“ಅಲಗೇಶ್ವರ ಜೀಪ್ ಆಫ್ ರೋಡಿಂಗ್ ಇಂದ ಪರಿಸರಕ್ಕೆ ಹಾನಿ ಆರೋಪ : ಸಮಗ್ರ ಅಧ್ಯಯನ ನಡೆಸಿ ಕ್ರಮಕ್ಕೆ ಪರಿಸರಾಸಕ್ತರ ಒತ್ತಾಯ.”
1 min read
ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಅಲಗೇಶ್ವರದಲ್ಲಿ ಆಗಸ್ಟ್ 15ರಂದು ಭದ್ರಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ‘ಮೋಟೋ ಮೇನಿಯಾ’ ಹೆಸರಿನಲ್ಲಿ ನಡೆದ ಜೀಪ್ ಆಫ್ ರೋಡಿಂಗ್ ಇಂದ ಪರಿಸರಕ್ಕೆ ಹಲವು ರೀತಿಯ ಹಾನಿಯಾಗಿದೆ ಎಂದು ಪರಿಸರಾಸಕ್ತರ ತಂಡ ಆರೋಪಿಸಿದೆ.

ಪರಿಸರಾಸಕ್ತರ ತೀವ್ರ ವಿರೋಧ ಹಾಗೂ ದೂರುಗಳ ನಡುವೆಯೂ ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಅನುಮತಿ ನೀಡಿತ್ತು. ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಖಾಸಗಿ ಜಾಗದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಯಾವುದೇ ಅರಣ್ಯ ಪ್ರದೇಶ ಇಲ್ಲ ಹಾಗೂ ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಇಲ್ಲ ಎಂಬ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ರ್ಯಾಲಿ ಯಾವುದೇ ಅಡೆತಡೆಯಿಲ್ಲದೆ ನಡೆದಿದೆ ಎಂದು ಪರಿಸರಾಸಕ್ತರು ತಿಳಿಸಿದ್ದಾರೆ.
ರ್ಯಾಲಿ ನಡೆದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪರಿಸರಾಸಕ್ತರ ತಂಡವು ಕಾರ್ಯಕ್ರಮದಿಂದ ಉಂಟಾದ ಪರಿಸರ ಪರಿಣಾಮಗಳ ಕುರಿತು ಅಧ್ಯಯನ ನಡೆಸಿದ್ದು, ಹಲವು ಕಳವಳಕಾರಿ ಅಂಶಗಳು ಗಮನಕ್ಕೆ ಬಂದಿವೆ ಎಂದು ತಿಳಿಸಿದೆ.
ಗಿಡ, ಮರಗಳ ಕಡಿತ; ನೈಸರ್ಗಿಕ ಭೂಪ್ರದೇಶಕ್ಕೆ ಹಾನಿ
ಆಫ್ ರೋಡಿಂಗ್ಗಾಗಿ ಟ್ರ್ಯಾಕ್ ನಿರ್ಮಿಸುವ ಉದ್ದೇಶದಿಂದ ಸ್ಥಳದಲ್ಲಿ ಹಲವು ಗಿಡ-ಮರಗಳನ್ನು ಕಡಿದು ಹಾಕಲಾಗಿದೆ. ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳ ಮೂಲಕ ಗಿಡ, ಮರಗಳನ್ನು ನೂಕಿ ನಾಶಪಡಿಸಿರುವುದು ಕಂಡುಬಂದಿದ್ದು, ನೈಸರ್ಗಿಕ ಭೂಪ್ರದೇಶಕ್ಕೂ ಹಾನಿಯಾಗಿದೆ ಎಂದು ಪರಿಸರಾಸಕ್ತರು ಆರೋಪಿಸಿದ್ದಾರೆ.
