“ಗೃಹಲಕ್ಷ್ಮಿ ಯೋಜನೆಗೆ 3 ವರ್ಷ : ಜು.27ರಂದು ಸಸಿ ನೆಡುವ ಮೂಲಕ ಸಂಭ್ರಮಾಚರಣೆ – ಮೂಡಿಗೆರೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ನಿರ್ಧಾರ.”
1 min read
ಮೂಡಿಗೆರೆ: ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆಯು ಸಮಿತಿಯ ಅಧ್ಯಕ್ಷರಾದ ಬಿ.ಎಸ್. ಜಯರಾಮ್ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಯೋಜನೆಗಳ ಅನುಷ್ಠಾನ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪುನರ್‌ಪರಿಶೀಲನೆಯನ್ನು FRS ವ್ಯವಸ್ಥೆಯ ಮೂಲಕ ಕೈಗೊಳ್ಳಲು ಇಲಾಖಾ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಯೋಜನೆಗೆ ಮೂರು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಜುಲೈ 27ರಂದು ನಂದೀಪುರ, ದಾರದಹಳ್ಳಿ, ಬೆಟ್ಟಗೆರೆ, ಗೋಣಿಬೀಡು, ಬಿದರಹಳ್ಳಿ, ಹಂತೂರು, ಬಣಕಲ್ ಹಾಗೂ ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳು, ಅಂಗನವಾಡಿಗಳು, ವಸತಿ ನಿಲಯಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಸಿ ನೆಡುವ ಮೂಲಕ ಸಂಭ್ರಮಾಚರಣೆ ನಡೆಸಲು ಅಧ್ಯಕ್ಷರು ಸೂಚಿಸಿದರು.

ತಾಲ್ಲೂಕಿನಲ್ಲಿ ಒಟ್ಟು 29,191 ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಇವರಲ್ಲಿ 28,837 ಮಂದಿಗೆ ಯೋಜನೆಯ ಹಣ ನಿಯಮಿತವಾಗಿ ಜಮೆಯಾಗುತ್ತಿದೆ. ವಿವಿಧ ಕಾರಣಗಳಿಂದ 915 ಮಂದಿ ಯೋಜನೆಯ ಸೌಲಭ್ಯದಿಂದ ಹೊರಗುಳಿದಿದ್ದು, ಇದುವರೆಗೆ 27,922 ಫಲಾನುಭವಿಗಳ ಖಾತೆಗೆ ಒಟ್ಟು ₹5,58,44,000 ಜಮೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಅನ್ನಭಾಗ್ಯ ಯೋಜನೆಯಡಿ ಇನ್ನೂ 2,600 ಪಡಿತರ ಚೀಟಿದಾರರು ಕೆವೈಸಿ ಮಾಡಿಸಿಕೊಳ್ಳಬೇಕಿದ್ದು, ಸಂಬಂಧಿಸಿದ ಸೊಸೈಟಿಗಳಲ್ಲಿಯೇ ಕೆವೈಸಿ ಪೂರ್ಣಗೊಳಿಸಿಕೊಳ್ಳುವಂತೆ ಅಧ್ಯಕ್ಷರು ಸೂಚಿಸಿದರು.
ಗೃಹಜ್ಯೋತಿ ಯೋಜನೆಯಡಿ ತಾಲ್ಲೂಕಿನಲ್ಲಿ 25,961 ಫಲಾನುಭವಿಗಳಿದ್ದು, 22,198 ಮಂದಿಗೆ ಸರ್ಕಾರದಿಂದ ₹97,49,461 ಅನುದಾನ ಬಿಡುಗಡೆಯಾಗಿದೆ. ಅಲ್ಲದೆ 128 ಸರ್ಕಾರಿ ಶಾಲೆಗಳಿಗೆ ₹73,576 ಮೌಲ್ಯದ ಉಚಿತ ವಿದ್ಯುತ್ ಒದಗಿಸಲಾಗಿದೆ. ಯೋಜನೆಯಡಿ ಮಿತಿಗಿಂತ ಹೆಚ್ಚು ವಿದ್ಯುತ್ ಬಳಸಿದ 4,510 ಫಲಾನುಭವಿಗಳಿಂದ ₹45,76,092 ವಿದ್ಯುತ್ ಬಿಲ್ ಪಾವತಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಯುವನಿಧಿ ಯೋಜನೆಯಡಿ 509 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಸರ್ಕಾರದಿಂದ ಮೇ 2026ರವರೆಗೆ ಒಟ್ಟು ₹1,39,77,000 ಅನುದಾನ ಬಿಡುಗಡೆಯಾಗಿದೆ. ಫಲಾನುಭವಿಗಳು ಡಿಕ್ಲರೇಶನ್ ಸಲ್ಲಿಸಿದ ನಂತರವೇ ಅನುದಾನ ಬಿಡುಗಡೆಯಾಗುವುದರಿಂದ, ಮೂಡಿಗೆರೆ ಡಿ.ಎಸ್.ಬಿ.ಜಿ. ಕಾಲೇಜಿನಲ್ಲಿ ಯೋಜನೆ ಕುರಿತು ವಿಶೇಷ ಕಾರ್ಯಾಗಾರ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಶಕ್ತಿ ಯೋಜನೆಯಡಿ ಜೂನ್ 2026ರ ಅವಧಿಯಲ್ಲಿ 3,64,122 ಮಹಿಳೆಯರು ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆದಿದ್ದು, ಇದಕ್ಕಾಗಿ ಸರ್ಕಾರ ₹18,61,44,484 ಅನುದಾನ ಬಿಡುಗಡೆ ಮಾಡಿದೆ. ಯೋಜನೆ ಆರಂಭದಿಂದ ಇದುವರೆಗೆ ಒಟ್ಟು 1,24,86,272 ಪ್ರಯಾಣಗಳು ದಾಖಲಾಗಿದ್ದು, ಇದರ ಪ್ರಯಾಣ ದರ ₹62,92,44,944 ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮನೆಮನೆಗೆ ಭೇಟಿ ನೀಡುವ ಅಧಿಕಾರಿಗಳೊಂದಿಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಸಹಕರಿಸುವಂತೆ ಅಧ್ಯಕ್ಷ ಬಿ.ಎಸ್. ಜಯರಾಮ್ ಸೂಚನೆ ನೀಡಿದರು.
ಸಭೆಯಲ್ಲಿ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ದಯಾವತಿ ಎಂ., ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರುಗಳಾದ ಹರ್ಷ ಮೆಲ್ವಿನ್ ಲಾಸ್ರಾದೋ, ಅರುಣ್,ಶ್ರೀನಿವಾಸ್,ಬಿ.ಕೆ. ಜಯಮ್ಮ,ಲೀಲಾವತಿ,ಜಯಶ್ರೀ,ಮೂಡಿಗೆರೆ ಐ.ಟಿ.ಐ. ಕಾಲೇಜಿನ ಪ್ರಾಂಶುಪಾಲರಾದ ಸುದೀಪ್,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿಯಾದ ಶ್ರೀಮತಿ ಇಂಪಾ, ಮೂಡಿಗೆರೆ ಮೆಸ್ಕಾಂ ಜೆ.ಇ.ಮಂಜುನಾಥ್, ಮೂಡಿಗೆರೆ ಕೆ.ಎಸ್.ಆರ್.ಟಿ.ಸಿ.ಸಂಚಾರ ನಿಯಂತ್ರಕರಾದ ಮಲ್ಲಿಕಾರ್ಜುನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

