लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಮನುಷ್ಯ ಜಾತಿ ತಾನೊಂದೇ ವಲಂ*. *ಮನುಜಮತ ವಿಶ್ವಪಥ ಇದು ಕನ್ನಡದ ಜಾತ್ಯತೀತತೆಯ ಪ್ರಜ್ಞೆ*.

1 min read

*ಮನುಷ್ಯ ಜಾತಿ ತಾನೊಂದೇ ವಲಂ*.
*ಮನುಜಮತ ವಿಶ್ವಪಥ ಇದು ಕನ್ನಡದ ಜಾತ್ಯತೀತತೆಯ ಪ್ರಜ್ಞೆ*.

ಇಂದು ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ. ಕುವೆಂಪು ಅವರ ಜನ್ಮದಿನದ ಅಂಗವಾಗಿ ಕುವೆಂಪು ಅವರ ಹೆಸರಿನಲ್ಲಿ *ವಿಶ್ವಮಾನವ ದಿನಾಚರಣೆಯನ್ನು* ಆಚರಿಸುತ್ತಾ ಬರುತ್ತಿದ್ದೇವೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ರಾಷ್ಟ್ರ ಕವಿ ಕುವೆಂಪುರವರನ್ನು ಪ್ರೀತಿಸಿ ಗೌರವಿಸಿ ಅವರ ಬರಹವನ್ನು ನೆನಪಿನ ಸ್ಮೃತಿಯಲ್ಲಿ ಉಳಿಸಿಕೊಂಡವರು ಹಲವರು.
ಹೀಗೆ ಅವರ ಸಾಹಿತ್ಯ ಭಾಷೆ ಬರವಣಿಗೆಯನ್ನು ನೆನಪಿನಲ್ಲಿ ಉಳಿಸಿಕೊಂಡು ಅವರ ಬಗ್ಗೆ ಬರೆದು ಮಾತನಾಡಿದವರು ಅನೇಕರು, ಆದರೆ ಅವರ ಬರಹದ ನಿಜ ಆಶಯವನ್ನು ತಮ್ಮ ವೈಯಕ್ತಿಕ ಬದುಕಿಗೆ ಅಳವಡಿಸಿಕೊಂಡವರು ಕೆಲವೇ ಕೆಲವರು ಮಾತ್ರ.

ಜಾತಿ, ಮತ ಧರ್ಮದ ಸಿನಿಕತನಕ್ಕೆ ಸಿಲುಕದೆ ಮನುಜಮತ ವಿಶ್ವಪಥದ ಹಾದಿಯಲ್ಲಿ ಪಯಣಿಸಿದವರು ಅತೀ ಕಡಿಮೆ. ಸರಿ ಸುಮಾರು ಅರ್ಧ ಶತಮಾನವೇ ಕಳೆದುಹೋಗಿದೆ, ಕುವೆಂಪು ಅವರು ತಮ್ಮ ಸರ್ವ ಜನಾಂಗದ ಶಾಂತಿಯ ತೋಟ ಕವಿತೆಯನ್ನು ರಚಿಸಿ. ಬಾಲ್ಯದಲ್ಲಿಯೇ ಪ್ರಾರ್ಥಮಿಕ ಶಾಲೆಯಲ್ಲಿಯೇ ಈ ಕವಿತೆಯನ್ನು ನಾವೆಲ್ಲ ಕಂಠಪಾಠ ಮಾಡಿದವರು, ಇಂತಹ ಕವಿತೆ ನಮ್ಮೆಲ್ಲರ ಕಂಠದೊಳಗೆ ಇದ್ದರೂ ಕೂಡ, ಇಂದಿಗೂ ಇಡೀ ಮಾನವ ಸಂಕುಲ ನಾವೆಲ್ಲ ಒಂದು ಸರ್ವ ಜನಾಂಗದ ಶಾಂತಿಯ ತೋಟದಲ್ಲಿರುವ ಬಗೆ ಬಗೆಯ ಹೂ ಗಿಡಗಳು ಎಂದು ಅರಿತು ಬದುಕಲು ಸಾಧ್ಯವಾಗಿಲ್ಲ.

