लाइव कैलेंडर

March 2025
M T W T F S S
 12
3456789
10111213141516
17181920212223
24252627282930
31  
13/03/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹೋಳಿ ಮತ್ತು ಮಾನವೀಯ ಮೌಲ್ಯ………

ನಾಳೆ ನಾಡಿದ್ದು ಇಡೀ ರಾಷ್ಟ್ರಾದ್ಯಂತ ಅದರಲ್ಲೂ ಉತ್ತರ ಭಾರತದ ಕಡೆ ಹೋಳಿ ಹಬ್ಬದ ಸಂಭ್ರಮವೋ ಸಂಭ್ರಮ. ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳ ಬಣ್ಣ ಬಣ್ಣದ ಓಕುಳಿಯಾಟ ನೋಡಲು ಚಂದ…..

ಇಂತಹ ಹೋಳಿ ಹಬ್ಬದ ಸಂದರ್ಭದಲ್ಲಿ ಆ ಬಣ್ಣಗಳ ಚೆಲುವಿನ ಚಿತ್ತಾರದ ನಡುವೆ ಮನುಷ್ಯ ಸಂಬಂಧಗಳ ಬೆಸೆಯುವಿಕೆಯ ಹುಡುಕಾಟ ಸಹ ಬಹಳ ಮುಖ್ಯ. ಆ ನಿಟ್ಟಿನಲ್ಲಿ ಯೋಚಿಸುತ್ತಾ……

ಪ್ರೀತಿಯೆಂಬ ಬಣ್ಣ ತುಂಬಿ
ಪ್ರೇಮವೆಂಬ ರಂಗು ಮೂಡಲಿ.

ಕರುಣೆಯೆಂಬ ಬಣ್ಣ ತುಂಬಿ
ಮಮತೆಯೆಂಬ ರಂಗು ಮೂಡಲಿ.

ನಗುವೆಂಬ ಬಣ್ಣ ತುಂಬಿ
ಸುಖವೆಂಬ ರಂಗು ಮೂಡಲಿ.

ಯೌವ್ವನವೆಂಬ ಬಣ್ಣ ತುಂಬಿ
ಸೌಂದರ್ಯವೆಂಬ ರಂಗು ಮೂಡಲಿ.

ಜ್ಞಾನವೆಂಬ ಬಣ್ಣ ತುಂಬಿ
ವಿವೇಚನೆಯ ರಂಗು ಮೂಡಲಿ.

ಮನಸ್ಸೆಂಬ ಬಣ್ಣ ತುಂಬಿ
ಮುಗ್ಧತೆಯ ರಂಗು ಮೂಡಲಿ.

ಮನದಲ್ಲಿ ಬಣ್ಣಗಳ ಓಕುಳಿಯಾಟ,

ಹೃದಯದಲ್ಲಿ ರಂಗು ರಂಗಿನ ಒಡನಾಟ,

ಆತ್ಮದಲ್ಲಿ ಕಾಮನಬಿಲ್ಲಿನ ಕನಸಿನಾಟ,
ಕಣ್ಗಳಲ್ಲಿ ಬಣ್ಣಗಳ ಚಿತ್ತಾರದ ತೀಕ್ಷ್ಣನೋಟ,

ನನ್ನೆದೆಯಾಳದಲ್ಲಿ ಹೋಳಿ ಹಬ್ಬಕ್ಕೆ ನಿಮ್ಮೆಲ್ಲರ
ಶುಭಹಾರೈಕೆಗಳದೇ ಆಟ.
************************

ನಮ್ಮ ಸಮಾಜ ವ್ಯಕ್ತಿಗಳ ಸಾಮರ್ಥ್ಯವನ್ನು ( Strength ) ತುಂಬಾ ಚೆನ್ನಾಗಿ ಗುರುತಿಸುತ್ತದೆ ಮತ್ತು ಅದರಿಂದಾಗಿ ವ್ಯಕ್ತಿಗಳು ಜನಪ್ರಿಯರೂ ಆಗುತ್ತಾರೆ.
ಆ ಜನಪ್ರಿಯತೆಯ ಅಲೆಯ ಮೇಲೆ ತೇಲುತ್ತಾ ಹಣ, ಅಧಿಕಾರ, ಅಂತಸ್ತುಗಳನ್ನು ಗಳಿಸುತ್ತಾರೆ. ಇದು ಒಳ್ಳೆಯ ಅಂಶ…….

