लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
10/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗೆಲುವು ಕಂಡಿರಿ ನೀವು, ಎಡವಿ ಬಿದ್ದಿರಿ ನೀವು, ಎಚ್ಚೆತ್ತುಕೊಳ್ಳುವ ಸಮಯವಿದು, ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರೇ…….

1 min read

ನಡೆಯುವವರೆಡವದೆ ಕುಳಿತಿರುವವರೆಡವರೆ…..

( ನಡೆಯುವವರು ಎಡವದೆ ಕುಳಿತಿರುವವರು ಎಡವಿ ಬೀಳುವರೇ….)

ಗೆಲುವು ಕಂಡಿರಿ ನೀವು,
ಎಡವಿ ಬಿದ್ದಿರಿ ನೀವು, ಎಚ್ಚೆತ್ತುಕೊಳ್ಳುವ ಸಮಯವಿದು, ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ
ಶ್ರೀ ಡಿ. ಕೆ. ಶಿವಕುಮಾರ್ ಅವರೇ…….

ನಿಮ್ಮ ಆಡಳಿತದ ನೂರು ದಿನಗಳಲ್ಲಿ ಹುಟ್ಟಿಸಿದ ಭರವಸೆ, ಸೃಷ್ಟಿಸಿದ ಮಾಧ್ಯಮದ ಅಲೆ ನಿಧಾನವಾಗಿ ಮಸುಕಾದಂತಿದೆ. ಕಷ್ಟಪಟ್ಟು ಗಳಿಸಿದ ಅಧಿಕಾರವನ್ನು ಸುಲಭವಾಗಿ ಕಳೆದುಕೊಳ್ಳದಿರಿ. ಜನತೆಯ ಮನಸ್ಸಿನಲ್ಲಿ ಇನ್ನೂ ಸ್ವಲ್ಪ ಕಾಲ ಉಳಿಯುವ ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸಿ……….

ಮೈಸೂರು ದಸರಾ ಉತ್ಸವದಲ್ಲಿ ಅತಿಯಾದ ನಿಮ್ಮ ತೊಡಗಿಸಿಕೊಳ್ಳುವಿಕೆಯಿಂದ ಸಾಮಾನ್ಯ ಜನರಲ್ಲಿ ಒಂದಷ್ಟು ಕಸಿವಿಸಿ ಉಂಟು ಮಾಡಿದಿರಿ. ಅದೊಂದು ಸಾಂಸ್ಕೃತಿಕ ಉತ್ಸವ. ತಾವು ಅಷ್ಟೊಂದು ಆಳವಾಗಿ ಹೆಚ್ಚು ಸಮಯವನ್ನು ಅಲ್ಲಿ ಕಳೆಯುವ ಅವಶ್ಯಕತೆ ಏನು ಇರಲಿಲ್ಲ. ಮಹಾ ದೈವ ಭಕ್ತರಾದ, ಹೊಸದಾಗಿ ಅಧಿಕಾರ ಹಿಡಿದ ಕಾರಣದಿಂದ ನಿಮ್ಮ ಪತ್ನಿಯವರನ್ನು ಮುಖ್ಯ ವೇದಿಕೆಗೆ ಜೊತೆಗೆ ಕರೆದುಕೊಂಡು ಹೋಗಿದ್ದರ ಬಗ್ಗೆ ನಿಮಗೆ ಒಂದಷ್ಟು ರಿಯಾಯಿತಿ, ವಿನಾಯಿತಿ ನೀಡೋಣ……..

ಆದರೆ ಬಹು ಮುಖ್ಯವಾಗಿ ನಿಮ್ಮ ಸಚಿವ ಸಂಪುಟದಲ್ಲಿ ರಾಜ್ಯದ ಸುಮಾರು ಅರ್ಧ ಜನಸಂಖ್ಯೆಯ ಮಹಿಳೆಯರಿಗೆ ಒಂದೇ ಒಂದು ಪ್ರಾಧಾನ್ಯತೆ ಇಲ್ಲದೆ ಇಷ್ಟು ದಿನ ನೀವು ಆಡಳಿತ ನಡೆಸುತ್ತಿರುವುದು ಒಂದು ದೊಡ್ಡ ಕಪ್ಪು ಚುಕ್ಕೆ. ಸದ್ಯಕ್ಕೆ ಅದರಿಂದ ಆಡಳಿತಾತ್ಮಕ ತೊಂದರೆ ಏನೂ ಇಲ್ಲದೆ ಇದ್ದರೂ ನೈತಿಕವಾಗಿ ಅದೊಂದು ಭಾರಿ ಹೊಡೆತ. ಅದರಲ್ಲಿ ನೀವು ಮಾತ್ರವಲ್ಲ, ನಿಮ್ಮ ಹೈಕಮಾಂಡ್ ಕೂಡ ದೊಡ್ಡ ಬೇಜವಾಬ್ದಾರಿ ಪ್ರದರ್ಶಿಸಿದೆ.

