*ಪಶ್ಚಿಮ ಘಟ್ಟದಲ್ಲಿ Herping, Night Trails ನಿಷೇಧಕ್ಕೆ ಅರಣ್ಯ ಇಲಾಖೆಗೆ ಆಗ್ರಹ*….
1 min read
*ಪಶ್ಚಿಮ ಘಟ್ಟದಲ್ಲಿ Herping, Night Trails ನಿಷೇಧಕ್ಕೆ ಅರಣ್ಯ ಇಲಾಖೆಗೆ ಆಗ್ರಹ*
ಈ ಭಾರಿ ಮುಂಗಾರು ಕೈಕೊಟ್ಟಿದೆ. ಕಪ್ಪೆಗಳ ರಾಗ ವಿರಳವಾಗಿದೆ. ಕಪ್ಪೆಗಳ ಸಂತಾನೋತ್ಪತ್ತಿಗೆ ದೊಡ್ಡ ಪೆಟ್ಟು ಬಿದ್ದಿದೆ. ಈಗೀಗ ಸ್ವಲ್ಪ ಮಳೆ ಪ್ರಾರಂಭವಾಗಿದೆ. ಈ ಮಧ್ಯೆ
ಮಲೆನಾಡಿನಲ್ಲಿ ವನ್ಯಜೀವಿ ಪ್ರವಾಸೋದ್ಯಮ ಎಲ್ಲಾ ಎಲ್ಲೆಗಳನ್ನು ಮೀರಿ ವಿಪರೀತಕ್ಕೆ ಹೋಗುತ್ತಿದೆ. ಅದಕ್ಕೊಂದು ಅಗತ್ಯ ನಿಯಂತ್ರಣ, ಮಾರ್ಗಸೂಚಿ, ಮೇಲ್ವಿಚಾರಣೆ ಇಲ್ಲವಾಗಿದೆ.
ಮಾನ್ಸೂನ್ ನ ವಾರಾಂತ್ಯಗಳಲ್ಲಿ
Herping, Night Trails, Frog Walk, Macro Photography ಮೊದಲಾದ ಹೆಸರಿನಲ್ಲಿ ಅನಧಿಕೃತ ಕಾರ್ಯಾಗಾರಗಳು, ಶಿಬಿರಗಳು ಆಗುಂಬೆ, ಶಿರಸಿ, ಮಡಿಕೇರಿ, ಸಕಲೇಶಪುರ, ಚಿಕ್ಕಮಗಳೂರು ಸೇರಿದಂತೆ ಪಶ್ಚಿಮ ಘಟ್ಟ ಭಾಗದಲ್ಲಿ ಹೆಚ್ಚುತ್ತಿದೆ. ಬೆಂಗಳೂರು ಸೇರಿದಂತೆ ಮಹಾನಗರಗಳ ಟ್ರಾವೆಲ್ ಏಜೆನ್ಸಿಗಳು, ಫೋಟೋಗ್ರಫಿ ಸಂಸ್ಥೆಗಳು ಮಲೆನಾಡಿನ ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ಎರಡು ದಿನದ, ಮೂರು ದಿನದ ಇಂತಹ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಇಲ್ಲಿ ಶುಲ್ಕ ಹತ್ತು ಸಾವಿರದಿಂದ ಹಿಡಿದು ಇಪ್ಪತ್ತೈದು ಸಾವಿರಗಳವರೆಗೂ ಇದೆ. ಇಂತಹ ಶಿಬಿರಗಳಲ್ಲಿ ಭಾಗವಹಿಸುವವರು ಬಹುಪಾಲು ಶ್ರೀಮಂತರು, IT ಉದ್ಯೋಗಿಗಳು, ವನ್ಯಜೀವಿಗಳ ಬಗೆಗೆ ಆಕರ್ಷಣೆ ಹೊಂದಿರುವವರು.