ಆದರೆ,
ಅದೇ ವ್ಯವಸ್ಥೆ ವ್ಯಕ್ತಿಗಳಲ್ಲಿ ಇರಬಹುದಾದ ದೌರ್ಬಲ್ಯಗಳಿಗೆ ( Weakness )
ತುಂಬಾ ಕೆಟ್ಟದ್ದಾಗಿ ಪ್ರತಿಕ್ರಿಯಿಸುತ್ತದೆ.
( ಇಲ್ಲಿ Weakness ಎಂದರೆ ದುಶ್ಚಟಗಳು, ಹಣಕಾಸಿನ ವ್ಯಾವಹಾರಿಕ ನಡವಳಿಕೆಗಳು ಅಪರಾಧಗಳೆಂದು ಪರಿಗಣಿಸಲಾದ ಅನಾಗರಿಕ ವರ್ತನೆಯಲ್ಲ………)

ವ್ಯಕ್ತಿಗಳಲ್ಲಿ ಇರಬಹುದಾದ ಸಂಕೋಚ, ಕೀಳರಿಮೆ, ಭಯ, ಅನಾವಶ್ಯಕ ಆತಂಕ, ಮುಗ್ಧತೆ, ನಿರ್ಲಿಪ್ತತೆ, ಬಡತನ, ಅಸಹಾಯಕತೆ, ಸಾಮಾನ್ಯ ಜ್ಞಾನದ ಕೊರತೆ ಮುಂತಾದ ಗುಣಗಳನ್ನು ಬಹುವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತದೆ……..

ವ್ಯಕ್ತಿಗಳ ಆ ಕ್ಷಣದ ಫಲಿತಾಂಶ ಆಧರಿಸಿ ಯಶಸ್ಸನ್ನು ಅತಿ ಎನಿಸುವಷ್ಟು ಮೇಲಕ್ಕೆತ್ತುವುದು ಮತ್ತು ಅದೇ ಸಂದರ್ಭದಲ್ಲಿ ಪರಿಸ್ಥಿತಿಯ ಕಾರಣದಿಂದಾಗಿ ವಿಫಲರಾದವರನ್ನು ಅತ್ಯಂತ ತುಚ್ಚವಾಗಿ ಕಾಣುವುದು ನಮ್ಮ ಸುತ್ತಮುತ್ತಲಿನ ಜನರ ಬಹುದೊಡ್ಡ ದುರ್ಗುಣ……

ಈ ರೀತಿಯ ದೌರ್ಬಲ್ಯ ಹೊಂದಿರುವವರಿಗೆ ಹಿಂದಿನ ದಿನಗಳಲ್ಲಿ ಆಶಾಕಿರಣವಾಗಿ ತಂದೆ ತಾಯಿ, ಬಂಧುಗಳು, ಸ್ನೇಹಿತರು, ನೆರೆಹೊರೆಯವರು ಇರುತ್ತಿದ್ದರು. ನಮ್ಮೆಲ್ಲಾ ನೋವು ನಲಿವುಗಳನ್ನು ಅವರ ಬಳಿ ಹಂಚಿಕೊಳ್ಳಬಹುದಿತ್ತು ಮತ್ತು ಅದಕ್ಕೆ ಆತ್ಮೀಯ ಸಂವೇದನೆಯು ದೊರೆಯುತ್ತಿತ್ತು…….

ಆದರೆ ಈಗಿನ ಆಧುನಿಕ ಬದುಕು, ವೇಗದ ಜೀವನಶೈಲಿ, ವ್ಯಾಪಾರಿ ಮನೋಭಾವ ಆ ಆತ್ಮೀಯತೆಯನ್ನು ಶಿಥಿಲಗೊಳಿಸಿದೆ.
” ಯಶಸ್ಸಿಗೆ ಹಲವಾರು ತಂದೆಗಳು, ಆದರೆ ಸೋಲು ಮಾತ್ರ ಅನಾಥ ” ಎಂಬಂತಾಗಿದೆ…….

