लाइव कैलेंडर

October 2026
M T W T F S S
 1234
567891011
12131415161718
19202122232425
262728293031  
06/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಾಧ್ಯವಾಗುವುದಾದರೆ, ಅವಕಾಶವಿರುವುದಾದರೆ ದೊಡ್ಡ ಕೆಲಸಗಳನ್ನು ದೊಡ್ಡದಾಗಿಯೇ ಮಾಡಿ. ಅದು ಸಾಧ್ಯವಾಗದಿದ್ದರೆ ಸಣ್ಣ ಕೆಲಸಗಳನ್ನು ದೊಡ್ಡದಾಗಿ ಮಾಡಿ… ” ಭಾರತ ರತ್ನ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಸಂತ ಮದರ್ ತೆರೆಸಾ….

1 min read

ಶ್ರಮದಾನ 6
••••••••••••••••••

” ಸಾಧ್ಯವಾಗುವುದಾದರೆ, ಅವಕಾಶವಿರುವುದಾದರೆ ದೊಡ್ಡ ಕೆಲಸಗಳನ್ನು ದೊಡ್ಡದಾಗಿಯೇ ಮಾಡಿ. ಅದು ಸಾಧ್ಯವಾಗದಿದ್ದರೆ ಸಣ್ಣ ಕೆಲಸಗಳನ್ನು ದೊಡ್ಡದಾಗಿ ಮಾಡಿ… ” ಭಾರತ ರತ್ನ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಸಂತ ಮದರ್ ತೆರೆಸಾ….

ಗೌರಿಬಿದನೂರಿನ ಬಳಿಯ ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಹೆಸರಾದ ವಿದುರಾಶ್ವಥದಲ್ಲಿ ಡಿವೈಎಫ್ಐ ಅವರ ಜಾಥಾದ ಉದ್ಘಾಟನಾ ಕಾರ್ಯಕ್ರಮ, ರಾಯಚೂರು ಜಿಲ್ಲೆ ಜಾಲಹಳ್ಳಿಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ವಿಜೇತ ಶಿಕ್ಷಕರಸನ್ಮಾನ ಕಾರ್ಯಕ್ರಮ, ಕೊಡಗು ಜಿಲ್ಲೆಯ ಕುಶಾಲನಗರದ ಸಮಾಜ ಸೇವಕರು, ಆತ್ಮೀಯ ಮಿತ್ರರು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ವಿ. ಪಿ. ಶಶಿಧರ್ ಅವರ ಸನ್ಮಾನ ಕಾರ್ಯಕ್ರಮ, ಬಿಜಾಪುರ ಜಿಲ್ಲೆ ಮುದ್ದೇಬಿಹಾಳದ ಬಿದರಕುಂದಿಯ ನಾಯ್ಕೋಡಿ ಶಿಕ್ಷಕ ಸಂಸ್ಥೆಯ ಶ್ರೀ ಅಬ್ದುಲ್ ರೆಹಮಾನ್ ಬಿದರಕುಂದಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಅಕ್ಟೋಬರ್ ಎರಡರಂದು ಆಯೋಜಿಸಿದ್ದ ನಿವೃತ್ತ ಶಿಕ್ಷಕರ ಸನ್ಮಾನ, ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಈ ರೀತಿ ನಿರಂತರ ಕಾರ್ಯಕ್ರಮಗಳ ಕಾರಣದಿಂದ ಎರಡು ವಾರಗಳಿಂದ ಶ್ರಮದಾನ ಮಾಡಲು ಸಾಧ್ಯವಾಗಿರಲಿಲ್ಲ.

ನಿನ್ನೆ ಅಂದರೆ ದಿನಾಂಕ
4.10. 2026ರ ಭಾನುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಂಡಿತಪುರ ಗ್ರಾಮದಲ್ಲಿ ಶ್ರಮದಾನ 6 ಕಾರ್ಯಕ್ರಮ ಮಾಡಲಾಯಿತು.

