लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಕನ್ನಡ ಬಳಕೆಯೇ ಭಾಷೆ ಉಳಿಸುವ ಏಕೈಕ ಮಾರ್ಗ
ಚಿಕ್ಕಮಗಳೂರು: ಮಾತೃ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು. ದೈನಂದಿನ ಬದುಕಿನಲ್ಲಿ ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕವೇ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
‎
ನಗರದ ಬಸವತತ್ವ ಪೀಠದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಆಯೋಜಿಸಿದ ಆರನೇ ಚಿಕ್ಕಮಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‎
ಹನ್ನೆರಡನೇ ಶತಮಾನದ ಶರಣರು ಕನ್ನಡವನ್ನು ಜನಸಾಮಾನ್ಯರ ಸಾಮಾಜಿಕ ಭಾಷೆಯನ್ನಾಗಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ವಚನಕಾರರು ಕನ್ನಡಕ್ಕೆ ಹೊಸ ಆಯಾಮ ನೀಡಿದ್ದು, ಆ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
‎
‎ಮಕ್ಕಳು ಮನೆಯಲ್ಲಿಯೇ ಕನ್ನಡ ಮಾತನಾಡುವಂತೆ ಮಾಡಬೇಕು. ಆರಂಭದಲ್ಲಿ ಕೆಲವು ಕನ್ನಡ ಪದಗಳು ಅವರಿಗೆ ಅರ್ಥವಾಗದಿದ್ದರೂ ಪದೇಪದೇ ಬಳಸಿದಾಗ ಅವು ಅರ್ಥವಾಗುತ್ತವೆ. ಹೀಗೆ ಭಾಷೆಯೊಂದಿಗೆ ಮಕ್ಕಳ ಸಂಬಂಧವನ್ನು ಗಟ್ಟಿಗೊಳಿಸಬೇಕು ಎಂದರು.
‎
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಕನ್ನಡ ನಾಡಿನಲ್ಲಿಯೇ ಕನ್ನಡ ಮಾತನಾಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ವಿಷಾದನೀಯ, ಬೆಂಗಳೂರಿನಂತಹ ನಗರಗಳಲ್ಲಿ ಹೋಟೆಲ್‌ಗಳಿಗೆ ಹೋದಾಗಲೂ ಕನ್ನಡದಲ್ಲಿ ತಿಂಡಿ ಆರ್ಡರ್ ಮಾಡಲು
‎ಸಾಧ್ಯವಾಗದ ಸ್ಥಿತಿ ಎದುರಾಗುತ್ತಿದೆ ಎಂದು ಹೇಳಿದರು.

ಕನ್ನಡದ ವ್ಯಾಪ್ತಿ ಹಿಂದೆ ಕಾವೇರಿಯಿಂದ ಗೋದಾವರಿವರೆಗೆ ಇತ್ತು ಎಂಬುದನ್ನು ಉಲ್ಲೇಖಿಸುತ್ತದೆ. ಕವಿರಾಜಮಾರ್ಗ ಆದರೆ ಇಂದು ಕನ್ನಡ ನಾಡಿನ ಗಡಿ ಕೃಷ್ಣಾ ನದಿಯವರೆಗೆ ಸೀಮಿತವಾಗಿರುವುದನ್ನು ಗಮನಿಸಿದರೆ ಭಾಷೆಯ ಬಗ್ಗೆ ಕನ್ನಡಿಗರಲ್ಲಿ ಮೂಡುತ್ತಿರುವ ನಿರಭಿಮಾನವನ್ನು ಅರ್ಥಮಾಡಿಕೊಳ್ಳಬಹುದು. ಹೀಗಾಗಿ ಕನ್ನಡದ ಬಗ್ಗೆ ಪ್ರತಿಯೊಬ್ಬರೂ ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
‎
‎ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಮಾತನಾಡಿ ಇಂದಿನ ಪೀಳಿಗೆಗೆ ಕನ್ನಡವೇ ಕಷ್ಟವಾಗುತ್ತಿರುವ ಸಂದರ್ಭದಲ್ಲಿ ಹಳೆಗನ್ನಡ, ಷಟ್ಟದಿ ಹಾಗೂ ಪ್ರಾಚೀನ ಕನ್ನಡ ಸಾಹಿತ್ಯವನ್ನು ಪರಿಚಯಿಸುವುದು ಇನ್ನಷ್ಟು ಸವಾಲಿನ ಕೆಲಸವಾಗಿದೆ. ಆದರೂ ಮನೆಯಲ್ಲಿಯೇ ಮಕ್ಕಳಿಗೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯವನ್ನು ಬೀಜರೂಪದಲ್ಲಿ ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಸಮ್ಮೇಳನಾಧ್ಯಕ್ಷಬಿ.ತಿಪ್ಪೇರುದ್ರಪ್ಪ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಸಾಹಿತ್ಯ ಚರ್ಚೆಗೆ ಸೀಮಿತವಾಗಬಾರದು. ಕನ್ನಡ ಜನಜೀವನ, ರಾಜಕೀಯ, ಪರಿಸರ, ಭಾಷೆ, ಸಂಸ್ಕೃತಿ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ಚರ್ಚಿಸುವ ಅನುಭವ ಮಂಟಪದ ರೀತಿಯ ವೇದಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

