ಅನಂತ್ ಅಗಲಿಕೆ ವೈಯಕ್ತಿಕವಾಗಿ ಅಪಾರ ನೋವು ತಂದಿದೆ: ಮೋಟಮ್ಮ….
1 min read
ಅನಂತ್ ಅಗಲಿಕೆ ವೈಯಕ್ತಿಕವಾಗಿ ಅಪಾರ ನೋವು ತಂದಿದೆ: ಮೋಟಮ್ಮ
ಮೂಡಿಗೆರೆ: ತಾವು ಸಚಿವೆಯಾಗಿದ್ದ ಸಂದರ್ಭದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದ ಎಂ.ಎಸ್. ಅನಂತ್ ಅವರು ಅತಿ ಚಿಕ್ಕ ವಯಸ್ಸಿನಲ್ಲೇ ಆಗಲಿರುವುದು ವೈಯಕ್ತಿಕವಾಗಿ ಅಪಾರ ನೋವು ತಂದಿದೆ ಎಂದು ಮಾಜಿ ಸಚಿವೆ ಮೋಟಮ್ಮ ಭಾವುಕರಾಗಿ ಹೇಳಿದರು.
ಅವರು ಸೋಮವಾರ, ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಾಗರೀಕರ ವೇದಿಕೆಯಿಂದ ಏರ್ಪಡಿಸಿದ್ದ ದಿ:ಎಂ.ಎಸ್.ಅನಂತ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆನಂತ್ ಜಿ.ಪಂ. ಮಾಜಿ ಸದಸ್ಯರು, ಕಾಂಗ್ರೆಸ್ ಮುಖಂಡರು ಎಂಬುದಕ್ಕಿಂತ ಹೆಚ್ಚಾಗಿ ಜನರು ತಮ್ಮ ಅಣ್ಣನ ಮಗನೆಂದೇ ಗುರುತಿಸುತ್ತಿದ್ದರು. ರಾಜಕೀಯ ಜೀವನದಲ್ಲಿ ಹಾಗೂ ಕುಟುಂಬದ ವಿಚಾರದಲ್ಲಿ ಹಲವು ಆಪ್ತರನ್ನು ಕಳೆದುಕೊಂಡು ನೋವು ಅನುಭವಿಸಿದ್ದೇನೆ. ನನ್ನ ಉಸಿರಿರುವವರೆಗೂ ಅನಂತ್ ಅವರ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ನನ್ನ ಮಕ್ಕಳಿಗೂ ಅವರ ಜವಾಬ್ದಾರಿ ಹೊತ್ತುಕೊಳ್ಳುವಂತೆ ತಿಳಿಸಿದ್ದೇನೆ ಎಂದು ಭಾವುಕರಾದರು. ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮಾತನಾಡಿ, ಆನಂತ್ ಅವರು ಯಾರನ್ನೂ ನೋಯಿಸಿದ ವ್ಯಕ್ತಿಯಲ್ಲ, ಜನರೊಂದಿಗೆ “ಆತ್ಮೀಯವಾಗಿ ಬೆರೆತು, ಸಂಕಷ್ಟದಲ್ಲಿದ್ದವರಿಗೆ ನೆರವಾಗುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಅವರ ಸರಳ ವ್ಯಕ್ತಿತ್ವ ಮತ್ತು ಜನಪರ ಕಾಳಜಿ ಎಲ್ಲರಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದರು..
