“ಖಾಕಿಯೊಳಗೆ ಅರಳಿದ ಕವಿತೆಗಳು : ಪಿಎಸ್ಐ ಧನರಾಜ್ ತವನಂದಿ ಅವರ “ಅಮ್ಮಾ ಎಂದರೆ ಅಷ್ಟೇ ಸಾಕೇ,,,?” ಪುಸ್ತಕ ಇಂದು ಜನಾರ್ಪಣೆ.”
1 min read
ಚಿಕ್ಕಮಗಳೂರು ಆ 18: ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಧನರಾಜ್ ತವನಂದಿ ಅವರ ವಿರಚಿತ ಚೊಚ್ಚಲ ಕೃತಿ ಅಮ್ಮಾ ಎಂದರೆ ಅಷ್ಟೇ ಸಾಕೇ,,,? ಇಂದು ಚಿಕ್ಕಮಗಳೂರು ನಗರದ ರಾಜ್ ಮಹಲ್ ಆರ್ಕಿಡ್ ಹೋಟೆಲ್ ಸಭಾಂಗಣದಲ್ಲಿ 18 ಆಗಸ್ಟ್ 2026ರ ಸಂಜೆ ಘಂಟೆ 5:00ಕ್ಕೆ ಜನಾರ್ಪಣೆಗೊಳ್ಳಲಿದೆ.
ಪದಕೋಶಗಳಲ್ಲೋ ಲಭ್ಯವಾಗದ ಪದಗಳನ್ನು ಹುಟ್ಟು ಹಾಕುವ ಶಕ್ತಿ ಮತ್ತು ಜಾಣ್ಮೆ ಕವಿಗಳಿಗೆ, ಬರಹಗಾರರಿಗೆ ಇರುತ್ತದೆ.ಹಾಗೆ ಯಾರೇ ಒಬ್ಬ ಬರಹಗಾರರು ತಾವು ರಚಿಸಿರುವ
ಪುಸ್ತಕ ಕೇವಲ ತಮ್ಮ ಹೆಸರಿಗಾಗಿ, ಪ್ರಸಿದ್ಧಿಗಾಗಿ,ಪ್ರಚಾರಕ್ಕಾಗಿ ಮಾತ್ರ ಬರೆಯುವುದಿಲ್ಲ ಬರೆಯಬಾರದು ಕೂಡ, ಬರಹಗಾರರ ಪ್ರತಿಯೊಂದು ಬರವಣಿಗೆಗಳು ಮನುಷ್ಯ ಮನುಷ್ಯರನ್ನು ಬೆಸೆಯುವ, ಪ್ರತಿಯೊಬ್ಬರು ಪರಸ್ಪರ ಹತ್ತಿರವಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು, ಜೀವ ಕಾರುಣ್ಯದ ನಡವಳಿಕೆಗಳನ್ನು ರೂಢಿಸುವ ಪ್ರಕ್ರಿಯೆಗಳು ಪ್ರತಿ ಬರಹದೊಳಗೊ ಅಡಗಿರಬೇಕು.