‎ಶಿಕ್ಷಣದ ಎಲ್ಲ ಹಂತಗಳಲ್ಲೂ ಕನ್ನಡ ಮಾಧ್ಯಮಕ್ಕೆ ಆದ್ಯತೆ ದೊರೆಯಬೇಕು. ಆಂಗ್ಲ ಮಾಧ್ಯಮ ಶಾಲೆಗಳ ಹೆಚ್ಚಳದಿಂದ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಕನ್ನಡ ಶಾಲೆಗಳನ್ನು ಉಳಿಸಲು ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡಪರ ಸಂಘಟನೆಗಳು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
‎
‎ಸಿಡಿಎ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ಮಾತೃಭಾಷೆಯನ್ನು ಕೇವಲ ಅಭಿಮಾನದಿಂದ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಮನೆ ಹಾಗೂ ದೈನಂದಿನ ಬದುಕಿನಲ್ಲಿ ಕನ್ನಡವನ್ನು ನಿರಂತರವಾಗಿ ಬಳಸುವ ಮೂಲಕವೇ ಭಾಷೆಯನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯ ಮಾಡಬೇಕು ಎಂದು
‎ತಿಳಿಸಿದರು.

‎ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಎಂ.ಆರ್.ದತ್ತಾತ್ರಿ ಭಾಷೆಯ ಮೇಲಿನ ಅಭಿಮಾ ನವನ್ನು ಪುನ‌ರ್ ಸ್ಥಾಪಿಸುವ ಮೂಲಕ ಮಾತ್ರ ಈ ಪರಿಸ್ಥಿತಿಯಿಂದ ಹೊರಬರಲು ಸಾಧ್ಯ ಕನ್ನಡ ಸಾಹಿತ್ಯ ಸಮ್ಮೇಳನಗಳು ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಮುಖ ವೇದಿಕೆಗಳಾಗಲಿ ಎಂದರು.
‎
‎ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಕನ್ನಡದ ಆಸ್ಥಿತೆಯ ಪ್ರತೀಕವಾಗಿರುವ ಭುವನೇಶ್ವರಿ ಪ್ರತಿಮೆಯನ್ನು ನೂತನ ಜಿಲ್ಲಾಡಳಿತ ಭವನದ  ಮುಂಭಾಗದಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಲೋಕೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
‎
‎ಇದೇ ವೇಳೆ ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ಬಸವ ಮಂದಿರದಲ್ಲಿ ಸಿಡಿಪಿ ಅಧ್ಯಕ್ಷ ಹೆಚ್.ಪಿ.ಮಂಜೇ ಗೌಡ ಧ್ವಜಾರೋಹಣ ನೆರವೇರಿಸಿದರು. ಬಳಿಕ ಎಐಟಿ ವೃತ್ತದಿಂದ ಬಸವಪೀಠದವರೆಗೆ ಸಮ್ಮೇಳನಾಧ್ಯಕ್ಷ ಬಿ.ತಿಪ್ಪೇರುದ್ರಪ್ಪ ಅವರನ್ನು ವಿವಿಧ ಕಲಾತಂಡದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ, ‘ಸಾಹಿತ್ಯ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
‎
ಕಾರ್ಯಕ್ರಮದಲ್ಲಿ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಬಿಜೆಪಿ ಮುಖಂಡರಾದ ದೀಪಕ್‌ ದೊಡ್ಡಯ್ಯ, ಹಿರೇಮಗಳೂರು ಪುಟ್ಟಸ್ವಾಮಿ, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯ ಲಕ್ಷ್ಮೀ, ನಗರಾಧ್ಯಕ್ಷ ರೂಪನಾಯ್ಕ, ಸುಮಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.ನೂರಾರು ಜನ ಸಾರ್ವಜನಿಕರು ಬಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed