
ತೂಕಡಿಸುತ್ತಾ ಕೂರುವ ಜಾಗರಣೆ ವ್ಯರ್ಥ!
ಶರಣ ನಿದ್ರೆಗೈದರೆ ಜಪ ಕಾಣಿರೋ!
ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ!
ಶರಣ ನಡೆದುದೇ ಪಾವನ ಕಾಣಿರೋ!
ಶರಣ ನುಡಿದುದೇ ಶಿವತತ್ವಕಾಣಿರೋ
ಕೂಡಲಸಂಗನ ಶರಣನ ಕಾಯವೇ
ಕೈಲಾಸ ಕಾಣಿರೋ!
-ಬಸವಣ್ಣ
ಶಿವರಾತ್ರಿಯ ಸಂದರ್ಭದಲ್ಲಿ ಜಾಗರಣೆ ಮಾಡುವ ಪದ್ದತಿ ನಮ್ಮಲ್ಲಿದೆ. ಜಾಗರಣೆ ಎಂದರೆ ಜಾಗೃತನಾಗಿರುವುದು ಎಂದರ್ಥ. ನೈತಿಕತೆಯಿಂದ ತನ್ನ ಅಂತರಂಗ ಬಹಿರಂಗಗಳನ್ನು ಶುದ್ಧವಾಗಿಟ್ಟುಕೊಂಡ ಮನುಷ್ಯ, ಸದಾಕಾಲ ಜಾಗೃತನಾಗಿರುತ್ತಾನೆ. ಅವನಲ್ಲಿ ತನ್ನ ನೈತಿಕ ಬದ್ದತೆಯಿಂದ ವಿಮುಖವಾಗದಿರುವ ವಿವೇಕ ಜಾಗೃತವಾಗಿರುತ್ತದೆ. ಅವನು ಮಲಗಿದರೆ ಅದು ಜಪದಂತೆ- ನಿಶ್ಕಲ್ಮಶ ಶುದ್ಧಾಂತಃಕರುಣಿಯಾದವನ ಉಸಿರು ಉಸಿರಲ್ಲಿ ಶಿವನಿರುತ್ತಾನೆ. ಹಾಗಾಗಿಯೇ ಅವನು ಎದ್ದಿದ್ದರೆ ಅದು ಶಿವರಾತ್ರಿ. ನಾವು ಒಂದುದಿನ ಮಾಡುವ ಶಿವರಾತ್ರಿ ನಮ್ಮನ್ನು ಇಂತಹ ಚಿಂತನೆಗಳಿಗೆ ಪ್ರೇರೇಪಿಸಬೇಕು. ಅದನ್ನು ಬಿಟ್ಟು ಯಾಂತ್ರಿಕವಾಗಿ ತೂಕಡಿಸಿಕೊಳ್ಳುತ್ತಾ ಮಾಡುವ ಶಿವರಾತ್ರಿ ತನ್ನ ಅರ್ಥ ಕಳೆದುಕೊಳ್ಳುತ್ತದೆ.
ಶರಣನ ವ್ಯಕ್ತಿತ್ವ ಸದಾ ಜಾಗೃತವಾದ್ದರಿಂದ ಅವನ ನಿದ್ದೆ ಎಚ್ಚರಗಳೆಲ್ಲವೂ ಶಿವನ ಸ್ಮರಣೆ, ನುಡಿಗಳೆಲ್ಲ ಶಿವತತ್ತ್ವ ಆಗಿರುತ್ತವೆ. ಹೆಚ್ಚೇನು! ಬಸವಣ್ಣ, ಅಂತಹ ಜಾಗೃತ ಶರಣನ ಕಾಯ ಕೈಲಾಸವಾಗಿರುತ್ತದೆ. ಅವನೊಳಗೆ ಶಿವ ನೆಲೆಸಿರುತ್ತಾನೆ ಎಂದು ತಿಳಿಸಿದ್ದಾರೆ. ಶಿವರಾತ್ರಿಯ ಈ ಸಂದರ್ಭದಲ್ಲಿ ಶರಣನಂತೆ ನಮ್ಮಲ್ಲಿ ನಿರಂತರವಾಗಿ ಜಾಗೃತಿ ಮೂಡುವಂತೆ ಶಿವನ ಅನುಗ್ರಹ ಎಲ್ಲರಿಗಾಗಲಿ ಎಂದು ಹಾರೈಸುತ್ತೇವೆ.
-ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ
ಶ್ರೀ ಬಸವತತ್ತ್ವ ಪೀಠ, ಚಿಕ್ಕಮಗಳೂರು
ಬಸವಕೇಂದ್ರ, ಶಿವಮೊಗ್ಗ.