AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಮೂಡಿಗೆರೆಯಲ್ಲಿ ತಾರಕಕ್ಕೇರಿದ ಕಾಂಗ್ರೆಸ್ ಪಕ್ಷದ ಒಳ ಜಗಳ.”

1 min read

ಚಿಕ್ಕಮಗಳೂರು : ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ನೂರಾರು ಹಿರಿಕಿರಿಯ ಮುಖಂಡರು ಮತ್ತು ಕಾರ್ಯಕರ್ತರು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಶಾಸಕಿ ನಯನಾ ಮೋಟಮ್ಮನವರನ್ನು ಬೆಂಬಲಿಸಿ ಕೆ.ಪಿ.ಸಿ.ಸಿ. ಅಧ್ಯಕ್ಷರಿಗೆ ಪತ್ರವನ್ನು ನೀಡಿದರು.

 

ಮೂಡಿಗೆರೆ ಕ್ಷೇತ್ರದ ಆಲ್ದೂರು,ಕಳಸ ಬ್ಲಾಕ್ ಗಳ ಅಧ್ಯಕ್ಷರು, ಎಲ್ಲಾ ಹೋಬಳಿಗಳ ಅಧ್ಯಕ್ಷರು,ವಿವಿಧ ಘಟಕಗಳ ಅಧ್ಯಕ್ಷರು,ಕ್ಷೇತ್ರದ ಬಹುತೇಕ ಎಲ್ಲಾ ಬೂತ್ ಗಳ ಅಧ್ಯಕ್ಷರು ಸೇರಿದಂತೆ ಸುಮಾರು 400ಕ್ಕೂ ಅಧಿಕ ಕಾರ್ಯಕರ್ತರು ನಯನಾ ಮೋಟಮ್ಮನವರನ್ನು ಬೆಂಬಲಿಸಿ ಬೆಂಗಳೂರಿಗೆ ತೆರಳಿದ್ದರು.

*ಶಾಸಕರ ವಿರುದ್ಧ ಬಣದ ನಾಯಕರ ನಿಯೋಗ.*

ಇತ್ತೀಚೆಗೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ,ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ,ಮೂಡಿಗೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೆಚ್.ಜಿ.ಸುರೇಂದ್ರ ಸೇರಿದಂತೆ ಮೂಡಿಗೆರೆಯ ಕೆಲ ಹಿರಿಯ ಕಾಂಗ್ರೇಸ್ ಮುಖಂಡರು ಕೆ.ಪಿ.ಸಿ.ಸಿ. ಅಧ್ಯಕ್ಷರನ್ನು ಭೇಟಿ ಮಾಡಿ ಶಾಸಕಿ ನಯನಾ ಮೋಟಮ್ಮನವರ ವಿರುದ್ಧ ಹಲವು ಆರೋಪಗಳನ್ನು ಮಾಡಿ ದೂರು ನೀಡಿದ್ದರು.

ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಶುಕ್ರವಾರ ಶಾಸಕಿ ನಯನಾ ಮೋಟಮ್ಮನವರನ್ನು ಬೆಂಬಲಿಸಿ ದೊಡ್ಡ ಸಂಖ್ಯೆಯಲ್ಲಿ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರು ಕೆ.ಪಿ.ಸಿ.ಸಿ. ಅಧ್ಯಕ್ಷರಿಗೆ ತಮ್ಮ ಅಹವಾಲು ಸಲ್ಲಿಸಿದರು. ಈ ಸಂದರ್ಭದಲ್ಲಿ ನಯನಾ ಮೋಟಮ್ಮ ಅವರಿಗೆ ಬೆಂಬಲ ಸೂಚಿಸುವುದರ ಜೊತೆಗೆ ಕೆಲವು ಹಿರಿಯ ಮುಖಂಡರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ದೂರು ನೀಡಿದರು.