ಯಾರು ಕೇಳುತ್ತಾರೆ, ಯಾರು ಬಿಡುತ್ತಾರೆ ಅನ್ನುವುದು ಮುಖ್ಯವಲ್ಲ. ನಿಮ್ಮಲ್ಲಿರುವ ಮಹಿಳಾ ಜನಪ್ರತಿನಿಧಿಗಳು ನಿಮ್ಮ ಮಾತನ್ನು ಧಿಕ್ಕರಿಸದೇ ಇರಬಹುದು, ಪ್ರತಿಭಟಿಸದೇ ಇರಬಹುದು. ಆದರೆ ಮಹಿಳೆಯರಿಗೆ ಪ್ರಾಧಾನ್ಯತೆ ಇಲ್ಲದಿರುವುದು ನಿಮ್ಮ ಆಡಳಿತದ ಅತ್ಯಂತ ಕೆಟ್ಟ ತೀರ್ಮಾನ. ಇಷ್ಟರಲ್ಲೇ ಅದು ಸರಿಹೋಗಬಹುದು. ಆದರೆ ಆ ಹೊಣೆಗಾರಿಕೆ ಮಾತ್ರ ನಿಮ್ಮದೇ. ನಾವು ನಿಮ್ಮನ್ನೇ ಟೀಕಿಸುವುದು.

ಇದೀಗ ಯಾವುದೇ ಸೂಕ್ಷ್ಮತೆ ಇಲ್ಲದೆ ಹಾಲಿನ ದರ ಮತ್ತು ಬಸ್ಸಿನ ಪ್ರಯಾಣದ ದರವನ್ನು ಇತಿಹಾಸದಲ್ಲೇ ಅತಿ ಎನ್ನುವಷ್ಟು ಹೆಚ್ಚಿಸಿರುವುದು ನಿಜಕ್ಕೂ ನಾಚಿಕೆಗೇಡಿನ ವಿಷಯ. ಹಾಲಿನ ದರ ಮತ್ತು ಬಸ್ಸಿನ ದರ ಏರಿಸುವಾಗ ಅದನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಮಂತ್ರಿಗಳು ಸಾರ್ವಜನಿಕರಲ್ಲಿ ಒಂದು ಸಣ್ಣ ಕ್ಷಮೆಯನ್ನೂ ಕೇಳದೆ, ಪಶ್ಚಾತಾಪದ ಛಾಯೆಯೂ ಇಲ್ಲದೆ, ಅಹಂಕಾರದಿಂದ ಅದು ತಮ್ಮ ಹಕ್ಕು ಎನ್ನುವ ರೀತಿಯಲ್ಲಿ ಬೆಲೆ ಏರಿಕೆ ನಿರ್ಧಾರವನ್ನು ಪ್ರಕಟಿಸಿದ ರೀತಿ ಇದೆಯಲ್ಲ, ಅದು ಖಂಡಿತ ಅಕ್ಷಮ್ಯ.