ದೇವನಹಳ್ಳಿಯ ಮಾಜಿ ಶಾಸಕರು, ನನ್ನ ಹಿತೈಷಿಗಳು, ಇತ್ತೀಚಿನ ಕೆಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಾನ್ಯ ಶ್ರೀ ಪಿಳ್ಳ ಮುನಿಶಾಮಪ್ಪ ಅವರ ಹುಟ್ಟೂರು ಪಂಡಿತಪುರದಲ್ಲಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ, ಊರಿನ ಸ್ವಚ್ಛತಾ ಕಾರ್ಯಕ್ರಮ ಮತ್ತು ಅವರು ಇತ್ತೀಚೆಗೆ ಪ್ರಾರಂಭಿಸಿರುವ ನೊವಾರ ಸೀನಿಯರ್ ಲಿವಿಂಗ್ ಎಂಬ ವೃದ್ಧಾಶ್ರಮದಲ್ಲಿ ಒಂದಷ್ಟು ಮಾತುಕತೆ. ಹೀಗೆ ಇಡೀ ದಿನ ಶ್ರಮಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.

ಪಂಡಿತಪುರದ ಕೆಲವು ಜನ ಹಿರಿಯರ ಸಮ್ಮುಖದಲ್ಲಿ ಕಾರ್ಯಕ್ರಮ ಪ್ರಾರಂಭವಾಯಿತು. ತಮ್ಮ ಊರಿನ ಐವತ್ತು ವರ್ಷಗಳ ಹಿಂದಿನ ಜನಜೀವನ ಬೆಳೆದು ಬಂದ ಬಗೆಯನ್ನು ಶ್ರೀ ಪಿಳ್ಳ ಮುನಿಶಾಮಪ್ಪನವರು ನೆನಪು ಮಾಡಿಕೊಂಡರು. ಅವರು ಶಾಸಕರಾಗಿದ್ದಾಗ ನಮ್ಮ ಸ್ವಂತ ಊರಿಗೆ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈಗಿನ ವ್ಯವಸ್ಥೆ ಸಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ನಂತರ ಮಾನವಿಯ ಮೌಲ್ಯಗಳ ಕುಸಿತ, ಯುವ ಜನಾಂಗದ ದಾರಿ ತಪ್ಪುವಿಕೆ, ಮುಂದೆ ಕೈಗೊಳ್ಳಬೇಕಾದ ಕ್ರಮಗಳು, ಆರೋಗ್ಯದ ಬಗ್ಗೆ ಕಾಳಜಿ, ಊರಿನ ಸ್ವಚ್ಛತೆಯ ಬಗ್ಗೆ ಒಂದಷ್ಟು ಹಿತನುಡಿಗಳನ್ನು ಹೇಳಿದೆನು. ತದನಂತರ ಪರಿಸರ ಮತ್ತು ನೀರಿನ ಬಗ್ಗೆ ಹಲವಾರು ವರ್ಷಗಳಿಂದ ಜಾಗೃತಿ ಮೂಡಿಸುತ್ತಿರುವ ಹಿರಿಯರಾದ ದೊಡ್ಡಬಳ್ಳಾಪುರದ
ಶ್ರೀ ಗುರುದೇವ್ ಅವರು ತುಂಬಾ ಮಾರ್ಮಿಕವಾಗಿ ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡಿದರು.

