लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಒಂದು ದೇಶ ಒಂದು ಚುನಾವಣೆ……..

ಒಂದು ದೇಶ ಒಂದೇ ಬಾರಿಗೆ ಚುನಾವಣೆ ಎಂಬ ಪರಿಕಲ್ಪನೆ ಉತ್ತಮವೋ,
ಅಥವಾ
ಲೋಕಸಭೆಗೆ ಚುನಾವಣೆ ನಡೆದ ಒಂದು ವರ್ಷದ ನಂತರ ದೇಶದ ಎಲ್ಲಾ‌ ವಿಧಾನಸಭೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸಿದರೆ ಉತ್ತಮವೋ,
ಅಥವಾ
ಈಗಿನಂತೆ ಯಥಾಸ್ಥಿತಿ ರೀತಿಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಚುನಾವಣೆ ನಡೆಸುವುದು ಉತ್ತಮವೋ, ಈ ವಿಷಯವನ್ನು ಚರ್ಚೆಗೆ ಒಳಪಡಿಸಬೇಕಿದೆ…..

ಒಂದು ದೇಶ ಒಂದೇ ಚುನಾವಣೆ ಪರಿಣಾಮಗಳೇನಾಗಬಹುದು…….

ಒಂದು ವೇಳೆ ಮತದಾರರು ಅತ್ಯಂತ ಪ್ರಬುದ್ಧರಾಗಿದ್ದರೆ ಒಂದು ದೇಶ ಒಂದು ಚುನಾವಣೆ ಅಥವಾ ಒಂದು ದೇಶ ಹಲವು ಚುನಾವಣೆ ಅಥವಾ ಈಗಿರುವ ವ್ಯವಸ್ಥೆ ಏನೇ ಆಗಿರಲಿ ಅಂತಹ ದೊಡ್ಡ ವ್ಯತ್ಯಾಸವೇನು ಆಗುವುದಿಲ್ಲ. ಸ್ವಲ್ಪ ಹಣಕಾಸಿನ ಖರ್ಚು ವೆಚ್ಚಗಳನ್ನು, ಸ್ವಲ್ಪ ಸಮಯವನ್ನು ಹೊರತುಪಡಿಸಿದರೆ ಅಂತಹ ದೊಡ್ಡ ಗೊಂದಲವೇನು ಆಗುವುದಿಲ್ಲ…..

ಆದರೆ ಬಹುತೇಕ ಮತದಾರರು ಜಾತಿ, ಧರ್ಮ, ಹಣ, ಹೆಂಡ ಮುಂತಾದ ಆಮಿಷಗಳಿಗೆ ಒಳಗಾಗಿ, ಅಜ್ಞಾನ, ಅಂಧಕಾರ, ಸ್ವಾರ್ಥ, ಮೌಢ್ಯಗಳಿಗೆ ಬಲಿಯಾಗಿ ಮತದಾನವನ್ನು ಒಂದು ರೀತಿ ಬಲಿಷ್ಠ ವ್ಯಕ್ತಿಗಳ ನಿರ್ದೇಶಿತ ರೀತಿಯ ಚುನಾವಣೆ ನಡೆಯುತ್ತಿರುವುದರಿಂದ ಈ ಒಂದು ದೇಶ ಒಂದು ಚುನಾವಣೆ ಒಂದಷ್ಟು ಸವಾಲುಗಳನ್ನು ಒಡ್ಡಬಹುದು ಅಥವಾ ಈಗಿನ ಸಮಸ್ಯೆಗಳಿಗೆ ಮತ್ತೊಂದು ರೂಪದ ಸಮಸ್ಯೆ ಸೃಷ್ಠಿಸಬಹುದು ಅಥವಾ ಒಂದಷ್ಟು ಒಳ್ಳೆಯ ಸುಧಾರಣೆಯೂ ಆಗಬಹುದು……

ಒಂದು ಮೂಲಗಳ ಪ್ರಕಾರ ರಾಷ್ಟ್ರೀಯ ಪಕ್ಷಗಳಿಗೆ ಈ ವ್ಯವಸ್ಥೆ ಹೆಚ್ಚು ಲಾಭಕರವೂ, ಪ್ರಾದೇಶಿಕ ಪಕ್ಷಗಳಿಗೆ ಅಥವಾ ಪರ್ಯಾಯವಾಗಿ ಬೆಳವಣಿಗೆ ಹೊಂದುತ್ತಿರುವ ಪಕ್ಷಗಳಿಗೆ ಒಂದಷ್ಟು ನಷ್ಟವೂ ಆಗಬಹುದು. ಏಕೆಂದರೆ ಮತದಾರರ ಬುದ್ಧಿ ಮಟ್ಟ ಅವರ ನಿಯಂತ್ರಣದಲ್ಲೇ ಇರುವುದಿಲ್ಲ…..

