लाइव कैलेंडर

September 2026
M T W T F S S
 123456
78910111213
14151617181920
21222324252627
282930  
15/09/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜನರನ್ನು ನಂಬದ ಸರ್ಕಾರಗಳ……. ಗಣತಿಯಿಂದ ಆಗುವ ಸಾರ್ವಜನಿಕರಿಗೆ ಹಿಂಸೆ, ಆಡಳಿತದ ದುಷ್ಪರಿಣಾಮ, ಅಧಿಕಾರಿಗಳ ಮಾನಸಿಕ ಒತ್ತಡ ಇತ್ಯಾದಿ ಇತ್ಯಾದಿ……

1 min read

ಜನರನ್ನು ನಂಬದ ಸರ್ಕಾರಗಳ…….

ಗಣತಿಯಿಂದ ಆಗುವ ಸಾರ್ವಜನಿಕರಿಗೆ ಹಿಂಸೆ, ಆಡಳಿತದ ದುಷ್ಪರಿಣಾಮ, ಅಧಿಕಾರಿಗಳ ಮಾನಸಿಕ ಒತ್ತಡ ಇತ್ಯಾದಿ ಇತ್ಯಾದಿ……

ಜನಪ್ರತಿನಿಧಿಗಳ ಮೇಲೆ ನಂಬಿಕೆಯಿಟ್ಟು, ತಮ್ಮ ಒಳಿತಿಗಾಗಿ ಸರ್ಕಾರವನ್ನು ಆಯ್ಕೆ ಮಾಡುವ ಜನರನ್ನೇ ಸರ್ಕಾರಗಳು ನಂಬುವುದಿಲ್ಲ. ಇದೇ ಪ್ರಜಾಪ್ರಭುತ್ವದ ಒಂದು ವಿಚಿತ್ರ ಪರಿಸ್ಥಿತಿ…..

ಇತ್ತೀಚಿನ ವರ್ಷಗಳಲ್ಲಿ ಹೇಗೆ ಜನರಿಗೆ ಸರ್ಕಾರಗಳ ಮೇಲೆ ಭರವಸೆ ಇಲ್ಲದೆ ಒಳ್ಳೆಯ ಅಭಿಪ್ರಾಯ ಇರುವುದಿಲ್ಲವೋ, ಹಾಗೆಯೇ ಸರ್ಕಾರಗಳಿಗೆ ಸಾರ್ವಜನಿಕರ ಮೇಲಿನ ಅಪನಂಬಿಕೆ ತುಂಬಾ ಹೆಚ್ಚಾಗುತ್ತಿದೆ.

ಹೇಗೆಂದರೆ,
ಏನೋ ಇಡೀ ದೇಶಕ್ಕೆ ಒಂದು ಆಧಾರ್ ಕಾರ್ಡ್ ರೀತಿಯ ಐಡೆಂಟಿಟಿ ಕಾರ್ಡ್ ಇರಲಿ ಎಂದು ಕೊಡಲಾಯಿತು. ಅದರ ಅವಶ್ಯಕತೆ ಇತ್ತು ಓಕೆ. ನಂತರ ಆ ಕಾರ್ಡನ್ನು ಪ್ಯಾನ್ ಸಂಖ್ಯೆಯ ಜೊತೆ ಜೋಡಿಸಬೇಕು ಎಂದು ಹೇಳಲಾಯಿತು. ಅದೂ ಓಕೆ.
ಮತದಾರರ ಗುರುತಿನ ಚೀಟಿ ಇದೆ, ಅದು ಇರಬೇಕು ಓಕೆ. ವಿದ್ಯಾರ್ಥಿಗಳು, ವೃತ್ತಿಪರರು, ಸರ್ಕಾರಿ ಮತ್ತು ಖಾಸಗಿ ನೌಕರರು ಇತ್ಯಾದಿಗಳಿಗೂ ಒಂದು ಗುರುತಿನ ಚೀಟಿ ಬೇಕು ಅದೂ ಓಕೆ…

ಅದು ಮುಗಿದ ನಂತರ ಶುರುವಾಯಿತು ನೋಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಣತಿಗಳ ಸರಮಾಲೆ. ಜಾತಿ ಗಣತಿ, ಶೈಕ್ಷಣಿಕ ಗಣತಿ, ಆಸ್ತಿ ಗಣತಿ, ಮನೆ ಗಣತಿ, ಮತ ಗಣತಿ, ಮತದಾರರ ಪರಿಷ್ಕರಣೆ, ಜನಗಣತಿ ಇತ್ಯಾದಿ ಇತ್ಯಾದಿ ಗಣತಿಗಳ ಸರಪಳಿ ನಡೆಯುತ್ತಲೇ ಇದೆ. ಅದಕ್ಕಾಗಿ ಖರ್ಚಾಗುತ್ತಿರುವ ಹಣ, ಮಾನವ ಸಂಪನ್ಮೂಲಗಳ ದುರುಪಯೋಗ, ಆ ಸಂದರ್ಭದಲ್ಲಿ ಆಡಳಿತಾತ್ಮಕ ನಿಷ್ಕ್ರಿಯತೆ ಹೀಗೆ ನಾನಾ ರೀತಿಯ ಸಮಸ್ಯೆಗಳು ಗಣತಿಗಳ ಹೆಸರಿನಲ್ಲಿ ರಾಜ್ಯ ಮತ್ತು ದೇಶವನ್ನೇ ದುರ್ಬಲಗೊಳಿಸುತ್ತಿದೆ.

