लाइव कैलेंडर

September 2026
M T W T F S S
 123456
78910111213
14151617181920
21222324252627
282930  
15/09/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಕೃಷ್ಣ ಬೈರೇಗೌಡರ
ಆ ಮುಖ – ಈ ಮುಖ…..

ಕರ್ನಾಟಕ ಸರ್ಕಾರದ, ಕಳೆದ ಮೂರುವರೆ ವರ್ಷಗಳ ಸಚಿವ ಸಂಪುಟದ ಕಾರ್ಯವೈಖರಿಯ ಬಗ್ಗೆ ಮಾತನಾಡುವಾಗ, ವಿಮರ್ಶಿಸುವಾಗ ಅತಿಹೆಚ್ಚು ಪ್ರಾಮುಖ್ಯತೆ ಪಡೆದು ಚರ್ಚೆಗೆ ಒಳಪಟ್ಟ ಮುಖವೆಂದರೆ ಅದು ಶ್ರೀ ಕೃಷ್ಣ ಭೈರೇಗೌಡರದು. ನಿಜಕ್ಕೂ ವಿಮರ್ಶಕರಿಗೆ ಒಂದು ಸವಾಲನ್ನು ಎಸೆಯುವ ಕಾರ್ಯವೈಖರಿ ಶ್ರೀ ಕೃಷ್ಣ ಬೈರೇಗೌಡರದು.

ಶ್ರೀ ಕೃಷ್ಣ ಬೈರೇಗೌಡರು ರಾಜಕೀಯ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದು ಬಂದವರು. ಅವರ ತಂದೆ ದಿವಂಗತ ಶ್ರೀ ಸಿ. ಬೈರೇಗೌಡರು ಸಹ ಮಂತ್ರಿಯಾಗಿದ್ದವರು. ಅವರು ಆಗಿನ ಕಾಲಕ್ಕೆ ಮೊಯ್ಲಿ ಟೇಪ್ ಹಗರಣ ಎಂದು ಹೆಸರುವಾಸಿಯಾಗಿದ್ದ ಆಗಿನ ಮುಖ್ಯಮಂತ್ರಿ ಶ್ರೀ ವೀರಪ್ಪ ಮೊಯ್ಲಿ ಅವರು ಪಕ್ಷಾಂತರಕ್ಕಾಗಿ ಹಣದ ಅಮಿಷವೊಡ್ಡಿದ ದೂರವಾಣಿ ಸಂಭಾಷಣೆಯನ್ನು ಧ್ವನಿಮುದ್ರಿತ ಮಾಡಿ ಬಹಿರಂಗಗೊಳಿಸಿದ ವ್ಯಕ್ತಿಯಾಗಿದ್ದರು. ಆ ಕಾಲಕ್ಕೆ ಅದೊಂದು ದೊಡ್ಡ ಘಟನೆ. ಮುಂದೆ ಸಾಕ್ಷಿಯ ಕೊರತೆ ಕಾರಣದಿಂದ ಪ್ರಕರಣ ಬಿದ್ದುಹೋಯಿತು. ಶ್ರೀ ಬೈರೇಗೌಡರು ಅಧಿಕಾರಿಗಳ ವಿರುದ್ಧ ಈಗಿನ ಕೃಷ್ಣಭೈರೇಗೌಡ ರೀತಿಯಲ್ಲಿಯೇ ಘರ್ಜಿಸುತ್ತಿದ್ದರು. ಬಹುಶಃ ಅದರ ಮುಂದುವರಿದ ಭಾಗದಂತೆ ಈ ಕೃಷ್ಣ ಬೈರೇಗೌಡರು ವರ್ತಿಸುತ್ತಿದ್ದಾರೆ.

ಕೃಷ್ಣ ಬೈರೇಗೌಡರು ವಿದೇಶದಲ್ಲಿ ಓದಿ ಈಗಿನ ಭಾರತದ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿಯವರ ಸ್ನೇಹ ಸಂಪಾದಿಸಿ ಆ ವರ್ಚಸ್ಸಿನಿಂದ ನಿರಂತರವಾಗಿ ಕಾಂಗ್ರೆಸ್ ಪಕ್ಷದ ಟಿಕೆಟ್ ಮತ್ತು ಮಂತ್ರಿಯಾಗಿ ಸದಾ ಅಧಿಕಾರದಲ್ಲಿದ್ದಾರೆ. ಇದರ ಜೊತೆಗೆ ಅವರ ಸರಳತೆ, ದಕ್ಷತೆ, ಸ್ವಲ್ಪಮಟ್ಟಿನ ಪ್ರಾಮಾಣಿಕತೆ, ಕ್ಷಮತೆ ಮತ್ತು ಜನರ ಒಡನಾಟದಿಂದ ಒಮ್ಮೆಯೂ ಸೋಲನ್ನು ಕಾಣದೆ ನಿರಂತರವಾಗಿ ಆಯ್ಕೆಯಾಗುತ್ತಲೇ ಬರುತ್ತಿದ್ದಾರೆ. ಒಂದು ರೀತಿ ಪ್ರಜಾಪ್ರಭುತ್ವದ ಯಶಸ್ವಿ ಕಾರ್ಯಚರಣೆಯಲ್ಲಿ ಇಂತಹ ವ್ಯಕ್ತಿಗಳು ಮಂತ್ರಿಗಳಾಗುವುದು ಇಂದಿನ ಕಾಲದಲ್ಲಿ ಅವಶ್ಯಕತೆ ಎನಿಸುತ್ತದೆ. ಆ ವಿಷಯದಲ್ಲಿ ಅವರು ಅಭಿನಂದನಾರ್ಹರು. ಕೆಲವು ವಿಷಯಗಳಲ್ಲಿ ಅವರ ವಿಡಿಯೋ ತುಣುಕುಗಳು ನಿಜಕ್ಕೂ ಅತ್ಯುತ್ತಮ ಚಿಂತನೆಯಿಂದ ಕೂಡಿದೆ. ಅದು ಅವರ ದೂರದೃಷ್ಟಿಯ ನಾಯಕತ್ವವನ್ನು ತೋರಿಸುತ್ತದೆ. ಮಾಧ್ಯಮಗಳ ಪ್ರಚಾರದಿಂದ ಸ್ವಲ್ಪ ದೂರವೇ ಇದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದ್ದಾರೆ. ಅವರು ಕಂದಾಯ ಸಚಿವರಾಗಿದ್ದಾಗ ಮಾಡಿದ ಕೆಲವು ಪಾರದರ್ಶಕ ಬದಲಾವಣೆಗಳು, ಕಾರ್ಯಚರಣೆಗಳು ಜನರ ಪ್ರಶಂಸೆಗೆ ಪಾತ್ರವಾದವು. ಅವರ ಕ್ಷೇತ್ರದ ಜನರೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿದ್ದಾರೆ, ನಂಬಿಕೆ ಉಳಿಸಿಕೊಂಡಿದ್ದಾರೆ.

ಈಗಿನ ಹೊಸ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರಾದ ನಂತರ ಅವರ ಕಾರ್ಯವೈಖರಿಯನ್ನು ವಿದ್ಯಾವಂತ ವರ್ಗ, ಶ್ರೀಮಂತ ವರ್ಗ, ಮಧ್ಯಮವರ್ಗ, ಶಿಷ್ಟಾಚಾರ ಬಯಸುವ ವರ್ಗ, ಕಾರ್ಪೊರೇಟ್ ವರ್ಗ, ಸ್ವಲ್ಪ ಮುಖವಾಡದ ವರ್ಗ ಅವರನ್ನು ಹಾಡಿ ಹೊಗಳುತ್ತಿದ್ದರೆ, ಕೆಲವು ಎಡಪಂಥೀಯ ಚಿಂತನೆಯವರು, ಒಂದಷ್ಟು ಮಾನವಿಯ ಕಾಳಜಿಯುಳ್ಳವರು ಅವರ ಕಾರ್ಯವೈಖರಿಯನ್ನು ಬಲವಾಗಿ ಟೀಕಿಸುತ್ತಲೂ ಇದ್ದಾರೆ. ಸತ್ಯ ಎರಡರಲ್ಲೂ ಇದೆ ಮತ್ತು ಎರಡರ ನಡುವೆಯೂ ಇದೆ. ಹಾಗೆಯೇ ವಾಸ್ತವ ಗೊಂದಲಮಯವಾಗಿಯೂ ಇದೆ.

ಭಾರತದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪಾದಚಾರಿ ಮಾರ್ಗವನ್ನು ಅವರು ತೆರವುಗೊಳಿಸಿದ ರೀತಿಗೆ ಒಂದು ಕಡೆ ಪ್ರಶಂಸೆ ವ್ಯಕ್ತಪಡಿಸಬೇಕು ನಿಜ, ಹಾಗೆಯೇ ಅನೇಕ ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಅನೇಕ ಚಿಕ್ಕಪುಟ್ಟ ಬೀದಿ ವ್ಯಾಪಾರಿಗಳು ಬೀದಿ ಪಾಲಾಗಿದ್ದನ್ನು ಸಹ ಮಾನವೀಯ ದೃಷ್ಟಿಯಿಂದ ನೋಡಲೇಬೇಕಾಗುತ್ತದೆ ಮತ್ತು ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಬೇಕಾಗುತ್ತದೆ. ಅವರಿಗೆ ಪುನರ್ವಸತಿ ಕಲ್ಪಿಸಿ ಪಾದಚಾರಿ ಮಾರ್ಗ ತೆರವುಗೊಳಿಸಿದ್ದಾರೆ ಉತ್ತಮವಿತ್ತು. ಏಕೆಂದರೆ ಅವರೂ ನಮ್ಮವರೇ. ಅವರು ತಪ್ಪು ಮಾಡಿದ್ದಾರೆ. ಆದರೆ ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡುವ ಒಂದಷ್ಟು ಮಾನವೀಯ ದೃಷ್ಟಿಕೋನ ಸರ್ಕಾರಕ್ಕೂ ಮತ್ತು ಸ್ವಚ್ಛ ಬೆಂಗಳೂರು ಬಯಸುವವರೆಗೂ, ಸುಂದರ ಬೆಂಗಳೂರಿನ ಅಪೇಕ್ಷೆ ವ್ಯಕ್ತಪಡಿಸುವವರಿಗೂ ಇರಬೇಕಾಗುತ್ತದೆ.

ಎರಡನೆಯದಾಗಿ,
ಕೃಷ್ಣ ಬೈರೇಗೌಡರು ಅನೇಕ ಸರ್ಕಾರಿ ಅಧಿಕಾರಿಗಳನ್ನು ಮಾಧ್ಯಮಗಳ ಮುಂದೆ ಟೀಕಿಸುತ್ತಾರೆ. ಆ ಭರದಲ್ಲಿ ಅವರು ಪೌರಕಾರ್ಮಿಕರನ್ನು ಸಹ ಅದೇ ದಾಟಿಯಲ್ಲಿಯೇ ಟೀಕಿಸಿರುವುದು, ಒಂದಷ್ಟು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಬಗ್ಗೆ ಚಿಂತಿಸುವ ಮನಸ್ಸುಗಳ ಕರುಳು ಚುರುಕ್ ಎಂದಿದ್ದು ಸಹ ಸುಳ್ಳಲ್ಲ. ಹಾಗೆಂದ ಮಾತ್ರಕ್ಕೆ ಪೌರಕಾರ್ಮಿಕರು ಎಲ್ಲರೂ ಒಳ್ಳೆಯವರೇ, ಎಲ್ಲರೂ ದಕ್ಷರೇ, ತುಂಬಾ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಅಂತೇನೂ ಇಲ್ಲ. ಅವರ ಮೇಲೆಯೂ, ಅವರ ಕಾರ್ಯವೈಖರಿ ಮತ್ತು ಸಾರ್ವಜನಿಕ ನಡತೆಯ ಮೇಲೆಯೂ ದೂರು ಇದ್ದೇ ಇದೆ. ಆದರೆ ನಾವು ಒಂದು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು, ಸಮಾಜದ ಕೊಳಕನ್ನು ಸ್ವಚ್ಛಗೊಳಿಸುವ ಕೆಲಸ ಮಾಡಲು ವಿದ್ಯಾವಂತರು, ಶ್ರೀಮಂತರು, ಮಧ್ಯಮ ವರ್ಗದವರು ಯಾರೂ ಅಪೇಕ್ಷಿಸಿ ಬರುವುದಿಲ್ಲ. ಬಹುತೇಕ ಹೊಟ್ಟೆಪಾಡಿಗಾಗಿ ವಿಧಿಯಿಲ್ಲದೇ ಒಂದು ಉದ್ಯೋಗ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಪೌರಕಾರ್ಮಿಕರಾಗಲು ಒಪ್ಪಿಕೊಳ್ಳುತ್ತಾರೆ. ಅವರಲ್ಲಿ ಸಾಕಷ್ಟು ಮಂದಿಗೆ ಕುಡಿತದ ಅಭ್ಯಾಸವು ಇರುತ್ತದೆ. ಬದುಕಿನ ಬಗ್ಗೆ ನಿರಾಸೆಯೂ ಇರುತ್ತದೆ. ಅಜ್ಞಾನ ಮೌಢ್ಯಗಳು ಇರುತ್ತವೆ.