ಯಾವುದೇ ಕಾನೂನಿನಲ್ಲಿ ಒಂದಷ್ಟು ಒಳ್ಳೆಯ, ಒಂದಷ್ಟು ಕೆಟ್ಟ ಅಂಶಗಳು ಇದ್ದೇ ಇರುತ್ತದೆ. ಆದರೆ ನಮಗೆ ಮುಖ್ಯವಾಗಬೇಕಾಗಿರುವುದು ಚುನಾವಣಾ ನಡೆಯುವ ಸಮಯ ಎಂಬುದಲ್ಲ. ಅದಕ್ಕಿಂತ ಮುಖ್ಯವಾಗಿ ಮತದಾರರ ಮನಸ್ಥಿತಿ ಮತ್ತು ಜನಪ್ರತಿನಿಧಿಗಳ ನೈತಿಕತೆ, ಈ ವಿಷಯಗಳು ಚರ್ಚೆಗೆ ಬರಬೇಕಾಗಿದೆ. ಅದರಲ್ಲೂ ಗೆದ್ದ ಅಭ್ಯರ್ಥಿಗಳು ತಾವು ಮಾಡಬೇಕಾದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆಯೇ ಎಂಬುದು ಬಹಳ ಮುಖ್ಯ……

ಎಷ್ಟೋ ಜನಪ್ರತಿನಿಧಿಗಳು ನಾಲ್ಕು, ಐದು, ಆರು, ಏಳು ಹೀಗೆ ನಿರಂತರವಾಗಿ ಗುತ್ತಿಗೆ ಪಡೆದಂತೆ ಗೆಲ್ಲುತ್ತಾ ಬರುತ್ತಿದ್ದಾರೆ. ಎಷ್ಟೋ ಕುಟುಂಬಗಳು ಈಗಲೂ ಅನುವಂಶಿಕವಾಗಿ ರಾಜಪ್ರಭುತ್ವದಂತೆ ತಮ್ಮ ಮನೆತನವನ್ನು ಸ್ಥಾಪಿಸಿದ್ದಾರೆ. ಎಷ್ಟೋ ಜನ ವಂಶ ಪಾರಂಪರ್ಯವಾಗಿ ತಮ್ಮ ಕುಟುಂಬದವರೇ ಅಧಿಕಾರದಲ್ಲಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಕುಟುಂಬಗಳಲ್ಲಿ ಮೂರು ಅಥವಾ ನಾಲ್ಕು ಪಕ್ಷಗಳಲ್ಲೂ ತಮ್ಮ ಕುಟುಂಬದವರೇ, ಅದರಲ್ಲೂ ರಕ್ತ ಸಂಬಂಧಿಗಳೇ ಅಧಿಕಾರ ಹಿಡಿಯುವಂತೆ ನೋಡಿಕೊಳ್ಳುತ್ತಿದ್ದಾರೆ…..

ಈಗಲೂ ಜಾತಿ ವ್ಯವಸ್ಥೆಯ ಪ್ರಕಾರವೇ ಮತದಾನ ನಡೆಯುತ್ತಿದೆ. ಅಭ್ಯರ್ಥಿಗಳ ಆಯ್ಕೆಗೂ ಜಾತಿಯೇ ಮಾನದಂಡ. ಇಷ್ಟೆಲ್ಲಾ ದುರ್ಬಲತೆಯ ನಡುವೆ ಆಯ್ಕೆಯಾದವರು ಮಾರಾಟವಾಗುತ್ತಿದ್ದಾರೆ. ಎಷ್ಟೆಲ್ಲಾ ಮುಂಜಾಗ್ರತೆಯ ನಡುವೆಯೂ ಪಕ್ಷಾಂತರ ನಿಷೇಧ ಕಾನೂನು ಜಾರಿಯಾಯಿತು. ಆದರೆ ಈಗ ಪಕ್ಷಾಂತರಿಗಳೇ ಸರ್ಕಾರಗಳನ್ನು ಬೀಳಿಸುತ್ತಾ ಆಡಳಿತ ನಡೆಸುತ್ತಿದ್ದಾರೆ….

ಚುನಾವಣೆಯ ಖರ್ಚು ವೆಚ್ಚ ನಿಯಂತ್ರಿಸಲು ನಿರ್ದಿಷ್ಟ ಹಣವನ್ನು ನಿಗದಿಪಡಿಸಲಾಯಿತು. ಆದರೆ ಈಗ ಅದರ 50 ಪಟ್ಟು ಹೆಚ್ಚು ಹಣ ಚುನಾವಣೆಗಾಗಿ ಖರ್ಚಾಗುತ್ತಿದೆ…..

