ಪ್ರತಿ ಮಗುವಿನಲ್ಲಿಯೂ ಕೂಡ ವಿಜ್ಞಾನದ ಆವಿಷ್ಕಾರದ ಭಾವನೆ ಇರುತ್ತದೆ*
1 min read*ಪ್ರತಿ ಮಗುವಿನಲ್ಲಿಯೂ ಕೂಡ ವಿಜ್ಞಾನದ ಆವಿಷ್ಕಾರದ ಭಾವನೆ ಇರುತ್ತದೆ*
*ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಮಟ್ಟದ ವತಿಯಿಂದ ರಸಪ್ರಶ್ನೆ ಸ್ಪರ್ಧೆ ವಿಜೇತ ಹನ್ನೊಂದು ವಿದ್ಯಾರ್ಥಿಗಳು ಹಾಗೂ ಸಂಯೋಜಕರಿಗೆ ಬಹುಮಾನ ವಿತರಣೆ ಮತ್ತು ಅಭಿನಂದನೆ ಸಮರ್ಪಣೆ*.
ಚಿಕ್ಕಮಗಳೂರು ಜ 12. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆನ್ಲೈನ್ ನಲ್ಲಿ ನಡೆಸಿದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿ ಸುಪ್ರೀತ್. ಮೂಡಿಗೆರೆ ಬೆಥನಿ ಪ್ರೌಢಶಾಲೆಯ ವಿದ್ಯಾರ್ಥಿ ಮಹಮ್ಮದ್ ಝಹೆರ್. ಮೂಡಿಗೆರೆ ತಾಲ್ಲೂಕು ಅಂಗಡಿ ಸರ್ಕಾರಿ ಪ್ರೌಢಶಾಲೆಯ ಹರಿಪ್ರಿಯಾ ಪ್ರಥಮ ಸ್ಥಾನ ಪಡೆದಿದ್ದಾರೆ.
ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯ ಆರ್.ಪಿ. ದ್ರುತಿ. ಮೂಡಿಗೆರೆ ಬೆಥನಿ ಶಾಲೆಯ ಹರ್ಷಿತ ಮತ್ತು ಅರ್ಮಾನ್ ನವಾಜ್ ದ್ವಿತೀಯ. ಕುವೆಂಪು ಶಾಲೆಯ ಟಿ.ಎಸ್. ಯಷ್ಠಿಕಾ. ಮೂಡಿಗೆರೆ ಬೆಥನಿ ಶಾಲೆಯ ರಚನಾ ಸುಧನ್. ಆಲ್ದೂರು ಪೂರ್ಣಪ್ರಜ್ಞ ಶಾಲೆಯ ಹೆಚ್.ಎಂ. ಶ್ರಾವ್ಯ ತೃತೀಯ ಸ್ಥಾನ ಗಳಿಸಿದ್ದಾರೆ.
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿ ವಿ.ಆರ್. ಗೋವರ್ಧನ್. ಮೂಡಿಗೆರೆ ಬೆಥನಿ ಶಾಲೆಯ ಅಶ್ವಿನ್ ಹೆಚ್.ಎಸ್. ಗೌಡ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಕುವೆಂಪು ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿ ಕೆ. ಸಿ. ಶಂಕರ್ ನಮ್ಮ ರಾಷ್ಟ್ರ ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಬೇಕಾದರೆ ದೇಶದ ಜನತೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ದೇಶ ಪ್ರಗತಿಪಥದಲ್ಲಿ ಹಿಂದುಳಿದಿರುವುದಕ್ಕೆ ಮೂಲ ಕಾರಣ ನಾವು ವಿಜ್ಞಾನವನ್ನು ಕಡೆಗಣಿಸಿರುವುದು ಎಂದ ಅವರು ಜಾತಿ ಧರ್ಮ ಮತಗಳ ಹೆಸರಿನಲ್ಲಿ ನಾವು ಮಕ್ಕಳ ಮನಸ್ಸುಗಳನ್ನು ಒಡೆದಿದ್ದೇವೆ. ಹಾಗಾಗಿ ಅವರಲ್ಲಿ ವೈಜ್ಞಾನಿಕ ಮನೋಭಾವ. ವೈಜ್ಞಾನಿಕ ಚಿಂತನೆ ಬೆಳೆಯುತ್ತಿಲ್ಲ ಎಂದು ವಿಷಾದಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಶ್ ಕ್ಯಾತನಬೀಡು ಮಾತನಾಡಿ ವೈಜ್ಞಾನಿಕ ಮನೋಭಾವ ಬೆಳೆಯಬೇಕಾದರೆ ಮಕ್ಕಳು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಮನೆಯ ಕಪಾಟಿನಲ್ಲಿ ಪುಸ್ತಕಗಳನ್ನು ಸಂಗ್ರಹಿಸಿ ಇಡಬೇಕು. ದಿನಪತ್ರಿಕೆಗಳನ್ನು ಪ್ರತಿನಿತ್ಯ ತಪ್ಪದೇ ಓದಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ. ಮಂಜುನಾಥ ಸ್ವಾಮಿ ವರ್ತಮಾನದ ಅನೇಕ ಸಂಗತಿಗಳು, ಜಗತ್ತಿನ ವಿದ್ಯಮಾನಗಳು ಹೊಸ ತಲೆಮಾರಿನ ವಿದ್ಯಾರ್ಥಿ ಯುವ ಸಮುದಾಯಕ್ಕೆ ಸ್ಪೂರ್ತಿದಾಯಕವಾಗಿಲ್ಲ. ಒಂದು ರೀತಿಯ ಸೃಜನಶೀಲತೆಯೇ ಬತ್ತಿ ಹೋಗುತ್ತಿದೆ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬತ್ತಿ ಹೋದರೆ ಅದು ವಿಜ್ಞಾನದ ಮೇಲೆ ದುಷ್ಪರಿಣಾಮ ಬೀರುತ್ತದೆ, ಈ ನಿಟ್ಟಿನಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಸೃಜನಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿವರ್ಷ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಈ ಬಾರಿ ಸ್ಪರ್ಧೆಯಲ್ಲಿ ಜಿಲ್ಲಾಧ್ಯಂತ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ತಿಳಿಸಿದರು.
ರಸಪ್ರಶ್ನೆ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ನೀಡುವುದರ ಜೊತೆಗೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಾವಿನಕೆರೆ ದಯಾನಂದ್ ಅಧ್ಯಕ್ಷತೆ ವಹಿಸಿ ಸಮಾಜದಲ್ಲಿ ಒಂದು ರೀತಿ ಮಾನಸಿಕ ಗುಲಾಮಿತನ ಆವರಿಸಿಕೊಂಡಿದೆ, ಪಶ್ಚಿಮಾತ್ಯ ಸಂಸ್ಕೃತಿಗಳು ನಮ್ಮ ದೇಸಿ ತನದ ಬದುಕಿನ ಮೇಲೆ ಹಿಡಿತ ಸಾಧಿಸುತ್ತಾ ಹೋಗುತ್ತಿವೆ, ಈ ನಿಟ್ಟಿನಲ್ಲಿ ಸಮಾಜವನ್ನು ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸುವುದು ಅವಶ್ಯ ಎಂದರು.
ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬೈರೇಗೌಡ. ಕಾಫಿ ಬೆಳೆಗಾರ ಪರಮೇಶ್. ಮೂಡಿಗೆರೆ ಕೆಜೆವಿಎಸ್ ಅಧ್ಯಕ್ಷ ಆರ್. ಪ್ರಕಾಶ್. ಶಿಕ್ಷಕ ಮಂಜಪ್ಪ ದೊಡ್ಮನಿ. ಎಸ್ ಡಿ ಎಮ್ ಸಿ ಅಧ್ಯಕ್ಷೆ ಪ್ರಶಾಂತಿ ಕುವೆಲೋ. ಶಿಕ್ಷಕಿ ವೇಣಿ. ಗುತ್ತಿಗೆದಾರ ದುರ್ಗೇಶ್. ಮೂಡಿಗೆರೆ ತಾಲ್ಲೂಕು ಕಸಪಾ ನಿಕಟ ಪೂರ್ವ ಅಧ್ಯಕ್ಷ ಹೆಚ್.ಎಂ. ಶಾಂತಕುಮಾರ್. ವಿ. ಆರ್. ಗೋವರ್ಧನ್ ಉಪಸ್ಥಿತರಿದ್ದರು.
ಬಹುಮಾನ ಸ್ವೀಕರಿಸಿದ ವಿದ್ಯಾರ್ಥಿಗಳ ಪೈಕಿ ಅನ್ವಿತ್ ಹೆಚ್ಎಸ್ ಗೌಡ. ಸಂಯೋಜಕರ ಪೈಕಿ ಕುವೆಂಪು ವಿದ್ಯಾನಿಕೇತನದ ಶಿಕ್ಷಕ ಅನೀಶ್. ಪೋಷಕರ ಪರವಾಗಿ ಮಹೇಶ್ ಕುಂದೂರು ಈ ಕಾರ್ಯಕ್ರಮದಲ್ಲಿ ಭಾಗಿಯಾದ ಬಗ್ಗೆ ಮಾತನಾಡಿದರು .
••••••••••••••••••••••••••••••