ಪೊಲೀಸರಿಗೂ ಸಾಹಿತ್ಯಕ್ಕೂ ಸಂಬಂಧವೇ ಇಲ್ಲವೇನೋ? ಅವರೇನಿದ್ದರೂ ಕಾನೂನಿನ ಪರಿಪಾಲಕರು ಎಂಬ ಭಾವ ಸಮಾಜದ ಮಧ್ಯೆ ಹೆಚ್ಚಾಗಿ ಕಾಣುತ್ತಿದೆ, ಹಾಗೇನಿಲ್ಲ ! ಪೊಲೀಸ್ ಇಲಾಖೆಯೊಳಗೊ ಪ್ರಸಿದ್ಧ ಸಾಹಿತಿಗಳು ಇದ್ದಾರೆ, ಅತ್ಯುತ್ತಮ ಬರಹಗಾರರು ಸಿಗುತ್ತಾರೆ,ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತಿದ್ದ ಸಮಯದಲ್ಲಿಯೇ ಗುರುಪ್ರಸಾದ್, ಟೈಗರ್ ಅಶೋಕ್ ಕುಮಾರ್, ಶಿವರಾಮ್ , ಚಂದ್ರಶೇಖರ್ ಮುಂತಾದವರು ಅಂಕಣಕಾರರಾಗಿ ಸಾಹಿತಿಗಳಾಗಿ ಅತ್ಯುತ್ತಮ ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ, ಆದರೆ ಅವರ ಸಂಖ್ಯೆ ವಿರಳ ಅಷ್ಟೆ, ಈಗ ಈ ಹಿರಿಯ ಪೊಲೀಸ್ ಅಧಿಕಾರಿಗಳ ಸಾಲಿನಲ್ಲಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯುವ ಪ್ರತಿಭೆ ಧನರಾಜ್ ತವನಂದಿ ಅವರು ತಮ್ಮ ಅನುಭವಕ್ಕೆ ದಕ್ಕಿದ ಹಲವು ಸಂಗತಿಗಳನ್ನು ಕ್ರೂಡೀಕರಿಸಿ ಅಮ್ಮಾ ಎಂದರೆ ಅಷ್ಟೇ ಸಾಕೇ,,,?ಎಂಬ ಕವನ ಸಂಕನವನ್ನು ಓದುಗ ಲೋಕಕ್ಕೆ ಕೊಡಮಾಡುತ್ತಿದ್ದಾರೆ .
ಚಿಕ್ಕಮಗಳೂರು ನಗರದ ರಾಜಮಹಲ್ ಆರ್ಕಿಡ್ ಹೋಟಲ್ ಸಭಾಂಗಣದಲ್ಲಿ ನಡೆಯುವ ಈ ಪುಸ್ತಕ ಜನಾರ್ಪಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ವಹಿಸಲಿದ್ದು, ಪುಸ್ತಕವನ್ನು ಕುರಿತು ಸಾಹಿತಿ ಮತ್ತು ಉಪನ್ಯಾಸಕ ಡಾ. ಎಚ್ ಎಸ್ ಸತ್ಯನಾರಾಯಣ ಮಾತನಾಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯ ಹಲವು ಹಿರಿಯ ಅಧಿಕಾರಿಗಳು ಭಾಗಿಯಾಗಿ ಪೋಲಿಸ್ ಇಲಾಖೆ ಮತ್ತು ಸಾಹಿತ್ಯಕ್ಕೂ ಇರುವ ಮಹತ್ವದ ಸಂಬಂಧವನ್ನು ಕುರಿತು ಮಾತನಾಡುತ್ತಾರೆ.
ಪ್ರತಿ ಪೊಲೀಸ್ ಠಾಣೆಗಳನ್ನು ಜನಸ್ನೇಹಿ ಠಾಣೆಗಳನ್ನಾಗಿ ಮಾಡಬೇಕಾಗಿರುವ ಆಶಯ ಸರ್ಕಾರ ಮತ್ತು ಜನಮನದ್ದೂ ಕೊಡ ಆಗಿರುವುದರಿಂದ ಜನ ಸ್ನೇಹಿ ಪೊಲೀಸ್ ಠಾಣೆಗಳ ನಿರ್ಮಾಣದಲ್ಲಿ ಸಾಹಿತ್ಯ ಕೃಷಿ ಹೆಚ್ಚು ಸಹಕಾರಿಯಾಗುತ್ತದೆ ಎಂಬ ಆಶಯ ಅವಿನ್ ಟಿವಿ ಸುದ್ದಿ ವಾಹಿನಿಯದು.
•••••••••••
✍🏻ಬರಹ ಕೃಪೆ.✍🏻

ಡಿ.ಎಂ.ಮಂಜುನಾಥಸ್ವಾಮಿ.
ಅವಿನ್ ಟಿವಿ ಸುದ್ದಿಜಾಲ.
ಚಿಕ್ಕಮಗಳೂರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