ಕಾರ್ಯಕ್ರಮಕ್ಕೂ ಮುನ್ನ ಸ್ಥಳ ಪರಿಶೀಲನೆ ನಡೆಸಿದ್ದ ಅರಣ್ಯಾಧಿಕಾರಿಗಳಿಗೆ ಈ ಅಂಶಗಳು ಕಾಣಿಸದೇ ಇರುವುದಕ್ಕೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸೆಕ್ಷನ್-4 ಅರಣ್ಯ ಪ್ರದೇಶದಲ್ಲೂ ರಸ್ತೆ ನಿರ್ಮಾಣ ಆರೋಪ
ಕೆಲವು ಕಡೆ ಸೆಕ್ಷನ್-4 ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಿ, ಆಫ್ ರೋಡಿಂಗ್ಗೆ ಅಗತ್ಯವಾದ ಟ್ರ್ಯಾಕ್ಗಳನ್ನು ರಚಿಸಲಾಗಿದೆ. ಗುಡ್ಡಗಳನ್ನು ಕೊರೆದು ರಸ್ತೆ ನಿರ್ಮಿಸಿರುವುದು ಕಂಡುಬಂದಿದೆ ಎಂದು ಪರಿಸರಾಸಕ್ತರು ತಿಳಿಸಿದ್ದಾರೆ.
ಕಾರ್ಯಕ್ರಮದ ಹಿಂದಿನ ದಿನ ಸ್ಥಳ ಪರಿಶೀಲನೆ ನಡೆಸಿದ್ದ ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳ ಗಮನಕ್ಕೂ ಈ ಅಂಶಗಳು ಬಂದಿಲ್ಲ ಎಂಬುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
200ಕ್ಕೂ ಹೆಚ್ಚು ಜೀಪ್ಗಳು; ಶಬ್ದ, ಹೊಗೆ ಮಾಲಿನ್ಯದ ಆರೋಪ
ಕಾರ್ಯಕ್ರಮದ ದಿನ ಸ್ಥಳದಲ್ಲಿ ಸುಮಾರು 200ಕ್ಕೂ ಹೆಚ್ಚು ಜೀಪ್ಗಳು ಇದ್ದವು. ಬಹುತೇಕ ವಾಹನಗಳಿಂದ ನಿಗದಿತ ಮಿತಿಗಿಂತ ಹೆಚ್ಚಿನ ಶಬ್ದ ಹೊರಬರುತ್ತಿತ್ತು. ಮೊಬೈಲ್ನಲ್ಲಿನ ಸೌಂಡ್ ಮೀಟರ್ ಅಪ್ಲಿಕೇಶನ್ನಲ್ಲಿ ಕೆಲವು ಜೀಪ್ಗಳ ಶಬ್ದ 104 ಡೆಸಿಬಲ್ವರೆಗೆ ದಾಖಲಾಗಿದೆ ಎಂದು ಪರಿಸರಾಸಕ್ತರು ತಿಳಿಸಿದ್ದಾರೆ.
ಕೆಲವು ಜೀಪ್ಗಳು ಅತಿಯಾದ ಹೊಗೆ ಹೊರಸೂಸುತ್ತಿದ್ದವು. ಕೆಲವರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವುದು ಕಂಡುಬಂದಿದೆ ಎಂದು ಆರೋಪಿಸಿರುವ ಅವರು, ಸ್ಥಳದಲ್ಲಿ ಪರಿಶೀಲನೆ ನಡೆಸಲು ಆರ್ಟಿಒ ಅಥವಾ ಸಂಬಂಧಿಸಿದ ಯಾವುದೇ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿರಲಿಲ್ಲ ಎಂದು ತಿಳಿಸಿದ್ದಾರೆ.
ಹುಲಿ ಕಾರಿಡಾರ್ ಮೂಲಕ ವಾಹನಗಳ ಸಂಚಾರ
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಅನುಮೋದಿತ ‘ಭದ್ರಾ–ಕುದುರೆಮುಖ ಹುಲಿ ಕಾರಿಡಾರ್’ ಮೂಲಕ ರ್ಯಾಲಿಗೆ ಬಂದ ಬಹುತೇಕ ವಾಹನಗಳು ಸಂಚರಿಸಿರುವುದನ್ನು ಜಿಪಿಎಸ್ ನಿರ್ದೇಶಾಂಕಗಳೊಂದಿಗೆ ದಾಖಲಿಸಲಾಗಿದೆ ಎಂದು ಪರಿಸರಾಸಕ್ತರು ಹೇಳಿದ್ದಾರೆ.
ಪರಿವರ್ತಿತ ಸೈಲೆನ್ಸರ್ ಹೊಂದಿದ್ದ ಜೀಪ್ಗಳು ಹಾಗೂ ಟ್ರ್ಯಾಕ್ಟರ್ಗಳು ಭಾರೀ ಶಬ್ದ ಮಾಡುತ್ತಾ ಸಂಚರಿಸಿದ್ದವು. ರಾತ್ರಿ ವೇಳೆಯಲ್ಲಿಯೂ ನೂರಾರು ವಾಹನಗಳು ಗದ್ದಲದೊಂದಿಗೆ ಸಂಚರಿಸಿದ್ದು, ಇದರಿಂದ ವನ್ಯಜೀವಿಗಳ ಸಹಜ ಜೀವನ ಹಾಗೂ ಸಂಚಾರಕ್ಕೆ ತೊಂದರೆಯಾಗಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಮಣ್ಣು ಕೊಚ್ಚಿ ನೀರಿನ ಮೂಲಗಳಿಗೆ ಸೇರ್ಪಡೆ
ಆಫ್ ರೋಡಿಂಗ್ಗಾಗಿ ಜೆಸಿಬಿ ಹಾಗೂ ಹಿಟಾಚಿಗಳ ಮೂಲಕ ಸ್ಥಳವನ್ನು ಅಗೆದು ರಸ್ತೆ ಮತ್ತು ಟ್ರ್ಯಾಕ್ ನಿರ್ಮಿಸಲಾಗಿತ್ತು. ಕಾರ್ಯಕ್ರಮದ ದಿನ ಆಗಾಗ ಮಳೆಯಾಗಿದ್ದರಿಂದ ಅಗೆದ ಪ್ರದೇಶದ ಮಣ್ಣು ಕೊಚ್ಚಿಕೊಂಡು ತೊರೆ, ಹಳ್ಳ ಹಾಗೂ ಕೆರೆ ಸೇರಿದಂತೆ ನೀರಿನ ಮೂಲಗಳಿಗೆ ಸೇರಿದೆ. ಇದರಿಂದ ಹೂಳು ತುಂಬುವಿಕೆ ಹಾಗೂ ನೀರಿನ ಮೂಲಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಪರಿಸರಾಸಕ್ತರು ಹೇಳಿದ್ದಾರೆ.
ಇದರ ಪರಿಣಾಮ ಜಲಚರಗಳ ಮೇಲೂ ದುಷ್ಪರಿಣಾಮ ಬೀರುವ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರಕ್ಕೆ ಅಪಾಯ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಅಲ್ಲಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆದಿರುವುದು ಕಂಡುಬಂದಿದೆ. ಇವು ಮುಂದೆ ಸಣ್ಣ ತುಂಡುಗಳಾಗಿ ನೀರಿನ ಮೂಲಗಳಿಗೆ ಸೇರುವ ಸಾಧ್ಯತೆ ಇದೆ. ಪ್ಲಾಸ್ಟಿಕ್ ಬಾಟಲಿಗಳು ಭೂಮಿಯಲ್ಲಿ ಸುಲಭವಾಗಿ ಕರಗುವುದಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುವುದು ಪರಿಸರದ ದೃಷ್ಟಿಯಿಂದ ಬೇಜವಾಬ್ದಾರಿಯ ವರ್ತನೆ ಎಂದು ಪರಿಸರಾಸಕ್ತರು ತಿಳಿಸಿದ್ದಾರೆ.
