ಖಾವಿಬಟ್ಟೆ ಧರಿಸಿ ಹಿಂದೂ ಸನ್ಯಾಸಿಗಳಿಗೆ ಅವಮಾನ
1 min read![](https://avintv.com/wp-content/uploads/2025/01/Screenshot_20250116_000505.jpg)
ಖಾವಿಬಟ್ಟೆ ಧರಿಸಿ ಹಿಂದೂ ಸನ್ಯಾಸಿಗಳಿಗೆ ಅವಮಾನ
ಚಿಕ್ಕಮಗಳೂರು: ಶಾಖಾದ್ರಿ ವಂಶಸ್ಥನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಖಾವಿಬಟ್ಟೆ ಧರಿಸಿ ಹಿಂದೂ ಸನ್ಯಾಸಿಗಳಿಗೆ ಅವಮಾನ ಮಾಡುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಜಿಲ್ಲಾ ಕಾರ್ಯದರ್ಶಿ ರಂಗನಾಥ್ ದೂರಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿಜವಾದ ಶಾಖಾದ್ರಿ ವಂಶಸ್ಥರು ಇದ್ದದ್ದು ನಾಗೇನಹಳ್ಳಿ ಬಾಬಾಬುಡನ್ ದರ್ಗಾದಲ್ಲಿ, ದತ್ತಪೀಠದಲ್ಲಿ ಯಾವುದೇ ಶಾಖಾದ್ರಿ ಇರಲಿಲ್ಲ. ಆದರೆ ಶಾಖಾದ್ರಿ ವಂಶಸ್ಥ ನಾನೆಂದು ಇಲ್ಲೊಬ್ಬ ವ್ಯಕ್ತಿ ಖಾವಿ ಬಟ್ಟೆ ಹಾಕಿಕೊಂಡು ಜಿಲ್ಲಾಧಿಕಾರಿ ಬಳಿ, ಮಾಧ್ಯಮದ ಮುಂದೆ ಹೋಗುತ್ತಾರೆ ಎಂದು ಆರೋಪಿಸಿದರು.
ಖಾವಿಬಟ್ಟೆ ಬಹಳ ಪವಿತ್ರವಾದದು ಇದನ್ನು ಹಿಂದೂ ಸನ್ಯಾಸಿಗಳು ಮತ್ತು ಮಹಾತ್ಮರು ಹಾಕುವಂತದ್ದಾಗಿದೆ. ಖಾವಿ ಬಟೆಯನ್ನು ಇಸ್ಲಾಂ ಧರ್ಮದಲ್ಲಿ ಧರಿಸುವ ಪದ್ಧತಿಯೇ ಇಲ್ಲ. ಹೀಗಾಗಿ ಈ ವ್ಯಕ್ತಿ ಬರೀ ಪ್ರಚಾರಕ್ಕಾಗಿ ಖಾವಿ ಧರಿಸಿ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದಾರೆ ಎಂದು ಟೀಕಿಸಿದರು.
ಹಿಂದೆ ಮೈಸೂರು ಸಂಸ್ಥಾನದ ಮಹಾರಾಜರು ದತ್ತಪೀಠಕ್ಕೆ ವ್ಯವಸ್ಥಾಪಕರನ್ನಾಗಿ ಶಾಖಾದ್ರಿ ಎಂಬುವವರನ್ನು ನೇಮಿಸಿದ್ದರು. ನಂತರ ಅವರ ವಂಶಸ್ಥರು ಈ ಹುದ್ದೆ ಮುಂದುವರಿಸಿದ್ದಾರೆ. ಈಗ ಹೇಳಿಕೆ ಕೊಡುತ್ತಿರುವ ವ್ಯಕ್ತಿ ಶಾಖಾದ್ರಿ ವಂಶಸ್ಥನೇ ಅಲ್ಲ. ಸುಮ್ಮನೆ ಹೇಳಿಕೆ ನೀಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ನಿಜವಾದ ಶಾಖಾದ್ರಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ದತ್ತಪೀಠದ ಗುಹೆಯ ಒಳಗೆ ಗರ್ಭಗುಡಿಯಲ್ಲಿ ಪೂಜೆ ಮಾಡುವ ವಿಚಾರದಲ್ಲಿ ಅವರು ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾದ ಸಂಗತಿ. ಗುಹೆಯ ಒಳಗೆ ಇರುವುದು ದತ್ತಾತ್ರೇಯರ ಪಾದುಕೆಗಳು ಮಾತ್ರ. ಅಲ್ಲಿ ಯಾವುದೇ ಸಮಾಧಿಗಳಿಲ್ಲ. ಈ ವ್ಯಕ್ತಿ ಹೇಳಿರುವ ಬಾಬಾಬುಡನ್ ಸಮಾಧಿ ನಾಗೇನಹಳ್ಳಿಯಲ್ಲಿದೆ. ಬಾಬಾಬುಡನ್ ವಂಶಸ್ಥರ ಸಮಾಧಿಗಳು ದತ್ತಪೀಠದಲ್ಲಿಲ್ಲ. ಇಲ್ಲಿರುವುದು ಸಾಧುಗಳ ಸಮಾಧಿಗಳು ಮಾತ್ರ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಹೆಚ್ ಪಿ ಉಪಾಧ್ಯಕ್ಷ ಯೋಗೀಶ್‌ರಾಜ್ ಅರಸ್, ಮಠ ಮಂದಿರ ಪ್ರಮುಖ್ ಶಿವಣ್ಣ, ಮುಖಂಡ ಆಕಾಶ್ ಮತ್ತಿತರರಿದ್ದರು.