ಸಾಹಿತ್ಯ ಎಂಬುದು ಎಲ್ಲರನ್ನೂ ಒಗ್ಗೂಡಿಸಬೇಕು. ಇಂದು ಅದು ಜಾತಿ ಮತ ಧರ್ಮದ ಶ್ರೇಷ್ಠತೆಯ ವ್ಯಸನದ ಹೆಸರಿನಲ್ಲಿ ಮಾನವ ಜನಾಂಗವನ್ನು ದಿಕ್ಕಡಿಸುತ್ತಿದೆ. ದ್ದಿಕ್ಕೆಡಿಸುವಂತಹ ಸಾಹಿತ್ಯ ಸಾಹಿತ್ಯವೇ ಅಲ್ಲ, ಅದನ್ನು ಅಸಾಹಿತ್ಯ ಎಂದು ಕರೆಯಬೇಕಾಗುತ್ತದೆ.

ಕನ್ನಡ ಭಾಷೆ ಬೇರೆ, ಅದರ ಸಾಹಿತ್ಯವೇ ಬೇರೆ ಹಾಗೆ ಭಾಷಿಗರು ಕೂಡ ಬೇರೆ, ಎಲ್ಲರೂ ಏಕಕಾಲಕ್ಕೆ ಸಾಹಿತ್ಯಸಕ್ತರಾಗಲು ಸಾಧ್ಯವಿಲ್ಲದಿರಬಹುದು, ಆದರೆ ಏಕಕಾಲಕ್ಕೆ ನಾವೆಲ್ಲರೂ ಒಂದು ಭಾಷಿಗರಾಗಿ, ಜಾತಿಮಿತಿಗಳನ್ನೆಲ್ಲ ಕುವೆಂಪು ಅವರ ಆಶಯದಂತೆ ದಾಟಿ, ಮನುಜಮತ ವಿಶ್ವಪಥದತ್ತ ಹೆಜ್ಜೆ ಹಾಕಲು ಸಾಧ್ಯವಿದೆ. ಹೀಗೆ ಮನುಜಮತ ವಿಶ್ವಪಥದತ್ತ ಹೆಜ್ಜೆ ಹಾಕಲು ಕುವೆಂಪುರವರ ಸಮಗ್ರ ಸಾಹಿತ್ಯದ ಸವಿಯನ್ನು, ಆ ಸವಿಯಲ್ಲಿರುವ ಸಿರಿಯನ್ನು ಆಸ್ವಾದಿಸಿಸುವ ಮೂಲಕ ಕುವೆಂಪು ಅವರ ವಿಚಾರಕ್ರಾಂತಿಯತ್ತ ಮುಖ ಮಾಡಬೇಕಾಗಿದೆ.

*ಈ ಹಿನ್ನಲೆಯಲ್ಲಿ ,ವಿಶ್ವಮಾನವ ದಿನಾಚರಣೆ ಪ್ರಯುಕ್ತ ,ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು, ವಿಮರ್ಶಕರು, ಸಾಹಿತಿಗಳು ಆದ ಡಾ. ಬಿ.ಎಂ ಪುಟ್ಟಯ್ಯನವರು ಸಹ ತಮ್ಮ ಅಭಿಪ್ರಾಯವನ್ನು ಈ ಕೆಳಕಂಡಂತೆ ಹಂಚಿಕೊಂಡಿದ್ದಾರೆ*.

ಡಾ. ಬಿ. ಎಂ.ಪುಟ್ಟಯ್ಯನವರ ಮಾತು ಹೀಗಿದೆ…👇

ಇವತ್ತು ಶ್ರೀ ಕುವೆಂಪು ಅವರ ಜನ್ಮದಿನ. ಇದನ್ನು ನಾಡಿನಾದ್ಯಂತ ‘ *ವಿಶ್ವಮಾನವ* *ದಿನಾಚರಣೆ’* ಎಂದು ಆಚರಿಸಲಾಗುತ್ತಿದೆ.

