ಅಂಗಡಿ ಮಾಲೀಕರೇ ಎಚ್ಚರ*
1 min read*ಅಂಗಡಿ ಮಾಲೀಕರೇ ಎಚ್ಚರ*
*ಅಂಗಡಿ ಮುಂದಿರುವ QR ಕೋಡ್ ಬದಲಿಸುವ ವಂಚಕರಿದ್ದಾರೆ!*
ದಿನದಿಂದ ದಿನಕ್ಕೆ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಯಾರೂ ಊಹಿಸದ ರೀತಿ ಆನ್‌ಲೈನ್ ವಂಚಕರು ಮೋಸ ಮಾಡುತ್ತಿದ್ದಾರೆ. ಇದೀಗ ಮಧ್ಯಪ್ರದೇಶದಲ್ಲಿ ಆನ್‌ಲೈನ್ ವಂಚನೆಯ ಹೊಸ ವಿಧಾನವೊಂದು ಬೆಳಕಿಗೆ ಬಂದಿದೆ.
ರಸ್ತೆ ಬದಿಯ ಸಣ್ಣ ಅಂಗಡಿಯಿಂದ ಹಿಡಿದು, ಪ್ರತಿಯೊಂದು ಕಡೆಗಳಲ್ಲೂ ಇಂದು ಯುಪಿಐ ಮೂಲಕ ವ್ಯವಹಾರ ನಡೆಯುತ್ತಿದೆ. ಗ್ರಾಹಕರು ಕ್ಯೂಆರ್ ಕೋಡ್ ಬಳಸಿಕೊಂಡು ಹಣ ಪಾವತಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು, ಅಂಗಡಿಗಳಲ್ಲಿ ಅಳವಡಿಸಿರುವ ಕ್ಯೂಆರ್ ಕೋಡ್‌ಗಳನ್ನೇ ಅದಲು ಬದಲು ಮಾಡುತ್ತಿದ್ದಾರೆ. ಪರಿಣಾಮ ವ್ಯಾಪಾರಿಗಳು ಕ್ಯೂಆರ್ ಕೋಡ್ ಬಳಸಲು ಹಿಂದೇಟು ಹಾಕುವಂತಾಗಿದೆ.
ವಂಚಕರು ರಾತ್ರಿಯ ಸಮಯದಲ್ಲಿ ವಿವಿಧ ಅಂಗಡಿಗಳು ಹಾಗೂ ಪೆಟ್ರೋಲ್ ಬಂಕ್‌ಗಳ ಹೊರಗೆ ಅಂಟಿಸಲಾದ ಕ್ಯೂಆರ್ ಕೋಡ್‌ಗಳನ್ನು ಬದಲಿಸಿದ್ದಾರೆ. ಇದರಿಂದ ಗ್ರಾಹಕರು ಪಾವತಿಸಿದ ಹಣ ವಂಚಕರ ಖಾತೆಗೆ ವರ್ಗಾವಣೆ ಆಗಿದೆ. ಈ ರೀತಿಯ ವಂಚನೆ ಪ್ರಕರಣ ಮಧ್ಯಪ್ರದೇಶದ ಖಜುರಾಹೊದಲ್ಲಿ ಪ್ರದೇಶದಲ್ಲಿ ಅವ್ಯಹತವಾಗಿ ನಡೆದಿದೆ. ವಂಚಕರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ವಂಚಕರು ಮೆಡಿಕಲ್ ಸ್ಟೋರ್ ಒಂದರ ಹೊರಗೆ ಅಂಟಿಸಿದ್ದ ಕ್ಯೂಆರ್ ಕೋಡ್‌ನ್ನು ಬದಲಾಯಿಸಿದ್ದಾರೆ. ಗ್ರಾಹಕರೊಬ್ಬರು ಹಣ ಪಾವತಿಸಲು ಮುಂದಾದಾಗ, ‘ಛೋಟು ತಿವಾರಿ’ ಎಂಬ ಹೆಸರು ಮೊಬೈಲ್‌ನಲ್ಲಿ ಡಿಸ್‌ಪ್ಲೇ ಆಗಿದೆ. ಆಗ ಅನುಮಾನಗೊಂಡು ಮಾಲೀಕ ಓಂವತಿ ಗುಪ್ತಾ ಪರಿಶೀಲಿಸಿದ್ದಾರೆ. ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮುಖವಾಡ ಧರಿಸಿದ್ದ ಮೂವರು ವ್ಯಕ್ತಿಗಳು ಕ್ಯೂಆರ್ ಕೋಡ್ ಬದಲಾಯಿಸುತ್ತಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಹಾಗೂ ಇತರೆ ಅಂಗಡಿ ಮಾಲೀಕರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಇದರಿಂದ ದೊಡ್ಡ ಮೊತ್ತದ ವಂಚನೆ ತಪ್ಪಿದೆ. ಇದೇ ಮಾದರಿಯ ಘಟನೆ ಹತ್ತಿರದ ಪೆಟ್ರೋಲ್ ಬಂಕ್‌ನಲ್ಲೂ ಸಂಭವಿಸಿದೆ. ಹಳೆ ಕೋಡ್ ಮೇಲೆ, ಹೊಸ ಕ್ಯೂಆರ್ ಕೋಡ್‌ನ್ನು ಅಂಟಿಸಿರುವುದು ಬಂಕ್ ಸಿಬ್ಬಂದಿ ಗಮನಕ್ಕೆ ಬಂದಿದೆ.
ಛತ್ತರ್‌ಪುರ ಜಿಲ್ಲೆಯ ಖಜುರಾಹೊ ಪ್ರದೇಶದಲ್ಲಿ ಖದೀಮರು ಪೆಟ್ರೋಲ್ ಬಂಕ್‌ಗಳು ಸೇರಿ 6 ಅಂಗಡಿಗಳ ಕ್ಯೂಆರ್ ಕೋಡ್‌ಗಳನ್ನು ರಾತ್ರೋರಾತ್ರಿ ಬದಲಾಯಿಸಿದ್ದಾರೆ. ಗ್ರಾಹಕರು ಹಣ ಪಾವತಿಸಿದ್ದಾಗ, ವಂಚಕರ ಖಾತೆಗಳಿಗೆ ಜಮೆ ಆಗಿದೆ. ಹಣ ಪಾವತಿಯಾದ ಯಾವುದೇ ಮೆಸೇಜ್ ಬಾರದಿರುವುದು ಗಮನಿಸಿದ ಅಂಗಡಿ ಮಾಲೀಕರು ಅನುಮಾನಗೊಂಡು ಪರಿಶೀಲಿಸಿದ್ದಾರೆ. ಆಗ ಕ್ಯೂಆರ್ ಕೋಡ್ ಬದಲಾಗಿರುವುದು ಬೆಳಕಿಗೆ ಬಂದಿದೆ ಪೊಲೀಸರು ತಿಳಿಸಿದ್ದಾರೆ. ಕ್ಯೂಆರ್ ಕೋಡ್ ಮೂಲಕ ಹಣ ಹಾಕಿದ ಬಳಿಕ ಧ್ವನಿ ಸಂದೇಶ ಇಲ್ಲದ ವ್ಯಾಪಾರಿಗಳು ಮೋಸ ಹೋಗಿದ್ದಾರೆ.