ಹೌದು, ಗಣತಿಯ ಪ್ರಾಮುಖ್ಯತೆ ಇದೆ, ನಿಜ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಸಮಾನತೆ ಇರುವ ಸಂದರ್ಭದಲ್ಲಿ, ಸಾಮಾಜಿಕ ನ್ಯಾಯಕ್ಕಾಗಿ ಗಣತಿಯ ಅವಶ್ಯಕತೆ ಖಂಡಿತ ಇದೆ. ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲು ಅಂಕಿ ಸಂಖ್ಯೆಗಳ ಅವಶ್ಯಕತೆ ಇದೆ. ಅದರಲ್ಲಿ ಅನುಮಾನವಿಲ್ಲ. ಆದರೆ ಅನುಷ್ಠಾನದಲ್ಲಿ ಅತ್ಯಂತ ಭ್ರಷ್ಟ ವ್ಯವಸ್ತೆಯನ್ನು ನಿರ್ಮಿಸಿ ಯಾವ ಗಣತಿಯನ್ನು ಮಾಡಿದರೂ ಏನೂ ಪ್ರಯೋಜನವಿಲ್ಲ. ಏಕೆಂದರೆ ಸರ್ಕಾರಗಳೇ ಭ್ರಷ್ಟವಾಗಿ ಜನರನ್ನೂ ನಂಬುವುದಿಲ್ಲ.

ಬ್ಯಾಂಕಿಗೆ ಹಣ ಇಡಲು ಹೋದರೆ ಅನಾವಶ್ಯಕ ದಾಖಲೆಗಳನ್ನು ಕೇಳುತ್ತಾರೆ. ಪ್ರತಿ ವರ್ಷ ಕೆ ವೈ ಸಿ ಎಂದು ತಲೆ ತಿನ್ನುತ್ತಾರೆ. ಇನ್ನೆಲ್ಲಿಗೋ ಹೋದರೆ ಮತ್ತಷ್ಟು ದಾಖಲೆಗಳನ್ನು ಕೇಳುತ್ತಾರೆ. ದಾಖಲೆಗಳ ಸಂಗ್ರಹದಲ್ಲಿಯೇ ನಾವು ಸಾಕಷ್ಟು ಸಮಯ ಕಳೆಯುತ್ತೇವೆ.

ಈ ಮಣ್ಣಿನಲ್ಲಿ ತಲೆತಲಾಂತರದಿಂದ ಹುಟ್ಟಿ ಬೆಳೆದ ನಾವು ಯಾರೋ ಕೆಲವು ದುಷ್ಟ, ಅಕ್ರಮ ವಲಸಿಗರ ಕಾರಣದಿಂದಾಗಿ ನಿಜವಾದ ನೋವನ್ನು ಅನುಭವಿಸುವವರು ನಾವೇ. ಏಕೆಂದರೆ ಅಕ್ರಮ ವಲಸಿಗರಿಗೆ ಅವಕಾಶ ಕೊಟ್ಟವರೂ ಇದೇ ಆಡಳಿತಗಾರರೇ. ಅವರನ್ನು ಹೊರಹಾಕಬೇಕು ಎನ್ನುತ್ತಿರುವವರು ಆಡಳಿತಗಾರರೇ. ಆದರೆ ಅದಕ್ಕೆ ನಮ್ಮನ್ನು ಹಿಂಸಿಸುವುದು ಯಾವ ನ್ಯಾಯ….

