ಕ್ಯಾಷ್ಟ್ಲೆಸ್ ದೇಶ ನಿರ್ಮಿಸಲಿ.ರಾಜರತ್ನ ಅಂಬೇಡ್ಕರ್..
1 min read![](https://avintv.com/wp-content/uploads/2025/02/IMG-20250207-WA0052.jpg)
ಕ್ಯಾಷ್ಟ್ಲೆಸ್ ದೇಶ ನಿರ್ಮಿಸಲಿ.ರಾಜರತ್ನ ಅಂಬೇಡ್ಕರ್..
ಆಲ್ಲೂರು: ಅಂಬೇಡ್ಕರ್ ಪುತ್ಥಳಿ ಉದ್ಘಾಟನೆ, ಜಾಗೃತಿ ಸಮಾವೇಶ.ಮೋದಿ ಸರಕಾರ ‘ಕಾಷ್ಟ್ಲೆಸ್ .’ ದೇಶ ನಿರ್ಮಿಸಲಿ
ಚಿಕ್ಕಮಗಳೂರು, ಫೆ.6: ಪ್ರಧಾನಿ ಮೋದಿ ನೇತೃತ್ವದ ಸರಕಾರ ಕ್ಯಾಷ್‌ಲೆಸ್ ಆಡಳಿತ ಜಾರಿಗೆ ಪ್ರಯತ್ನಿಸುತ್ತಿದೆ, ಆದರೆ ಕ್ಯಾಸ್ಟ್‌ಲೆಸ್ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುತ್ತಿಲ್ಲ. ನಮಗೆ ಕ್ಯಾಷ್ ಲೆಸ್ ಸಮಾಜದ ಅಗತ್ಯವಿಲ್ಲ, ಅಂಬೇಡ್ಕರ್ ಬಯಸಿದ ಸಂವಿಧಾನದ ಆಶಯವಾಗಿರುವ ಕಾಷ್ಟ್ಲೆಸ್ ಸಮಾಜ ಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್ ಹೇಳಿದ್ದಾರೆ.
ಬುಧವಾರ ರಾತ್ರಿ ತಾಲೂಕಿನ ಆಲ್ಲೂರು ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಹಾಗೂ ವಿವಿಧ ದಲಿತ, ಪ್ರಗತಿಪರ ಸಂಘಟನೆಗಳ ವತಿಯಿಂದ ನಿರ್ಮಿಸಲಾದ ನೂತನ ಅಂಬೇಡ್ಕರ್ ಪುತ್ಥಳಿ ಉದ್ಘಾಟನಾ ಕಾರ್ಯಕ್ರಮ ಹಾಗೂ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವುದಕ್ಕೂ ದೇವಸ್ಥಾನ ನಿರ್ಮಿಸುವುದಕ್ಕೂ ವ್ಯತ್ಯಾಸವಿದೆ. ದೇವಸ್ಥಾನ ನಿರ್ಮಿಸಿ ದೇವರಿಗೆ ನಮಸ್ಕರಿಸಿದರೆ ಮುಗಿಯಿತು. ಆದರೆ ಅಂಬೇಡ್ಕರ್ ಪ್ರತಿಮೆ ಎಂದರೆ ಜವಾಬ್ದಾರಿ, ಸಂಕಲ್ಪ ಎಂದರ್ಥ. ಶೋಷಿತ ಸಮುದಾಯದವರನ್ನು ವಿದ್ಯಾವಂತರನ್ನಾಗಿಸುವುದು, ಉನ್ನತ ಹುದ್ದೆಗೇರಿಸುವುದು,
ಜಾತಿ ರಹಿತ ಸಮಾಜ ನಿರ್ಮಾಣ ಮಾಡುವುದು ಎಂದರ್ಥ. ಜಾತಿ ಎನ್ನುವುದು ಈ ದೇಶದ ಎಲ್ಲ ಸಮಸ್ಯೆಗಳಿಗೂ ಮೂಲವಾಗಿರುವುದರಿಂದ ಅಂಬೇಡ್ಕರ್ ಅವರು ಸಂವಿಧಾನ ಜಾರಿ ಸಂದರ್ಭದಲ್ಲಿ ಹೇಳಿದ್ದ ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ನಮ್ಮನ್ನಾಳುವ ಸರಕಾರಗಳು ಹಾಗೂ ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕಿದೆ ಎಂದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ಸಂವಿಧಾನಕ್ಕೆ ಇತ್ತೀಚಿನ ದಿನಗಳಲ್ಲಿ ಅಪಾಯ ಬಂದೊದಗುತ್ತಿದೆ. ಇದಕ್ಕೆ ಕಾರಣ ಅಂಬೇಡ್ಕರ್ ಸಂವಿಧಾನ ದೇಶದ ಜನರನ್ನು ಪ್ರಜೆಗಳೆಂದು ನೋಡುತ್ತದೆಯೇ ಹೊರತು ಜಾತಿ, ಧರ್ಮದಿಂದ ನೋಡುವುದೇ ಇಲ್ಲ. ಅಂಬೇಡ್ಕರ್ ದೇಶದ ಶೋಷಿತರು, ಬಡವರು, ಕಾರ್ಮಿಕರು, ಮಹಿಳೆಯರೂ ಸೇರಿದಂತೆ ಪ್ರತಿಯೊಬ್ಬರ ಪಾಲಿನ ದೇವರು. ಅವರ ಸಂವಿಧಾನವನ್ನು ಉಳಿಸಿಕೊಂಡಲ್ಲಿ ನಾವು, ನೀವು ಬೆಳೆಯುತ್ತೇವೆ, ತಪ್ಪಿದಲ್ಲಿ ಅಳಿಯುತ್ತೇವೆ ಎಂದು ಎಚ್ಚರಿಸಿದರು.
ಸಮಾಜ ಕಲ್ಯಾಣ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಚಿಂತಕ ರುದ್ರಸ್ವಾಮಿ, ಯಲಗುಡಿಗೆ ಹೊನ್ನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿರ್ಮಾಣ ಸಮಿತಿ ಅಧ್ಯಕ್ಷ ಕಠಾರದಹಳ್ಳಿ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ನವರಾಜ್ ಉದ್ಘಾಟನಾ ಭಾಷಣ ಮಾಡಿದರು.
ಈ ವೇಳೆ ಮಾಜಿ ಸಚಿವರಾದ ಬಿ.ಬಿ.ನಿಂಗಯ್ಯ, ಡಾ ಡಾ.ಮೋಟಮ್ಮ, ಬಿಎಸ್ಪಿ ಮುಖಂಡ ರಾಧಾಕೃಷ್ಣ ಮಾಜಿ ಸಚಿವ ಸಿ.ಟಿ.ರವಿ, ಮುಖಂಡರಾದ ತುಡಕೂರು ಯೋಗಿಶ್, ಪೂರ್ಣೇಶ್, ಹೆಡದಾಳು ಕುಮಾರ್,
ಗಿರೀಶ್ ಹವಳ್ಳಿ, ಉಮೇಶ್, ಹುಣಸೇಮಕ್ಕಿ ಲಕ್ಷ್ಮಣ್, ನಾಗೇಶ್, ಕೆಂಚಯ್ಯ, ಭೀಮ್ ಆರ್ಮಿ ಗಿರೀಶ್, ಕೃಷ್ಣಮೂರ್ತಿ ಮತ್ತಿತರರಿದ್ದರು.
ಚಿಂತಕ ಪುಟ್ಟರಾಜ್ ಸಂವಿಧಾನ ಪೀಠಿಕೆ ಬೋಧಿಸಿದರು. ಪುತ್ಥಳಿ ನಿರ್ಮಾಣದ ವಿಚಾರದಲ್ಲಿ ನಡೆದ ಸಂಘರ್ಷದಲ್ಲಿ ಸೆರೆಮನೆ ವಾಸ ಅನುಭವಿಸಿದ್ದ ಹೋರಾಟಗಾರರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಆಲ್ಲೂರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಬೃಹತ್ ಜಾಗೃತಿ ಜಾಥಾ ನಡೆಸಲಾಯಿತು.