ಭದ್ರಾ ಅಭಯಾರಣ್ಯದಲ್ಲಿ ಚಿರತೆ ಅನುಮಾನಾಸ್ಪದ ಸಾವು : ಸಫಾರಿ ವಾಹನ ಗುದ್ದಿ ಅಪಘಾತ ?
1 min read
ಭದ್ರಾ ಅಭಯಾರಣ್ಯದಲ್ಲಿ ಚಿರತೆ ಅನುಮಾನಾಸ್ಪದ ಸಾವು : ಸಫಾರಿ ವಾಹನ ಗುದ್ದಿ ಅಪಘಾತ ?
ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ವಲಯದಲ್ಲಿ ಚಿರತೆಯೊಂದು ಅನುಮಾನಾಸ್ಪದವಾಗಿ ಸತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪ್ರವಾಸಿಗರ ಪ್ರಾಣಿ ವೀಕ್ಷಣಾ ಸಫಾರಿ ಮಾರ್ಗದ, ಕೊರಾಮರ ಗುಡ್ಡ ರಸ್ತೆಯಲ್ಲಿ ಒಂದು ಕಣ್ಣು ಕುರುಡಾಗಿದ್ದ ಚಿರತೆ ಸಾವನಪ್ಪಿದೆ.
ಅದರ ಬೆನ್ನು ಮೂಳೆ ಮಂಡಿ ಮುರಿದಿದೆ, ಯಾವುದೇ ಮೇಲ್ಬಾಗದಲ್ಲಿ ಗಾಯಗಳು ಕಂಡುಬಂದಿಲ್ಲ.ಬಲವಾದ ಹೊಡೆತ ಬಿದ್ದು ಮೂಳೆ ಮುರಿದಿದೆ.
ನಾಲ್ಕೈದು ದಿನಗಳಿಂದ ಚಿರತೆ ಆಹಾರ ನೀರು ಸೇವಿಸದೇ ನಡೆಯಲಾಗದೆ, ನಿತ್ರಾಣ ಗೊಂಡು ಸಾವನ್ನಪ್ಪಿದೆ.ಒಂದು ಕಣ್ಣು ಕಾಣದ ಕಾರಣ ಚಿರತೆ ಯಾವಾಗಲೂ ಸಫಾರಿ ರಸ್ತೆಯ ಇಕ್ಕೆಲಗಳಲ್ಲಿ ಕಾಣಸಿಗುತಿತ್ತು.
ಸಫಾರಿ ವಾಹನ ಗುದ್ದಿದ ಪರಿಣಾಮ ಅದರ ಹಿಂದಿನ ಮೂಳೆ ಮುರಿದು ತಿರುಗಾಡಲು ಸಾಧ್ಯವಾಗಿಲ್ಲ.ಈ ಅಪಘಾತ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ನಡೆದಿದೆ ಎನ್ನಲಾಗುತ್ತಿದೆ.
ದಿನ ನಿತ್ಯ ಈ ಭಾಗದಲ್ಲಿ ಪ್ರವಾಸಿಗರಿಗೆ ವನ್ಯಜೀವಿ ಛಾಯಾಗ್ರಾಹಕರಿಗೆ ಕಂಡು ಬರುತಿದ್ದ ಚಿರತೆ ಇದಾಗಿದೆ.ಒಂದು ಕಣ್ಣು ಸಂಪೂರ್ಣ ಕುರುಡಾಗಿತ್ತು ಎನ್ನಲಾಗಿದೆ.
ಸಫಾರಿ ವಾಹನಗಳ ಹಾವಳಿ :
ಸಫಾರಿ ವೀಕ್ಷಣೆಗೆ ಪ್ರವಾಸಿಗರ ದಂಡು ಇತ್ತ ಬರುವುದು ಹೆಚ್ಚಾಗಿದೆ.ಜಂಗಲ್ ರೆಸಾರ್ಟ್ ಮತ್ತು ಇಲಾಖೆಯ 20 ಕ್ಕೂ ಹೆಚ್ಚು ಸಫಾರಿ ವಾಹನಗಳು ನಾ ಮುಂದೆ, ತಾ ಮುಂದೆ ಎನ್ನುವಂತೆ ಹುಲಿ ಮತ್ತು ಚಿರತೆ ತೋರಿಸಲು ಸ್ಪರ್ಧಾತ್ಮಕವಾಗಿ ಓಡಾಡುತ್ತಿವೆ.