ಎಷ್ಟು ಅಂತ ನಮ್ಮನ್ನು ಪರೀಕ್ಷಿಸುವಿರಿ. ಉದಾಹರಣೆಗೆ ಬಸ್ ಪ್ರಯಾಣದಲ್ಲಿ ನಾವು ಬಸ್ ಪಾಸ್ ಪಡೆದರೆ ಅದನ್ನು ನಂಬುವುದಿಲ್ಲ. ಅದರ ಜೊತೆ ನಮ್ಮ ಆಧಾರ್ ಕಾರ್ಡ್ ಸಹ ತೋರಿಸಬೇಕು. ಬಹುಶಃ ಮುಂದೆ ನಮ್ಮ ಡಿಎನ್ಎ ಸರ್ಟಿಫಿಕೇಟ್ ಕೇಳಿದರೂ ಕೇಳಬಹುದು. ಬಸ್ ಪ್ರಯಾಣದ ಪಾಸ್ ಕಡಿಮೆ ಹಣದಲ್ಲಿ ಸಿಗುತ್ತದೆ. ಆ ಹಣಕ್ಕೂ ನಮ್ಮನ್ನು ನಂಬುವುದಿಲ್ಲ. ಕಳ್ಳರ ಸಂತೆಯಲ್ಲಿ ನಾವು ಬದುಕುತ್ತಿದ್ದೇವೆ. ಪ್ರಾಮಾಣಿಕರನ್ನು ಇಷ್ಟೊಂದು ಹಿಂಸಿಸಿದರೆ ಅವರ ಅಪ್ರಾಮಾಣಿಕರಾಗದೆ ಇನ್ನೇನಾಗುತ್ತದೆ.

ಎಲ್ಲೂ ನಂಬುವುದಿಲ್ಲ, ಯಾರೂ ನಂಬುವುದಿಲ್ಲ. ನಮ್ಮ ಒಂದು ಐಡಿ ಕಾರ್ಡ್ ಮೇಲಿರುವ ನಂಬಿಕೆ ನಮ್ಮ ಮೇಲೆ ಇಲ್ಲ. ಈಗ ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ಅವರು ಕೇಳುತ್ತಿರುವ ದಾಖಲೆಗಳು ಸಹ ಒಂದು ದುರುದ್ದೇಶದ ಹಿಂಸಾತ್ಮಕ ಗಣತಿಯೇ ಹೌದು. ಕೆಲವು ವಿದ್ಯಾವಂತರು, ಅನುಕೂಲಸ್ಥರು, ಶಿಸ್ತು ಇರುವವರು ಕೆಲವು ದಾಖಲೆಗಳನ್ನು ನಿರ್ಧಿಷ್ಟವಾಗಿ ಮತ್ತು ಸ್ಪಷ್ಟವಾಗಿ ಇಟ್ಟಿರುತ್ತಾರೆ. ಆದರೆ ದಿನನಿತ್ಯದ ಬದುಕಿಗೆ ಸಾಕಷ್ಟು ಶ್ರಮ ಪಡುತ್ತಿರುವ, ಸ್ವಂತ ಮನೆ ಇಲ್ಲದೆ ಆಗಾಗ ಬಾಡಿಗೆ ಮನೆ ಅಥವಾ ಬೇರೆ ಊರಿಗೆ ಹೋಗುವವರ ಪಾಡು ಹೇಳತೀರದು. ಅವರಿಗೆ ದಾಖಲೆಯನ್ನು ವರ್ಗಾವಣೆ ಮಾಡುವುದು, ಸರಿಪಡಿಸುವುದೇ ಒಂದು ದೊಡ್ಡ ಕೆಲಸವಾಗುತ್ತದೆ. ಕಳ್ಳರನ್ನು ಹಿಡಿಯಲು ಒಳ್ಳೆಯವರಿಗೆ ಹಿಂಸೆ ಕೊಟ್ಟಂತೆ ಆಗಿದೆ ನಮ್ಮ ಪರಿಸ್ಥಿತಿ….

ಹೌದು, ಆಧುನಿಕ ಕಾಲದಲ್ಲಿ ಐಡಿ ಕಾರ್ಡ್ ಗಳು ಬಹಳ ಮುಖ್ಯ ನಿಜ, ಆದರೆ ಅದಕ್ಕೂ ಒಂದು ಮಿತಿ ಬೇಕಲ್ಲವೇ. ನಿತ್ಯವೂ ನೋಡುವ, ನಿತ್ಯವೂ ನಾವು ಅಪರಾಧಿಗಳಲ್ಲ ಎಂದು ಖಚಿತವಾದ ಮೇಲೆಯೂ ನಮ್ಮನ್ನು ಕಳ್ಳರಂತೆ ದಾಖಲೆ ಕೇಳುವುದು ಎಲ್ಲೋ ಒಂದು ರೀತಿಯಲ್ಲಿ ಹಿಂಸೆಯಾಗುತ್ತದೆ.