ಮಧ್ಯರಾತ್ರಿಯ ನಂತರವೂ ಡಿಜೆ ಪಾರ್ಟಿ ಆರೋಪ
ರಾತ್ರಿ 12 ಗಂಟೆಯ ನಂತರವೂ ಕಾರ್ಯಕ್ರಮದ ಸ್ಥಳದಲ್ಲಿ ಪಾರ್ಟಿ ನಡೆದಿದ್ದು, ಅಬ್ಬರದ ಡಿಜೆ ಸಂಗೀತ ಅಳವಡಿಸಲಾಗಿತ್ತು. ಇದರಿಂದ ಸುತ್ತಮುತ್ತಲಿನ ಪ್ರಾಣಿ, ಪಕ್ಷಿ ಹಾಗೂ ಇತರ ಜೀವಜಂತುಗಳಿಗೆ ತೊಂದರೆಯಾಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಅಬ್ಬರದ ಶಬ್ದದ ಕುರಿತು ಪರಿಸರಾಸಕ್ತರು ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ, ಎರಡೂ ಇಲಾಖೆಗಳು ಪರಸ್ಪರ ಜವಾಬ್ದಾರಿ ವರ್ಗಾಯಿಸಿಕೊಂಡು ಹೊಣೆಗಾರಿಕೆಯಿಂದ ನುಣುಚಿಕೊಂಡವು ಎಂದು ಆರೋಪಿಸಿದ್ದಾರೆ.
ಸಾರ್ವಜನಿಕ ರಸ್ತೆಗಳಿಗೂ ಕೆಸರು
ಆಫ್ ರೋಡಿಂಗ್ನಲ್ಲಿ ಭಾಗವಹಿಸಿದ್ದ ವಾಹನಗಳ ಚಕ್ರಗಳು ಸಂಪೂರ್ಣ ಕೆಸರಾಗಿದ್ದು, ಬಳಿಕ ಅವು ಸಾರ್ವಜನಿಕ ರಸ್ತೆಯಲ್ಲಿ ಸಂಚರಿಸಿದ್ದರಿಂದ ಅಲಗೇಶ್ವರ ಎಸ್ಟೇಟ್ನಿಂದ ಜಯಪುರ–ಕೊಪ್ಪ ಮುಖ್ಯರಸ್ತೆಯವರೆಗಿನ ರಸ್ತೆಗಳು ಕೆಸರುಮಯವಾಗಿವೆ. ಅಲಗೇಶ್ವರದಿಂದ ಬಾಳೆಹೊನ್ನೂರು ಸಂಪರ್ಕಿಸುವ ರಸ್ತೆಯ ಪರಿಸ್ಥಿತಿಯೂ ಇದೇ ರೀತಿಯಾಗಿದೆ ಎಂದು ಪರಿಸರಾಸಕ್ತರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಕೂಲಿ ಕಾರ್ಮಿಕರು ಹಾಗೂ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ 4×4 ವಾಹನಗಳಂತಹ ಸೌಲಭ್ಯಗಳಿಲ್ಲ. ಕೆಲವರ ಮನರಂಜನೆಗಾಗಿ ಸಾರ್ವಜನಿಕ ರಸ್ತೆ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿಯಾಗುವುದು ಬೇಜವಾಬ್ದಾರಿತನದ ಪರಮಾವಧಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಜಾಗವಾದರೂ ಪರಿಸರ ಸಂರಕ್ಷಣೆ ಅಗತ್ಯ
ಖಾಸಗಿ ಜಾಗವೆಂಬ ಕಾರಣಕ್ಕೆ ತಮಗಿಷ್ಟ ಬಂದಂತೆ ಏನು ಬೇಕಾದರೂ ಮಾಡಬಹುದು ಎಂಬ ಮನೋಭಾವ ಸರಿಯಲ್ಲ. ಆ ಜಾಗದಲ್ಲಿರುವ ಪ್ರಾಣಿ, ಪಕ್ಷಿ ಹಾಗೂ ಇತರ ಜೀವಜಂತುಗಳು ಖಾಸಗಿ ಆಸ್ತಿಯಲ್ಲ. ಮನರಂಜನೆ ಹಾಗೂ ಸಾಹಸ ಚಟುವಟಿಕೆಗಳಿಂದ ಜೀವವೈವಿಧ್ಯಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಪರಿಸರಾಸಕ್ತರು ಅಭಿಪ್ರಾಯಪಟ್ಟಿದ್ದಾರೆ.
