लाइव कैलेंडर

February 2025
M T W T F S S
 12
3456789
10111213141516
17181920212223
2425262728  
20/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ – ಶಿಕ್ಷಿಸುವ ಅಧಿಕಾರ ಇರುತ್ತದೆ ” ರವೀಂದ್ರನಾಥ ಠಾಗೋರ್……

1 min read

” ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ – ಶಿಕ್ಷಿಸುವ ಅಧಿಕಾರ ಇರುತ್ತದೆ ” ರವೀಂದ್ರನಾಥ ಠಾಗೋರ್……

ಇದು ಬಹಳ ಅರ್ಥಪೂರ್ಣ ಒಳ ಭಾವವನ್ನು ಹೊಂದಿದೆ. ಇಂದಿನ ಸಾಮಾಜಿಕ ಮನಸ್ಥಿತಿಗೆ ಹೆಚ್ಚು ಅನ್ವಯಿಸುತ್ತದೆ…..

ನಾವು ಕೆಲವರ ನಡವಳಿಕೆಯನ್ನು ದ್ವೇಷಿಸುತ್ತೇವೆ ಹಾಗೆಯೇ ಅವರ ಪರಿವರ್ತನೆಯನ್ನು ಅಪೇಕ್ಷಿಸುತ್ತೇವೆ. ಆದರೆ ಅದು ಹೇಗೆ ಸಾಧ್ಯ ಎಂಬುದನ್ನು ಉಪೇಕ್ಷಿಸುತ್ತೇವೆ….

ಈಗ ನೇರ ವಿಷಯಕ್ಕೆ ಬರುವುದಾದರೆ, ಕೆಲವು ಸನಾತನ ಧರ್ಮದ ಪ್ರತಿಪಾದಕರು ಅಥವಾ ಅನುಯಾಯಿಗಳು ಮುಸ್ಲಿಮರನ್ನು ದ್ವೇಷಿಸುತ್ತಾರೆ ಹಾಗು ಅವರು ಬದಲಾಗಬೇಕು ಎಂದೂ ನಿರೀಕ್ಷಿಸುತ್ತಾರೆ. ಆದರೆ ಈ ಪ್ರಕ್ರಿಯೆಯಲ್ಲಿ ಅವರೆಂದೂ ಮುಸ್ಲಿಮರನ್ನು ಪ್ರೀತಿಸುವುದಿಲ್ಲ ಮತ್ತು ಸ್ವೀಕರಿಸುವುದಿಲ್ಲ. ಆಗ ಅವರಿಗೆ ಠಾಗೋರ್ ಅವರು ಹೇಳಿದಂತೆ ತಿದ್ದುವ ನೈತಿಕತೆಯೇ ಇರುವುದಿಲ್ಲ. ಇದು ಒಂದು ಉದಾಹರಣೆ ಮಾತ್ರ. ಇದೇ ರೀತಿ ಸನಾತನ ಧರ್ಮದವರಲ್ಲಿ ಬದಲಾವಣೆ ಬಯಸುವ ಮುಸ್ಲಿಮರಿಗೂ ಸಮನಾಗಿಯೇ ಅನ್ವಯಿಸುತ್ತದೆ. ಇದು ಸಾರ್ವಕಾಲಿಕ ಸತ್ಯ… ‌

ಕೆಲವೊಮ್ಮೆ ಖಾಸಗಿ ಮಾತುಕತೆಗಳಲ್ಲಿ ಕಟ್ಟಾ ಕಮ್ಯುನಿಸ್ಟ್ ವಾದಿಗಳು ‘ ಸಂಘ ಪರಿವಾರದ ಹಿಂದುತ್ವ ಪ್ರತಿಪಾದಕರು ಎಂದಿಗೂ ಬದಲಾಗುವುದಿಲ್ಲ. ಆ ಪ್ರಯತ್ನವೇ ವ್ಯರ್ಥ ‘ ಎನ್ನುತ್ತಾರೆ. ಆ ಬಗ್ಗೆ ಸಣ್ಣ ಸಹಾನುಭೂತಿಯನ್ನು ಸಹಿಸುವುದಿಲ್ಲ. ಅವರು ಕೂಡಾ ಆರೆಸ್ಸೆಸ್ ಕಾರ್ಯಕರ್ತರನ್ನು ಪ್ರೀತಿಸುವುದಿಲ್ಲ. ಅದೇರೀತಿ ಸಂಘ ಪರಿವಾರದವರು ಕಮ್ಯೂನಿಸ್ಟ್ ರನ್ನು ಅತಿಯಾಗಿ ದ್ವೇಷಿಸಿ ಅವರನ್ನು ಇವರು ಬಯಸುವ ರೀತಿಯಲ್ಲಿ ಪರಿವರ್ತಿಸುವ ನೈತಿಕತೆಯನ್ನೇ ಕಳೆದುಕೊಳ್ಳುತ್ತಾರೆ…