*ನಿಯೋಗವು ಕೆಪಿಸಿಸಿ ಅಧ್ಯಕ್ಷರಿಗೆ ನೀಡಿದ ಪತ್ರದಲ್ಲಿ ಈ ಕೆಳಗಿನ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.*

ರಾಜಕೀಯ ಹಿನ್ನೆಲೆ ಇದ್ದರೂ,ನಯನ ಮೋಟಮ್ಮ ಅವರು ಕ್ಷೇತ್ರಕ್ಕೆ ದಿಢೀರ್ ಎಂದು ಬಂದವರಲ್ಲ. 2018 ರ ವಿಧಾನಸಭಾ ಚುನಾವಣೆಗಿಂತ ಮುಂಚಿನಿಂದಲೇ ಅವರು ಮೂಡಿಗೆರೆಯ ಪ್ರತಿಯೊಂದು ಹಳ್ಳಿ,ತಾಲೂಕುಗಳಿಗೆ ಭೇಟಿ ನೀಡಿ,ನಿರಂತರವಾಗಿ ಓಡಾಡಿದರು.ಕಳೆದ ಎರಡು ದಶಕಗಳಿಂದ ಧೃತಿಗೆಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಭರವಸೆ ತುಂಬಿ,ಅವರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾದರು.

ಮೂಡಿಗೆರೆ ವೈವಿಧ್ಯಮಯ ಸಮುದಾಯಗಳನ್ನು ಹೊಂದಿರುವ ಕ್ಷೇತ್ರ. ನಯನ ಮೋಟಮ್ಮ ಅವರು ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ. ದಲಿತರು,ಹಿಂದುಳಿದ ವರ್ಗಗಳು,ಮೈನಾರಿಟಿ ಹಾಗೂ ಪ್ರಬಲ ಸಮುದಾಯಗಳು ಸೇರಿದಂತೆ ಎಲ್ಲಾ ಜನರನ್ನು ಒಟ್ಟಿಗೆ ಕೊಂಡೊಯ್ದರು. ಈ “ಸರ್ವಸಮ್ಮತ” ನಾಯಕತ್ವದ ಗುಣವೇ ಚುನಾವಣೆಯಲ್ಲಿ ಎಲ್ಲ ವರ್ಗದ ಮತಗಳನ್ನು ಕ್ರೋಢೀಕರಿಸಲು ನೆರವಾಯಿತು. ಅವರ ತಾಯಿ,ಹಿರಿಯ ನಾಯಕಿ ಶ್ರೀಮತಿ ಮೋಟಮ್ಮ ಅವರು ಈ ಕ್ಷೇತ್ರದಲ್ಲಿ ಮಾಡಿದ್ದ ಜನಪರ ಕೆಲಸಗಳು ಮತ್ತು ಗಳಿಸಿದ್ದ ಗೌರವ ನಯನ ಅವರಿಗೆ ಭದ್ರ ಬುನಾದಿ ನೀಡಿತು.ಇದರೊಂದಿಗೆ ನಯನಾ ಮೋಟಮ್ಮ ಅವರ ಉನ್ನತ ಕಾನೂನು ಶಿಕ್ಷಣ ಹಾಗೂ ಕಾರ್ಪೊರೇಟ್ ವಕೀಲರಾಗಿದ್ದ ಹಿನ್ನೆಲೆ,ಕ್ಷೇತ್ರದ ಯುವ ಪೀಳಿಗೆ ಮತ್ತು ಪ್ರಜ್ಞಾವಂತ ಮತದಾರರನ್ನು ಆಕರ್ಷಿಸಿತು.

ನಯನಾ ಮೋಟಮ್ಮ ಅವರ ನಿರಂತರ ಪರಿಶ್ರಮ, ಕಾರ್ಯಕರ್ತರ ಒಗ್ಗಟ್ಟಿನ ಫಲವಾಗಿ,2023 ರ ಚುನಾವಣೆಯಲ್ಲಿ ತೀವ್ರ ಪೈಪೋಟಿಯ ನಡುವೆಯೂ ಕಾಂಗ್ರೆಸ್ ಭರ್ಜರಿ ಪುನರಾಗಮನ ಮಾಡಿತು ಸುಮಾರು 722 ಮತಗಳ ಅತ್ಯಂತ ಕಿರಿದಾದ ಅಂತರದಲ್ಲಿ ನಯನ ಮೋಟಮ್ಮ ಅವರು ಜಯಗಳಿಸಿದರು. ಈ ಗೆಲುವು ಅವರು ಪ್ರತಿಯೊಂದು ಬೂತ್ ಮಟ್ಟದಲ್ಲಿಯೂ ಎಷ್ಟರಮಟ್ಟಿಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಿದ್ದರು ಮತ್ತು ಮತದಾರರನ್ನು ತಲುಪಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ.

