ಮನುಷ್ಯರನ್ನು ಕಾಣುವುದಕ್ಕೂ ಮನುಷ್ಯತ್ವವನ್ನು ನೋಡುವುದಕ್ಕೂ ವ್ಯತ್ಯಾಸವಿದೆ. ಒಂದು “ಸಮನ್ವಯಕ್ಕಾಗಿ” ಮುಖಾಮುಖಿ ಕಿವಿಯಾದ ಸಾವಿರ ಸಂಖ್ಯೆಯ ಮನಸ್ಸುಗಳು….
1 min read
ಅವಿನ್ ಟಿವಿ ಸುದ್ದಿಜಾಲ ✍️: ಮನುಷ್ಯರನ್ನು ಕಾಣುವುದಕ್ಕೂ ಮನುಷ್ಯತ್ವವನ್ನು ನೋಡುವುದಕ್ಕೂ ವ್ಯತ್ಯಾಸವಿದೆ. ಒಂದು “ಸಮನ್ವಯಕ್ಕಾಗಿ” ಮುಖಾಮುಖಿ ಕಿವಿಯಾದ ಸಾವಿರ ಸಂಖ್ಯೆಯ ಮನಸ್ಸುಗಳು.
ಚಿಕ್ಕಮಗಳೂರು ಜೂನ್ ೧೦: ಉಪನಿಷತ್ತಿನ ಪ್ರಕಾರ ಜಗತ್ತು ಭಾಗ ಮಾಡದ ಅಖಂಡತೆಯಾಗಿದೆ, ಬದುಕಿನ ದೃಷ್ಟಿಕೋನದಲ್ಲಿ ಯಾವುದೇ ತರತಮಗಳಿರಬಾರದು, ಅಖಂಡವು ಖಂಡವಾಗಿರುವುದರಿಂದ ಖಂಡವು ಅಖಂಡವಾಗಿರುವುದರಿಂದ ಜಗತ್ತಿನ ಜನರೆಲ್ಲ ಒಂದಾಗಿ ಬದುಕುವುದು ಶ್ರೇಷ್ಠ ಸಮಾಜದ ಉತ್ಕೃಷ್ಟ ಸಂಸ್ಕೃತಿಯ ಪ್ರತಿಪಾದನೆಯಾಗಿದೆ.
ಹೀಗಿದ್ದು ಕೂಡ ಇಡೀ ಜಗತ್ತು ಇಂದು ಪ್ರತ್ಯೇಕತೆಯ ಮನಸ್ಥಿತಿಗೆ ಬಂದು ನಿಂತಿದೆ, ಈ ಪ್ರತ್ಯೇಕತೆ ಎಂಬುದು ಕೇವಲ ಮನುಷ್ಯ ಮನುಷ್ಯರನ್ನು ಜಾತಿ ಧರ್ಮದ ಮತದ ಹೆಸರಿನಲ್ಲಿ ಬೇರೆ ಬೇರೆ ಮಾಡಿಲ್ಲ, ಮನುಷ್ಯ ಸಮಾಜವನ್ನು ಪ್ರತ್ಯೇಕ ಮಾಡಿದೆ, ಮನುಷ್ಯತ್ವವನ್ನು ಬಿರುಕುಗೊಳಿಸಿದೆ, ದೇವರನ್ನೂ ಸಹ ಪ್ರತ್ಯೇಕ ಮಾಡಿದೆ, ಇಷ್ಟೇ ಅಲ್ಲ ಪ್ರೀತಿಯನ್ನು ಕೂಡ ಪ್ರತ್ಯೇಕ ಮಾಡಿ ಹಂಚಿ ಹರಿದಿದೆ.
ಈ ಕಾರಣದಿಂದ ಜಗತ್ತು ಇಂದು ಸತ್ಯಕ್ಕೆ ಸಾಕ್ಷಿ ಕೇಳುವ ಹಂತಕ್ಕೆ ಬಂದು ನಿಂತಿದೆ, ಇದರ ಪರಿಣಾಮ ನೋವು, ಕುರೂಪ, ಸಿನಿಕತನ, ನಾನೇ ಶ್ರೇಷ್ಠ ತನ್ನ ಧರ್ಮವೇ ಶ್ರೇಷ್ಠ ಎಂಬ ಶ್ರೇಷ್ಠತೆಯ ವ್ಯಸನವು ಉತ್ಕೃಷ್ಟ ಸಮಾಜದ ಬೆಳವಣಿಗೆಗೆ ತೊಡಕಾಗುತ್ತಿದೆ.
ಇಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಭಾರತದ ಈ ನೆಲದ ಆಚಾರ್ಯರು ದಾರ್ಶನಿಕರು ಮಾನವೀಯ ಸಮಾಜದ ನಿರ್ಮಾಣಕ್ಕಾಗಿ, ಸಮ ಸಮಾಜದ ಬದುಕಿಗಾಗಿ ಮಾನವೀಯ ನೆಲೆಗಟ್ಟಿನಲ್ಲಿ ಇತಿಹಾಸವು ಮರೆಯದಂತಹ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ.