ಬ್ರಾಹ್ಮಣ – ದಲಿತ,
ಒಕ್ಕಲಿಗ – ಲಿಂಗಾಯತ,
ಕರಿಯ – ಬಿಳಿಯ,
ಕನ್ನಡಿಗ – ತಮಿಳ,
ಭಾರತ – ಚೀನಾ,
ಮುಸ್ಲಿಂ – ಕ್ರಿಶ್ಚಿಯನ್,
ಕಾಂಗ್ರೇಸ್ – ಬಿಜೆಪಿ,
ಬಡವ – ಶ್ರೀಮಂತ…..
ಹೀಗೆ ಎಲ್ಲಾ ‌ಸಂಘರ್ಷಗಳಲ್ಲಿ ದ್ವೇಷ ಅಸೂಯೆ, ಅನುಮಾನಗಳೇ ಮೇಲುಗೈ ಪಡೆಯುತ್ತವೆ. ಪ್ರೀತಿಗೆ ಎಲ್ಲಿಯೂ ಲವಲೇಷವೂ ಸ್ಥಾನ ಇರುವುದಿಲ್ಲ. ಇದ್ದರೂ ಅದು ಕೇವಲ ಮಾತುಗಳಿಗೆ ಮಾತ್ರ ಸೀಮಿತವಾಗುತ್ತದೆ. ಅದರ ಪರಿಣಾಮವೇ ಪರಿವರ್ತನೆ ಅತ್ಯಂತ ಕಠಿಣ ಪ್ರಕ್ರಿಯೆಯಾಗಿದೆ……

ಸಮಾಜದ ಅತ್ಯಂತ ಚಿಕ್ಕ ಘಟಕ ಕುಟುಂಬದಿಂದ ಪ್ರಾರಂಭವಾಗಿ ಅಂತರಾಷ್ಟ್ರೀಯ ಮಟ್ಟದವರೆಗೆ ಇದು‌‌ ಸಾರ್ವಕಾಲಿಕ ಸತ್ಯವೇ ಆಗಿದೆ….

ನಮ್ಮ ಮನೆಯಲ್ಲಿ ನಮ್ಮ ಮಕ್ಕಳನ್ನಾಗಲಿ, ಗಂಡ ಹೆಂಡತಿಯನ್ನಾಗಲಿ, ಅಪ್ಪಾ, ಅಮ್ಮ, ಮಕ್ಕಳಾಗಲಿ ಯಾವುದೋ ಕಾರಣಕ್ಕಾಗಿ ಬೈದರೇ ಅಥವಾ ಹೊಡೆದರೆ ಸಾಮಾನ್ಯವಾಗಿ ಮತ್ತು ಸಹಜ ಪರಿಸ್ಥಿತಿಯಲ್ಲಿ ಅವರು ಕೆಲವೇ ಕ್ಷಣಗಳಲ್ಲಿ ಅಥವಾ ಕೆಲವೇ ದಿನಗಳಲ್ಲಿ ಮತ್ತೆ ಎಲ್ಲವನ್ನೂ ಮರೆಯುತ್ತಾರೆ ಅಲ್ಲದೇ ಕೆಲವೊಮ್ಮೆ ಸಂಬಂಧ ಮತ್ತಷ್ಟು ಹೆಚ್ಚಾಗಬಹುದು. ಇದಕ್ಕೆಲ್ಲ ಮೂಲ ಕಾರಣ ನಮಗೆ ಅವರ ಬಗ್ಗೆ ಇರುವ ಪ್ರೀತಿ ಅವರಿಗೇ ಮನವರಿಕೆಯಾಗಿರುತ್ತದೆ. ಇಲ್ಲಿ ಯಾವುದೇ ಕೃತಕ ನಾಟಕಕ್ಕೆ ಅವಕಾಶ ಇರುವುದಿಲ್ಲ. ಅಷ್ಟೇ ಏಕೆ ಅನೇಕ ಸಾಕು ಪ್ರಾಣಿಗಳ ವಿಷಯದಲ್ಲಿ ಸಹ ಇದು ಎಷ್ಟೊಂದು ವಾಸ್ತವ ಅಲ್ಲವೇ. ನಾವು ಅಂದರೆ ಮನೆಯವರು ಹೊಡೆದರು ಅವು ಬಾಲ ಅಲ್ಲಾಡಿಸುತ್ತಾ ನಮ್ಮ ಬಳಿಯೇ ಬರುತ್ತವೆ. ಏಕೆಂದರೆ ನಾವು ಪ್ರೀತಿಸುವುದು ಅವಕ್ಕೆ ಗೊತ್ತಿರುತ್ತದೆ. ಇದು ಹಾಗೆಯೇ ದೇಶ ಭಾಷೆ ಮೀರಿ ವಿಸ್ತಾರವಾಗುತ್ತಾ ಹೋಗುತ್ತದೆ…..