ಏಕೆಂದರೆ, ನಿಮಗೆ ಬೆಲೆ ಏರಿಕೆ ಅನಿವಾರ್ಯವಾಗಿರಬಹುದು. ಅದನ್ನು ಅತ್ಯಂತ ಸಂಕೋಚದಿಂದ ಸಾರ್ವಜನಿಕರ ಕ್ಷಮೆ ಕೇಳಿ, ಅವರಲ್ಲಿ ಆತ್ಮೀಯ ಮತ್ತು ಪ್ರೀತಿಪೂರ್ವಕ ಮನವಿ ಮಾಡಿಕೊಂಡು, ಕನಿಷ್ಠ ಪ್ರಮಾಣದ ಹೆಚ್ಚಳವನ್ನು ಮಾಡಿ, ಮುಂದೆ ಇನ್ನೊಂದಿಷ್ಟು ತಿಂಗಳುಗಳ ನಂತರ ಮತ್ತಷ್ಟು ಹೆಚ್ಚು ಮಾಡಿದ್ದರೆ ವ್ಯಾವಹಾರಿಕವಾಗಿ ಮತ್ತು ನೈತಿಕವಾಗಿ ನಿಮ್ಮನ್ನು ಸಣ್ಣದಾಗಿ ಟೀಕಿಸಬಹುದಿತ್ತು. ಏಕೆಂದರೆ ಬೆಲೆ ಏರಿಕೆಯನ್ನು ನಾವೆಂದೂ ಒಪ್ಪುವುದಿಲ್ಲ. ಆದರೆ ಬೆಲೆ ಏರಿಕೆ ಮಾಡಬೇಕಾದಾಗ ಇರಬೇಕಾದ ಕನಿಷ್ಠ ಸೌಜನ್ಯವೂ ಪತ್ರಿಕಾಗೋಷ್ಠಿ ನಡೆಸಿದವರಿಗೆ ಇರಲಿಲ್ಲ.

ಬೆಲೆ ಏರಿಕೆ ಎಷ್ಟೇ ಇರಲಿ ಬಡವರು ಅಥವಾ ಶ್ರೀಮಂತರು ನಿಮ್ಮನ್ನು ಕ್ಷಮಿಸಬಹುದಾದರೂ ಮಧ್ಯಮ ವರ್ಗ ಮಾತ್ರ ನಿಮ್ಮನ್ನು ಕ್ಷಮಿಸುವುದಿಲ್ಲ. ಜೊತೆಗೆ ಮಾಧ್ಯಮಗಳು ಇದನ್ನು ದೊಡ್ಡ ಪ್ರಮಾಣದಲ್ಲಿ ನಿಮಗೆ ವಿರುದ್ಧವಾಗಿ ಪ್ರಚಾರ ಮಾಡುತ್ತವೆ ಎನ್ನುವ ವಿವೇಚನೆಯನ್ನು ನೀವು ಕಳೆದುಕೊಂಡಿರಿ.

ಹಾಗೆಯೇ ಇನ್ನೊಂದು ಅತ್ಯಂತ ಶೋಚನೀಯ ನಿರ್ಧಾರವೆಂದರೆ, ನಿಮ್ಮ ಸರ್ಕಾರದ ಅಸಾಮರ್ಥ್ಯವನ್ನು, ಶಿಕ್ಷಣ ಸಚಿವರ ಅದಕ್ಷತೆಯನ್ನು ನೀವೇ ಬಯಲು ಮಾಡಿಕೊಂಡಿದ್ದು. ಸರ್ಕಾರಿ ಶಾಲೆಗಳ ಅದೋಗತಿಗೆ ಅನೇಕ ಕಾರಣಗಳಿವೆ. ಅದಕ್ಕೆ ನೀವು ಮತ್ತು ಈಗಿನ ಶಿಕ್ಷಣ ಸಚಿವರನ್ನು ಹೊಣೆ ಮಾಡಲಾಗುವುದಿಲ್ಲ. ಆದರೆ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳವರಿಗೆ ದತ್ತು ಕೊಡುವ ತೀರ್ಮಾನವಂತು ಅತ್ಯಂತ ಹುಚ್ಚು ಮತ್ತು ಆತ್ಮಘಾತಕ ಹಾಗೂ ಪ್ರಾಯೋಗಿಕವಲ್ಲದ ನಿರ್ಧಾರ ಎಂಬುದು ಖಂಡಿತ ವಾಸ್ತವ. ಸರ್ಕಾರಿ ಶಾಲೆಗಳನ್ನು ಒಂದಷ್ಟು ಅಭಿವೃದ್ಧಿಪಡಿಸಬೇಕು, ಗುಣಮಟ್ಟವನ್ನು ಉತ್ತಮಪಡಿಸಬೇಕು ಎಂಬ ನಿಮ್ಮ ಆಶಯವೇನೋ ಸರಿ ಇದೆ. ಆದರೆ ಅದಕ್ಕೆ ನೀವು ಅನುಸರಿಸುತ್ತಿರುವ ಮಾರ್ಗ ಮಾತ್ರ ತುಂಬಾ ಚಿಕ್ಕ ಮಕ್ಕಳ ನಿರ್ಧಾರದಂತಿದೆ.

