“ಉದ್ಯಾನವನಕ್ಕಾಗಿ ಕಾಯ್ದಿರಿಸಿದ ಭೂಮಿಯ ಸ್ಕೆಚ್ ವಿಳಂಬ : ಅಧಿಕಾರಿಗಳ ವಿರುದ್ಧ ಹೋರಾಟದ ಎಚ್ಚರಿಕೆ.”
1 min read
ಚಿಕ್ಕಮಗಳೂರು : ತಾಲ್ಲೂಕಿನ ಕಸಬಾ ಹೋಬಳಿಯ ಹಿರೇಕೊಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಕೊಳಲೆ ಕಂದಾಯ ಗ್ರಾಮದಲ್ಲಿ ಜಮೀನಿಗೆ ತೆರಳುವ ರಸ್ತೆ ಹಾಗೂ ಚಿಕ್ಕೋಳಲೆ ಕಂದಾಯ ಗ್ರಾಮದ ಸರ್ವೆ ನಂಬರ್ 206ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನ ಮತ್ತು ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಉದ್ಯಾನವನ ನಿರ್ಮಾಣಕ್ಕಾಗಿ ಭೂಮಿ ಕಾಯ್ದಿರಿಸುವಂತೆ ಕರ್ನಾಟಕ ಪ್ರಗತಿಪರ ಸಂಘಟನೆ ಹಾಗೂ ಜೈ ಭೀಮ್ ಯುವಕ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.

ಈ ಕುರಿತು ಕರ್ನಾಟಕ ಪ್ರಗತಿಪರ ಸಂಘಟನೆ ಚಿಕ್ಕಮಗಳೂರು ಘಟಕದ ಮುಖಂಡ ಸುರೇಶ್ ಸಿ.ಜಿ. ಅವರು ಹೇಳಿಕೆ ನೀಡಿದ್ದು, ಧರಗುಣಿ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಂಜೇಗೌಡ ಅವರು ಅಂಬೇಡ್ಕರ್ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಹೆಸರಿನ ಉದ್ಯಾನವನಕ್ಕಾಗಿ ಗುರುತಿಸಲಾದ ಭೂಮಿಯಲ್ಲಿ ನಾಮಫಲಕವನ್ನು ಉದ್ಘಾಟಿಸಿದ್ದರು ಎಂದು ತಿಳಿಸಿದ್ದಾರೆ.
ಈ ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಸರಿಪಡಿಸಿ ಮಂಜೂರಾತಿಗಾಗಿ ಮುಂದಾಗಿದ್ದಾರೆ. ತಾಲ್ಲೂಕು ಸರ್ವೇಯರ್ ಸೇರಿದಂತೆ ಸರ್ವೆ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸರ್ವೆ ಕಾರ್ಯವನ್ನೂ ಪೂರ್ಣಗೊಳಿಸಿದ್ದಾರೆ. ಆದರೆ ಸರ್ವೆ ಕಾರ್ಯ ನಡೆದು ಮೂರು-ನಾಲ್ಕು ತಿಂಗಳು ಕಳೆದರೂ ಭೂಮಿಯ ಸ್ಕೆಚ್ ಸಿದ್ಧಪಡಿಸಿ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಡಬೇಕಾದ ಭೂಮಿಯ ಸ್ಕೆಚ್ ಸಿದ್ಧಪಡಿಸುವಲ್ಲಿ ವಿಳಂಬವಾಗುತ್ತಿರುವುದು ಸಾಮಾಜಿಕ ಹೋರಾಟಗಾರರು ಹಾಗೂ ಸಂಘ-ಸಂಸ್ಥೆಗಳಿಗೆ ಅಗೌರವ ತೋರಿದಂತಾಗಿದೆ ಎಂದು ಸುರೇಶ್ ಸಿ.ಜಿ.ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಸರ್ಕಾರಿ ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಉಳಿಸುವ ಕೆಲಸ ನಮ್ಮದಾಗಿದೆ. ಸಮಸ್ಯೆ ಬಗೆಹರಿಸಲು ಹೋರಾಟವೇ ಉತ್ತರ ಎಂಬುದನ್ನು ಇತಿಹಾಸವೇ ಕಲಿಸಿದೆ” ಎಂದು ಅವರು ಹೇಳಿದ್ದಾರೆ.

ಬುಧವಾರದೊಳಗೆ ಈ ಭೂಮಿಗೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸದಿದ್ದರೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಂಜೇಗೌಡ ಹಾಗೂ ತಹಶೀಲ್ದಾರ್ ಅವರ ಮುಂದೆ ಸರ್ವೆ ಇಲಾಖೆಯ ಚಂದ್ರಶೇಖರ್ ಮತ್ತು ದೊರೆರಾಜ್ ಅವರು ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ ಭೂಮಿಯನ್ನು ಕಾಯ್ದಿರಿಸುವ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

