ಗೌರಿ ಗಣೇಶ ಹಬ್ಬದ ಪ್ರಯುಕ್ತ ಶ್ರೀ ಫಲಾಹಾರಸ್ವಾಮಿ ಮಠದ ವತಿಯಿಂದ ಹಿತಾರ್ ಆಚರಣೆ: ಆಶೀರ್ವಾದದ ಜೋಡಿ ತೆಂಗಿನಕಾಯಿಗಳನ್ನು ಶ್ರದ್ಧಾ ಭಕ್ತಿಯಿಂದ ಸ್ವೀಕರಿಸಿದ ಶ್ರೀ ಮಠದ ಭಕ್ತರು….
1 min read
ಅವಿನ್ ಟಿವಿ ಸುದ್ದಿಜಾಲ ✍️: ಗೌರಿ ಗಣೇಶ ಹಬ್ಬದ ಪ್ರಯುಕ್ತ ಶ್ರೀ ಫಲಾಹಾರಸ್ವಾಮಿ ಮಠದ ವತಿಯಿಂದ ಹಿತಾರ್ ಆಚರಣೆ: ಆಶೀರ್ವಾದದ ಜೋಡಿ ತೆಂಗಿನಕಾಯಿಗಳನ್ನು ಶ್ರದ್ಧಾ ಭಕ್ತಿಯಿಂದ ಸ್ವೀಕರಿಸಿದ ಶ್ರೀ ಮಠದ ಭಕ್ತರು.


ಚಿಕ್ಕಮಗಳೂರು ಸೆ 13: ಭಾರತೀಯರ ಆಲೋಚನೆ, ಸಂಪ್ರದಾಯ,ಸಂಸ್ಕೃತಿ,ಮತ್ತು ಆಚರಣಾ ಪದ್ಧತಿಯನ್ನು ಸರಿಯಾಗಿ ಗ್ರಹಿಸಿ ಅರಿತರೆ ಆ ಎಲ್ಲಾ ಆಚರಣೆಗಳಲ್ಲಿ ಒಂದು ತತ್ವಜ್ಞಾನವಿರುತ್ತದೆ, ಈ ಕಾರಣಕ್ಕಾಗಿ ಸಂಸ್ಕೃತಿ ಸಂಪ್ರದಾಯ ಆಚರಣೆಗಳು ಈ ನೆಲದ ಕಣ್ಣುಗಳಿದ್ದಂತೆ ಎಂದು ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿರುವ ಫಲಾಹಾರಸ್ವಾಮಿ ಮಠದ ಶ್ರೀ ಮುರುಗೇಂದ್ರ ಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಸಮೀಪವಿರುವ ಬಿಂಡಿಗಾ ಶ್ರೀ ದೇವಿರಮ್ಮ ದೇವಾಲಯದಲ್ಲಿ ಇಂದು ಹಿತಾರ್ ಹೆಸರಿನಲ್ಲಿ ನಡೆದ ಆಶೀರ್ವಾದದ ಜೋಡಿ ತೆಂಗಿನಕಾಯಿ ವಿತರಣಾ ಸಮಾರಂಭದಲ್ಲಿ ಸಭೆಯ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು, ನಾಳೆ ನಾಡಿನ ತುಂಬೆಲ್ಲಾ ನಡೆಯುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಶ್ರೀಮಠದ ಸಂಪ್ರದಾಯದಂತೆ ತಲೆತಲಾಂತರದಿಂದ ಪ್ರತಿ ವರ್ಷವೂ ಹಿತಾರ್ ಹೆಸರಿನಲ್ಲಿ ಆಚರಿಸಿಕೊಂಡು ಬರುತ್ತಿರುವ ಜೋಡಿ ತೆಂಗಿನಕಾಯಿ ಮತ್ತು ಪ್ರಸಾದವನ್ನು ನೀಡಿ ಹಬ್ಬದ ಆಚರಣೆ ಮತ್ತು ಸಂಪ್ರದಾಯದ ಮಹತ್ವವನ್ನು ತಿಳಿಸಿದರು.
