯ ಹಾದಿ ಮತ್ತು ಶರಣತತ್ವ ನಿಷ್ಠೆಯ ಪಥವಾಗಿದೆ.
ಪೂಜ್ಯರು, ಶರಣ ತತ್ವ ಪ್ರಸಾರ ಮತ್ತು ಧಾರ್ಮಿಕ ಸೇವೆಗಷ್ಟೇ ಸೀಮಿತಗೊಳ್ಳದೆ , ಸಮಾಜದ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ, ಬೀದರ್ ನ ಮಂಜಾರ ನದಿಯ ದಂಡೆಯ ಮೇಲೆ, ಬಸವ ತತ್ವ ಕೇಂದ್ರ ಹಾಗೂ ಶರಣ ತತ್ವ ಪ್ರಸಾರ ಕೇಂದ್ರದ ಜೊತೆಗೆ
ಆರ್ಥಿಕವಾಗಿ ಅತ್ಯಂತ ಹಿಂದುಳಿದ ಜನರ ಕಲ್ಯಾಣಕ್ಕಾಗಿ ಗ್ರಾಮೀಣಾಭಿವೃದ್ಧಿ ಸೇವಾ ಸಂಘ, ಆರೋಗ್ಯ ಸೇವೆ ಮತ್ತು ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ವಿಶಿಷ್ಟ ಮತ್ತು ವಿಭಿನ್ನ ರೀತಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಸಮಾಜಮುಖಿ ಚಿಂತನೆಯೊಂದಿಗೆ ಸಾಗುತ್ತಿದ್ದಾರೆ.
ಕಲ್ಯಾಣ ನಾಡಿನ ಶರಣ ಸಂಘದ ಅಧ್ಯಕ್ಷರಾಗಿ, ಬೀದರ್, ಕಲಬುರುಗಿ, ಸೊಲ್ಲಾಪುರ, ನವದೆಹಲಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಶರಣ ಸಮ್ಮೇಳನಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಿದ್ದಾರೆ.
ಇನ್ನೂ,
ಸಾಹಿತ್ಯಕವಾಗಿ ಹಲವಾರು ಕೃತಿ ಮತ್ತು ದೊಡ್ಡ ಬೃಹತ್ ಗ್ರಂಥಗಳನ್ನು ಸಾಹಿತ್ಯ ಲೋಕಕ್ಕೆ ಕೊಡಮಾಡಿದ್ದಾರೆ. ಶೋಷಿತ ಸಮುದಾಯದ ದನಿಯಾಗಿ ಪೂಜ್ಯರು ಜನಮನದ ಹೃದಯಕ್ಕೆ ತೀರ ಹತ್ತಿರವಾಗಿದ್ದಾರೆ.
ಶರಣ ತತ್ವ ಪ್ರಸಾರದ ಮೂಲಕ ಇವರು ಕೈಗೊಂಡ ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಅನೇಕ ಪ್ರಶಸ್ತಿಗಳು ಬಂದಿವೆ, ಜೊತೆಗೆ ಕಲಬುರುಗಿ ವಿಶ್ವವಿದ್ಯಾಲವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಡಾ. ಶ್ರೀ ಸಿದ್ದರಾಮ ಬೆಲ್ದಾಳ ಶರಣರ ಬದುಕು ಮತ್ತು ವ್ಯಕ್ತಿತ್ವವನ್ನು ಕುರಿತು ಅನೇಕ ವಿದ್ಯಾರ್ಥಿಗಳು ಇವರ ಹೆಸರಿನ ಮೇಲೆ ಎಂ ಫಿಲ್ ಮತ್ತು ಪಿ ಎಚ್ ಡಿ ಪ್ರಬಂಧ ಬರೆದು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇದು ಇವರ ಘನ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.
ಶರಣ ತತ್ವ ಪ್ರಸಾರದ ಮೂಲಕ ಅಪಾರವಾದ ಸೇವೆ ಸಲ್ಲಿಸಿ , ನುಡಿ ನಡೆಯಲಿ ಒಂದಾಗಿರುವ ಪೂಜ್ಯ ಶ್ರೀ ಸಿದ್ದರಾಮ ಬೆಲ್ದಾಳ ಶರಣರು ಇದೆ 2025 ಜನವರಿ 18 ಮತ್ತು 19ರಂದು ಚಿತ್ರದುರ್ಗದಲ್ಲಿ ನಡೆಯುವ ಅಖಿಲ ಭಾರತ ಶರಣ ಸಾಹಿತ್ಯ ರಾಷ್ಟ್ರಮಟ್ಟದ ಈ ಪ್ರತಿಷ್ಠಿತ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸೂಕ್ತ ಮತ್ತು ಹೆಮ್ಮೆಯ ಸಂಗತಿ.
13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಪೂಜ್ಯ ಡಾ. ಶ್ರೀ ಸಿದ್ದರಾಮ ಬೆಲ್ದಾಳ ಶರಣರಿಗೆ ಚಿಕ್ಕಮಗಳೂರು ಜಿಲ್ಲೆಯ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಅಭಿನಂದನೆಗಳು, ಪ್ರಣಾಮಗಳ ಜೊತೆಗೆ
ಈ ಮೂಲಕ ಸಮ್ಮೇಳನಕ್ಕೆ ಶುಭಾಶಯಗಳು ತಿಳಿಸಿದ್ದಾರೆ.
••••••••••••••••••••••••✒️
ಡಿ.ಎಂ.ಮಂಜುನಾಥಸ್ವಾಮಿ