ವರ್ಗಾವಣೆ ವಿದಾಯ….. ಶಿಕ್ಷಕರ ಬಾವ ಪೂರ್ಣ ನುಡಿ….
1 min readವರ್ಗಾವಣೆ ವಿದಾಯ…..
ಶಿಕ್ಷಕರ ಬಾವ ಪೂರ್ಣ ನುಡಿ….
ಎಲ್ಲರಿಗೂ ಪ್ರೀತಿ ಪೂರ್ವಕ ನಮಸ್ಕಾರಗಳು.
ದಿನಾಂಕ 03-12-2024 ರಂದು ಅಧಿಕೃತವಾಗಿ ಸುಂಕಸಾಲೆಯ ಸಹಿಪ್ರಾ ಶಾಲೆಯ ಎಲ್ಲ ಜವಾಬ್ದಾರಿಗಳನ್ನು ಕೆಳಗೂರಿನ ಮುಖ್ಯ ಶಿಕ್ಷಕರೂ ಸ್ನೇಹಿತರೂ ಆದ ಶಂಕರ್ ರವರಿಗೆ ವಹಿಸಿ ಚಿಕ್ಕಮಗಳೂರು ತಾಲ್ಲೂಕಿನ ಬಿ.ಕಾರೇಹಟ್ಟಿ ಸಕಿಪ್ರಾ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ವರ್ಗಾವಣೆ ಪಡೆದಿದ್ದೇನೆ.
17 ವರ್ಷ 11 ತಿಂಗಳು ನನ್ನ ಸೇವಾವಧಿಯನ್ನು ಇದೇ ಶಾಲೆಯಲ್ಲಿ ಮುಗಿಸಿರುವುದು ನನಗೆ ಹೆಮ್ಮೆಯ ಸಂಗತಿ. ಗ್ರಾಮಸ್ಥರ ಸಹಕಾರ, ಜನಪ್ರತಿನಿಧಿಗಳ ಸಹಕಾರ, ಇಲಾಖಾಧಿಕಾರಿಗಳ ಸಹಕಾರದಿಂದ ಹಾಗೂ ಬಹುಮುಖ್ಯವಾಗಿ ನಮ್ಮ ಪತ್ರಿಕಾ ಮಿತ್ರರ ಸಹಕಾರವಿದೆಯೆಂದರೆ ಅತಿಶಯೋಕ್ತಿ ಆಗಲಾರದು. ಎಲ್ಲವೂ ಒಂದಕ್ಕೊಂದು ಸಹಕಾರ ಮತ್ತು ಪೂರಕವಾಗಿದ್ದಾಗ ಮಾತ್ರ ನಮ್ಮ ಸೇವೆ ಸ್ಮರಣೀಯವಾಗುತ್ತದೆ. ಹಾಗಾಗಿ ನನಗೆ ಸುಂಕಸಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಸ್ಮರಣೀಯವೇ ಸರಿ. ನನಗೆ ಭವಿಷ್ಯಕೊಟ್ಟು ಸಾಕಿ ಸಲಹಿದ ಶಾಲೆಗೆ ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೈಲಾದ ಮಟ್ಟಿಗೆ ಸೇವೆ ಸಲ್ಲಿಸಿದ್ದೇನೆ. ನಿಮ್ಮಗಳ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ. ಶಾಲೆಯ ಬಗ್ಗೆ ನಿಮ್ಮ ಬರಹಗಳು, ಪ್ರಚಾರಗಳು ನಮ್ಮ ಶಾಲೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ. ನಮ್ಮ ಶಾಲೆಯ ಅಭಿವೃದ್ಧಿಗೆ ನಿಮ್ಮ ಕೊಡುಗೆ ಅಭೂತಪೂರ್ವವಾದುದು. ಸಭೆ ಸಮಾರಂಭಗಳಲ್ಲಿ ಎಲ್ಲರೂ ಪರಸ್ಪರ ಭಾಗವಿಸಿದ್ದೇವೆ. ಎಲ್ಲವೂ ನೆನಪುಗಳು ಎಂದಿಗೂ ಉಳಿದಿರುತ್ತವೆ.
ನನ್ನಿಂದ ನಿಮಗೆ ಎಂದಾದರೂ ಕಹಿ ನೆನಪುಗಳು ಆಗಿದ್ದಲ್ಲಿ ಕ್ಷಮೆ ಇರಲಿ. ಬಯಲು ಸೀಮೆಯಿಂದ ಬಂದೆನಾದರೂ, ಮಲೆನಾಡಿನ ಇಂತಹ ಪ್ರದೇಶದಲ್ಲಿ ನಾನು ಕರ್ತವ್ಯ ನಿರ್ವಹಿಸಿ ನನ್ನ ವೃತ್ತಿ ಕೌಶಲವನ್ನು ಹೆಚ್ಚಿಸಿಕೊಂಡಿದ್ದೇನೆ. ವಾಪಾಸು ಕರೆಯಿಸಿಕೊಳ್ಳಲು ಇಲ್ಲಿನ ಜನರ ಮತ್ತು ಪೋಷಕರ ಪ್ರಯತ್ನ ನನ್ನನ್ನು ಇನ್ನಷ್ಟು ಭಾವುಕನನ್ನಾಗಿ ಮಾಡಿದೆ. ಆದರೂ ಇಲಾಖೆಯ ಕೆಲವು ನಿಯಮಗಳು ಪಾಲನೆ ಆಗಲೇಬೇಕಿದೆ.
ಏನೇ ಇರಲಿ ಎಲ್ಲಾದರೂ ಸಿಕ್ಕಾಗ ಪ್ರೀತಿಯಿಂದ ಮಾತನಾಡಿಸಿ ಎಂದು ತಿಳಿಸುತ್ತ ಇಷ್ಟು ಸೇವೆಯೇ ನನ್ನ ಅದೃಷ್ಟ ಎಂದು ಭಾವಿಸುತ್ತಾ ನಿಮ್ಮೆಲ್ಲರ ವಿಶ್ವಾಸ ಸ್ನೇಹ ಪ್ರೀತಿ ಸಹಕಾರ ಮಾರ್ಗದರ್ಶನವನ್ನು ನೆನೆಯುತ್ತಾ ನಿಮಗೆಲ್ಲ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.*
ನಿಮ್ಮವನೆ ಆದ..
ಕಾಂತರಾಜು.ಶಿಕ್ಷಕ.