ಇತ್ತೀಚೆಗೆ ಅವರ ಸಂಬಳ, ಸೌಲತ್ತಿನಲ್ಲಿ ಒಂದಷ್ಟು ಸುಧಾರಣೆಯಾಗಿದ್ದರು ಅದೇನು ಮಹಾ ದೊಡ್ಡದೇನಲ್ಲ. ಏಕೆಂದರೆ ಮೂಗು ಮುಚ್ಚಿಕೊಂಡು, ಬಾಯಿ ತೆರೆದುಕೊಂಡು ನಮ್ಮೆಲ್ಲ ಗಲೀಜನ್ನು ಸ್ವಚ್ಛ ಮಾಡಲು ತುಂಬಾ ತಾಳ್ಮೆ ಮತ್ತು ಮಾನಸಿಕ ದೃಢತೆ ಬೇಕು. ಅವರು ಒಂದಷ್ಟು ಒತ್ತಡಕ್ಕೆ ಒಳಗಾಗುವುದು ಸಹಜ ಮತ್ತು ಆ ರೀತಿಯ ಕಾರ್ಮಿಕ ವರ್ಗ ತುಂಬಾ ಶಿಸ್ತಾಗಿ ತಮ್ಮ ಕೆಲಸ ನಿರ್ವಹಿಸಲು ಕಷ್ಟವಾಗುತ್ತದೆ. ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿ, ಅವರ ಸ್ನೇಹ ಸಂಪರ್ಕಗಳು, ಕೌಟುಂಬಿಕ ಪರಿಸ್ಥಿತಿಯನ್ನು ವಿದೇಶದಲ್ಲಿ ಓದಿದ, ಹುಟ್ಟಿದಂದಿನಿಂದಲೇ ಮಂತ್ರಿಯ ಮಗನಾಗಿರುವ, ಪ್ರೌಢಾವಸ್ಥೆಯಿಂದಲೇ ಶಾಸಕರು ಮತ್ತು ಮಂತ್ರಿಗಳಾಗಿರುವ, ತಮ್ಮ ವಿವಾಹ ಸಂಬಂಧವನ್ನು ಒಂದು ಪ್ರತಿಷ್ಠಿತ ಕುಟುಂಬದೊಂದಿಗೆ ಬೆಳೆಸಿರುವ ಕೃಷ್ಣಭೈರೇಗೌಡರು ಅರ್ಥ ಮಾಡಿಕೊಳ್ಳಬೇಕು. ದಿಢೀರನೆ ಪೌರಕಾರ್ಮಿಕರ ವರ್ತನೆಯನ್ನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅಧಿಕಾರಿಗಳಾದವರ ಮಟ್ಟದಲ್ಲಿ ನಿರೀಕ್ಷಿಸುವುದು ತಪ್ಪು.