ಬದಲಾಗುತ್ತಿರುವ ಆಧುನಿಕ ಕಾಲಘಟ್ಟದ ವರ್ತಮಾನದ ಈ ದಿನಮಾನಗಳಲ್ಲಿ ಆಚರಣೆ ಮತ್ತು ಸಂಪ್ರದಾಯದ ಪದ್ಧತಿಯೊಳಗಿರುವ ಇಡೀ ಸಮಷ್ಟಿಯ ಹಿತ ಮತ್ತು ವೈಚಾರಿಕ ಪ್ರಜ್ಞೆಯನ್ನು ಸರಿಯಾಗಿ ಅರಿಯಬೇಕಾಗಿದೆ, ಜಾತಿ ಮತ ಪಂಥದ ಅಸಮಾನತೆಯನ್ನು ತೊರೆದು ಒಂದು ಒಳಿತನ್ನು ಜತನದಿಂದ ಕಾಪಾಡಿಕೊಂಡು ಭವಿಷ್ಯದ ಜನಾಂಗಕ್ಕೆ ವರ್ಗಾಯಿಸುವ ದೃಷ್ಟಿಯಿಂದ ಧರ್ಮ ಸುಧಾರಣಾ ಚಳುವಳಿಗಳು ಮತ್ತೊಮ್ಮೆ ಈ ನೆಲದಲ್ಲಿ ಜೀವ ತಳಿಯಬೇಕಾಗಿದೆ, ನಾಡಿನ ಜನರ ನಡಿಗೆಯು ನಿಖರ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಸಾಗಬೇಕಾದರೆ ಮಠಗಳು ಮಾನವೀಯತೆ ಮತ್ತು ಮನುಷ್ಯತ್ವವನ್ನಷ್ಟೇ ಎತ್ತಿ ಹಿಡಿದು ಯೋಚನೆ ಮತ್ತು ಆಲೋಚನೆಗಳನ್ನು ಬೆಳೆಸುವಂತೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ಮಠಗಳ ಮೇಲಿದೆ ಎಂದು ಶ್ರೀಗಳು ಅಭಿಪ್ರಾಯ ಪಟ್ಟರು.
ಬಿಂಡುಗಾ ಮಲ್ಲೇನಹಳ್ಳಿ , ಅರಿಶಿಣಗುಪ್ಪೆ, ಹಲಸುಬಾಳು, ಹೆಬ್ಬಳ್ಳಿ, ಚಿನ್ನಿಮಕ್ಕಿ ಸೇರಿದಂತೆ ಸುತ್ತಮುತ್ತಲಿನ ಅನೇಕ ಊರುಗಳ ಶ್ರೀಮಠದ ಭಕ್ತರು ಸರದಿ ಸಾಲಿನಲ್ಲಿ ನಿಂತು ಶ್ರದ್ಧಾ ಭಕ್ತಿಯಿಂದ ಆಶೀರ್ವಾದದ ಜೋಡಿ ತೆಂಗಿನಕಾಯಿಗಳನ್ನು ಪಡೆದು ಪ್ರಸಾದ ಸ್ವೀಕರಿಸಿದರು.
ಸ್ವೀಕರಿಸಿದ ಜೋಡಿ ತೆಂಗಿನಕಾಯಿಯಲ್ಲಿ ಒಂದನ್ನು ಹಿತಾರ್ ಹೆಸರಿನಲ್ಲಿ ಅಂದರೆ ಮನೆಯ ಪೂರ್ವಿಕರಿಗೆ ಒಡೆದು ನೈವೇದ್ಯದೊಂದಿಗೆ ಪೂಜಿಸುತ್ತಾರೆ, ಮತ್ತೊಂದು ತೆಂಗಿನಕಾಯಿಯನ್ನು ಶ್ರೀ ಮಂಗಳ ಗೌರಿಯ ರೂಪದಲ್ಲಿ ಕಳಸದ ಮೇಲೆ ಪ್ರತಿಷ್ಠಾಪಿಸಿ ಹಬ್ಬವನ್ನು ಆಚರಿಸುವ ಪದ್ಧತಿ ಈ ಸಂಪ್ರದಾಯದಲ್ಲಿದೆ.
ಈ ಸಂದರ್ಭದಲ್ಲಿ ಹೆಬ್ಬಳ್ಳಿ ನಾಗೇಶ್ ಗೌಡ, ಗಿರೀಶ್, ಗಣೇಶ್, ಎಚ್ ಡಿ ಮೂರ್ತಿ, ಕಲ್ಲೇಶ್ ಚಿನ್ನಮಕ್ಕಿ, ಕುಮಾರ್, ಸಿದ್ದಪ್ಪ ಶೆಟ್ಟಿ, ಎಂ ಡಿ ಲೋಹಿತ್, ಅಶೋಕ್ ಗೌಡ, ಅಣ್ಣಪ್ಪ ಶೆಟ್ಟಿ, ಮಹೇಶ್ ಗೌಡ, ಪ್ರಸನ್ನ ಕುಮಾರ್, ಉಮೇಶ್, ಯದು ಕುಮಾರ್
ಮುಂತಾದವರು ಉಪಸ್ಥಿತರಿದ್ದರು.
•••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ.
ಚಿಕ್ಕಮಗಳೂರು