ಅಡ್ಡಾದಿಡ್ಡಿ ವೇಗವಾಗಿ ವಾಹನ ಚಾಲನೆ ಮಾಡುತ್ತಾ ಸಫಾರಿ ರಸ್ತೆಯಲ್ಲಿ ಸಾಗುವುದು ವನ್ಯಜೀವಿಗಳ ಪಾಲಿಗೆ ಕಂಟಕ ಪ್ರಾಯವಾಗಿದೆ .
ಸಂಜೆ ಸಫಾರಿ 7 ಗಂಟೆ ಆದರೂ ಮುಗಿಸದೆ ಕೊನೆಗೆ ತರಾತುರಿಯಲ್ಲಿ ಮೈನ್ ಗೇಟ್ ವರೆಗೂ, ಅತಿ ವೇಗವಾಗಿ ಸಫಾರಿ ವಾಹನ ಚಾಲನೆ ಮಾಡಿಕೊಂಡು ಬರುವಾಗ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.
ಪ್ರಕರಣ ಮುಚ್ಚಿ ಹಾಕಿರುವ ಅನುಮಾನ !
ಭದ್ರಾ ಹುಲಿ ಮೀಸಲು ಅರಣ್ಯ ಒಳಗೆ ಏನೇ ನಡೆದರು ನೋಡಲು ಸಾರ್ವಜನಿಕರಿಗೆ ಅವಕಾಶ ಇಲ್ಲ,ಅಲ್ಲಿ ಪಾರದರ್ಶಕವಾಗಿ ಏನು ನಡೆಯುದಿಲ್ಲ ಎನ್ನುವುದು ಪ್ರಾಣಿ ಪ್ರಿಯರ ವಾದ.
ಕೆಲ ತಿಂಗಳ ಹಿಂದೆ ಲಕ್ಕವಳ್ಳಿ ವಲಯದ ಹಿನ್ನೀರಿನಲ್ಲಿ ಆನೆ ಕೊಂದು ದಂತ ಅಪಹರಿಸಿದ ಘಟನೆ ಇನ್ನೂ ಮಾಸಿಲ್ಲ ,ದಂತಗಳು ಅಪರಾಧಿಗಳು ಇನ್ನು ಪತ್ತೆ ಮಾಡಿಲ್ಲ, ಕೇವಲ ಅವರಿಗೆ ಬೇಕಾದ ಏನ್ ಜಿ ಓ ಸದಸ್ಯರನ್ನು ಕರೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಾಟಕ ಮಾಡಿ ಎಲ್ಲ ಪ್ರಕರಣಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲಾಗಿದೆ ಎನ್ನುವ ಆರೋಪವಿದೆ .
ಕೆಲ ಏನ್ ಜಿ ಓ ಸದಸ್ಯರ ಮೇಲೆ ಅರಣ್ಯ ವನ್ಯಜೀವಿ ಮೊಕದ್ದಮೆ ಇದ್ದರೂ ಅವರನ್ನು ಮರಣೋತ್ತರ ಪರೀಕ್ಷೆಗೆ ಕರೆದುಕೊಂಡು ಹೋಗಿ ಅವರಿಂದ ಸಹಿ ಪಡೆದು ವ್ಯವಸ್ಥಿತವಾಗಿ ವನ್ಯಜೀವಿಗಳ ಹತ್ಯೆ – ಕಳ್ಳಸಾಗಣೆ ಯನ್ನು ಮುಚ್ಚಿ ಹಾಕಲಾಗಿದೆ .
ಉನ್ನತ ಮಟ್ಟದ ತನಿಖೆಗೆ ಒತ್ತಾಯ:
ಈ ಚಿರತೆ ಅಪಘಾತ ಮತ್ತು ಆನೆ ಕೊಂದು ದಂತ ಅಪಹರಣ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಇದರಲ್ಲಿ ಪಾಲ್ಗೊಂಡ ಎಲ್ಲರ ಮೇಲೂ ಪ್ರಕರಣ ದಾಖಲು ಮಾಡಿ ನ್ಯಾಯ ಒದಗಿಸುವಂತೆ ಪರಿಸರಾಸಕ್ತರು ಒತ್ತಾಯ ಮಾಡಿದ್ದಾರೆ.