ತದನಂತರ ಊರಿನ ದೇವಸ್ಥಾನದ ರಸ್ತೆ, ಶಾಲಾ ಆವರಣ ಸ್ವಚ್ಛತಾ ಕಾರ್ಯಕ್ರಮವನ್ನು ಗ್ರಾಮದ ಕೆಲವು ಯುವಕರು ಮತ್ತು ಹತ್ತಿರದಲ್ಲೇ ಇದ್ದ ಕೆಲವು ಕಾರ್ಮಿಕರ ನೆರವಿನಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಎಲ್ಲರಿಗೂ ಈ ಕೆಲಸ ತೃಪ್ತಿ ನೀಡಿತು. ತಿಂಗಳಲ್ಲಿ ಒಂದು ಬಾರಿಯಾದರೂ ಊರಿನ ಜನ ತಮ್ಮ ಊರನ್ನು ಸ್ವಚ್ಛಗೊಳಿಸಿಕೊಳ್ಳುವ ಸಲಹೆ ನೀಡಲಾಯಿತು. ಹೀಗೆ ಪ್ರತಿ ಊರಿನ ಜನರು ತಮ್ಮ ವಾಸ ಸ್ಥಳಗಳನ್ನು ಪ್ರತಿ ತಿಂಗಳಿಗೊಮ್ಮೆ ಕೇವಲ ಎರಡು ಮೂರು ಗಂಟೆಗಳನ್ನು ವ್ಯಯಿಸಿ ಸ್ವಚ್ಛ ಮಾಡುವುದಾದರೆ ನಿಜಕ್ಕೂ ದೇಶದ ನೈಜ ಅಭಿವೃದ್ಧಿಯಲ್ಲಿ ಇದೂ ಒಂದು ಭಾಗವಾಗಬಹುದು.

ತದನಂತರ ಎಲ್ಲರಿಗೂ ಒಳ್ಳೆಯ ಊಟವನ್ನು ಶ್ರೀ ಪಿಳ್ಳ ಮುನಿಶಾಮಪ್ಪನವರು ಏರ್ಪಡಿಸಿದ್ದರು. ನಂತರ ಅವರೊಂದಿಗೆ ಚರ್ಚಿಸುತ್ತಾ ನಿನ್ನೆಯ ಶ್ರಮಧಾನ ಮುಗಿಸಿದೆವು.

(ನೊವಾರ ವೃದ್ಧಾಶ್ರಮದ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ಸಂಪರ್ಕಿಸಿ
ಡಾಕ್ಟರ್ ನಾಗೇಂದ್ರ
9844200010
ಶ್ರೀ ನವೀನ್
9019838317)

ಸಮಾಜ ಸೇವೆಯ ಬಗ್ಗೆ ಆಳವಾಗಿ ಯೋಚಿಸಿದಾಗ…….

ಸಮಾಜ ಸೇವೆ ಎಂದರೇನು ?

ನಿಸ್ವಾರ್ಥವೇ ?
ತ್ಯಾಗವೇ ?
ಸ್ವಾರ್ಥದ ಮುಖವಾಡವೇ ?
ವೃತ್ತಿಯೇ ?
ಹವ್ಯಾಸವೇ ?
ಕರ್ತವ್ಯವೇ ?
ವ್ಯಾಪಾರ ವ್ಯವಹಾರವೇ ?
ಅಧಿಕಾರ ಹಣ ಪ್ರಚಾರದ ಮೋಹವೇ ?
ಪಲಾಯನ ಮಾರ್ಗವೇ ?
ನಾಯಕತ್ವದ ಪ್ರದರ್ಶನವೇ ?
ಕೆಲಸವಿಲ್ಲದವರ ಅನಾವಶ್ಯಕ ಓಡಾಟವೇ ?
ಹೊಟ್ಟೆ ಪಾಡಿನ ದಾರಿಯೇ ?
ಬುದ್ದಿಯ ತೋರ್ಪಡಿಕೆಯೇ ?
ಮನಸ್ಸಿನ ಅಹಂನ ತಣಿಸುವಿಕೆಯೇ ?
ಜೀವನದ ಸಾಧನೆಯೇ ?
ಅನುಭವದ ವಿಸ್ತರಣೆಯೇ ?
ಜ್ಞಾನದ ಹಂಚಿಕೆಯೇ ?
ಅಧ್ಯಾತ್ಮಿಕ ಧಾರ್ಮಿಕ ಉದ್ದೇಶವೇ ?
ಬದುಕಿನ ಸಾರ್ಥಕತೆಯೇ ?
ನಿರ್ಭಾವುಕ ಮನಸ್ಥಿತಿಯೇ ?

ಹೀಗೆ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ. ಸಮಾಜ ಸಂಕೀರ್ಣವಾದಷ್ಟು ಸಮಾಜ ಸೇವೆ ವಿವಿಧ ಅರ್ಥಗಳನ್ನು ಪಡೆಯುತ್ತಿದೆ.

