ರೈತನಾಯಕ ಪ್ರೊ • ಎಂಡಿ ನಂಜುಂಡಸ್ವಾಮಿಯವರ ಪ್ರಖರ ಸಮರ್ಥಕ, ಸಾಮಾಜಿಕ ಹೋರಾಟಗಾರ ಬಿ ಕೆ ಸುಂದರೇಶ್ ಅವರ ಒಡನಾಡಿ, ಯಾರೂ ಅರಿಯದ ವೈಚಾರಿಕ ಸಂತ ಮಾಳಿಕೊಪ್ಪ ಸತೀಶ್ ಇನ್ನು ನೆನಪು ಮಾತ್ರ….*
1 min read
ನ್ಯೂಸ್ ಕಿಂಗ್ ✍️: *ರೈತನಾಯಕ ಪ್ರೊ • ಎಂಡಿ ನಂಜುಂಡಸ್ವಾಮಿಯವರ ಪ್ರಖರ ಸಮರ್ಥಕ, ಸಾಮಾಜಿಕ ಹೋರಾಟಗಾರ ಬಿ ಕೆ ಸುಂದರೇಶ್ ಅವರ ಒಡನಾಡಿ, ಯಾರೂ ಅರಿಯದ ವೈಚಾರಿಕ ಸಂತ ಮಾಳಿಕೊಪ್ಪ ಸತೀಶ್ ಇನ್ನು ನೆನಪು ಮಾತ್ರ….*
ತರೀಕೆರೆ ಜೂನ್ ೧೦: ಸಂಗಾತಿ ಮಾಳಿಕೊಪ್ಪ ಸತೀಶ್ ಅವರ ಜೀವನ ಒಂದು ಯಶೋಗಾಥೆಯಂತಿದೆ…
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಮಾಳಿಕೊಪ್ಪದ ಸತೀಶ್ ಅವರು ಸರಳತೆ, ಪ್ರಾಮಾಣಿಕತೆ, ವೈಚಾರಿಕ ಚಿಂತನೆಗೆ ಹೆಸರಾದವರು, ನಾಡಿನ ಹೆಸರಾಂತ ಜನಪರ ಹೋರಾಟಗಾರರಿಗೆ ಹತ್ತಿರವಾಗಿದ್ದವರು, ಬಿ ಕೆ ಸುಂದರೇಶ್ ಅವರ ಮೂಲಕ ನನಗೆ ಪರಿಚಯವಾದ ಸತೀಶ್ ಮತ್ತು ನನ್ನ ಒಡನಾಟ ಸಾಮಾಜಿಕ ಚಳುವಳಿಗಳಲ್ಲಿ ಹಲವು ವರ್ಷಗಳ ಕಾಲ ನಮ್ಮಿಬ್ಬರನ್ನು ಒಟ್ಟಿಗೆ ಇರುವಂತೆ ಮಾಡಿತ್ತು,ಇಪ್ಟಾ ಚಳುವಳಿಯನ್ನು ಕಟ್ಟಲು ನನ್ನ ಕಲಾವಿದರ ಸಂಗಾತಿಗಳೊಂದಿಗೆ ಹೆಜ್ಜೆ ಹಾಕಿದ್ದರು, ಮುಂದೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಮೈಸೂರಿನ ಅಬ್ದುಲ್ ನಜಿರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೂಲಕ ಕೆಲವು ವರ್ಷಗಳ ಕಾಲ ಸಂಪನ್ಮೂಲ ವ್ಯಕ್ತಿಗಳಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಒಟ್ಟೊಟ್ಟಿಗೆ ಕರ್ತವ್ಯ ನಿರ್ವಹಿಸಿದ್ದೆವು,ಸತೀಶ್ ಅವರು ತನ್ನ ಹುಟ್ಟೂರು ಮಾಳಿಕೊಪ್ಪಕ್ಕೆ ಸೇರಿದ ಕೆಂಚಿಕೊಪ್ಪಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾಗ ಆ ಭಾಗದ ಯುವ ಜನತೆಯನ್ನು ಸಂಘಟಿಸಿ ಅವರೊಳಗೆ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಅವರೊಳಗಿದ್ದ ಬುದ್ದಿಮಟ್ಟ ಮತ್ತು ಸಮರ್ಥತೆಯನ್ನು ಸರಿಯಾಗಿ ಬಳಸಿಕೊಂಡು ಅಮೂರ್ತ ರೂಪದಲ್ಲಿದ್ದ ಚಿಂತನೆಗಳನ್ನು ಮೂರ್ತರೂಪಕ್ಕೆ ತಂದಿದ್ದರೆ ಮುತ್ಸದ್ದಿ ರಾಜಕಾರಣಿಯಾಗಿಯೂ ಅಥವಾ ಪ್ರಖರವಾದ ಸಾಮಾಜಿಕ ಹೋರಾಟಗಾರನಾಗಿಯೋ, ಅತ್ಯುತ್ತಮ ಬರಹಗಾರನಾಗಿಯೋ, ಸಾಹಿತಿಯಾಗಿಯೂ ವಿವಿಧ ಕ್ಷೇತ್ರಗಳಲ್ಲಿ ತನ್ನ ಚಾಪು ಮೂಡಿಸಬಹುದಿತ್ತು, ಆದರೆ ಎಂದಿಗೂ ವೇದಿಕೆಯ ವೀರರಾಗದೆ ಪ್ರಚಾರ ಪ್ರಿಯನಾಗದೇ, ತನ್ನೊಳಗಿದ್ದ ಬೌದ್ದಿಕತೆಯನ್ನು ಸರಿಯಾಗಿ ದುಡಿಸಿಕೊಳ್ಳದೆ, ರಸ್ತೆ ಡಾಂಬರೀಕರಣದ ಕೆಲಸ ಮಾಡುವ ಕಾರ್ಮಿಕರಾಗಿ, ಹೋಟೆಲ್ ಗಳ ಕ್ಲೀನರ್ ಮತ್ತು ಸಪ್ಲೈರಾಗಿ, ಈ ನೆಲದ ಕಟ್ಟಕಡೆಯ ಜನರ ನಿಜ ಅನುಭವಗಳನ್ನು ಅವರು ದಕ್ಕಿಸಿಕೊಂಡ ಪರಿ ಮತ್ತು ನೆಡೆ ಅವರ ಒಡನಾಡಿಗಳಿಗೆ ಇನ್ನೂ ಅರ್ಥವಾಗದ ಸಂಗತಿಯಾಗಿದೆ.
60ರ ವಯೋಮಾನದ ಸತೀಶ್ ಅವರು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು, ಅನೇಕ ಅರ್ಹತೆ ಇದ್ದರು ಏನೂ ಆಗದ ಸಂಗಾತಿ ಮಾಳಿಕೊಪ್ಪ ಸತೀಶ್ ಅವರು ಮೊನ್ನೆ ನಮ್ಮನ್ನೆಲ್ಲ ಅಗಲಿದ್ದಾರೆ.
ಅಗಲಿದ ಮಾಳಿಕೊಪ್ಪ ಸತೀಶ್ ಅವರಿಗೆ ಇಪ್ಟಾ ಕಲಾವಿದ ಬಳಗದ ವತಿಯಿಂದ ಅಂತಿಮ ನಮನಗಳನ್ನು ಸಲ್ಲಿಸುತ್ತಾ..
ಅಗಲಿದ ಸತೀಶ್ ಅವರ ಬಗ್ಗೆ,ನಮ್ಮೆಲ್ಲರ ಒಡನಾಡಿ ಕೊಪ್ಪದ ರೈತ ಮುಖಂಡ ಹಾಗೂ ಬರಹಗಾರ ನೆಂಪೆ ದೇವರಾಜ್ ಅವರು ಬರೆದ ಈ ಕೆಳಕಂಡ ಲೇಖನವನ್ನು ನ್ಯೂಸ್ ಕಿಂಗ್ ತನ್ನ ಓದುಗರಿಗಾಗಿ ಕೂಡಮಾಡಿದೆ.👇
—————————–
ನಾನಾಗ ಮಾನಸಗಂಗೋತ್ರಿಯಲ್ಲಿದ್ದ ಕಾಲ. ಸತೀಶ್ ಮಹಾರಾಜಾ ಕಾಲೇಜಿನಿಂದ ಮಾನಸ ಗಂಗೋತ್ರಿಗೆ ಬಂದರೆಂದರೆ ಅದೇನೋ ಒಂತರ ಸಂಚಲನ.ಬರುವಾಗ ಅದೆಷ್ಟೋ ವಿಚಾರಗಳನ್ನು ಹೊತ್ತು ತರುತ್ತಿದ್ದರು.ಈ ಮನುಷ್ಯ ದೊಡ್ಡ ದೊಡ್ಡ ಸಬೆಗಳಲ್ಲಿ ಭಾಷಣ ಮಾಡುತ್ತಿರಲಿಲ್ಲ.ಪತ್ರಿಕೆಗಳಿಗೆ ಬರೆಯುತ್ತಿರಲಿಲ್ಲ.ಸೆಮಿನಾರುಗಳ ಪ್ರೇಕ್ಷಕರಾಗಿರುತ್ತಿದ್ದರೇ ವಿನಃ ಪೇಪರ್ ಮಂಡಿಸುವ ಬಗ್ಗೆ ಆಸಕ್ತಿ ಇರಲಿಲ್ಲ.ದೊಡ್ಡ ಹುದ್ದೆಯನ್ನೂ ಹೊಂದಿರಲಿಲ್ಲ.ಒಂದು ವೇಳೆ ಇವರೊಳಗೆ ಸಹಜವಾಗಿ ಉತ್ಪತ್ತಿಯಾಗುತ್ತಿದ್ದ ಭಾರತೀಯ ಸಮಾಜದ ಬಗೆಗಿನ ಹೊಳಹುಗಳು ಮೂರ್ತ ಸ್ವರೂಪಕ್ಕೆ ಬಂದಿದ್ದೇ ಆಗಿದ್ದಿದ್ದರೆ ಈ ನಾಡು ಕಂಡ ಬಹುದೊಡ್ಡ ಚಿಂತಕ ಮತ್ತು ಹೋರಾಟಗಾರನಾಗಿ ಖಂಡಿತಾ ಗುರುತಿಸಲ್ಪಡುತ್ತಿದ್ದರು.
ಬುದ್ದಿಜೀವಿಗಳನೇಕರ ಟೊಳ್ಳುತನಗಳನ್ನು ಲೇವಡಿಗೊಳಪಡಿಸುತ್ತಲೇ ಪ್ರೋಫೆಸರ್ ಎಂ.ಡಿ ನಂಜುಂಡಸ್ವಾಮಿಯವರ ಪ್ರಖರ ಹಿಂಭಾಲಕರಾಗಿ ಹೋಗಿದ್ದರು.ಹಾಗೆ ಹೇಳಲು ಹೋಗುವುದಾದರೆ ಪ್ರೊಫೆಸರ್ ಜೊತೆಗೆ ನಮ್ಮಿಬ್ಬರ ಸಂಬಂಧ ವೈಯಕ್ತಿಕವಾದುದಲ್ಲ.ನಮಗೆ ಅದರ ಅಗತ್ಯವೂ ಕಾಣಲಿಲ್ಲ.
ತದ ನಂತರದ ದಿನಗಳಲ್ಲಿ ಫ್ರೊಫೆಸರ್ ರವರಿಗೆ ನಮ್ಮ ಪರಿಚಯವೂ ಮರೆತು ಹೋಗಿತ್ತೋ ಏನೋ?ಆದರೆ ಪ್ರೊಫೆಸರ್ ರವರ ವಿಚಾರಧಾರೆ,
ಹೋರಾಟದ ಬಗೆಗಿನ ಸ್ಪಷ್ಟತೆ,ಸಮ ಸಮಾಜ ನಿರ್ಮಾಣದ ಬಗೆಗೆ ಉಟೋಪಿಯನ್ ಅಲ್ಲದ ದೂರದೃಷ್ಟಿ ಇದೆಲ್ಲ ನಮ್ಮಿಬ್ಬರಿಗೆ ಇಷ್ಟವಾಗುವ ವಿಚಾರಗಳಾಗಿದ್ದವು.
ಸತೀಶ್ ಮಾನಸ ಗಂಗೋತ್ರಿಯಲ್ಲಿ ಇಂಗ್ಲೀಷ್ ಸಾಹಿತ್ಯ ತೆಗೆದುಕೊಂಡರೂ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.ಈ ವಿಷಯದಲ್ಲಿ ನನಗೂ ಸತೀಶ್ ಗೂ ಬಹಳಷ್ಟು ಸಲ ವಾದ ವಿವಾದಗಖಾಗಿವೆ.ಈ ವಾದ ವಿವಾದ ಮೊನ್ನೆ ಮೊನ್ನೆಯವರೆಗೂ ನಡೆಯುತ್ತಲೇ ಇತ್ತು.ವೈಯಕ್ತಿಕ ಬದುಕನ್ನು ಲಘುವಾಗಿ ತೆಗೆದುಕೊಂಡದ್ದರ ಬಗ್ಗೆ ನಾನು,ಇದೀಗ ಹೊಸನಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿರುವ ಉಮೇಶ್,ಲಕ್ಕವಳ್ಳಿಯ ಭಾಸ್ಕರ್,ಮೈಸೂರಿನ ವಕೀಲ ಕೆಂಪೇಗೌಡ,ಉಪನ್ಯಾಸಕ ರಾಮಣ್ಣ ಮುಂತಾದವರು ತಕರಾರುಗಳನ್ನು ಎತ್ತುತ್ತಲೇ ಅವರನ್ನು ಅಗಾಧವಾಗಿ ಪ್ರೀತಿಸುತ್ತಾ ಹೋಗುತ್ತಿದ್ದೆವು.
ಯಾವುದೇ ದುರಭ್ಯಾಸಗಳ ದಾಸರಾಗದೆ ಇವರಷ್ಟು ಸರಳವಾಗಿ ಬದುಕುವ ಕಲೆ ಸಿದ್ದಿಸದೆ ಹೋದದ್ದರ ಬಗ್ಗೆಯೂ ಯೋಚಿಸುತ್ತಿದ್ದೆವು.
ಸತೀಶ್ ರೈತ ಚಳುವಳಿಯನ್ನು ಬಹಳ ಬಹಳ ಮೈಮೇಲೆ ಎಳೆದುಕೊಂಡಿದ್ದರು.ಚಳುವಳಿ ದಿಕ್ಕು ತಪ್ಪಿದಾಗ ಕ್ಷೋಭೆಗೊಳಗಾಗುತ್ತಿದ್ದರು.ನಾವೆಲ್ಲ ನೌಕರಿಗಾಗಿ ಅಲೆಯುತ್ತಿದ್ದಾಗ ಈ ಮನುಷ್ಯ ಲಕ್ಕವಳ್ಲಿ ಸಮೀಪದ ತನ್ನೂರು ಮಾಳಿಕೊಪ್ಪಕ್ಕೆ ಬಂದು ಗ್ರಾ.ಪಂ ಚುನಾವಣೆಗೆ ನಿಲ್ಲುತ್ತಾರೆ.ಒಂದೇ ಒಂದು ರೂಪಾಯಿಯನ್ನೂ ಖರ್ಚು ಮಾಡದೆ ಗೆದ್ದೇ ಬಿಡುತ್ತಾರೆ.ಇವರ ಆರೋಗ್ಯಯುತ ಕನಸುಗಳಿಗೆ ಪಕ್ಷ ರಾಜಕಾರಣದ ಆಚೆ ಯೋಚಿಸುವ ಮತದಾರರನ್ನು ಸತೀಶ್ ತಯಾರು ಮಾಡಿದ ರೀತಿ ಬೆರಗು ಹುಟ್ಟಿಸುವಂತದ್ದು.ಬೆರಳೆಣಿಕೆಯಷ್ಟಿದ್ದ ತನ್ನ ಜಾತಿಯ ಬಗ್ಗೆ ಚುನಾವಣೆಯಲ್ಲಿ ತಲೆ ಕೆಡಿಸಿಕೊಳ್ಳದೆ ಎಲ್ಲರಿಗೆ ಪ್ರೀತಿ ಧಾರೆ ಎರೆಯುತ್ತಲೇ ಹೋಗುತ್ತಿದ್ದ ಇವರ ಗುಣ ಅಪೂರ್ವಾದುದು.ಆದರೆ ಗ್ರಾ .ಪಂನ ಅಧ್ಯಕ್ಷರಾಗುವ ಸಂದರ್ಭದಲ್ಲಿ ಎದುರಾದ ಒಳಸುಳಿಗಳಿಂದ ಅಗಾಧವಾಗಿ ನಿರಾಶರಾಗುತ್ತಾರೆ.
ದಿವಂಗತ ಎನ್.ಡಿ ಸುಂದರೇಶ್ ಬಿ.ಆರ್ ಪ್ರಾಜೆಕ್ಟಿನಲ್ಲಿ ಬೀಳಗಿ ಎಂಬ ಭ್ರಷ್ಟ ಇಂಜಿನಿಯರ್ ವಿರುದ್ದ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾಗ ಅವರೊಂದಿಗೆ ಪ್ರತಿ ದಿನ ಸತತವಾಗಿ ಧರಣಿಗೆ ಕೂರುತ್ತಿದ್ದ ಸತೀಶ್ ಮಾಳಿಕೊಪ್ಪರಿಗೆ ಆಗ ಸುಂದರೇಶ್ ರವರ ಒಳ ತೋಟಿಗಳ ಪೂರ್ಣ ಪರಿಚಯವಾಗತೊಡಗಿತಂತೆ.ಚಳುವಳಿ ದಿಕ್ಕು ತಪ್ಪುತ್ತಿರುವ ಬಗ್ಗೆ ಅತ್ಯಂತ ಮುಕ್ತವಾಗಿ ನೋವಿನಿಂದ ಸುಂದರೇಶ್ ಹಂಚಿಕೊಂಡಿದ್ದನ್ನು ನನ್ನೊಂದಿಗೆ ಹೇಳಿದ್ದರು ಕೂಡಾ.
ಇದಾಗಿ ಸ್ವಲ್ಪ ಸಮಯದಲ್ಲೆ ಬರ ಸಿಡಿನಂತೆ ಸುಂದರೇಶ್ ರವರ ಸಾವಿನ ಸುದ್ದಿ ಕೇಳಲ್ಪಟ್ಟಾಗ ನಾನು ಸತೀಶ್ ಅನಾಥರಾದಂತೆ ವರ್ತಿಸತೊಡಗಿದೆವು.ಸುಂದರೇಶ್ ಸಾವಿನ ನಂತರ ಸತೀಶ್ ಮನಸ್ಥಿತಿಯಲ್ಲಿ ಏರುಪೇರುಗಳುಂಟಾದವು.ಒಂದು ರೀತಿಯ ನಿರ್ಲಿಪ್ತತೆ ಕಣ್ಣಿಗೆ ರಾಚತೊಡಗುತ್ತವೆ.ಇವರು ಈ ಒಂದೇ ವಿಚಾರವನ್ನಿಟ್ಟುಕೊಂಡು ದಿನಗಟ್ಟಲೆ ಯೋಚಿಸುತ್ತಾ ಮೌನವಾಗಿ ತನ್ನ ಮನೆಯ ಪಕ್ಕದಲ್ಲೇ ಹರಿವ ಭದ್ರೆಯ ಚಾನಲ್ ದಡದಲ್ಲಿ ಕುಳಿತದ್ದೂ ಇದೆ.
ಇಂತಹ ಸತೀಶ್ ಈ ಶತಮಾನದ ಆರಂಭದಲ್ಲಿ ಮನೆ ಬಿಟ್ಟವರು ಯಾರಿಗೂ ಕಾಣಿಸಿಕೊಳ್ಳದೆ ಮರೆಯಾದರು.ಹತ್ತಾರು ವರುಷಗಳ ಕಾಲ ಇವರ ಇರುವಿಕೆಯ ಸಣ್ಣ ಕುರುಹುಗಳೂ ಕಾಣ ಸಿಗಲಿಲ್ಲ.ಎಲ್ಲಿದ್ದಾರೆ ಎಂಬುದರ ಅರಿವು ಯಾರಿಗೂ ಬರಲೇ ಇಲ್ಲ.ಎಲ್ಲರೂ ಇವರನ್ನು ಮರೆತೆ ಬಿಟ್ಟಿದ್ದೆವು ಎನ್ನುವ ವಷ್ಟರ ಮಟ್ಟಿಗೆ ಅದೃಷ್ಯರಾಗಿದ್ದರು.
ಈ ಮಧ್ಯೆ ಒಂದು ದಿನ ಇವರ ತಾಯಿ ಮರಣ ಹೊಂದಿದರು.”ದೂರದಿಂದಲೇ ಆಕೆಯ ಶವ ಸಂಸ್ಕಾರವನ್ನು ವೀಕ್ಷಿಸಿ ಕೇರಳದ ಕಡೆ ಪ್ರಯಾಣ ಬೆಳೆಸಿದ್ದೆ.ಆ ಸಂಜೆ ಸ್ಮಶಾನದಲ್ಲಿದ್ದ ನನ್ನನ್ನು ಯಾರೂ ಗುರುತಿಸಲಿಲ್ಲ.ಅಂತಹದೊಂದು ಸ್ಥಿತಿಗೆ ನನ್ನ ದೇಹ ಹೋಗಿತ್ತು” ಎಂಬುದನ್ನು ನನ್ನೊಂದಿಗೆ ಪ್ರಸ್ತಾಪಿಸಿದ್ದರು.