FMSCI ಪರವಾನಗಿ ಕುರಿತು ಪರಿಶೀಲನೆಗೆ ಒತ್ತಾಯ
ಈ ಆಫ್ ಲೋಡಿಂಗ್ Federation of Motor Sports Clubs of India (FMSCI)ಯಿಂದ ಅಗತ್ಯ ಪರವಾನಗಿ ಅಥವಾ ಲೈಸೆನ್ಸ್ ಪಡೆಯಲಾಗಿತ್ತೇ ಎಂಬುದರ ಕುರಿತು ಪರಿಶೀಲನೆ ನಡೆಸಬೇಕು ಎಂದು ಪರಿಸರಾಸಕ್ತರು ಒತ್ತಾಯಿಸಿದ್ದಾರೆ.
ಪರವಾನಗಿ ಇಲ್ಲದೆ ಈ ಆಫ್ ರೋಡಿಂಗ್ ನಡೆಸಿದ್ದರೆ ಹಾಗೂ ಭಾಗವಹಿಸಿದವರು ಅಗತ್ಯ FMSCI ಮೋಟಾರ್ ಸ್ಪೋರ್ಟ್ಸ್ ಲೈಸೆನ್ಸ್ ಹೊಂದಿರದಿದ್ದರೆ, ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂವಿಧಾನದ ಮೂಲಭೂತ ಕರ್ತವ್ಯ ನೆನಪಿಸಿದ ಪರಿಸರಾಸಕ್ತರು
ಭಾರತ ಸಂವಿಧಾನದ ವಿಧಿ 51ಎ(ಜಿ)ಯಲ್ಲಿ ಅರಣ್ಯಗಳು, ಸರೋವರಗಳು, ನದಿಗಳು ಹಾಗೂ ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಮತ್ತು ಅಭಿವೃದ್ಧಿಪಡಿಸುವುದು ಹಾಗೂ ಪ್ರಾಣಿಗಳ ಬಗ್ಗೆ ಅನುಕಂಪ ತೋರುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ ಎಂದು ಉಲ್ಲೇಖಿಸಲಾಗಿದೆ.
ಆದರೆ,ಆಫ್ ರೋಡಿಂಗ್ ಅಲ್ಲಿ ಭಾಗವಹಿಸಿದವರು ತಮ್ಮ ಹಕ್ಕುಗಳ ಬಗ್ಗೆ ಮಾತನಾಡುವ ಉಮೇದಿನಲ್ಲಿ ಪರಿಸರ ಸಂರಕ್ಷಿಸುವ ಮೂಲಭೂತ ಕರ್ತವ್ಯವನ್ನು ಮರೆತಂತಾಗಿದೆ ಎಂದು ಪರಿಸರಾಸಕ್ತರು ಟೀಕಿಸಿದ್ದಾರೆ.
ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಆಗ್ರಹ
ಚಿಕ್ಕಮಗಳೂರು ಜಿಲ್ಲಾಡಳಿತ, ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆಗಳು ಕಾರ್ಯಕ್ರಮದಿಂದ ಉಂಟಾದ ಪರಿಸರ ಪರಿಣಾಮಗಳಿಗೆ ಹೊಣೆಗಾರರಾಗಬೇಕು ಎಂದು ಪರಿಸರಾಸಕ್ತರು ಒತ್ತಾಯಿಸಿದ್ದಾರೆ.