ಖಾಸಗಿ ಶಾಲೆಯ ಶಿಕ್ಷಕರು, ಸರ್ಕಾರಿ ಶಾಲೆಯ ಶಿಕ್ಷಕರಿಗೆ ಮಾರ್ಗದರ್ಶನ ಮಾಡುವಷ್ಟು ಖಂಡಿತವಾಗಿಯೂ ಬೆಳೆದಿಲ್ಲ, ಸಾಧ್ಯವೂ ಇಲ್ಲ. ಅದನ್ನು ಸರ್ಕಾರಿ ಶಾಲೆ ಶಿಕ್ಷಕರು ಕೇಳುವುದೂ ಇಲ್ಲ. ಖಾಸಗಿ ಶಾಲೆಯ ಆಡಳಿತ ಮಂಡಳಿ ಸರ್ಕಾರಿ ನೌಕರರ ಮೇಲೆ ಮೇಲ್ವಿಚಾರಣೆ ಮಾಡುವುದು ಉತ್ತಮ ನಡೆಯೂ ಅಲ್ಲ. ಖಾಸಗಿ ಶಾಲೆಗಳಿಗೂ ಎಷ್ಟೋ ಸಮಸ್ಯೆಗಳಿವೆ. ಅವರು ಅವರ ಶಾಲೆಯನ್ನು ಅಭಿವೃದ್ಧಿಪಡಿಸುವುದು ಬಿಟ್ಟು ಇಲ್ಲಿಗೆ ಎಷ್ಟು ಮಹತ್ವ ಕೊಡಬಹುದು ನೀವೇ ಯೋಚಿಸಿ. ಖಂಡಿತವಾಗಿಯೂ ಅವರು ಇದನ್ನು ಎರಡನೆಯ ದರ್ಜೆಯ ಶಾಲೆಯಂತೆಯೇ ನೋಡುತ್ತಾರೆ. ಖಾಸಗಿ ಶಾಲೆ ಶಿಕ್ಷಕರನ್ನು ಅಲ್ಲಿನ ಆಡಳಿತ ಮಂಡಳಿಯೇ ನಿಯಂತ್ರಿಸುತ್ತದೆ. ಅವರಿಗೆ ಹಣ ಮುಖ್ಯವಾಗುತ್ತದೆಯೇ ಹೊರತು ಉಳಿದದ್ದು ನಗಣ್ಯ.

