ನನ್ನ ಪಾಲಿಗೆ ಬಂದಿದ್ದು ನಗುವಿಗಿಂತ ಅಳುವೆ ಜಾಸ್ತಿ :- ಗೊರುಚ*
1 min read*ಲೋಕವನ್ನು ಅರ್ಥೈಸಿಕೊಳ್ಳುವಂತಹ ಪ್ರೌಢಾವಸ್ಥೆಗೆ ಬಂದಮೇಲೆ ನನ್ನ ಪಾಲಿಗೆ ಬಂದಿದ್ದು ನಗುವಿಗಿಂತ ಅಳುವೆ ಜಾಸ್ತಿ :- ಗೊರುಚ*
ಆತ್ಮೀಯರೇ.
೨೦೨೪ರ ಡಿಸೆಂಬರ್ ಕೊನೆಯ ಈ ದಿನಗಳಲ್ಲಿ ಚಿಕ್ಕಮಗಳೂರಿನ ಕನ್ನಡದ ಮನಸುಗಳಿಗೆ ಏನೋ ಒಂದು ತರಹದ ಸಂತಸದ ಸಂಭ್ರಮ. ಸಕ್ಕರೆ ನಾಡು ಮಂಡ್ಯದ ಜನತೆಗೆ ನಮ್ಮ ಊರಿನಲ್ಲಿ ಈ ಬಾರಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂಬ ಸಂಭ್ರಮವಾದರೆ, ಕಾಫಿ ನಾಡು ಚಿಕ್ಕಮಗಳೂರಿನ ಜನತೆಗೆ ಶತಮಾನದ ಹೊಸ್ತಿಲಿಗೆ ಬಂದು ನಿಂತಿರುವ, ನಮ್ಮೂರಿನ ಜಾನಪದ ಭೀಷ್ಮ ನಾಡೋಜ ಪುರಸ್ಕೃತರಾದ ಗೊರುಚ ಅವರು ಈ ೮೭ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರ ಪೀಠದಲ್ಲಿ ವಿರಾಜಮಾನರಾಗಿ ಕನ್ನಡದ ಕಸುವನ್ನು ಸೂಸುತ್ತಾರೆ ಎಂಬುದೇ ನಮ್ಮೆಲ್ಲರಿಗೊಂದು ಆನಂದದ ಕ್ಷಣವಾಗಿದೆ.
ಹೌದು.
ನಮ್ಮೂರಿನ ಗೊಂಡೆದೆಹಳ್ಳಿ ರುದ್ರಪ್ಪ ಗಿರಿಗೌಡರ ಚನ್ನಬಸಪ್ಪನವರು ಹಿರಿ ಕಿರಿಯ ರಾದಿಯಾಗಿ ಈಗಿನ ಎಲ್ಲಾ ತಲೆಮಾರಿನವರು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಕರೆಯುವುದು ಗೊರುಚ, ಅಪ್ಪಾಜಿ, ಅಯ್ಯಾ,, ಇತ್ಯಾದಿ ಹೆಸರುಗಳಿಂದ.
ಇಂತಹ ಗೊರುಚ ಅವರು ಕನ್ನಡ ಸಾಹಿತ್ಯ ಪರಿಷತ್ತು,
ಶರಣ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು ಸೇರಿದಂತೆ ಈ ಮೂರು ಪರಿಷತ್ತಿನ ಅಧ್ಯಕ್ಷರಾಗಿ,ಇವರ ಅಧಿಕಾರಾವಧಿಯಲ್ಲಿ, ನವತುಡಿತ, ಚಡಪಡಿಕೆಯ ಅನ್ವೇಷಣೆಗಳೊಂದಿಗೆ ಕೈಗೊಂಡ ಹತ್ತು ಹಲವು ಕಾರ್ಯಕ್ರಮಗಳು ಮತ್ತು ಸೃಜನಶೀಲ ಪ್ರಯೋಗಗಳು ಗೊರುಚ ಅವರ ದಕ್ಷತೆಗೆ ಸಾಕ್ಷಿಗಲ್ಲುಗಳಾಗಿವೆ. ಜೊತೆಗೆ ಒಬ್ಬ ಲೇಖಕ,,ವಿದ್ವಾಂಸ, ಸಂಘಟಕ ಈ ಮೂರು ಏಕಕಾಲಕ್ಕೆ ಆಗಿ ಅವರು ಈ ಸಾಹಿತ್ಯ ಲೋಕದಲ್ಲಿ ಪಯಣಿಸಿದ ಹಾದಿ ಒಂದು ಸಾಧನೆಯೇ ಹೌದು.