20 ವರ್ಷಗಳ ನಂತರ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಜಯಗಳಿಸಿದ ನಂತರ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಬಿಜೆಪಿ ಜೆಡಿಎಸ್ ಇಂದ ವಲಸೆ ಬಂದಿರುವ ಮಾಜಿ ಶಾಸಕರುಗಳಿಂದ ನಿರಂತರವಾಗಿ ಪಕ್ಷದ ವಿರುದ್ಧ ಮತ್ತು ಶಾಸಕರ ವಿರುದ್ಧ ಅಪಪ್ರಚಾರ ಮಾಡಿಕೊಂಡು ಬರುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ತರಬಯಸುತ್ತೇವೆ.

1) ಪಕ್ಷದ ಅಧಿಕೃತ ಕಚೇರಿಯ ಕೆಲಸವು ಪೂರ್ಣ ಪ್ರಮಾಣದಲ್ಲಿ ಮುಗಿದಿರುವುದಿಲ್ಲ. ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಈ ಕಟ್ಟಡವನ್ನು ಈ ಹಿಂದಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೇಮಶೇಖರ್ ರವರ ಹೆಸರಿನಲ್ಲಿ ಅಗ್ರಿಮೆಂಟ್ ಮಾಡಿಸಿಕೊಂಡಿರುತ್ತಾರೆ ಅದರ ಅದಾಯ ತಲಾ 10 ಸಾವಿರದಂತೆ, 7 ಕಟ್ಟಡಗಳಿಗೆ ತಿಂಗಳಿಗೆ 70 ಸಾವಿರಕ್ಕೂ ಅಧಿಕ ಹಣವನ್ನು ಪಡೆಯುತ್ತಿದ್ದು ಕಾಂಗ್ರೆಸ್ ಪಕ್ಷದ ಎಲ್ಲಾ ಅಂಗಡಿ ಮಳಿಗೆಗಳನ್ನು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ನೀಡಿದ್ದಾರೆ ಹಾಗೂ ಕಚೇರಿಯು ಅವರ ಹಿಡಿತದಲ್ಲಿದ್ದು ಪಕ್ಷಕ್ಕೆ ಇನ್ನು ಬಿಟ್ಟುಕೊಟ್ಟಿಲ್ಲ ಹಾಗಾಗಿ ಅಲ್ಲಿ ಕಾರ್ಯಕರ್ತರ ಒತ್ತಾಯದಂತೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ.

2) ಪಕ್ಷದ ಅಧಿಕೃತ ಕಚೇರಿಯು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೇಮಶೇಖರ್ ಸುಪರ್ದಿಯಲ್ಲಿ ಇರುವುದರಿಂದ ಚುನಾವಣೆಗೆ ಮುಂಚಿತವಾಗಿ ಖಾಸಗಿ ಮಳಿಗೆಯಲ್ಲಿ ಪಕ್ಷದ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುತ್ತೇವೆ. ಕಳೆದ 9 ವರ್ಷಗಳಿಂದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೇಮಶೇಖರ್ ಕಟ್ಟಡ ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಮುಗಿಸಿರುವುದಿಲ್ಲ ಹಾಗೂ ಸರಿಯಾದ ಲೆಕ್ಕವನ್ನು ಸಹ ಕೊಡುತ್ತಿಲ್ಲ.