ವಿಧಾನ ಪರಿಷತ್ ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಹುಟ್ಟು ಅನಿರೀಕ್ಷಿತ, ಸಾವು ಖಚಿತ. ಆದರೆ ಬದುಕಿನ ಅವಧಿಯಲ್ಲಿ ಮಾಡುವ ಉತ್ತಮ ಕಾರ್ಯಗಳು ವ್ಯಕ್ತಿಯನ್ನು ಜನಮಾನಸದಲ್ಲಿ ಶಾಶ್ವತವಾಗಿ ಉಳಿಸುತ್ತವೆ. ಆನಂತ್ ಅವರ ಉತ್ತಮ ನಡವಳಿಕೆ, ಜನರ ಮೇಲಿನ ಕಾಳಜಿ ಹಾಗೂ ಸಮಾಜದ ಬದುಕಿಗೆ ಬೆಳಕಾಗುವ ಕಾರ್ಯದಿಂದ ಅಪಾರ ಜನಸಂಪರ್ಕ ಹೊಂದಿದ್ದರು. ಅವರ ಆಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಅನಂತ್ ಅವರು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಶೀಘ್ರ ಗುಣಮುಖರಾಗಿ ಮರಳಲಿ ಎಂದು ಇಡೀ ತಾಲೂಕಿನ ಜನರು ತಮ್ಮ ಕೈಲಾದ ಆರ್ಥಿಕ ನೆರವು ನೀಡಿದ್ದರು.ಇದು ಅವರ ಮೇಲಿದ್ದ ಜನರ ಪ್ರೀತಿ ಮತ್ತು ಅಭಿಮಾನಕ್ಕೆ ಸಾಕ್ಷಿಯಾಗಿದೆ. ಇಂತಹ ಸೌಹಾರ್ದತೆ ಮತ್ತು ಮಾನವೀಯ ಸಂಬಂಧಗಳು ಮುಂದುವರಿಯಬೇಕು. ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದರು.
ಅಂತಿಮವಾಗಿ ವಿವಿಧ ಪಕ್ಷ, ಸಂಘಟನೆ ಮುಖಂಡರು ಒಂದು ತಂಡ ರಚನೆ ಮಾಡಿ, ಆ ಮೂಲಕ ಅವರ ಕುಟುಂಬಕ್ಕೆ ನೆರವಾಗುವ ಸಂಕಲ್ಪ ಮಾಡಲಾಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬಿ.ಕೆ.ಲಕ್ಷ್ಮಣ್ ಕುಮಾರ್, ಬಿ.ಎಸ್.ಜಯರಾಂ, ಹಾಲಪ್ಪಗೌಡ, ಎಚ್.ಜಿ.ಸುರೇಂದ್ರ, ಗಜೇಂದ್ರ ಕೊಟ್ಟಿಗೆಹಾರ, ಕುನ್ನಳ್ಳಿ ರವಿ, ಮಂಚೇಗೌಡ, ಎಂ.ಸಿ.ಹೂವಪ್ಪ, ಡಿ.ಕೆ.ಲಕ್ಷ್ಮಣ್ ಗೌಡ, ಬಿ.ಆರ್.ಭಾಲಕೃಷ್ಣ, ಕೆ.ಭರತ್, ಎಲ್.ಬಿ.ರಮೇಶ್, ಕೆ.ಕೆ.ರಾಮಯ್ಯ, ಅಶ್ವತ್ ಮಾಕೋನಹಳ್ಳಿ, ಹೇಮಶೇಖರ್, ಪರಮೇಶ್, ಸಾವಿತ್ರಿ, ನಿರ್ಮಲಾ ಮಂಚೇಗೌಡ, ಹಾಲಯ್ಯ, ಸುರೇಂದ್ರ ಉಗ್ಗೇಹಳ್ಳಿ, ಸುಧೀರ್ ಚಕ್ರಮಣಿ, ಮಹೇಂದ್ರ ಮೌರ್ಯ, ಧನಂಜಯ ಜೀವಾಳ, ಶಾಂತಕುಮಾರ್, ಎಂ.ಸಿ.ನಾಗೇಶ್, ಮಂಜುನಾಥ್ ಬೆಟ್ಟಗೆರೆ, ಎಚ್.ಮಂಜಪ್ಪ, ರಮೇಶ್ ಹೊಸ್ಕೆರೆ, ಲಕ್ಷ್ಮಣ್ ಹುಣಸೆಮಕ್ಕೆ, ಬಕ್ಕಿ ರವಿ ಮತ್ತಿತರರಿದ್ದರು.