ಆಫ್ ರೋಡಿಂಗಿಗೆ ಅವಕಾಶ ನೀಡಬಾರದು ಎಂದು ಕಾರ್ಯಕ್ರಮಕ್ಕೂ ಮುನ್ನವೇ ನಿರಂತರವಾಗಿ ಮನವಿ ಸಲ್ಲಿಸಿ, ಪರಿಸರ ಹಾನಿಯ ಅಪಾಯದ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಆಗಸ್ಟ್ 11 ಮತ್ತು 13ರಂದು ನೀಡಿದ್ದ ದೂರುಗಳಿಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳು ವರದಿ ಕೇಳಿದ ಸಂದರ್ಭದಲ್ಲಿ ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ವರದಿಯಲ್ಲಿ ‘ದುರುದ್ದೇಶಪೂರಿತ ದೂರು’ ಎಂಬ ಪದ ಬಳಸಿರುವುದು ವಿಷಾದನೀಯ ಎಂದು ಪರಿಸರಾಸಕ್ತರು ಹೇಳಿದ್ದಾರೆ.
ಸ್ಥಳದಲ್ಲಿ ಸಂಭವಿಸಿದ ಗಿಡ, ಮರ ಹಾಗೂ ಪರಿಸರ ನಾಶ, ಸಮೀಪದ ಸೆಕ್ಷನ್-4 ಅರಣ್ಯ ಪ್ರದೇಶದ ವನ್ಯಜೀವಿಗಳ ಮೇಲೆ ಉಂಟಾಗಬಹುದಾದ ಶಬ್ದ ಮತ್ತು ವಾಯುಮಾಲಿನ್ಯದ ಪರಿಣಾಮ, ನೀರಿನ ಮೂಲಗಳಿಗೆ ಆಗಬಹುದಾದ ಹಾನಿ, ಮಣ್ಣಿನ ಸವಕಳಿ, ರಾಸಾಯನಿಕಗಳಿಂದ ಜೀವವೈವಿಧ್ಯಕ್ಕೆ ಉಂಟಾಗಬಹುದಾದ ಅಪಾಯ ಹಾಗೂ ವಾಹನಗಳು ಹುಲಿ ಕಾರಿಡಾರ್ ಮೂಲಕ ಸಂಚರಿಸಬೇಕಾದ ಅನಿವಾರ್ಯತೆಯಂತಹ ಪ್ರಮುಖ ಅಂಶಗಳನ್ನು ಪರಿಗಣಿಸದೆ ಏಕಪಕ್ಷೀಯ ವರದಿ ಸಲ್ಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿರುವ ವಾಸ್ತವಾಂಶಗಳನ್ನು ಪರಿಶೀಲಿಸುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ದೂರಿನ ಉದ್ದೇಶ ಅಥವಾ ದುರುದ್ದೇಶವನ್ನು ನಿರ್ಧರಿಸುವ ಅಧಿಕಾರ ಅಧಿಕಾರಿಗಳಿಗೆ ಇದೆಯೇ ಎಂಬುದನ್ನೂ ಪರಿಶೀಲಿಸಬೇಕಾಗಿದೆ ಎಂದು ಪರಿಸರಾಸಕ್ತರು ಹೇಳಿದ್ದಾರೆ.
ಸಮಗ್ರ ತನಿಖೆಗೆ ಒತ್ತಾಯ
ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ, ಆಫ್ ರೋಡಿಂಗ್ ಚಟುವಟಿಕೆಯಿಂದ ಉಂಟಾದ ಹಲವು ಪರಿಸರ ಹಾನಿಗಳನ್ನು ತಡೆಯಬಹುದಿತ್ತು. ಪೊಲೀಸ್, ಅರಣ್ಯ ಇಲಾಖೆ ಹಾಗೂ ಪಂಚಾಯಿತಿ ಅಧಿಕಾರಿಗಳು ಪರಸ್ಪರ ಜವಾಬ್ದಾರಿ ವರ್ಗಾಯಿಸಿಕೊಳ್ಳದೆ ಕರ್ತವ್ಯ ನಿರ್ವಹಿಸಬೇಕಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ಗ್ರಾಮೀಣ ಪರಿಸರ ಸಂರಕ್ಷಣೆಯ ಹಿನ್ನೆಲೆಯಲ್ಲಿ ನೀಡಿರುವ ಲಿಖಿತ ನಿರ್ದೇಶನಗಳಿದ್ದರೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಪರಿಸರಾಸಕ್ತರು ಆರೋಪಿಸಿದ್ದಾರೆ.
ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳು ಹಾಗೂ ಕಾನೂನು ಉಲ್ಲಂಘನೆ ಮಾಡಿರುವ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪಶ್ಚಿಮ ಘಟ್ಟದಲ್ಲಿ ಆಫ್ ರೋಡಿಂಗ್ಗೆ ನಿಯಂತ್ರಣಕ್ಕೆ ಆಗ್ರಹ
ರಸ್ತೆಗಳ ಮೂಲ ಉದ್ದೇಶ ಸಂಚಾರವಾಗಿದ್ದು, ಸಾಹಸ, ಸರ್ಕಸ್ ಅಥವಾ ಮನರಂಜನಾ ಚಟುವಟಿಕೆಗಳಿಗೆ ಸಾರ್ವಜನಿಕ ರಸ್ತೆಗಳನ್ನು ಬಳಸಬಾರದು. ಆಫ್ ರೋಡಿಂಗ್ ರ್ಯಾಲಿ ನಡೆಸಲು FMSCIಯಿಂದ ಅಗತ್ಯ ಪರವಾನಗಿ ಪಡೆದಿರುವವರಿಗೆ ಮಾತ್ರ ಅವಕಾಶ ನೀಡಬೇಕು. FMSCI ಮೋಟಾರ್ ಸ್ಪೋರ್ಟ್ಸ್ ಲೈಸೆನ್ಸ್ ಹೊಂದಿರುವವರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ಪರಿಸರಾಸಕ್ತರು ಒತ್ತಾಯಿಸಿದ್ದಾರೆ.
ಅಲಗೇಶ್ವರ ಆಫ್ ರೋಡಿಂಗಿಂದ ಉಂಟಾಗಿರುವ ಪರಿಸರ ಪರಿಣಾಮಗಳನ್ನು ಪರಿಗಣಿಸಿ, ಪಶ್ಚಿಮ ಘಟ್ಟ ವ್ಯಾಪ್ತಿಯ ಕಾಡು ಹಾಗೂ ಕಾಡಂಚಿನ ಖಾಸಗಿ ಜಮೀನುಗಳಲ್ಲಿ ಆಫ್ ರೋಡಿಂಗ್ ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧ ಹೇರಬೇಕು. ಅನಧಿಕೃತವಾಗಿ ಆಫ್ ರೋಡಿಂಗ್ ನಡೆಸಿ ಪರಿಸರ ಮಾಲಿನ್ಯ ಉಂಟುಮಾಡುವವರ ವಿರುದ್ಧ ಪ್ರಕರಣ ದಾಖಲಿಸಬೇಕು.
ನಿಯಮ ಉಲ್ಲಂಘಿಸಿ ಆಫ್ ರೋಡಿಂಗ್ ಪ್ರಚಾರ ನಡೆಸುವ ಕ್ಲಬ್ಗಳು, ಸಂಸ್ಥೆಗಳು, ರೆಸಾರ್ಟ್ಗಳು ಹಾಗೂ ಹೋಂಸ್ಟೇಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು. ಆಫ್ ರೋಡಿಂಗ್ ಸ್ಪೋರ್ಟ್ಸ್ ಗಳಿಗೆ ಪ್ರತ್ಯೇಕ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ರೂಪಿಸಿ, ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಪರಿಸರಾಸಕ್ತರು ಒತ್ತಾಯಿಸಿದ್ದಾರೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