ಸಾಮಾಜಿಕ ಜಾಲತಾಣಗಳ ಬೆಳವಣಿಗೆಯ ಈ ಸಂದರ್ಭದಲ್ಲಿ ಠಾಗೋರ್ ಮಾತುಗಳು ಸಾಕಷ್ಟು ಪ್ರಾಮುಖ್ಯತೆ ಪಡೆಯುತ್ತದೆ. ಭಿನ್ನ ಅಭಿಪ್ರಾಯದ ವ್ಯಕ್ತಿಗಳನ್ನು ಪ್ರೀತಿ ಗೌರವ ಸಹನೆ ಸಭ್ಯತೆಯಿಂದ ಮಾತನಾಡಿಸಿ ಅವರ ಮನಃ ಪರಿವರ್ತನೆ ಅಥವಾ ಮನವೊಲಿಕೆಗೆ ಪ್ರಯತ್ನಿಸುವ ಬದಲು ಅವರನ್ನು ಕೆಟ್ಟ ಮಾತುಗಳಿಂದ ನಿಂದಿಸಿ ದ್ವೇಷ ಅಸೂಯೆ ಸೃಷ್ಟಿ ಮಾಡುವವರೇ ಹೆಚ್ಚಾಗಿದ್ದಾರೆ. ನಾವು ಅವರನ್ನು ಪ್ರೀತಿಸದೇ ಬದಲಾವಣೆ ಸಾಧ್ಯವಿಲ್ಲ ಎಂಬ ಪ್ರಾಥಮಿಕ ಅರಿವು ಸಹ ಅನೇಕ ಜನರಿಗೆ ಇಲ್ಲ. ಬಹುತೇಕ ಉಢಾಫೆ ಮನಸ್ಥಿತಿಯ ಜನರೇ ಹೆಚ್ಚಾಗಿದ್ದಾರೆ…….

ನಾವು ಯಾರಲ್ಲಿಯಾದರೂ ಸಾಮಾಜಿಕ ಬದಲಾವಣೆ ಬಯಸುವವರಾದರೆ, ಅತ್ಯಂತ ಜವಾಬ್ದಾರಿಯುತ ಪ್ರೀತಿ, ತಾಳ್ಮೆ, ಸಭ್ಯತೆ, ಸಹಕಾರ, ಕರುಣೆ, ಕ್ಷಮಾಗುಣ ಮುಂತಾದ ಮಾನವೀಯ ಮೌಲ್ಯಗಳನ್ನು ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡಿರಬೇಕು. ಕೇವಲ ಕೋಪ, ದ್ವೇಷ, ಅಸೂಯೆ, ಸಿಡುಕು ಮಾತು, ಏಕವಚನದ ಪ್ರಯೋಗಗಳಿಂದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದೇ ಹೊರತು ಯಾವುದೇ ಪರಿವರ್ತನೆ ಸಾಧ್ಯವಾಗುವುದಿಲ್ಲ….

ಎಡಪಂಥೀಯ ಮತ್ತು ಬಲಪಂಥೀಯ ಹಾಗೂ ಸನಾತನ ಮತ್ತು ಮುಸ್ಲಿಂ ವಿಚಾರಗಳ ಪ್ರತಿಪಾದಕರು ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ನಿಜವಾದ ದೇಶ ಭಕ್ತಿ – ಧರ್ಮ ನಿಷ್ಠೆ ಎಂದರೆ ಪ್ರಿತಿಯೇ ಹೊರತು ದ್ವೇಷವಲ್ಲ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ,
9844013068………

About Author

Leave a Reply

Your email address will not be published. Required fields are marked *