3) ಶಾಸಕರು ಪಕ್ಷದ ಹಿತದೃಷ್ಟಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರ್ಯಕರ್ತರು ಹಾಗೂ ಮುಖಂಡರ ಸಲಹೆಯಂತೆ ಕೋರ್ಟ್ ಮುಂಭಾಗದ ಸುಶಾಂತ್ ನಗರದಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಕಚೇರಿಯನ್ನು ತೆರೆದಿರುತ್ತಾರೆ. ಪ್ರತಿ ಸೋಮವಾರದಿಂದ ಗುರುವಾರದವರೆಗೂ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಭೇಟಿಗೆ ಅನುವು ಮಾಡಿ ಕೊಟ್ಟಿರುತ್ತಾರೆ. ಕ್ಷೇತ್ರದ ಮೂರು ಬ್ಲಾಕ್ ಕಾಂಗ್ರೇಸ್ ಸಮೀತಿಗೆ ಮೂರು ಜನ ಅಪ್ತ ಸಹಾಯಕರಿದ್ದು ವಾರದ 7 ದಿವಸವು ಸಾರ್ವಜನಿಕರ ಸೇವೆಗೆ ಲಭ್ಯವಿದ್ದು ಇವರ ಸಾರ್ವಜನಿಕರ ಕುಂದು ಕೊರತೆಗಳನ್ನು ಶಾಸಕರ ಗಮನಕ್ಕೆ ತರುತ್ತಾರೆ ಮಾತ್ರವಲ್ಲದೆ ಸಾರ್ವಜನಿಕರಿಗೆ ಶಾಸಕರನ್ನು ಪ್ರತ್ಯೇಕವಾಗಿ ಬೇಟಿ ಮಾಡಲು ಅವಕಾಶ ಕೊಟ್ಟಿರುತ್ತಾರೆ.

4) ಯಾವುದೇ ಹಿರಿಯ ನಾಯಕರನ್ನು ಕಡೆಗಣಿಸಲಿಲ್ಲ ಅವರ ಹಠಮಾರಿ ಧೋರಣೆ ಹಾಗೂ ಹೊಂದಾಣಿಕೆ ಕೊರತೆಯಿಂದ ಅವರಾಗಿ ದೂರವಾಗಿ ಶಾಸಕರ ವಿರುದ್ಧ ಚಟುವಟಿಕೆ ನಡೆಸುತ್ತಿರುವುದು, ಕಾರ್ಯಕರ್ತರು ಮತ್ತು ಮುಖಂಡರಿಗೆ ಮುಜುಗರ ಉಂಟು ಮಾಡುತ್ತಿದ್ದಾರೆ.

5) ಆಲ್ಲೂರು ಹಾಗೂ ಕಳಸ ಬ್ಲಾಕ್ ನಲ್ಲಿ ಯಾವುದೇ ಸಮನ್ವಯದ ಕೊರತೆ ಇಲ್ಲ. ಸಮನ್ವಯದ ಕೊರತೆ ಇರುವುದು ಮೂಡಿಗೆರೆ ಬ್ಲಾಕ್ ನಲ್ಲಿ ಮಾತ್ರ ಅದಕ್ಕೆ ಮೂಲ ಕಾರಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಂದ್ರ ಗೌಡರವರ ನಾಯಕತ್ವ.

6) ಕ್ಷೇತ್ರದ ಯಾವುದೇ ಬ್ಲಾಕ್ ಅಥವಾ ಹೋಬಳಿ ಮಟ್ಟದ ಪದಾಧಿಕಾರಿಗಳ ನೇಮಕಾತಿ ಅಥವಾ ಬದಲಾವಣೆ ಮಾಡಿರುವುದಿಲ್ಲ 2013 ರಲ್ಲಿ ಆಯ್ಕೆ ಮಾಡಿದ ಪದಾಧಿಕಾರಿಗಳು ಇದುವರೆಗೂ ಮುಂದುವರಿಸಿಕೊಂಡು ಬಂದಿರುತ್ತಾರೆ. ಹೊಸಬರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕಾರ್ಯಕರ್ತರು ಹಾಗೂ ಮುಖಂಡರ ಸೂಚನೆ ಹೊಸ ಪದಾಧಿಕಾರಿಗಳ ಪಟ್ಟಿಯನ್ನು ತಮ್ಮಒಪ್ಪಿಗೆಗೆ ಸೂಚಿಸಲಾಗಿದೆ