ಮದರ್ ತೆರೇಸಾ ಅವರನ್ನು ಸಮಾಜ ಸೇವೆಯ ಬಹುದೊಡ್ಡ ಆದರ್ಶ ಎಂದು ಪರಿಗಣಿಸಲಾಗುತ್ತದೆ. ಇತ್ತೀಚಿನ ಕೆಲವು ಧರ್ಮಾಧಾರಿತ ವ್ಯಕ್ತಿಗಳ ಮತಾಂತರ ಆರೋಪಗಳ ನಡುವೆಯೂ ಸಮಾಜ ಸೇವೆಗೆ ಇವರು ಒಂದು ಮಾದರಿ. ಕೊಲ್ಕತ್ತಾದ ಬೀದಿಗಳಲ್ಲಿ ಮಲಗಿದ್ದ ಅನಾಥ ಕುಷ್ಠರೋಗಿಗಳ ಸೇವೆಗೆ ಸ್ವಯಂ ಆಸಕ್ತಿಯಿಂದ ಮುಂದೆ ಬಂದು ಸೇವೆ ಸಲ್ಲಿಸುತ್ತಾ ಮುಂದೆ ಅದನ್ನೇ ಬದುಕಾಗಿ ಸ್ವೀಕರಿಸಿ ಒಂದು ಸಂಸ್ಥೆಯನ್ನೇ ಕಟ್ಟಿ ಬದುಕಿನ ಕೊನೆಯವರೆಗೂ ಅದನ್ನೇ ಮಾಡುತ್ತಾರೆ.

ಗಾಂಧಿ, ಅಂಬೇಡ್ಕರ್, ಸುಭಾಷ್, ಭಗತ್ ಸಿಂಗ್ ಮುಂತಾದ ರಾಜಕೀಯ ನಾಯಕರ ಸೇವೆ, ಬುದ್ದ, ಮಹಾವೀರ, ಗುರುನಾನಕ್, ಬಸವಣ್ಣ, ವಿವೇಕಾನಂದ ಮುಂತಾದವರ ಆಧ್ಯಾತ್ಮಿಕ, ಧಾರ್ಮಿಕ, ಚಿಂತನಾತ್ಮಕ ಸೇವೆ, ವೈದ್ಯಕೀಯವೂ ಸೇರಿದಂತೆ ವಿವಿಧ ಕ್ಷೇತ್ರಗಳ ಸೇವೆ, ದೇಹ, ರಕ್ತ, ಅನ್ನ, ಶಿಕ್ಷಣ ‌ಸೇವೆಗಳು ಹೀಗೆ ಅನೇಕ ಸಾಮಾಜಿಕ ಸೇವೆಗಳು ಗುರುತಿಸಲ್ಪಡುತ್ತದೆ.

ಸಮಾಜ ಸೇವೆಯ ಗುರಿ, ಉದ್ದೇಶ, ಮಾರ್ಗಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಇದನ್ನು ಅನೇಕ ದೃಷ್ಟಿಕೋನಗಳಿಂದ ನೋಡಲಾಗುತ್ತದೆ.

ಕಷ್ಟದಲ್ಲಿ ಇರುವವರಿಗೆ ಸಹಾಯ, ನೋವಿನಿಂದ ನರಳುತ್ತಿರುವವರಿಗೆ ಸಾಂತ್ವಾನ, ಮುಳುಗತ್ತಿರುವ ಬದುಕಿಗೆ ಆಸರೆ ಎಲ್ಲವೂ ಸೇವೆಗಳೇ,

ಇಲ್ಲಿ ಬಹುಮುಖ್ಯವಾಗಿ ಉದ್ಭವಿಸುವ ಪ್ರಶ್ನೆ ಸಮಾಜ ಸೇವೆ ಸ್ವಾರ್ಥ ರಹಿತವೇ ಅಥವಾ ಸಹಿತವೇ ?