ಸರ್ಕಾರಿ ವ್ಯವಸ್ಥೆ, ಮುಖ್ಯವಾಗಿ ರಾಜಕಾರಣಿಗಳು ಮತ್ತು ಆಡಳಿತಶಾಹಿ ವ್ಯವಸ್ಥೆ ಪ್ರಾಮಾಣಿಕವಾದರೆ ನಮ್ಮ ಈ ಹಿಂಸೆ ತಾನೇ ತಾನಾಗಿ ಇಲ್ಲವಾಗುತ್ತದೆ. ಯಾರೋ ಭ್ರಷ್ಟಾಚಾರ ಮಾಡುತ್ತಾರೆ ಎಂದು ನಮ್ಮನ್ನು ಹಿಂಸಿಸುವುದು ಯಾವ ನ್ಯಾಯ. ಕಾನೂನು ಜಾಸ್ತಿಯಾದಷ್ಟೂ ಅಪರಾಧಗಳು ಜಾಸ್ತಿ ಆಗುತ್ತಿವೆ. ಆದರೆ ಅದರಿಂದ ಪ್ರಾಮಾಣಿಕರಿಗೆ ಮಾನಸಿಕ ಹಿಂಸೆ ಆಗುತ್ತಿರುವುದ ಮಾತ್ರ ಸತ್ಯ. ಆಧುನಿಕ ಸಂಕೀರ್ಣ ಜೀವನದಲ್ಲಿ ಇದು ಅನಿವಾರ್ಯವೇನು ಹೌದು, ಆದರೆ ಅದರಿಂದ ಸಾಧಿಸುತ್ತಿರುವುದಾದರೂ ಏನು…..

ಅಪರಾಧಗಳೇನು ಕಡಿಮೆಯಾಗುತ್ತಿಲ್ಲ, ಬ್ರಷ್ಟಾಚಾರವೇನು ಕಡಿಮೆಯಾಗುತ್ತಿಲ್ಲ. ಹಾಗಾದರೆ ಸಾಮಾನ್ಯ ಜನರಿಗೆ ಇಷ್ಟೇಕೆ ಹಿಂಸೆ. ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟರಾಗುತ್ತಲೇ ಸಾಗುತ್ತಿದ್ದಾರೆ. ತಪಾಸಣೆಗೆ ಒಳಗಾಗುವವರು ಮಾತ್ರ ಸಾಮಾನ್ಯ ಜನ. ಇದೇ ಅನ್ಯಾಯ…..

ಯಾವುದೇ ಗಣತಿಯನ್ನು ಸ್ಥಳೀಯ ಆಡಳಿತ ವ್ಯವಸ್ಥೆಯೇ ಕಾಲಕಾಲಕ್ಕೆ ದಾಖಲೆ ಮಾಡಿ ಅದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕಳುಹಿಸುತ್ತಿದ್ದರೆ ಈ ಅವ್ಯವಹಾರ, ಈ ಹಿಂಸೆ, ಈ ಅಪನಂಬಿಕೆ ಇರುವುದಿಲ್ಲ. ದಿನನಿತ್ಯದ ಆಡಳಿತ ಚಟುವಟಿಕೆಗಳಲ್ಲಿ ಅದು ಒಂದು ಭಾಗವಾಗುತ್ತದೆ. ಅದನ್ನು ಬಿಟ್ಟು ಹೀಗೆ ರಾಜಕೀಯ ಕಾರಣಗಳಿಗಾಗಿ, ಕೆಲವು ದುರುದ್ದೇಶ ಪೂರಿತ ಉದ್ದೇಶಗಳನ್ನು ಇಟ್ಟುಕೊಂಡು ಗಣತಿ ಮಾಡಿ ಸಾರ್ವಜನಿಕರನ್ನು ಹಿಂಸಿಸುವುದು ಖಂಡಿತ ತಪ್ಪು. ಈ ನಿಟ್ಟಿನಲ್ಲಿ ಸರ್ಕಾರಗಳು ಯೋಚಿಸುವಂತಾಗಲಿ ಜನರು ಸಹ ಅನಾವಶ್ಯಕ ಗಣತಿಗಳನ್ನು ತಿರಸ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಅವಶ್ಯಕತೆಯೂ ಇದೆ.

ಯಾವುದೇ ಗಣತಿಯನ್ನು ಇಡೀ ದೇಶ ಅಥವಾ ರಾಜ್ಯವನ್ನು ಒಂದು ಭಾನುವಾರವೋ ಎರಡು ಭಾನುವಾರವೋ ಲಾಕ್ ಡೌನ್ ಮಾಡುವ ಮುಖಾಂತರ ವೈಜ್ಞಾನಿಕವಾಗಿ, ಶೀಘ್ರವಾಗಿ ಮಾಡಿ ಮುಗಿಸಿದರೆ ಉತ್ತಮ. ತಿಂಗಳಾನುಗಟ್ಟಲೆ ಎಳೆದಾಡಿದರೆ ಆಡಳಿತ ವ್ಯವಸ್ಥೆ ದುರ್ಬಲವಾಗುವುದು ಖಚಿತ, ಯೋಚಿಸಿ ನೋಡಿ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

About Author

Leave a Reply

Your email address will not be published. Required fields are marked *

You may have missed