ಮಾನ್ಯ ಮುಖ್ಯಮಂತ್ರಿಗಳೇ, ಶಿಕ್ಷಣ ಮಂತ್ರಿಗಳೇ, ಒಳ್ಳೆಯ ಸೂಟು ಬೂಟಿನ, ಇಂಗ್ಲಿಷ್ ಮಾತನಾಡುವ ಖಾಸಗಿ ಶಾಲೆಯ ಮಕ್ಕಳೇ ಬಹಳ ಬುದ್ಧಿವಂತರು ಎಂಬ ತಪ್ಪು ಕಲ್ಪನೆಯಲ್ಲಿ ನೀವಿದ್ದೀರಿ. ಸರ್ಕಾರಿ ಶಾಲೆಯವರು ಕಲಿಯುವುದು ಬಡಮಕ್ಕಳು. ಬಹುತೇಕ ಅನಕ್ಷರಸ್ಥರ ಮಕ್ಕಳು. ಅವರಿಗೆ ಕೊರತೆ ಇರುವುದು ಸೂಟು ಬೂಟು ಅಥವಾ ಇಂಗ್ಲೀಷ್ ಅಲ್ಲ. ಬದಲಾಗಿ ಸರ್ಕಾರದ ಮಾತೃ ಹೃದಯ ಮತ್ತು ಶಿಕ್ಷಕರ ಜವಾಬ್ದಾರಿಯುತ ನಡೆ ಹಾಗೂ ಮೂಲಭೂತ ಸೌಕರ್ಯಗಳು. ಅದನ್ನು ನೀಡಿ ಒಳ್ಳೆಯ ಅಧಿಕಾರಿಗಳನ್ನು ಅದರ ಮೇಲ್ವಿಚಾರಣೆಗೆ ನೇಮಿಸಿ, ಶಿಕ್ಷಕರನ್ನು ಸತತವಾಗಿ ಮೇಲ್ವಿಚಾರಣೆ ಮಾಡಿ, ಅವರನ್ನು ಇತರ ಕೆಲಸಗಳಿಗೆ ಉಪಯೋಗಿಸಿಕೊಳ್ಳದೆ, ಅದು ನಮ್ಮದೇ ಶಾಲೆ ಎಂಬಂತೆ ಪೋಷಕರಿಗೂ, ಊರಿನ ಜನಗರಿಗೂ ಮನವರಿಕೆ ಮಾಡಿಕೊಟ್ಟು, ವಾಹನ ಸೌಲಭ್ಯ ಮುಂತಾದ ಖಾಸಗಿ ಶಾಲೆಗಳು ನೀಡುವಷ್ಟೇ ಪ್ರಾಮುಖ್ಯತೆ ನೀಡಿದರೆ ಸರ್ಕಾರಿ ಶಾಲೆಗಳು ಸ್ವಲ್ಪಮಟ್ಟಿಗೆ ಉತ್ತಮ ಗುಣಮಟ್ಟ ಹೊಂದಬಹುದು. ಅದನ್ನು ಬಿಟ್ಟು ಹೀಗೆ ನಿಮ್ಮ ಸಹಾಯಕತೆಯಿಂದ ಇನ್ಯಾರಿಗೋ ಅಡಮಾನ ಇಡುವುದು ತುಂಬಾ ಶೋಚನೀಯ ಪರಿಸ್ಥಿತಿ. ಇದು ಅತ್ಯಂತ ತಪ್ಪು ನಿರ್ಧಾರ.

ಮಾನ್ಯ ಮುಖ್ಯಮಂತ್ರಿಗಳೇ ನೀವು ಆಶಿಸುವ ಅಭಿವೃದ್ಧಿಯ ವೇಗ ನಿಜಕ್ಕೂ ಉತ್ತಮವಾಗಿದೆ. ಆದರೆ ನೀವು ರಾಜಕೀಯ ಒಳ ಸುಳಿಗಳಲ್ಲಿ ಅಥವಾ ನಿಮ್ಮ ಸಾಧನೆಯನ್ನೇ ಬಹುದೊಡ್ಡ ಸಾಧನೆ ಎಂದು ಪರಿಗಣಿಸಿ ಆ ಹಮ್ಮಿನಲ್ಲಿ ನನ್ನ ನಿರ್ಧಾರಗಳೆಲ್ಲವೂ ಸರಿ, ಚುನಾವಣಾ ಸಂದರ್ಭದಲ್ಲಿ ನಾನು ಜನರನ್ನು ಹೇಗೋ ಮನವೊಲಿಸಿ ಮತ್ತೆ ಚುನಾವಣೆ ಗೆಲ್ಲಬಹುದು ಎನ್ನುವ ಮನಸ್ಥಿತಿ ಹೊಂದಿದ್ದರೆ ಅದು ಒಳ್ಳೆಯ ಲಕ್ಷಣವಲ್ಲ. ಸೋಲು ಗೆಲುವಿಗಿಂತ ನಿಮ್ಮ ಅಧಿಕಾರ ಅವಧಿಯಲ್ಲಿ ನೀವು ಮಾಡಿದ ನಿರ್ಧಾರಗಳು ಶಾಶ್ವತವಾಗಿ ಉಳಿಯುತ್ತದೆ. ಇನ್ನಾದರೂ ಒಂದು ಒಳ್ಳೆ ತಂಡವನ್ನು ನೇಮಿಸಿಕೊಂಡು ಆಡಳಿತವನ್ನು ನಡೆಸಿ ನಿರ್ಧಾರ ಕೈಗೊಳ್ಳಿ. ನಿಮಗೆ ಒಳ್ಳೆಯದಾಗಲಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

About Author

More Stories

Leave a Reply

Your email address will not be published. Required fields are marked *

You may have missed