ಮನುಷ್ಯನ ಅರಿವಿನ ಪ್ರಜ್ಞೆಯ ಜೊತೆಯೇ ಸ್ವಾರ್ಥವೂ ಸೇರಿಕೊಂಡಿರುತ್ತದೆ. ಹುಟ್ಟಿನಿಂದ ಸಾವಿನವರೆಗೆ ಆತನ ಮೆದುಳು ಆರೋಗ್ಯಪೂರ್ಣವಾಗಿ ಕೆಲಸ ಮಾಡುತ್ತಿರುವವರೆಗೆ ಸ್ವಾರ್ಥವೇ ಆತನ ಎಲ್ಲಾ ಚಿಂತನೆಗಳ ಮೂಲ. ಅದು ತನಗಾಗಿಯೋ, ಕುಟುಂಬಕ್ಕಾಗಿಯೋ, ಸಮಾಜಕ್ಕಾಗಿಯೋ, ಸೃಷ್ಟಿಗಾಗಿಯೋ ಏನೇ ಇರಲಿ ತನ್ನ ಮನವನ್ನು ತಣಿಸಲು ತನ್ನ ಇಚ್ಛೆಯಂತೆ ಕಾರ್ಯನಿರ್ವಹಿಸುವನು. ಅದು ಸ್ವಾರ್ಥದ ಪರಿಧಿಯೊಳಗೆ ಸೇರುತ್ತದೆ. ಅದರ ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು ಮತ್ತು ಮುಂದೆ ಇದು ದುರಾಸೆಯಾಗಿ ಪರಿವರ್ತನೆ ಹೊಂದಿ ಕೇವಲ ತನಗಾಗಿ ಮಾತ್ರ ಎಂಬ ಸ್ವಾರ್ಥದ ತುತ್ತತುದಿ ತಲುಪಬಹುದು.

ಇದರಿಂದಾಗಿ ಸ್ಪಷ್ಟವಾಗುವ ವಿಷಯವೆಂದರೆ ಸ್ವಾರ್ಥ ರಹಿತವಾಗಿ ಯಾವುದೇ ಸೇವೆ ಇರುವುದಿಲ್ಲ. ಏನಾದರೂ ಒಂದು ಅಪೇಕ್ಷೆ, ಉದ್ದೇಶ ಇದ್ದೇ ಇರುತ್ತದೆ. ಬದುಕು, ದೇಹ, ಮನಸ್ಸುಗಳ ಮೇಲೆ ಸಾಕಷ್ಟು ನಿಯಂತ್ರಣ ಸಾಧಿಸಿ ಆಸೆಯೇ ದುಃಖಕ್ಕೆ ಮೂಲ ಎಂಬ ಅದ್ಬುತ ಸಂದೇಶ ನೀಡಿದ ಬುದ್ದನ ಚಿಂತನೆಯಲ್ಲಿಯೂ ಅದನ್ನು ಸ್ವತಃ ಅರ್ಥಮಾಡಿಕೊಳ್ಳುವ ಅಥವಾ ಸಮಾಜಕ್ಕೆ ತಲುಪಿಸುವಲ್ಲಿಯೂ ಸ್ವಾರ್ಥದ ಲಕ್ಷಣಗಳನ್ನು ಗುರುತಿಸಬಹುದು.