ಚುನಾವಣಾ ಸುಧಾರಣೆಗಾಗಿ ಹೊಸ ಕಾನೂನುಗಳು ಬರುತ್ತವೆಯಾದರೂ ಅದರ ಅನುಷ್ಠಾನ ಮಾಡಬೇಕಾದವರು ಇದೇ ಜನ ಆಗಿರುವುದರಿಂದ, ಆ ಜನರೇ ಭ್ರಷ್ಟರಾಗಿರುವುದರಿಂದ, ಅಧಿಕಾರಿಗಳು ಮತ್ತು ಜನರು ಹಾಗು ಜನಪ್ರತಿನಿಧಿಗಳು
ಭ್ರಷ್ಟರಾಗಿರುವುದರಿಂದ ಯಾವ ಸುಧಾರಣೆಯು ಪರಿಣಾಮಕಾರಿಯಾಗುತ್ತಿಲ್ಲ. ಹೊಸ, ಪ್ರಾಮಾಣಿಕ, ಸಮಾಜ ಸೇವಾ ಮನೋಭಾವದ ವ್ಯಕ್ತಿಗಳು ಆಯ್ಕೆಯಾಗಲು ಸಾಧ್ಯವಾಗುತ್ತಿಲ್ಲ….

ಗಂಡ, ಹೆಂಡತಿ, ಮಕ್ಕಳು ಅಥವಾ ಇನ್ನೊಂದಿಷ್ಟು ಬಲಿಷ್ಠ ವರ್ಗದವರೇ ಚುನಾವಣೆಯಲ್ಲಿ ಆಯ್ಕೆಯಾಗುತ್ತಿದ್ದಾರೆ. ಚುನಾವಣೆಯನ್ನು ಒಮ್ಮೆ ಮಾಡಿ ಅಥವಾ ಬೇರೆ ಬೇರೆ ಮಾಡಿ ಆಯ್ಕೆಯಾಗುವವರು ಮಾತ್ರ ಇವರೇ. ಒಂದು ರೀತಿ ಮೂರು ನಾಲ್ಕು ಪಕ್ಷಗಳೇ ಈ ಅಧಿಕಾರ ಹಂಚಿಕೆಯಲ್ಲಿ ಅದಲು ಬದಲಾಗಿ ತಾವೇ ಹಂಚಿಕೊಂಡು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಪರ್ಯಾಯ ರಾಜಕೀಯ ಪಕ್ಷ ಬೆಳೆಯಲು ಸಾಧ್ಯವಾಗುತ್ತಿಲ್ಲ…..

ಅಪರೂಪಕ್ಕೊಮ್ಮೆ ಎಲ್ಲೋ ಒಂದು ಬೆಳಕು ಮೂಡಿ ಮತ್ತೆ ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರೀಕೃತ ಚುನಾವಣ ವ್ಯವಸ್ಥೆ ಎಷ್ಟರಮಟ್ಟಿಗೆ ಪರಿಣಾಮಕಾರಿ ಆಗಬಹುದು ಅಥವಾ ಅದು ಒಂದು ರೀತಿ ಸರ್ವಾಧಿಕಾರಕ್ಕೆ, ದಬ್ಬಾಳಿಕೆಗೆ ದಾರಿ ಮಾಡಿಕೊಡಬಹುದೇ, ಎಲ್ಲೋ ಹಣ ಮತ್ತು ಸಮಯ ಉಳಿಸಲು ಹೋಗಿ ಇನ್ನೆಲ್ಲೋ ಸಿಕ್ಕಿಹಾಕಿಕೊಂಡಂತೆ ಆಗಬಹುದೇ ಅಥವಾ ಈಗಿರುವ ಸರ್ಕಾರ ತನ್ನ ಲಾಭಕ್ಕಾಗಿ ಮಾಡಿಕೊಂಡಂತೆ ಇದ್ದರೂ ಅದನ್ನು ಮುಂದೆ ಇನ್ನೊಂದು ರಾಷ್ಟ್ರೀಯ ಪಕ್ಷ ಮತ್ತಷ್ಟು ದುರುಪಯೋಗಪಡಿಸಿಕೊಳ್ಳಬಹುದಲ್ಲವೇ……,

ಒಂದು ಸಣ್ಣ ಸಲಹೆ…….