ವಿಶ್ವಮಾನವ ಪರಿಕಲ್ಪನೆ ಕುವೆಂಪು ಅವರು ಪ್ರತಿಪಾದನೆ ಮಾಡಿದ ತಾತ್ವಿಕ ಸಂದೇಶ. ಜಾತಿ, ಮತ, ಧರ್ಮ, ಲಿಂಗತಾರತಮ್ಯಗಳ ಅಸಮಾನತೆಯಿಂದ ಮನುಷ್ಯರ ಭಾವನೆಗಳು ಮನುಷ್ಯರೇ ನಿರ್ಮಾಣ ಮಾಡಿಕೊಂಡಿರುವ ಹಲವು ಬಗೆಯ ಅಸಮಾನತೆ ಮತ್ತು ಅಪಮಾನಗಳನ್ನು ಪೋಷಿಸಿ ಬೆಳೆಸುತ್ತಿವೆ. ಮತಧರ್ಮಗಳ ಸುಳಿಯಲ್ಲಿ ಸಿಲುಕೊಂಡಿರುವ ಮನುಷ್ಯರ ಭಾವನೆಗಳು ಅವರ ಪ್ರಜ್ಞೆಯನ್ನು ಮತಧರ್ಮಗಳ ಚೌಕಟ್ಟಿನಲ್ಲಿ ಬಂಧಿಸಿದೆ. ಇದರಿಂದ ಎಲ್ಲರೂ ಹೊರಬರಬೇಕಾಗಿದೆ.

ಪರಂಪರೆಯಲ್ಲಿ ಇರುವುದೆಲ್ಲವನ್ನೂ ಸಂಪೂರ್ಣವಾಗಿ ಉಳಿಸಿಕೊಂಡು ಮುಂದುವರಿಸಿಕೊಂಡು ಹೋಗುವ ಅಗತ್ಯವಿಲ್ಲ. ಆಯಾ ಯುಗಧರ್ಮಕ್ಕೆ ತಕ್ಕಂತೆ ಪರಂಪರೆಯಿಂದ ಪಡೆದುದನ್ನು ಸಮಕಾಲೀನ ಸಮಾಜಕ್ಕೆ ಅನುಗುಣವಾಗಿ ಪರಿವರ್ತನೆ ಮಾಡಿಕೊಳ್ಳಬೇಕು. ಈ ಪರಿವರ್ತನೆ ಪ್ರತಿಯೊಬ್ಬ ಮನುಷ್ಯರ ಅಂತರಂಗದಲ್ಲೂ ನಡೆಯಬೇಕು.

ಎಲ್ಲರಿಗೂ ಸಮಪಾಲು, ಎಲ್ಲರಿಗೂ ಸಮಬಾಳು ಎಂಬ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಬೇಕಾಗಿದೆ. ಇದಕ್ಕೆ ಕಲೆ, ಸಾಹಿತ್ಯ ಮತ್ತು ಸಂಗೀತಗಳು ಪೋಷಕವಾಗಿ, ಸ್ಪೂರ್ತಿಯಾಗಿ ಕೆಲಸ ಮಾಡಬೇಕಾಗಿದೆ. ನಾಡು, ನಾಡಿನ ಜನರು, ಭಾಷೆ, ಸಂಸ್ಕೃತಿ, ಪರಂಪರೆ, ಭಾಷೆ, ಕಲೆ ಮತ್ತು ಸಾಹಿತ್ಯ, ನಿಸರ್ಗ ಇವನ್ನು ಪ್ರೀತಿಸಬೇಕು; ಜೊತೆಗೆ ಅದನ್ನು ಸಮಾನತೆಯ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ದುಡಿಸಿಕೊಳ್ಳಬೇಕು. ಆ ಮೂಲಕ ಮನುಷ್ಯ ಮನುಷ್ಯರ ನಡುವಿನ ಕಂದಕಗಳನ್ನು ತೊಡೆದುಹಾಕಬೇಕು ಎಂಬುದು ಕುವೆಂಪು ಅವರ ಆಶಯವಾಗಿದೆ.
••••••••••••••••••••••••••••••

About Author

Leave a Reply

Your email address will not be published. Required fields are marked *