ಹಾಗಾದರೆ ಸಮಾಜ ಸೇವೆಗೆ ಅರ್ಥವಿಲ್ಲವೇ ? ಎಲ್ಲಾ ವೃತ್ತಿ ಉದ್ಯೋಗ ಅಥವಾ ಬದುಕಲು ಏನಾದರೂ ಒಂದು ಮಾಡುವ ಕ್ರಿಯೆಯಲ್ಲಿ ಸಮಾಜ ಸೇವೆಯೂ ಒಂದು ಎಂದು ಪರಿಗಣಿಸಬಹುದೆ ? ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಮದರ್‌ ತೆರೇಸಾ ಮುಂತಾದವರ ಸೇವೆಯೂ, ಉದ್ಯಮಿಗಳು ಕಲಾವಿದರ ಸೇವೆಯೂ, ಧಾರ್ಮಿಕ, ರಾಜಕೀಯ ವ್ಯಕ್ತಿಗಳ ಸೇವೆಯೂ, ಕುಟುಂಬಕ್ಕಾಗಿ ದುಡಿಯುವ ವ್ಯಕ್ತಿಗಳ ಸೇವೆಯೂ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗಬೇಕೆ ? ಅಥವಾ ಚರ್ಚೆ ಸಮರ್ಥನೆಗಾಗಿ ಇದಕ್ಕೆ ಬೇರೆ ಬೇರೆ ಆಯಾಮ ನೀಡಿ ಸಮಾಧಾನ ಮಾಡಿಕೊಳ್ಳುವುದೇ ?
ಸಮಾಜ ಸೇವೇಗೆ ಯಾವುದೇ ಅರ್ಥವಿಲ್ಲವೇ ?

ಬಸವಣ್ಣ, ಗಾಂಧಿ, ಅಂಬೇಡ್ಕರ್, ಆಜಾದ್ ಮುಂತಾದವರಿಗೆ ತಲೆ ಕೆಟ್ಟಿತ್ತೇ ? ಇವರುಗಳು ಸಮಾಜಕ್ಕಾಗಿ ಹಗಲಿರುಳು ಶ್ರಮಿಸಿದರೇ ಅಥವಾ ತಮ್ಮ ಮನಸ್ಸಿನ ಅಹಂ ತಣಿಸಲು ಅಥವಾ ತಾವು ನಾಯಕರಾಗಲು ಅಥವಾ ತಮ್ಮ ಬುದ್ದಿಯ ಪ್ರದರ್ಶನ ಮಾಡಲು ಅಥವಾ ಸಮಾಜದ ಮೇಲೆ ತಾವು ನಿಯಂತ್ರಣ ಹೊಂದಲು ಅಥವಾ ತಮ್ಮ ಬದುಕು ಸಾರ್ಥಕ ಪಡಿಸಿಕೊಳ್ಳಲು ಸಮಾಜದ ಸೇವೆಯನ್ನು ನೆಪವಾಗಿ ಬಳಸಿಕೊಂಡರೆ ?

ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಸಾಮಾನ್ಯವಾಗಿ ಸದಾ ಹೇಳುವುದು ನಾವು ಮಾಡುವ ಕೆಲಸ ನಮಗಾಗಿ ಅಲ್ಲ ನಿಮಗಾಗಿ, ವೈಯಕ್ತಿಕ ಹಿತಾಸಕ್ತಿಗಿಂತ ಸಮಾಜದ ಒಳಿತೇ ನಮಗೆ ಮುಖ್ಯ ಎಂದು. ಅದಕ್ಕಾಗಿ ನಾವು ನಮ್ಮ ಅನೇಕ ಸುಖ ಸಂತೋಷಗಳನ್ನು ತ್ಯಾಗ ಮಾಡಿದ್ದೇವೆ ಎಂದು. ಇದನ್ನು ಹೇಗೆ ಅರ್ಥೈಸುವುದು ? ಸ್ವಯಂ ಪ್ರೇರಣೆಯಿಂದ ಸೇವೆಗೆ ಬಂದು ಈಗ ನನಗೆ ಯಾವುದೇ ಸ್ವಾರ್ಥವಿಲ್ಲ ಎಂಬುದು ಆತ್ಮವಂಚನೆಯಲ್ಲವೇ ?