ಲೋಕಸಭೆ ಮತ್ತು ವಿಧಾನಸಭೆಗೆ ಒಂದೇ ಬಾರಿ ಚುನಾವಣೆ ನಡೆಸುವ ಬದಲು ಎಂದಿನಂತೆ ದೇಶದಾದ್ಯಂತ ಲೋಕಸಭೆಗೆ ಒಮ್ಮೆ ಚುನಾವಣೆ ನಡೆಸಿ, ರಾಜ್ಯಗಳ ವಿಧಾನಸಭೆಗಳಿಗೆ ಒಂದು ವರ್ಷದ ನಂತರ ಎಲ್ಲಾ ರಾಜ್ಯಗಳಿಗೂ ಒಟ್ಟಿಗೇ ಚುನಾವಣೆ ನಡೆಸಲು ಪ್ರಯತ್ನಿಸಬಹುದು. ಈ ಅಂತರ ಏಕೆಂದರೆ ರಾಷ್ಟ್ರೀಯವಾಗಿ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರದ ಸಮಸ್ಯೆಗಳು, ರಾಷ್ಟ್ರದ ಆದ್ಯತೆಗಳು, ರಾಷ್ಟ್ರ ನಡೆಸುವ ದೃಷ್ಟಿಕೋನ ಮುಖ್ಯವಾಗುತ್ತದೆ. ರಾಜ್ಯಕ್ಕೆ ಸಂಬಂಧಿಸಿದಂತೆ ಇದು ರಾಜ್ಯಮಟ್ಟದ ಸಮಸ್ಯೆಗಳು, ಪರಿಹಾರಗಳು, ನಾಯಕತ್ವ, ಪ್ರಾದೇಶಿಕತೆ ಮುಖ್ಯವಾಗುತ್ತದೆ….

ಜನರಿಗೆ ಕೇಂದ್ರ ಮತ್ತು ರಾಜ್ಯದ ಸರ್ಕಾರಗಳನ್ನು ಆಯ್ಕೆ ಮಾಡಿಕೊಳ್ಳಲು ಒಂದು ಉತ್ತಮ ಅವಕಾಶವಿರುತ್ತದೆ. ಒಟ್ಟಿಗೇ ನಡೆದಾಗ ಈ ನಮ್ಮ ಭ್ರಷ್ಟಗೊಂಡಿರುವ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರು ಅನಾವಶ್ಯಕವಾಗಿ
ಗೊಂದಲಕ್ಕೊಳಗಾಗಿ ಒಂದೇ ಪಕ್ಷಕ್ಕೆ ಮತ ಹಾಕುವ ಸಾಧ್ಯತೆಯೂ ಇರುತ್ತದೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅಂತಹ ಒಳ್ಳೆಯ ಬೆಳವಣಿಗೆ ಏನಲ್ಲ…..

ಏಕೆಂದರೆ ಇಡೀ ವಿಶ್ವದಲ್ಲಿ ಅತ್ಯಂತ ಬಲಿಷ್ಠ, ಮುಕ್ತ, ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದು. ಸಂವಿಧಾನ ಜಾರಿಯಾಗಿ 77 ವರ್ಷಗಳಿಂದ ಇದನ್ನು ಅತ್ಯುತ್ತಮ ರೀತಿಯಲ್ಲಿ ಕಾಯ್ದುಕೊಂಡು ಬರಲಾಗಿದೆ. ಎಲ್ಲೋ ಹಣ, ಸಮಯ ಉಳಿಸಲು ಹೋಗಿ ಅದಕ್ಕೆ ಧಕ್ಕೆಯಾಗಬಾರದು. ಆ ಎಚ್ಚರಿಕೆಯೂ ನಮಗೆ ಇರಬೇಕಾಗುತ್ತದೆ…..

ಹೀಗೆ ಅನೇಕ ಸಾಧ್ಯತೆಗಳ ಒಂದು ದೇಶ ಒಂದು ಚುನಾವಣೆ ಎಂದಿನಂತೆ ನಿರ್ದಿಷ್ಟ ಉತ್ತರ ಹೇಳಲು ಸಾಧ್ಯವಾಗದೆ ಕಾದು ನೋಡಬೇಕಾಗಿದೆ…..

ಆದರೆ ಈ ಸುಧಾರಣೆಗಿಂತ ಮತದಾರರ ಜಾಗೃತಾವಸ್ಥೆ ಮತ್ತು ಜನಪ್ರತಿನಿಧಿಗಳ ಉತ್ತರದಾಯಿತ್ವ ಬಹಳ ಮುಖ್ಯವಾಗಬೇಕು. ಆಗ ಮಾತ್ರ ಒಂದಷ್ಟು ಸುಧಾರಣೆ ಸಾಧ್ಯ ಎನಿಸುತ್ತದೆ……

ಚುನಾವಣಾ ಸುಧಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶೀಘ್ರದಲ್ಲೇ ಮತ್ತಷ್ಟು ಯೋಚಿಸೋಣ…

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068………

About Author

Leave a Reply

Your email address will not be published. Required fields are marked *