“ಚಾಮರಾಜನಗರ ಶೂಟೌಟ್ ಪ್ರಕರಣ : ನ್ಯಾಯಾಂಗ ತನಿಖೆಗೆ ಹರ್ಷ ಮೇಲ್ವಿನ್ ಲಸ್ರಾದೋ ಆಗ್ರಹ.”
1 min read
ಚಾಮರಾಜನಗರ, ಆಗಸ್ಟ್ 19: ಹನೂರು ತಾಲೂಕಿನ ಚಿಕ್ಕಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಮೃತರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು ಎಂದು ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೇಲ್ವಿನ್ ಲಸ್ರಾದೋ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹನೂರು ತಾಲೂಕಿನ ನಿವಾಸಿಗಳಾದ ಆಂಟನಿ ಸ್ವಾಮಿ (50), ಜಾನ್ ರೋಸ್ ಪೀಟರ್ (42) ಹಾಗೂ ಆಂಟನಿ ಕುಮಾರ್ (33) ಅವರು ಭಾನುವಾರ ಮುಂಜಾನೆ ಹನೂರು ವನ್ಯಜೀವಿ ವಿಭಾಗದ ಚಿಕ್ಕಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಯ ಅತಿರೇಕದ ಕ್ರಮದಿಂದ ಅಮಾಯಕ ಜೀವಗಳು ಬಲಿಯಾಗಿದ್ದು, ಮೂರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಆರೋಪಗಳು ಅಥವಾ ಕಾನೂನು ಉಲ್ಲಂಘನೆ ಕಂಡುಬಂದಿದ್ದರೆ, ಸಂಬಂಧಪಟ್ಟವರನ್ನು ಬಂಧಿಸಿ ಕಾನೂನು ಪ್ರಕ್ರಿಯೆಯಂತೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ನೇರವಾಗಿ ಗುಂಡು ಹಾರಿಸಿ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ ಎಂದು ಹರ್ಷ ಮೇಲ್ವಿನ್ ಲಸ್ರಾದೋ ಹೇಳಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಯ ಈ ಅಮಾನವೀಯ ವರ್ತನೆಯಿಂದ ಕ್ರೈಸ್ತ ಸಮುದಾಯಕ್ಕೆ ತೀವ್ರ ಆಘಾತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಪ್ರವೇಶ, ಬೇಟೆ ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಗಳನ್ನು ಕ್ರೈಸ್ತ ಸಮುದಾಯ ಎಂದಿಗೂ ಸಮರ್ಥಿಸುವುದಿಲ್ಲ. ಆದರೆ ಇಂತಹ ಆರೋಪಗಳು ಯಾರನ್ನಾದರೂ ಗುಂಡಿಕ್ಕಿ ಕೊಲ್ಲಲು ಸಮರ್ಥನೆಯಾಗುವುದಿಲ್ಲ. ಘಟನೆಯ ಸಂಪೂರ್ಣ ಸತ್ಯಾಂಶವನ್ನು ಹೊರತಂದು, ಜವಾಬ್ದಾರಿ ನಿಗದಿಪಡಿಸಿ, ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಜೀವಕ್ಕೆ ತಕ್ಷಣದ ಅಪಾಯವಿತ್ತೇ ಎಂಬ ಪ್ರಶ್ನೆಗೂ ಸ್ವತಂತ್ರ ತನಿಖೆಯ ಮೂಲಕವೇ ಸ್ಪಷ್ಟ ಉತ್ತರ ದೊರೆಯಬೇಕು. ಘಟನೆಯಲ್ಲಿ ಭಾಗಿಯಾಗಿದ್ದ ಎಲ್ಲ ಅರಣ್ಯ ಇಲಾಖೆ ಸಿಬ್ಬಂದಿಯ ಪಾತ್ರವನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮೃತರ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡುವ ಮೂಲಕ ನ್ಯಾಯ ಒದಗಿಸಬೇಕು. ಪ್ರಕರಣದ ಕುರಿತು ಯಾವುದೇ ಪೂರ್ವಾಗ್ರಹವಿಲ್ಲದೆ ತನಿಖೆ ನಡೆಸಿ, ತಪ್ಪಿತಸ್ಥರು ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹರ್ಷ ಮೇಲ್ವಿನ್ ಲಸ್ರಾದೋ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
✍🏻ಬರಹ ಕೃಪೆ.✍🏻

ಹರ್ಷ ಮೇಲ್ವಿನ್ ಲಸ್ರಾದೋ.
ನಿರ್ದೇಶಕರು.ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ,ಬೆಂಗಳೂರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