ಸ್ವತಃ ತಂದೆ ತಾಯಿ, ಸಂಬಂಧಿಗಳು, ಸ್ನೇಹಿತರು ಸೋಲಿನ ಜರ್ಝರಿತ ಸ್ಥಿತಿಯಲ್ಲಿ ನಮ್ಮ ಮನಸ್ಸಿಗೆ ತಾಗುವಂತ ಸಾಂತ್ವಾನ ಹೇಳುವ ಬದಲು ನಮ್ಮ ಹಿಂದಿನ Weakness ಅನ್ನೇ ಹೆಚ್ಚಾಗಿ ಮುಂದಿಡುತ್ತಾರೆ. ಅವರ ಕೆಲವು ಕೃತಕ ನಡವಳಿಕೆಗಳು, ಕಪಟ ಪ್ರೀತಿ ನಮಗೆ ಹೆಚ್ಚು ಘಾಸಿ ಮಾಡುತ್ತದೆ……..

ಸಹಜ ಸ್ಥಿತಿಯಲ್ಲಿ ಅಥವಾ ಸಣ್ಣ ಪುಟ್ಟ ಸೋಲಿನಲ್ಲಿ ಇದು ಹೆಚ್ಚಾಗಿ ಅರಿವಾಗುವುದಿಲ್ಲ. ಆದರೆ ಜೀವನ್ಮರಣದ ಹೋರಾಟ ಸಂದರ್ಭದಲ್ಲಿ ಮತ್ತು ಬದುಕಿನಲ್ಲಿ ಅತ್ಯಂತ ಕುಸಿತ ಕಂಡಿರುವ ಸಮಯದಲ್ಲಿ, ಬದುಕಿನಲ್ಲಿ ಕತ್ತಲೆ ತುಂಬಿ ಇನ್ನೇನು ಮುಗಿದೇ ಹೋಯಿತು ಎನ್ನುವ ಸ್ಥಿತಿಯಲ್ಲಿ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಆಗ ಆತ್ಮೀಯರ ಒಡನಾಟಕ್ಕೆ ಮನಸ್ಸು ಹಾತೊರೆಯುತ್ತಿರುತ್ತದೆ. ಆಗಲೇ ಸಂಬಂಧಗಳ ನಡುವಿನ ಗಟ್ಟಿತನ ಅನಾವರಣಗೊಳ್ಳುವುದು.
ಅದು ಸಿಗದಿದ್ದಾಗ ಆಗುವ ವೇದನೆ ಊಹೆಗೂ ನಿಲುಕದ್ದು……….

ಇಡೀ ವ್ಯವಸ್ಥೆಯೇ ಶಿಥಿಲವಾಗಿದೆ ಎನ್ನಲು ಕಷ್ಡವಾಗುತ್ತದೆ. ಕೆಲವು ಒಳ್ಳೆಯ ಸಂಬಂಧಗಳೂ ಇವೆ. ಆದರೆ ಅವು ಅಪರೂಪವಾಗುತ್ತಿವೆ, ವ್ಯಾಪಾರೀಕರಣವಾಗುತ್ತಿವೆ ಎಂದು ಖಂಡಿತ ಹೇಳಬಹುದು……

ಆದ್ದರಿಂದ ವ್ಯಕ್ತಿಗಳ ಸಂಭ್ರಮದ ಕ್ಷಣಗಳಲ್ಲಿ ನಾವು ಭಾಗಿಯಾಗುವುದಕ್ಕಿಂತ ಅವರ ನೋವಿನ ಸಂಕಷ್ಟದ ಸಮಯದಲ್ಲಿ ನಾವು ಜೊತೆಯಾಗಿರಲು ಪ್ರಯತ್ನಿಸೋಣ. ವ್ಯಕ್ತಿಯ Strength ಗಿಂತ Weakness ಗಳನ್ನು ಒಪ್ಪಿಕೊಂಡು ಸಹಜ ಮತ್ತು ಗಾಢ ಸಂಬಂಧಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸೋಣ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068………

About Author

Leave a Reply

Your email address will not be published. Required fields are marked *