ನೋಡಿ ಇತ್ತೀಚಿನ ಕೆಪಿಎಸ್ಸಿ, ಪೊಲೀಸ್ ನೇಮಕಾತಿ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾರ್ಯಾಂಗದ ಅತ್ಯಂತ ದೊಡ್ಡ ಅಧಿಕಾರಿಗಳೇ ಶಾಮೀಲಾಗಿದ್ದಾರೆ. ಭಾರತದ ಚುನಾವಣಾ ವ್ಯವಸ್ಥೆಯೇ ಭ್ರಷ್ಟ ಗೊಂಡಿದೆ. ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರ ಗಳ, ಜನಪ್ರತಿನಿಧಿಗಳ ಕ್ಷೇತ್ರದಲ್ಲೇ ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತದೆ.

ನಮ್ಮ ಹೋರಾಟ ಹೊಡೆದರೆ ಆನೆಯನ್ನೇ ಹೊಡೆಯುವಂತಿರಬೇಕು. ಮತ್ತೆ ಹೇಳುತ್ತೇನೆ ಹಾಗೆಂದು ಪೌರಕಾರ್ಮಿಕರನ್ನು ಅವರ ಇಚ್ಛೆಗೆ ತಕ್ಕಂತೆ ಸೋಮಾರಿಗಳಾಗಲು, ಕರ್ತವ್ಯದಲ್ಲಿ ವಿಫಲರಾಗಲು ಪ್ರೋತ್ಸಾಹ ನೀಡಬಾರದು. ಆದರೆ ಅವರ ಬಗ್ಗೆ ಒಂದಷ್ಟು ಸಹಾನುಭೂತಿ ಇರಬೇಕು. ಅವರ ಮುಖ್ಯಸ್ಥರಿಗೆ ಶಿಸ್ತು ಕಾಪಾಡುವ ಬಗ್ಗೆ ಎಚ್ಚರಿಕೆ ನೀಡಬೇಕು. ಅವರ ಕೆಲಸದ ಸುಧಾರಣೆಗೆ ಮಹತ್ವ ನೀಡಬೇಕು. ಆದರೆ ಸಾರ್ವಜನಿಕವಾಗಿ ಅವರನ್ನು ನಿಂದಿಸುವುದು ಅಷ್ಟು ಒಳ್ಳೆಯ ಲಕ್ಷಣವಲ್ಲ. ಜೊತೆಗೆ ಅವರಿಗೆ ಎರಡನೆಯ ದರ್ಜೆಯ ನಾಗರಿಕರಂತೆ ಕೊಡುತ್ತಿರುವ ಸಂಬಳವೇ ಹೆಚ್ಚು ಎನ್ನುವ ಅಹಂಕಾರದ ಮಾತನ್ನು ಆಡಬಾರದು. ಅದು ಸೂಕ್ಷ್ಮ ಮನಸ್ಥಿತಿಯ ಜನರಿಗೆ ನೋವನ್ನುಂಟುಮಾಡುತ್ತದೆ. ದಕ್ಷತೆ ಇದ್ದ ಮಾತ್ರಕ್ಕೆ ಎಲ್ಲರನ್ನೂ ಹಾಗೆ ಮಾತನಾಡಲು ಬರುವುದಿಲ್ಲ. ಇಲ್ಲಿನ ಸಾಮಾಜಿಕ ವ್ಯವಸ್ಥೆಯ ಬಗ್ಗೆ, ಅಸಮಾನ ಸಮಾಜ ರಚನೆಯ ಬಗ್ಗೆ ಒಂದಷ್ಟು ಪ್ರಜ್ಞಾಪೂರ್ವಕ ತಿಳುವಳಿಕೆ ಇರಬೇಕು. ದೊಡ್ಡ ದೊಡ್ಡ ಉದ್ಯಮಿಗಳು, ಶ್ರೀಮಂತರು ಕೃಷ್ಣಬೈರೇಗೌಡರನ್ನು ಹೊಗಳಿದ ಮಾತ್ರಕ್ಕೆ ಆ ಕಾರ್ಪೊರೇಟ್ ಜಗತ್ತಿನವರ ಮಾತಿಗೆ ಮರುಳಾಗಬಾರದು. ಅವರದು ವ್ಯಾಪಾರಿ ಬುದ್ಧಿ. ಲಾಭ ಬಂದರೆ, ಅವರಿಗೆ ಅನುಕೂಲವಾಗುವುದಾದರೆ ಯಾರನ್ನು ಬೇಕಾದರೂ, ಯಾವುದನ್ನು ಬೇಕಾದರೂ ಮೆಚ್ಚಿಸಲು, ಏನನ್ನು ಬೇಕಾದರೂ ಮಾಡುತ್ತಾರೆ. ಆದರೆ ಮಾನವೀಯ ಮನಸ್ಸುಗಳು ಸಮಾಜದ ಕೆಳ ವರ್ಗದ ಜೊತೆ ಸದಾ ಸಹಾನುಭೂತಿಯ ಸಂಪರ್ಕ ಸಾಧಿಸಬೇಕು. ತಪ್ಪುಗಳನ್ನು ಪ್ರೀತಿಯಿಂದ ಸರಿಪಡಿಸಲು ಪ್ರಯತ್ನಿಸಬೇಕು. ವಿದ್ಯಾವಂತರು ಶ್ರೀಮಂತರು ತಪ್ಪು ಮಾಡಿದರೆ ಎರಡು ಪಟ್ಟು ಶಿಕ್ಷೆ ವಿಧಿಸಬೇಕು. ಬಡವರು, ಅಸಹಾಯಕರು ಮಾಡುವ ಸಾಮಾನ್ಯ ತಪ್ಪುಗಳ ಬಗ್ಗೆ ಸ್ವಲ್ಪ ಸಹಾನುಭೂತಿ ತೋರಿಸಿ ಅವರನ್ನು ಸರಿಪಡಿಸಲು ಪ್ರಯತ್ನಿಸಬೇಕು. ಅವರನ್ನು ಎರಡನೆಯ ದರ್ಜೆ ಪ್ರಜೆಗಳಂತೆ ಕಾಣಬಾರದು.