7) ಮೂಡಿಗೆರೆ ತಾಲೂಕು ಪಟ್ಟಣ ಸಾರ್ವಜನಿಕ ಗಣಪತಿ ಸಮಿತಿಯ ಕಾರ್ಯಕ್ರಮದ ಕಾರ್ಯಧ್ಯಕ್ಷರು ಹಾಲಿ ಶಾಸಕರೆ ಆಗಿರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ ಆ ಕಾರ್ಯಕ್ರಮ ದಲ್ಲಿ ಪ್ರಮೋದ್ ಮುತಾಲಿಕ್ ಮುಖ್ಯ ಅತಿಥಿಯಾಗಿದ್ದು ಅವರ ಜೊತೆ ಭಾಗವಹಿಸಿದನ್ನ ವಿರೋಧಿಸಿರುತ್ತಾರೆ ಆ ಕಾರ್ಯಕ್ರಮವು ಸಾರ್ವಜನಿಕ ಕಾರ್ಯಕ್ರಮ ಆಗಿದ್ದರಿಂದ ಶಾಸಕರು ಭಾಗವಹಿಸಿರುತ್ತಾರೆ.

8) ಚುನಾವಣೆ ಗೆದ್ದ ಬಳಿಕ ಶಾಸಕರು ಯಾವುದೇ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡುವಾಗ ಕ್ಷೇತ್ರದ ಮೂರು ಬ್ಲಾಕ್ ನ ಅಧ್ಯಕ್ಷರು ಹಾಗೂ ಹೋಬಳಿ ಅಧ್ಯಕ್ಷರ ಜೊತೆ ಚರ್ಚಿಸಿ 9 ಹೋಬಳಿಗಳಿಗೆ ಸರಿ ಸಮಾನವಾಗಿ ಅನುದಾನ ಹಂಚಿಕೆ ಮಾಡಿರುತ್ತಾರೆ ಯಾವುದೇ ತಾರತಮ್ಯ ಮಾಡಿರುವುದಿಲ್ಲ.

9) ಶಾಸಕರಿಗೆ ಚುನಾವಣೆಗೆ ಮೊದಲೇ ತಮಗೆ ತಿಳಿದಿರೋ ಹಾಗೆ ಒಂದಿಷ್ಟು ಹಿರಿಯ ನಾಯಕರು ಇವರಿಗೆ ಪಕ್ಷದಲ್ಲಿ ಅವಕಾಶ ನೀಡದಂತೆ ಹಲವು ಬಾರಿ ಹಿಂದಿನ ರಾಜ್ಯಧ್ಯಕ್ಷರ ಮೇಲೆ ನಿರಂತರ ಒತ್ತಡ ಹೇರಿದ ಬಗ್ಗೆ ಅಧಿಕೃತ ದಾಖಲೆ ಈ ಪತ್ರದೊಂದಿಗೆ ಲಗತಿಸಲಾಗಿದೆ

10) ಕೆಲವು ನಾಯಕರು ಮೋಟಮ್ಮನವರ ಚುನಾವಣೆಯಿಂದಲೂ ಬಿಜೆಪಿ ಹಾಗೂ ಜೆಡಿಎಸ್ ನಾಯಕರೊಂದಿಗೆ ರಾಜಕೀಯ ಸ್ನೇಹ ಹೊಂದಿ ಒಕ್ಕಲಿಗ ವಿರೋಧಿ ಅಂಥ ಬಿಂಬಿಸಿ ಕೈ ಗೊಂಬೆ ಮಾಡಿಕೊಂಡು ಎಲ್ಲಾ ಜಾತಿ ಜನಾಂಗದವರನ್ನು ನೇರವಾಗಿ ಸಂಪರ್ಕಕ್ಕೆ ಬಾರದ ಹಾಗೆ ಮಾಡಿ ಕಾರ್ಯಕರ್ತರನ್ನು ಮೂಲೆ ಗುಂಪು ಮಾಡಿರುತ್ತಾರೆ ಆದರೆ ನಯನಮೋಟಮ್ಮ ಶಾಸಕರಾದ ಮೇಲೆ ಪ್ರತಿ ಬೂತ್ ಅಧ್ಯಕ್ಷರು ಕಾರ್ಯಕರ್ತರು ಕ್ಷೇತ್ರದ ಜನರು ತಮ್ಮ ಗ್ರಾಮದ ಸಮಸ್ಯೆ ಹಾಗೂ ವಯುಕ್ತಿಕ ಸಮಸ್ಯೆ ಗಳನ್ನು ಮುಕ್ತವಾಗಿ ಶಾಸಕರೊಂದಿಗೆ ಹಂಚಿಕೊಳ್ಳಲು ಅವಕಾಶ ಮಾಡಿ ಕೊಟ್ಟಿದ್ದಾರೆ