ಕೇರಳದ ಜನಜೀವನ,ಅಲ್ಲಿಯ ವಾತಾವರಣ,ಅಲ್ಲಿಯ ಜಾತೀ ವ್ಯವಸ್ಥೆ ಈಬಗ್ಗೆ ಇವರಿಗಿದ್ದ ಆಳವಾದ ಜ್ಞಾನ ಇನ್ಯಾರಲ್ಲೂ ಕಾಣಲು ಅಸಾದ್ಯ.ಅಂತೆಯೇ ದಕ್ಷಿಣ ಕನ್ನಡ ಕೋಮು ಜ್ವಾಲೆಗೆ ಸತತವಾಗಿ ಗುರಿಯಾಗುತ್ತಿದ್ದ ಹಿಂದಿನ ಕಾರಣಗಳನ್ನು ಇವರು ಗ್ರಹಿಸಿದ ರೀತಿಗೆ ದಂಗು ಬಡಿದಿದ್ದೆ.ಕೋಮು ಸಂಘರ್ಷದ ಬಗ್ಗೆ ಹತ್ತಾರು ನಮ್ಮ ಪ್ರಗತಿಪರರು ಬಹಳಷ್ಟು ಬರೆದಿದ್ದಾರೆ.ಕಾರಣಗಳನ್ನು ನೀಡಿದ್ದಾರೆ.ಕ್ಷೇತ್ರ ಕಾರ್ಯಗಳನ್ನು ನಡೆಸಿದ್ದಾರೆ.ಆದರೆ ನನಗೆ ತಿಳಿದ ಮಟ್ಟಿಗೆ ಇವರಿಗಿದ್ದ ಸ್ಪಷ್ಟತೆ ಇನ್ನಾರಿಗೂ ಇರಲಿಕ್ಕಿಲ್ಲ.ಕೇರಳ ಮತ್ತು ದಕ್ಷಿಣ ಕನ್ನಡದಲ್ಲಿ ಇವರು ಇದ್ದಷ್ಟು ದಿನವೂ ಎಸಿ ರೂಮಿನಲ್ಲಿ ಮಲಗಲಿಲ್ಲ.ಸೆಮಿನಾರುಗಳಲ್ಲಿ ಭಾಗವಹಿಸಿದರೂ ಮೂಲೆಯಲ್ಲಿ ಎಲ್ಲೋ ಕೂತು ವೇದಿಕೆಯಲ್ಲಿದ್ದವರ ಮಾತುಗಳನ್ನು ಆಲಿಸಿಕೊಂಡು ಬಂದಿದ್ದಾರೆ.ಎ ಸಿ ರೂಮಿನ ಕತೆ ಒಂದಟ್ಟಿಗೆ ಇರಲಿ, ಕನಿಷ್ಟ ಅಗತ್ಯವಿರುವ ಕೊಠಡಿಯಲ್ಲೂ ಇವರು ಕಾಲ ಕಳೆದಿರಲಿಲ್ಲ.ಬಸ್ಸ್ಟಾಂಡು,ಎಪಿಎಂಸಿ ಮಾರುಕಟ್ಟೆ ಪ್ರಾಂಗಣ,ಸಮುದಾಯ ಭವನಗಳೇ ಇವರ ತಂಗುದಾಣಗಳಾಗಿದ್ದವು.ರಸ್ತೆಗಳಿಗೆ ಟಾರು ಹಾಕುವ ವುದರಿಂದ ಹಿಡಿದು ಗಾರೆ ಕೆಲಸ,ಹೋಟೆಲುಗಳಲ್ಲಿ ಕ್ಲೀನರ್ ಸಪ್ಲೈಯರ್ ವರೆಗಿನ ಕೆಲಸಗಲನ್ನೆಲ್ಲ ಮಾಡುತ್ತಲೇ ಸಮಾಜವನ್ನು ರಾಮ ಮನೋಹರ ಲೋಹಿಯಾರವರ ತರಹ ಗ್ರಹಿಸಿದ್ದರು.ಇವರು ಎಲ್ಲೋ ನಕ್ಸಲೀಯ ಚಳುವಲಿಯೊಳಗೆ ಧುಮುಕಿ ತಲೆ ಮರೆಸಿಕೊಂಡಿರಬಹುದೆಂದು ಹಲವರು ಊಹಿಸಿದ್ದರು.ಆದರೆ ಇವರೊಳಗೆ ಮಹಾತ್ಮಾಗಾಂಧಿ ಪ್ರಖರವಾಗಿ ಹೊಕ್ಕಿದ್ದರು.ಪದೇ ಪದೇ ಗಾಂಧಿಯ ಪ್ರಸ್ತುತತೆಯನ್ನು ಆಳವಾಗಿ ಅದ್ಯಯನಿಸಿದ್ದರು.ಇತರರೊಮದಿಗೆ ಗಾಂಧಿಯನ್ನು ಹಂಚಿಕೊಳ್ಳುವಾಗ ಬೇರೆಯದೇ ರೀತಿಯ ವ್ಯಾಖ್ಯಾನವನ್ನು ಕೊಡಬಲ್ಲವರಾಗಿದ್ದರು.