ಹಣ, ಅಧಿಕಾರ, ಪ್ರಚಾರ ಮುಂತಾದ ಲಾಭಕ್ಕಾಗಿ ಮಾಡುವ ಸೇವೆ ಮತ್ತು ಇವುಗಳನ್ನು ಪಡೆಯುವ ಸಾಧ್ಯತೆ ಇದ್ದರೂ ಅದನ್ನು ತಿರಸ್ಕರಿಸಿ ತನ್ನ ಮನಸ್ಸಿನ ಇಚ್ಚೆಯಂತೆ ತನ್ನಿಂದ ಇತರರಿಗೆ ಏನಾದರೂ ಪ್ರಯೋಜನವಾಗಲಿ ಎಂದು ಮಾಡುವ ಸೇವೆಗಳಲ್ಲಿ ಇರುವ ವ್ಯತ್ಯಾಸವನ್ನು ಗಮನಿಸಿ ಇದನ್ನು ನಿರ್ಧರಿಸಬೇಕೆ ? ಹಾಗಾದರೆ ಇದಕ್ಕೆ ಇರುವ ಮಾನದಂಡಗಳೇನು ? ಅದನ್ನು ರೂಪಿಸುವುದು ಯಾವ ನಿಯಮಗಳ ಅಡಿಯಲ್ಲಿ ? ಸೃಷ್ಟಿಯ ಮೂಲದಿಂದಲೋ, ಮಾನವೀಯ ಮೌಲ್ಯಗಳಿಂದಲೋ, ನಾಗರಿಕತೆಯ ನೈತಿಕತೆಯಿಂದಲೋ, ಕಾನೂನಿನ ಆಧಾರದಿಂದಲೋ ? ಅನುಭವದ ಮೂಸೆಯಿಂದಲೋ ?

ಸೇವೆಯ ಪಾವಿತ್ರ್ಯತೆಗೂ, ಹೊಟ್ಟೆ ಪಾಡಿನ ಮೋಹಕ್ಕೂ ನಡುವಿನ ಅಂತರ ಗುರುತಿಸುವುದು ಸಾಧ್ಯವಿಲ್ಲವೇ ?
ಭ್ರಷ್ಟನೊಬ್ಬ ರಾಬಿನ್ ಹುಡ್ ಮಾದರಿಯಲ್ಲಿ ಉಳ್ಳವರಿಂದ ದೋಚಿ ಅಥವಾ ಆ ರೀತಿ ಭಾವಿಸಿ ಅದನ್ನು ಇತರರಿಗೆ ಕೊಡುವ ಉದಾಹರಣೆಯೂ, ಸಿದ್ದಗಂಗಾ ಶ್ರೀಗಳು ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಅನ್ನ ದಾಸೋಹ ಮಾಡಿದ ಉದಾಹರಣೆಯೂ, ಸಾಲು ಮರದ ತಿಮ್ಮಕ್ಕನವರ ಸೇವೆಯೂ, ಇನ್ಫೋಸಿಸ್ ಸುಧಾಮೂರ್ತಿ, ವಿಪ್ರೋ ಅಜೀಂ ಪ್ರೇಮ್ ಜಿ ತರಹದ ಕಾರ್ಪೊರೇಟ್ ಜನರ ಸೇವೆಯೂ, ರಾಜಕಾರಣಿಗಳು ಜನರಿಗೆ ಮಾಡುವ ಸೇವೆಯೂ, ದಿಕ್ಕಿಲ್ಲದ ಹೆಣವನ್ನು ಸ್ವತಃ ತಾನೇ ಹೊತ್ತು ಶವ ಸಂಸ್ಕಾರ ಮಾಡುವ ಸೇವೆಯೂ, ಹಸಿದವರಿಗೆ ಅನ್ನ ನೀಡುವ ಸೇವೆಯೂ ಹೀಗೆ ಒಂದು ಸಿದ್ದ ನೀತಿ ನಿಯಮಗಳಿಗೆ ಈ ಸಮಾಜ ಸೇವೆ ನಿಲುಕುತ್ತಿಲ್ಲ.

ಈ ರೀತಿಯ ಜಿಜ್ಞಾಸೆಗೆ ಇನ್ನೂ ಅಂತಿಮ ಉತ್ತರ ಸಿಗುತ್ತಿಲ್ಲ. ಕಾಯಕವೇ ಕೈಲಾಸ ಎಂಬುದೇ ಸದ್ಯದ ವಾಸ್ತವ ಎಂಬ ಭರವಸೆಯೊಂದಿಗೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

About Author

Leave a Reply

Your email address will not be published. Required fields are marked *

You may have missed