ಬಡತನದಲ್ಲಿ ಹುಟ್ಟಿದ ಚನ್ನಬಸಪ್ಪನವರ ಅಪ್ಪ ರುದ್ರಪ್ಪ ಗಿರಿಗೌಡರ ನವರಿಗೆ ತಿಂಗಳಿಗೆ ನಾಲ್ಕುರೂ ಸಂಬಳ,ಅವ್ವ ಅಕ್ಕಮ್ಮ ರುದ್ರಪ್ಪಗೆ ದಿನಕ್ಕೆ ನಾಲ್ಕಾಣೆ ಕೂಲಿ, ತಾನು ಒಂದಾಣೆ ಕೂಲಿಗಾಗಿ ಕೆಲಸ ಮಾಡುತ್ತಿದ್ದೆ ಎಂಬ ವಿಷಯವನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಗೊರುಚ ಅವರು ಅಂದು ಹತ್ತನೇ ತರಗತಿ ಪಾಸು ಮಾಡಲಾಗದೆ ನಪಾಸಾದ ವಿದ್ಯಾರ್ಥಿ. ೧೦ನೇ ತರಗತಿ ಪಾಸ್ ಆಗದೆ ನಪಾಸಾದ ಅಂದಿನ ಬಾಲಕ,ಇಂದು ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಂತಹ ಸರ್ವಾಧ್ಯಕ್ಷತೆಯ ಗೌರವಕ್ಕೆ ಏಣಿಯಂತೆ ಏರಿರುವುದು ಅವರ ಮಾಗಿದ ಜೀವನದ ಸಾಹಸಗಾತೆಯಾಗಿದೆ.
ನಾನು ಪ್ರೌಢಾವಸ್ಥೆಗೆ ಬಂದ ಮೇಲೆ , ಲೋಕದ ಆಗುಹೋಗುಗಳನ್ನು ತಿಳಿಯಲು ಅರಿತ ಮೇಲೆ, ನಕ್ಕಿದ್ದಕ್ಕಿಂತ ಅತಿದ್ದೆ ಜಾಸ್ತಿ ಎಂಬ ಅವರ ಭಾವನಾತ್ಮಕ ಹೇಳಿಕೆ ಗುಡ್ಡದ ಮೇಲಿನ ಬಂಡೆಗಲ್ಲಿನಂತೆ ಗಟ್ಟಿಯಾಗಿ ನಮ್ಮೆದುರಿಗೆ ನಿಂತಿದ್ದು ಕಂಡುಬಂದಿತು.
ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ನಾಗರೀಕರ ಪರವಾಗಿ , ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ, ನಗರದ ಪ್ರೆಸ್ ಕ್ಲಬ್ ಮತ್ತು ಕುವೆಂಪು ಕಲಾಮಂದಿರದಲ್ಲಿ ಅಭಿನಂದನಾ ಸಮಾರಂಭ ಮತ್ತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಪ್ರೆಸ್ ಕ್ಲಬ್ ಚಿಕ್ಕಮಗಳೂರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ.
ಕರ್ನಾಟಕ ರಾಜ್ಯ ರೈತ ಸಂಘ.
ವಿವಿಧ ದಲಿತ ಸಂಘರ್ಷ ಸಮಿತಿಗಳು.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಷ್ಠಾನ. ಅಜ್ಜಂಪುರ ಸೂರಿ ಸಾಂಸ್ಕೃತಿಕ ಪ್ರತಿಷ್ಠಾನ ಸೇರಿದಂತೆ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು ಭಾಗಿಯಾಗಿ, ೯೪ರ ವಯೋಮಾನದ ಗೊರುಚ ಅವರ ನೆನಪಿನ ಶಕ್ತಿ ಮತ್ತು ಕಂಚಿನ ಕಂಠದ ಧನಿಗೆ ಮೂಕ ವಿಸ್ಮಿತರಾಗಿ , ಈ ಜಾನಪದ ಭೀಷ್ಮನಿಗೆ ಜಿಲ್ಲೆಯ ಜನತೆ ಪರವಾಗಿ ಅಭಿನಂದಿಸಲಾಯಿತು.
ಜೊತೆಗೆ, ನಿಮ್ಮ ಸರ್ವಾಧ್ಯಕ್ಷತೆಯ ಭಾಷಣ ಕರುನಾಡಿನ ಜನತೆಗೆ ಮುಂದಿನ ದಿನಗಳಲ್ಲಿ ಕೈದೀವಿಗೆಯಾಗಿ, ಅದು ನಾಡಿನ ತುಂಬೆಲ್ಲ ಹೆಚ್ಚು ಬೆಳಕು ಚೆಲ್ಲಿ, ಹೊಸ ದಿಕ್ಸೂಚಿಗೆ ಕಾರಣವಾಗಲಿ ಎಂಬ ಭಿನ್ನಹದೊಂದಿಗೆ ಶುಭ ಕೋರಿ ಬೀಳ್ಕೊಡಲಾಯಿತು.
••••••••••••••••••••••••••••••