11) ಈಗಿನ ಮೂಡಿಗೆರೆ ಬ್ಲಾಕ್ ಅಧ್ಯಕ್ಷರಾದ ಸುರೇಂದ್ರ ಗೌಡ ಅವರು ಇದುವರೆಗೂ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದಿಲ್ಲ ಕೆಲವೊಂದು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಾಗ ಶಾಸಕರ ಗಮನಕ್ಕೆ ತಂದಿರುವುದಿಲ್ಲ

12) ಮೋಟಮ್ಮನವರ ಸೇವಾ ಅವಧಿಯಲ್ಲಿ ಮೋಟಮ್ಮ ನವರ ಅಣ್ಣನ ಮಗ ಅನಂತ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೇಮಶೇಖರ್, ಲಕ್ಷ್ಮಣ್ ಗೌಡ, ಈಗಿನ ಗ್ಯಾರಂಟಿ ತಾಲ್ಲೂಕ್ ಅಧ್ಯಕ್ಷರಾದ ಜಯರಾಮ್ ಗೌಡ ಇವರುಗಳು ಮೂಡಿಗೆರೆ ಕ್ಷೇತ್ರದಲ್ಲಿ ಸರ್ವಾಧಿಕಾರಿ ಧೋರಣೆಯಿಂದ ಅಧಿಕಾರ ದುರುಪಯೋಗ ಪಡಿಸಿಕೊಂಡು ಸತತವಾಗಿ ಕಾಂಗ್ರೆಸ್ ಕ್ಷೇತ್ರದಲ್ಲಿ ಸೋಲಲು ನೇರ ಕಾರಣಕರ್ತೃ ಆಗಿದ್ದಾರೆ ಕ್ಷೇತ್ರದಲ್ಲಿ ಅವರಿಗೆ ಸೆಟ್ ದೋಸೆ ಎಂಬ ಹೆಸರನ್ನ ಕ್ಷೇತ್ರದ ಜನತೆ ಕರೆಯುತ್ತಿರುವುದು ಮನೆ ಮಾತಾಗಿದೆ. ಅದೇ ಚಾಳಿ ಮುಂದುವರಿಸಿಲು ಸಾಧ್ಯವಾಗದ ಕಾರಣ ಶಾಸಕರ ಮೇಲೆ ಇಲ್ಲ ಸಲ್ಲದ ಆರೋಪ ಮಾಡ್ತಾ ಬಂದಿರುತ್ತಾರೆ.

13) ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮೂರು ಬ್ಲಾಕ್ ಸಮಿತಿಯಲ್ಲಿ, ಆಲ್ಲೂರು ಮತ್ತು ಕಳಸ ಬ್ಲಾಕ್ ನ ಬಿ.ಎಲ್.ಎ:-2 ಪಟ್ಟಿಯನ್ನು ಬ್ಲಾಕ್ ಅಧ್ಯಕ್ಷರು ನೇತೃತ್ವದಲ್ಲೇ ಪಡೆಯಲಾಗಿದೆ. ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಹಕರಿಸದ ಕಾರಣ ಹೋಬಳಿ ಅಧ್ಯಕ್ಷರುಗಳ ಮುಖಾಂತರ ಪಟ್ಟಿಯನ್ನು ಪಡೆಯಲಾಗಿದೆ.

ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಮತ್ತು ಪಕ್ಷದ ಆಂತರಿಕ ಸ್ಥಿತಿಗತಿಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷರಾದ ತಮಗೆ ಸತ್ಯ ಸಂಗತಿಯನ್ನು ಮುಟ್ಟಿಸುವುದು ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರಾದ ನಮ್ಮ ಕರ್ತವ್ಯವಾಗಿದೆ.ನಮ್ಮ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳಿದ್ದು, ಪಕ್ಷದ ಸಂಘಟನೆ ಅತ್ಯಂತ ಬಲಿಷ್ಠವಾಗಿದೆ. ಈ ಪೈಕಿ ಕಳಸ ಬ್ಲಾಕ್ ಕಾಂಗ್ರೆಸ್ ಹಾಗೂ ಆಲ್ಲೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು ಮತ್ತು ಸಮಸ್ತ ಕಾರ್ಯಕರ್ತರು ಶಾಸಕರಾದ ಶ್ರೀಮತಿ ನಯನ ಮೋಟಮ್ಮ ಅವರೊಂದಿಗೆ ಒಗ್ಗಟ್ಟಾಗಿ ನಿಂತಿದ್ದಾರೆ. ಎರಡು ಬ್ಲಾಕ್ ಅಧ್ಯಕ್ಷರಿಗಾಗಲಿ ಅಥವಾ ಸಾಮಾನ್ಯ ಕಾರ್ಯಕರ್ತರಿಗಾಗಲಿ ನಮ್ಮ ಶಾಸಕರ ಕಾರ್ಯವೈಖರಿ ಮೇಲೆ ಯಾವುದೇ ರೀತಿಯ ಅಸಮಾಧಾನವಿಲ್ಲ. ಎಲ್ಲರೂ ಶಾಸಕರಿಗೆ ಬೆನ್ನೆಲುವಾಗಿ ನಿಂತು ದಿನದ ಇಪ್ಪತ್ತನಾಲ್ಕು ಗಂಟೆಯೂ ಪಕ್ಷದ ಬೆಳವಣಿಗೆಗೆ ದುಡಿಯುತ್ತಿದ್ದಾರೆ.

ಅದರೆ, ಕ್ಷೇತ್ರದಲ್ಲಿ ಇಲ್ಲದ ಅಸಮಾಧಾನವನ್ನು ಸೃಷ್ಟಿಸುತ್ತಿರುವುದು ಕೇವಲ ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಇಲ್ಲಿನ ಕೆಲವು ಹಿರಿಯ ಮುಖಂಡರು ಮಾತ್ರ ಇವರ ವೈಫಲ್ಯ ಹಾಗೂ ಪಕ್ಷ ವಿರೋಧಿ ಧೋರಣೆಗೆ ಇತ್ತೀಚಿನ ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಚುನಾವಣೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಹಿರಿಯ ಮುಖಂಡರು ಕ್ಷೇತ್ರದ ಶಾಸಕರನ್ನು ಸಂಪೂರ್ಣವಾಗಿ ಕಡೆಗಣಿಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಉತ್ಪನ್ನ ಮಾರಾಟ ಸಹಕಾರ ಸಂಘ ಚುನಾವಣೆಯನ್ನು ನಡೆಸಿದರು. ಇದರ ಪರಿಣಾಮವಾಗಿ ಕಾಂಗ್ರೆಸ್ ಪಕ್ಷವು ಅಲ್ಲಿ ಒಂದು ಸೀಟನ್ನು ಸಹ ಗೆಲ್ಲಲಾಗದೆ ಮುಖಭಂಗ ಅನುಭವಿಸಬೇಕಾಯಿತು.