ಹನ್ನೆರಡು ವರ್ಷಗಳ ಹಿಂದೆ ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಡಾ. ಹಿಶಿ ರಾಮಚಂದ್ರೇ ಗೌಡ ಇವರ ಸಂಪಾದಕತ್ವದಲ್ಲಿ ರಯತ ನಾಯಕ ಎನ್.ಡಿ ಸುಂದರೇಶ್ ರವರ ಗೌರವ ಗ್ರಂಥ ಬಿಡುಗಡೆಯಾಯಿತು.ಈ ಹೊತ್ತಿಗೆಯಲ್ಲಿ ನನ್ನದೊಂದು ಲೇಖನವೂ ಇತ್ತು.ಈ ಲೇಖನದಲ್ಲಿ ಸತೀಶ್ ಮಾಳಿಕೊಪ್ಪರವರ ಹೆಸರನ್ನು ಪ್ರಸ್ತಾಪಿಸಿದ್ದೆ.ಕಾಕತಾಳಿಯವೋ ಎಂಬಂತೆ ಅದೇ ದಿನ ಶಿವಮೊಗ್ಗದಿಂದ ವಾಪಾಸು ಬರುತ್ತಿದ್ದಾಗ ನನ್ನ ಫೋನು ಸದ್ದು ಮಾಡಿತು.”ಯಾರು ಎಂಬುದನ್ನು ಊಹಿಸಿ” ಎಂಬ ದ್ವನಿಯನ್ನು ಗುರುತಿಸದಾದೆ.”ನಾನು ಮಾಳಿಕೊಪ್ಪ”ಎಂದಾಗ ಎಲ್ಲಿಲ್ಲದ ಸಮತೋಷದಿಂದ ಕುಣಿದು ಕುಪ್ಪಳಿಸುವಂತಾದೆ.ಕೊಪ್ಪ ಪಟ್ಟಣದಿಂದ ಫೋನ್ ಮಾಡಿದ್ದ ಅವರನ್ನು ಮನೆಗೆ ಬರ ಹೇಳಿದೆ.ಸರಿ ಸುಮಾರು ಹದಿನೈದು ದಿನಗಳ ಕಾಲ ನನ್ನ ಮತ್ತು ಅವರ ನಡುವೆ ಚರ್ಚೆ,ಸಂವಾದ ವಾದ ವಿವಾದ,ವಿಚಾರ ವಿನಿಮಯಗಳು ರಾತ್ರಿ ಹಗಲೆನ್ನದೆ ಮುಮದುವರಿಯುತ್ತಾ ಹೋದವು.ನಂತರ ಪದೇ ಪದೇ ಸಿಗುತ್ತಾ ಹೋದರು.
ಕೆಲವು ತಿಂಗಳುಗಳ ಹಿಂದೆ ಅವರು ಅಪಘಾತವೊಂದಕ್ಕೆ ಗುರಿಯಾದರು.ಹಿಂದಿನಿಂದ ಬಂದ ವಾಹನವೊಂದು ಇವರಿಗೆ ತಾಗಿಸಿ ಮುಂದೆ ಹೋಯಿತು.ಇವರನ್ನು ಗುರುತಿಸಿದವರು ಅಸ್ಪತ್ರೆಗೆ ಸೇರಿಸಿದರು.ತಲೆಗೆ ಬಿದ್ದ ಪೆಟ್ಟಿನಿಂದ ಛೇತರಿಸಿಕೊಂಡಾದ ಮೇಲೂ ನನಗೆ ಅನೇಕ ಬಾರಿ ದೂರವಾಣಿ ಮೂಲಕ ಮಾತಿಗೆ ಸಿಗುತ್ತಿದ್ದರು”ನಾವು ರೈತ ಸಂಘ ಮತ್ತು ಪ್ರೊಪೆಸರ್ ರವರನ್ನು ಬಹಳವಾಗಿ ಹಚ್ಚಿಕೊಂಡೆವು.ಇದು ಅಗತ್ಯವೂ ಇತ್ತು.ಆದರೆ ಬದಲಾದ ಈ ಸನ್ನಿ ವೇಶದಲ್ಲಿ ಕೋಮುವಾದಕ್ಕೆ ಸಮಬಂಧಿಸಿದಂತೆ ರೈತ ಸಂಘದ ನಿಲುವು ಪ್ರಖರವಾಗಿರಲಿಲ್ಲ.