ಇಂತಹ ಶಿಬಿರಗಳಲ್ಲಿ ಹದಿನೈದು ಇಪ್ಪತ್ತು ಜನ ಗುಂಪು ಕಟ್ಟಿಕೊಂಡು ಅಕ್ರಮವಾಗಿ ಅರಣ್ಯ ಪ್ರವೇಶಿಸುತ್ತಾರೆ. ರಾತ್ರಿ ಟಾರ್ಚ್ ಹಿಡಿದು ಕಾಡಿನಲ್ಲಿ, ಹಳ್ಳ, ತೊರೆಗಳ ಸಮೀಪದಲ್ಲಿ ಸಂಚರಿಸಲಾಗುತ್ತದೆ. ಕಪ್ಪೆ, ಹಾವು, ಜೇಡ ಸೇರಿದಂತೆ ವನ್ಯಜೀವಿಗಳನ್ನು ಹುಡುಕಿಕೊಂಡು ಹೋಗಲಾಗುತ್ತದೆ. ಅತ್ಯಾಧುನಿಕ ಕ್ಯಾಮೆರಾಗಳು, ಲೆನ್ಸ್ ಗಳನ್ನು ಹೊತ್ತು ತಂದವರು, ಫ್ಲಾಶ್ ಲೈಟ್ ಬಿಟ್ಟು ಫೋಟೋಗ್ರಫಿ, ವಿಡಿಯೋಗ್ರಫಿ ಮಾಡುತ್ತಾರೆ.
ಅತ್ಯಾಕರ್ಷಕ ಫೋಟೋ, ವಿಡಿಯೋಗಳಿಗಾಗಿ ಹಾವು, ಕಪ್ಪೆ ಮೊದಲಾದ ವನ್ಯಜೀವಿಗಳ, ರಾತ್ರಿ ಸಂಚರಿಸುವ ಸಣ್ಣ ಪುಟ್ಟ ಜೀವಿಗಳ ಸಹಜ ಜೀವನಕ್ಕೆ ಅಡ್ಡಿ ಮಾಡಲಾಗುತ್ತದೆ. ರಾತ್ರಿ ವೇಳೆ ಕಪ್ಪೆಗಳು, ಹಾವುಗಳು ಆಹಾರಕ್ಕಾಗಿ ಹೊಂಚು ಹಾಕಿ ಒಂದೆಡೆ ಕುಳಿತಿರುತ್ತವೆ, ಅವುಗಳಿಗೆ ಹತ್ತಾರು ಜನರ ಟಾರ್ಚ್ ಲೈಟ್ ಗಳು, ಕ್ಯಾಮೆರಾದ ಫ್ಲಾಶ್ ಲೈಟ್ ಗಳು, ಮನುಷ್ಯರ ಓಡಾಟ ಅಡ್ಡಿಪಡಿಸುತ್ತವೆ. ಅವುಗಳ ಆಹಾರ, ಸಂತಾನೋತ್ಪತ್ತಿ, ಓಡಾಟಕ್ಕೆ, ಸಹಜ ಜೀವನಕ್ಕೆ ಅಡ್ಡಿ ಉಂಟಾಗುತ್ತದೆ. ತಮ್ಮ ಮನರಂಜನೆಗಾಗಿ ವನ್ಯಜೀವಿಗಳ ಮೇಲೆ ಶೋಷಣೆ ನಡೆಸಲಾಗುತ್ತದೆ.
ಈ ಯಾವುದೇ ಶಿಬಿರಗಳು ಶೈಕ್ಷಣಿಕ ಚಟುವಟಿಕೆಗಳಲ್ಲ. ಇದಾವುದಕ್ಕೂ ಅಧ್ಯಯನ, ಸಂಶೋಧನೆ, ಸಂರಕ್ಷಣೆಯ ಉದ್ದೇಶ ಇಲ್ಲ. ಕೇವಲ ವಾರಾಂತ್ಯಗಳ ಮನರಂಜನೆ, ಫೋಟೋಗ್ರಫಿ, ಹಣ ಮಾಡುವುದು ಮಾತ್ರ ಇದರ ಉದ್ದೇಶ.
ನಗರಗಳಲ್ಲಿ ಇರುವ ವನ್ಯಜೀವಿ ಆಕರ್ಷಣೆ ಹೊಂದಿರುವವರಿಗೆ, ಅಪರೂಪದ ವನ್ಯಜೀವಿಗಳನ್ನು ನೋಡಬೇಕು, ಅವುಗಳ ಫೋಟೋ ಕ್ಲಿಕ್ಕಿಸಬೇಕು, ಅವುಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕಬೇಕು. ಇದೊಂದು ಟ್ರೆಂಡ್ ಆಗಿ ಬದಲಾಗುತ್ತಿದ್ದು, ಅದಕ್ಕೆ Herping , Macro Photographyಯಂತಹ ವನ್ಯಜೀವಿ ಕೇಂದ್ರಿತ ಆಕರ್ಷಣೆಯ ಚಟುವಟಿಕೆಗಳು(Wildlife attraction based activities) ಹುಟ್ಟಿಕೊಂಡಿವೆ. ಇದನ್ನೇ ಕೆಲವು ಟ್ರಾವೆಲ್ ಏಜೆನ್ಸಿಗಳು, ಫೋಟೋಗ್ರಫಿ ಸಂಸ್ಥೆಗಳು, ರೆಸಾರ್ಟ್, ಹೋಂಸ್ಟೇಗಳು ಬಂಡವಾಳ ಮಾಡಿಕೊಂಡಿದ್ದಾರೆ. ತಮ್ಮ ಹಣದಾಹಕ್ಕಾಗಿ ಎಲ್ಲಾ ನೈತಿಕ ಗೆರೆಗಳನ್ನು ದಾಟಿದ್ದಾರೆ. ಕೆಲವು ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ಮಲಬಾರ್ ಪಿಟ್ ವೈಪರ್, ಹಂಪ್ ನೋಸ್ಡ್ ವೈಪರ್ ಗಳನ್ನು ತಂದಿರಿಸಿಕೊಂಡು ಫೋಟೋಗ್ರಫಿ ಮಾಡುತ್ತಾರೆ ಎಂಬ ಮಾಹಿತಿ ಕೂಡಾ ಇದೆ. ಈ ಹಾವುಗಳು ಹೆಚ್ಚು ದೂರ ಚಲಿಸುವುದಿಲ್ಲ. ಒಮ್ಮೆ ಕಾಡಿನಿಂದ ತಮ್ಮ ಪರಿಸರಕ್ಕೆ ತಂದಿರಿಸಿದರೆ, ಅಲ್ಲೇ ಸುತ್ತಮುತ್ತ ಸಂಚರಿಸಿಕೊಂಡು ಇರುತ್ತವೆ.
ವಿವಿಧ ವರ್ಣಗಳಲ್ಲಿ ಕಂಡುಬರುವ, ಚಿತ್ತಾಕರ್ಷಕವಾಗಿರುವ
ಮಲಬಾರ್ ಪಿಟ್ ವೈಪರ್, ಹಂಪ್ ನೋಸ್ಟ್ ವೈಪರ್ ಗಳು ವನ್ಯಜೀವಿ ಛಾಯಾಗ್ರಾಹಕರ ಆಕರ್ಷಣೆ ಆಗಿದೆ. Instagram ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲು ಕೆಲವರಿಗೆ ವನ್ಯಜೀವಿಗಳ ಅತ್ಯಾಕರ್ಷಕ ಫೋಟೋ ಬೇಕು. ಅದಕ್ಕಾಗಿ ಎಲ್ಲಾ ಕಾನೂನು ಮತ್ತು ನೈತಿಕ ಗೆರೆಗಳನ್ನು ದಾಟಿದ್ದಾರೆ.
ಇಂತಹ ಕಾರ್ಯಾಗಾರಗಳಿಂದ ವನ್ಯಜೀವಿ ಸಂರಕ್ಷಣೆಗೆ ಯಾವುದೇ ಸ್ವರೂಪದ ಉಪಯೋಗವಿಲ್ಲ.
ಇವತ್ತು ಸೋಷಿಯಲ್ ಮೀಡಿಯಾ ಲೈಕ್ಸ್, ಶೇರ್, ಕಮೆಂಟ್ ಗಳಿಗಾಗಿ ವ್ಯಕ್ತಿ ವೈಭವೀಕರಣಕ್ಕಾಗಿ ವನ್ಯಜೀವಿಗಳ ಶೋಷಣೆ ಮಿತಿಮೀರಿದೆ.
ಈ ರೀತಿ ಫೋಟೋಗ್ರಫಿ, ವಿಡಿಯೋಗ್ರಫಿ ಮಾಡುವ ಬಹುಪಾಲು ಜನರು ದೊಡ್ಡ ಮಟ್ಟದಲ್ಲಿ ಪರಿಸರ ನಾಶ ಮಾಡುವ ಸರ್ಕಾರದ ಯಾವುದೇ ಬೃಹತ್ ಯೋಜನೆಗಳ ಬಗೆಗೆ ಮಾತನಾಡುವುದಿಲ್ಲ. ವಿರೋಧ ಮಾಡುವುದಿಲ್ಲ. ಕೇವಲ ವನ್ಯಜೀವಿಗಳ ಅತ್ಯಾಕರ್ಷಕ ಫೋಟೋ, ವಿಡಿಯೋ ಹಾಕಿಕೊಂಡು ‘ಸಂರಕ್ಷಣೆ’ ಎನ್ನುತ್ತಾರೆ. ಕೆಲವರು ಕಪ್ಪೆ/ಹಾವು/ಜೇಡ/ಯಾವುದೋ ಒಂದೇ ಒಂದು ಜೀವಿಯನ್ನು ಇಟ್ಟುಕೊಂಡು ‘ಸಂರಕ್ಷಣೆ’ ಎನ್ನುತ್ತಾರೆ. ಅದೇ ಜೀವಿಯ ಆವಾಸ ಸ್ಥಾನ, ಕಾರಿಡಾರ್ ನಾಶದ ಬಗೆಗೆ ಸೊಲ್ಲೆತ್ತುವುದಿಲ್ಲ ಎಂಬುದು ದುರದೃಷ್ಟಕರ. ವನ್ಯಜೀವಿ ಸಂರಕ್ಷಣೆ ಎಂದರೆ ವನ್ಯಜೀವಿ ವೀಕ್ಷಣೆ, ಫೋಟೋಗ್ರಫಿ ಎಂಬ ಸೀಮಿತ ದೃಷ್ಟಿಕೋನ ಬೆಳೆಯುತ್ತಿದೆ. ಡಿಜಿಟಲ್ ಕಂಟೆಂಟ್ ಗಾಗಿ ವನ್ಯಜೀವಿಗಳ ಶೋಷಣೆ ಹೆಚ್ಚಾಗುತ್ತಿದೆ.
ಇಂತಹ ಚಟುವಟಿಕೆಗಳಿಗೆ ಅರಣ್ಯ ಇಲಾಖೆ ಕಡಿವಾಣ ಹಾಕುತ್ತಿಲ್ಲ. ದೂರುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇಲ್ಲಿ ಯಾವುದೇ ಅಧಿಕೃತ ಯೋಜನೆ, ಪೂರ್ವಾನುಮತಿ, ಮೇಲ್ವಿಚಾರಣೆ, ನಿಯಂತ್ರಣ, ಉತ್ತರಾದಾಯಿತ್ವಗಳಿಲ್ಲದೇ ಯಾರು? ಎಷ್ಟು ಜನ? ಎಲ್ಲಿಗೆ ಬಂದರು? ಏನು ಮಾಡಿದರು? ಮುಂತಾದವುಗಳ ದಾಖಲಾತಿ ನಿರ್ವಹಣೆ, ಅಗತ್ಯ ಬಂದಾಗ ಅವುಗಳ ತಪಾಸಣೆ ಯಾವುದೂ ಇಲ್ಲದೆ ತಮಗಿಷ್ಟ ಬಂದಂತೆ ನಡೆಸುತ್ತಿರುವ ಚಟುವಟಿಕೆಗಳಾಗಿವೆ.
Herping, Night Trails, Frog Walk, Macro Photography ಸೇರಿದಂತೆ ವನ್ಯಜೀವಿ ಕೇಂದ್ರಿತ ಆಕರ್ಷಣೆಯ ಚಟುವಟಿಕೆಗಳಿಗೆ ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ ಸಂಪೂರ್ಣ ನಿಷೇಧ ಹೇರಬೇಕು. ಸಂಶೋಧನೆ, ಅಧ್ಯಯನ, ಶೈಕ್ಷಣಿಕ ಉದ್ದೇಶ ಇಲ್ಲದ ಇಂತಹ ಅನಧಿಕೃತ ಚಟುವಟಿಕೆಗಳಿಂದ ವನ್ಯಜೀವಿಗಳ ಶೋಷಣೆ ಆಗುತ್ತಿದೆಯೇ ಹೊರತು ಯಾವುದೇ ಜಾಗೃತಿ, ಸಂರಕ್ಷಣೆ ಆಗುತ್ತಿಲ್ಲ. ಹೆಚ್ಚಿನ ಕಡೆ ಅರಣ್ಯ, ವನ್ಯಜೀವಿ ಕಾನೂನುಗಳನ್ನು ಗಾಳಿಗೆ ತೂರಿ ತಮಗಿಷ್ಟ ಬಂದಂತೆ ಇಂತಹ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಮುಗ್ಧ ಜೀವಿಗಳನ್ನು ಶೋಷಣೆ ಮಾಡಲಾಗುತ್ತಿದೆ.
– ನಾಗರಾಜ ಕೂವೆ, ಮೂಡಿಗೆರೆ
ಚಿತ್ರ: Instagram ನಲ್ಲಿ ಹರಿದಾಡುತ್ತಿರುವ Promotional ಫೋಟೋ