ಶ್ರೇಷ್ಠ ಸಮಾಜದ ಉಳಿವಿಗಾಗಿ ಉತ್ಕೃಷ್ಟ ಚಿಂತನಧಾರೆಗಳನ್ನು ಈ ನೆಲದಲ್ಲಿ ಆಗಿ ಹೋದ ತತ್ವಜ್ಞಾನಿಗಳು ದಾರ್ಶನಿಕರು ಆಚಾರ್ಯರು ನೆಲದ ಮಣ್ಣನ್ನು ಹದಗೊಳಿಸಿ ಬೀಜವನ್ನು ನೆಟ್ಟಂತೆ ನಿಜ ಬದುಕಿಗೆ ಬೇಕಾದ ಸುಪ್ರಭಾತಗಳನ್ನು ಕಟ್ಟಿಕೊಟ್ಟಿದ್ದಾರೆ .
ಹೀಗಿದ್ದೂ ಕೂಡ ಇಂದು ಧರ್ಮವನ್ನು ಕುರಿತು ನಾವು ಒಡೆದಾಳುವ ಚರ್ಚೆ ಮಾಡುತ್ತಿದ್ದೇವೆ ಹೊರತು ಧರ್ಮದಲ್ಲಿರುವ ತತ್ವವನ್ನು ಎಷ್ಟರಮಟ್ಟಿಗೆ ಅನುಷ್ಠಾನಗೊಳಿಸುತ್ತಿದ್ದೇವೆ ಎಂಬ ಬಗ್ಗೆ ಸಾಧು ಸಂತರಿಂದ ಹಿಡಿದು ಸಾಮಾನ್ಯ ಜನರು ತಮ್ಮನ್ನು ತಾವು ಸ್ವ ವಿಮರ್ಶೆಗೆ ಒಡ್ಡಿಕೊಳ್ಳಬೇಕಾಗಿದೆ, ಯಾವ ವ್ಯಕ್ತಿ ಅಥವಾ ಸಂಸ್ಥೆ ಸ್ವ ವಿಮರ್ಶೆ ಮಾಡಿಕೊಳ್ಳುತ್ತದೆಯೋ ಅಂತಹ ವ್ಯಕ್ತಿ ಮತ್ತು ಸಂಸ್ಥೆ ಪ್ರಖರವಾಗಿ ಬೆಳಗಲು ಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಚಿಕ್ಕಮಗಳೂರು ತಾಲೂಕು ಘಟಕವು ಶ್ರೀ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ ಮತ್ತು ಭಕ್ತಿ ಬಂಡಾರಿ ಬಸವೇಶ್ವರ ಜಯಂತಿಯನ್ನು ನಗರದ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡು, ಮಾನವ ಧರ್ಮಕ್ಕೆ ಜಯವಾಗಲಿ, ಕಾಯಕವೇ ಕೈಲಾಸ ಎಂಬ ಘೋಷಣೆಯನ್ನು ಸಭೆಗೆ ಪ್ರಧಾನವಾಗಿ ಮುಂದಿಟ್ಟು, ಆಚಾರ ವಿಚಾರ ಸಂಸ್ಕೃತಿಯು ಸೇರಿದಂತೆ ಸಮುದಾಯವನ್ನು ಕಟ್ಟಿ ಬೆಳೆಸುವುದರ ಜೊತೆಗೆ, ಸಕಲ ಜೀವಾತ್ಮದ ಲೇಸನ್ನು ಬಯಸುವ ಹಿನ್ನೆಲೆಯಲ್ಲಿ ಸರ್ವರೋಳಗು ಒಂದಾಗಿ ಬೆರೆತು ಬದುಕುವ ಬಗ್ಗೆ ಚಿಂತನಾ ಮಂಥನ ಮಾಡಿ ಸಮನ್ವಯದ ನುಡಿಯನ್ನು ನುಡಿಸಲಾಯಿತು.
ಶ್ರೀ ಶಂಕರದೇವರ ಮಠ ಮತ್ತು ಚಿಕ್ಕಮಗಳೂರಿನ ಶ್ರೀ ಬಸವ ತತ್ವಪೀಠದ ಉಭಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಜರುಗಿದ ಈ ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷರಾದ ಕೆ ಸಿ ನಿಶಾಂತ್ ಅವರು ವಹಿಸಿಕೊಂಡಿದ್ದರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್ ಡಿ ತಮ್ಮಯ್ಯ ನವರು ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಮುಖಂಡರು ಪ್ರಮುಖರು ದೊಡ್ಡ ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು.
•••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …… ✍️
ಚಿಕ್ಕಮಗಳೂರು

