“₹200 ಮುಖಬೆಲೆಯ 90 ಖೋಟಾ ನೋಟುಗಳೊಂದಿಗೆ ಇಬ್ಬರ ಬಂಧನ; ಮೂಡಿಗೆರೆ ಪೊಲೀಸರ ಕಾರ್ಯಾಚರಣೆ.”
1 min read
ಮೂಡಿಗೆರೆ:₹200 ಮುಖಬೆಲೆಯ ಖೋಟಾ ನೋಟುಗಳನ್ನು ಸ್ವಾಧೀನದಲ್ಲಿಟ್ಟುಕೊಂಡು ಚಲಾವಣೆಗೆ ಯತ್ನಿಸುತ್ತಿದ್ದ ಆರೋಪದಡಿ ಮೂಡಿಗೆರೆ ಪೊಲೀಸರು ಇಬ್ಬರನ್ನು ಬಂಧಿಸಿ, ಒಟ್ಟು 90 ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.


ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಉಪನಿರೀಕ್ಷಕರು (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಸಿಬ್ಬಂದಿ,ಪಂಚರ ಸಮಕ್ಷಮ ಮೂಡಿಗೆರೆ ಎಂ.ಜಿ.ಎಂ. ಸರ್ಕಾರಿ ಆಸ್ಪತ್ರೆ ಸಮೀಪದ ಸುಬ್ರಾಯಗೌಡರ ಹೊಸ ಲೇಔಟ್‌ನಲ್ಲಿ ದಾಳಿ ನಡೆಸಿದರು. ಈ ವೇಳೆ ಅನುಮಾನಾಸ್ಪದವಾಗಿ ಕುಳಿತಿದ್ದ ಇಬ್ಬರನ್ನು ತಪಾಸಣೆ ಮಾಡಿದಾಗ ಅವರ ಬಳಿ ₹200 ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾದವು.
ಬಂಧಿತರನ್ನು ಮೊಹಮ್ಮದ್ ಅಲಿ (36),ಈಶ್ವರಕಟ್ಟೆ ಗ್ರಾಮ, ಮೂಡು ಪೆರಾರು, ಮಂಗಳೂರು ತಾಲೂಕು ಹಾಗೂ ಹೆಚ್.ಎಸ್.ಮಹೇಶ್ (39),ನವಗ್ರಾಮ,ಹಂಡುಗುಳಿ ಗ್ರಾಮ, ಗೋಣಿಬೀಡು ಹೋಬಳಿ, ಮೂಡಿಗೆರೆ ತಾಲೂಕು ನಿವಾಸಿಗಳೆಂದು ಗುರುತಿಸಲಾಗಿದೆ.
ತಪಾಸಣೆಯ ವೇಳೆ ಇಬ್ಬರ ಬಳಿಯೂ ತಲಾ 45ರಂತೆ ಒಟ್ಟು 90 ಖೋಟಾ ₹200 ಮುಖಬೆಲೆಯ ನೋಟುಗಳು (ಒಟ್ಟು ಮುಖಬೆಲೆ ₹18,000) ಪತ್ತೆಯಾಗಿವೆ. ನೋಟುಗಳನ್ನು ಪರಿಶೀಲಿಸಿದಾಗ, “Reserve Bank of India” ಎಂಬುದರ ಬದಲಿಗೆ “BESERVE RANK OF INDIA” ಎಂದು ಮುದ್ರಿತವಾಗಿರುವುದು ಕಂಡುಬಂದಿದ್ದು, ಅವು ಮೇಲ್ನೋಟಕ್ಕೆ ನಕಲಿ ನೋಟುಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಶಪಡಿಸಿಕೊಂಡ ನೋಟುಗಳನ್ನು ಪಂಚರ ಸಮಕ್ಷಮ ಜಪ್ತಿ (ಸೀಜ್) ಮಾಡಿ, ಆರೋಪಿಗಳನ್ನು ಬಂಧಿಸಿ ಮೂಡಿಗೆರೆ ಪೊಲೀಸ್ ಠಾಣೆಗೆ ಕರೆತರಲಾಗಿದೆ.
ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 125/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 179 ಮತ್ತು 180 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು,ಖೋಟಾ ನೋಟುಗಳ ಮೂಲ ಹಾಗೂ ಅವುಗಳನ್ನು ಎಲ್ಲಿಂದ ಪಡೆದುಕೊಂಡಿದ್ದರು ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