ಕೋಮುವಾದ ಮತ್ತು ಧರ್ಮಾಂಧತೆಗೆ ಸಂಬಂಧಿಸಿದಂತೆ ಲಂಕೇಶ್ ಗಿದ್ದ ಸ್ಪಷ್ಟತೆ ಪ್ರೋಫೆಸರ್ ರವರಿಗೆ ಇರಲಿಲ್ಲವೇನೋ ಎನಿಸುತ್ತೆ.ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಇದ್ದ ಸ್ಪಷ್ಟತೆ ಭಾರತೀಯ ಸಾಮಾಜಿಕ ಸಂರಚನೆಯ ಬಗ್ಗೆ ಫ್ರೋಫೆಸರ್ ಸ್ಪಷ್ಟತೆ ಇದ್ದರೂ ಅದನ್ನು ಮುನ್ನೆಲೆಗೆ ತರದೆ ನಿರ್ಲಕ್ಷಿಸಿದರು ಎನಿಸುತ್ತಿದೆ.ಅಂದು ರೈತ ಸಂಘ ಅಥವಾ ದಿವಂಗತ ನಂಜುಂಡ ಸ್ವಾಮಿಯವರು ಕೋಮು ಧೃವೀಕರಣದ ಅಪಾಯವನ್ನು ಗ್ರಹಿಸಿತೀಕ್ಷವಾಗಿ ರಯತರಿಗೆ ತಿಳಿಸುವ ಕಾರ್ಯ ಮಾಡಿದ್ದಿದ್ದರೆ ಇಂದಿನ ರಾಜಕೀಯದ ಸ್ಥಿತಿಯೇ ಬದಲಾಗುತ್ತಿತ್ತು.ಧರ್ಮಾದಾರಿತ ರಾಜಕಾರಣ ಮೇಲುಗೈ ಸಾಧಿಸುತ್ತಿರಲಿಲ್ಲ” ಎಂಬ ಇವರ ಕೊನೆಯ ಮಾತು ಮತ್ತೆ ಮತ್ತೆ ಗುನುಗುಡುವಂತೆ ಮಾಡುತ್ತಿದೆ.
ಮತ್ತೊಮ್ಮೆ ಅಂದರೆ ಕಳೆದ ಒಂದು ತಿಂಗಳ ಹಿಂದೆ ತಮ್ಮ ಮನೆಯಲ್ಲಿ ಬಿದ್ದವರು ಮೇಲೇಳಲೆ ಇಲ್ಲ.ಪ್ರಜ್ಞಾ ಹೀನ ಸ್ಥಿತಿಗೆ ಹೋದರು.ಶಿವಮೊಗ್ಗದ ಮೆಗಾನ್ ಆಸ್ತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಿಸಲಿಲ್ಲ.ಅದೇ ಸ್ಥಿತಿಯಲ್ಲಿ ಮಾಳಿಕೊಪ್ಪಕ್ಕೆ ಕರೆದುಕೊಂಡು ಹೋಗಲಾಯಿತು.ಅಂತಿಮವಾಗಿ ಅಂದರೆ ದಿನಾಂಕ 09-6-2026 ರ ಸಂಜೆ ಕೊನೆಯುಸಿರು ಎಳೆದರು.ಸತೀಶ್ ಎಂಬುವರು ಯಾರೂ ಅರಿಯದ ವೀರನಂತೆ ಇಹಲೋಕ ತ್ಯಜಿಸಿದ ರೀತಿ ಕರಳು ಹಿಂಡುವಂತದ್ದು.ಪದೇ ಪದೇ ನೆನಪಾಗುತ್ತಾರೆ.ಇವರಿಂದ ಕಲಿತ ಎಷ್ಟೋ ವಿಚಾರಧಾರೆಗಳು,ಇವರೊಂದಿಗೆ ಹಂಚಿಕೊಂಡ ಘಟನೆಗಳು,ಭಾಗವಹಿಸಿದ ರೈತ ಚಳುಳಿಯ ಕಾರ್ಯಕ್ರಮಗಳು,ನಮ್ಮ ಮನೆಯಲ್ಲಿ ಕಳೆದ ದಿನಗಳು ಸದಾ ನೆನಪಿನಲ್ಲಿ ಉಳಿಯುವಂತವುಗಳು.
*ಸಂತಾಪಗಳು ಸಂಗಾತಿ ಸತೀಶ್ ಅವರಿಗೆ.*
*************ಸಂಗ್ರಹ
ಡಿ.ಎಂ.ಮಂಜುನಾಥಸ್ವಾಮಿ
ನ್ಯೂಸ್ ಕಿಂಗ್…. ✍️
ಚಿಕ್ಕಮಗಳೂರು