ಶಾಸಕರ ವಿರುದ್ದ ಅಪಪ್ರಚಾರ ಮಾಡುತ್ತಿರುವ ಈ ನಾಯಕರು ಕೇವಲ ‘ವೈಟ್ ಕಾಲರ್’ ರಾಜಕಾರಣಿಗಳಾಗಿದ್ದಾರೆ. ಇವರಿಗೆ ಜನರೊಂದಿಗಾಗಲಿ, ತಳಮಟ್ಟದ ಕಾರ್ಯಕರ್ತರೊಂದಿಗಾಗಲಿ ಯಾವುದೇ ಸಂಪರ್ಕವಿಲ್ಲ. ಇವರಿಂದ ಪಕ್ಷಕ್ಕಾಗಲಿ ಅಥವಾ ಕ್ಷೇತ್ರದ ಸಾರ್ವಜನಿಕರಿಗಾಗಲಿ ಯಾವುದೇ ರೀತಿಯ ಲಾಭವಿಲ್ಲ. ಕಳೆದ 20 ವರ್ಷಗಳ ಕಾಲ ಮೂಡಿಗೆರೆಯಲ್ಲಿ ಕಾಂಗ್ರೆಸ್‌ ಅಧಿಕಾರದಿಂದ ದೂರ ಉಳಿಯಲು ಇಂತಹ ಹಿರಿಯ ನಾಯಕರ ನಿಷ್ಕ್ರಿಯತೆ ಮತ್ತು ಅಹಂಕಾರವೇ ಕಾರಣವಾಗಿತ್ತು. ಈಗ 20 ವರ್ಷಗಳ ನಂತರ ಯುವ ಶಾಸಕಿಯ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದ್ದರೂ, ಇವರು ಮತ್ತೆ ಅದೇ ಹಳೇ ಚಾಳಿಯನ್ನು ಮುಂದುವರಿಸಿ ಪಕ್ಷದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ಹಗಲಿರುಳು ದುಡಿಯುವ ಕಳಸ ಮತ್ತು ಅಲ್ಲೂರು ಬ್ಲಾಕ್ ಸಮಿತಿಗಳ ಕ್ರಮವನ್ನು ಕಡೆಗಣಿಸಿ, ಪಕ್ಷದ ಹೆಸರಿಗೆ ಕಳಂಕ ತರುತ್ತಿರುವ ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಹಿರಿಯ ಮುಖಂಡರ ವಿರುದ್ಧ ತಾವು ಶಿಸ್ತು ಕ್ರಮ ಕೈಗೊಳ್ಳಬೇಕು. ವೈಟ್ ಕಾಲರ್ ರಾಜಕಾರಣ ಮಾಡುತ್ತಾ ಪಕ್ಷವನ್ನು ದುರ್ಬಲಗೊಳಿಸುತ್ತಿರುವ ಇವರಿಗೆ ಸೂಕ್ತ ಎಚ್ಚರಿಕೆ ನೀಡಿ, ಶಾಸಕರ ನೇತೃತ್ವದಲ್ಲಿ ಕ್ಷೇತ್ರವನ್ನು ಮುನ್ನಡೆಸಲು ಅನುವು ಮಾಡಿಕೊಡಬೇಕಾಗಿ ವಿನಂತಿಸುತ್ತೇವೆ ಎಂದು ತಮ್ಮ ಮನವಿ ಪತ್ರದಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ.ಅಂದಾಜು 300ಕ್ಕೂ ಹೆಚ್ಚು ಮುಖಂಡರು ಮತ್ತು ಕಾರ್ಯಕರ್ತರು ನಿಯೋಗದಲ್ಲಿ ಇದ್ದರು.

ನಂತರ ನಿಯೋಗದ ಸದಸ್ಯರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಶಾಸಕಿ ನಯನಾ ಮೋಟಮ್ಮ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿತು.

ಇದರೊಂದಿಗೆ ಮೂಡಿಗೆರೆ ಕ್ಷೇತ್ರದಲ್ಲಿ ಆಡಳಿತ ಕಾಂಗ್ರೇಸ್ ಪಕ್ಷದಲ್ಲಿ ಶಾಸಕರ ಪರ ಮತ್ತು ವಿರೋಧ ಬಣಗಳ ನಡುವಿನ ರಾಜಕೀಯ ತಾರಕಕ್ಕೆರಿದ್ದು, ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕಿದೆ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ಬ್ಯೂರೋ ನ್ಯೂಸ್,ಅವಿನ್ ಟಿವಿ.

About Author

Leave a Reply

Your email address will not be published. Required fields are marked *