ಕೃಷ್ಣ ಬೈರೇಗೌಡರು ಅಭಿವೃದ್ಧಿಯ ಭರದಲ್ಲಿ ಶ್ರೀಮಂತರ ಡಾರ್ಲಿಂಗ್ ಆಗುವ ರೀತಿಯಲ್ಲಿ ವರ್ತಿಸದೆ ಬಡವರ ಬಗ್ಗೆಯೂ ಒಂದಷ್ಟು ಕಾಳಜಿ ತೋರಿಸಬೇಕು. ಈಗಲೂ ಕೃಷ್ಣ ಭೈರೇಗೌಡರಂತಹವರು ರಾಜ್ಯದ ಮಂತ್ರಿಗಳಾಗಿರುವುದು ಒಂದು ಹೆಮ್ಮೆ. ತುಂಬಾ ಕ್ರಿಯಾಶೀಲವಾಗಿದ್ದಾರೆ. ಹೊಸ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಆದರೆ ಎಲ್ಲಾ ಅಭಿವೃದ್ಧಿಗೂ ಮಾನವಿಯ ಮುಖ ಇರಲೇಬೇಕು. ಅದನ್ನು ಹೊರತುಪಡಿಸಿದ ಅಭಿವೃದ್ಧಿ, ಸೌಂದರ್ಯ, ಸ್ವಚ್ಛತೆ, ಅಮಾನವೀಯ ಮತ್ತು ವಿನಾಶಕಾರಿ. ಈ ಎಚ್ಚರಿಕೆ ಅವರ ಆತ್ಮವಲೋಕನಕ್ಕೆ ದಾರಿಯಾಗಲಿ ಎಂದು ಆಶಿಸುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

About Author

Leave a Reply

Your email address will not be published. Required fields are marked *

You may have missed