लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಾಧನೆಯ ಸಾಧನಗಳು
*********************
ಕ್ಷಮಿಸಿ, ಸ್ವಲ್ಪ ಧೀರ್ಘವಿದೆ. ಧ್ಯಾನಸ್ಥ ಮನಸ್ಥಿತಿಯಲ್ಲಿ ಓದಿದರೆ ಸಾಧನೆಗೆ ಗಂಭೀರ ಪರಿಣಾಮ ಬೀರಬಹುದು.

ಸಾಹಿತ್ಯ, ಸಂಗೀತ, ಸಿನಿಮಾ, ಕ್ರೀಡೆ, ವಿಜ್ಞಾನ, ರಾಜಕೀಯ, ವ್ಯಾಪಾರ, ಉದ್ಯಮ, ವ್ಯವಸಾಯ, ಉದ್ಯೋಗ ಮುಂತಾದ ಬದುಕಿನ ಯಾವುದೇ ಕ್ಷೇತ್ರವಾಗಿರಲಿ ಅಥವಾ ಸಹಜ, ಸಾಮಾನ್ಯ ಮೌಲ್ಯಯುತ ಬದುಕೇ ಆಗಿರಲಿ, ಅಸಾಮಾನ್ಯ ಸಾಧನೆ ಅಥವಾ ಜನಪ್ರಿಯತೆಯ ಸಾಧನೆ ಅಥವಾ ಅಧಿಕಾರ ಸಾಧನೆ ಅಥವಾ ಆತ್ಮ ತೃಪ್ತಿಯ ಸಾಧನೆ ಯಾವುದೇ ಆಗಿರಲಿ, ಅದಕ್ಕಾಗಿ ಕೆಲವು ಸಾಧನಗಳು ಅಸ್ತ್ರಗಳಂತೆ ಇವೆ. ಆ ಸಾಧನೆಗಳನ್ನು ಹೇಗೆ ನಾವು ಉಪಯೋಗಿಸಿಕೊಳ್ಳುತ್ತೇವೆ ಮತ್ತು ಅದರಲ್ಲಿ ಎಷ್ಟರಮಟ್ಟಿಗೆ ಸೋಲು ಅಥವಾ ಗೆಲುವಾಗುತ್ತದೆ, ಅದರಲ್ಲಿ ಎಷ್ಟರಮಟ್ಟಿಗೆ ದುರಾದೃಷ್ಟ ಅಥವಾ ಅದೃಷ್ಟ ನಮ್ಮ ಜೊತೆಗೂಡುತ್ತದೆ ಎಂಬುದರ ಮೇಲೆ ನಮ್ಮ ಬದುಕಿನ ಗುಣಮಟ್ಟ ಅಥವಾ ಯಶಸ್ಸು ನಿರ್ಧಾರವಾಗುತ್ತದೆ.

ಆರೋಗ್ಯ, ಶ್ರಮ, ಶ್ರದ್ಧೆ, ಹಣ, ಸಮಯ, ಸಂಬಂಧ, ಸಂಸ್ಕಾರ, ತಾಳ್ಮೆ, ಗ್ರಹಿಕೆ, ದೂರದೃಷ್ಟಿ, ವಿಶಾಲತೆ, ಒಳ್ಳೆಯತನ, ಪ್ರಬುದ್ಧತೆ, ಕ್ರಿಯಾತ್ಮಕತೆ ಇವು ಅತ್ಯಂತ ಪ್ರಮುಖ ಸಾಧನಗಳು. ಹಾಗೆಯೇ ಕೆಲವು ಅಪರೂಪದ ದಿವ್ಯಾಂಗ ಅಥವಾ ವಿಶೇಷ ಚೇತನ ಸಾಧಕರನ್ನು ಹೊರತುಪಡಿಸಿ ಸರಳ ಸಾಮಾನ್ಯ ವ್ಯಕ್ತಿಗಳಿಗೆ ಅನ್ವಯಿಸಿ ಮಾತ್ರ.

ಆರೋಗ್ಯ;
ಬಹುಶಃ ಸಾಧನೆಗೆ ಮೊದಲ ಮೆಟ್ಟಿಲು ಅಥವಾ ಅಡಿಪಾಯವೇ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯ. ಸಹಜ, ಸಾಮಾನ್ಯ, ಆರೋಗ್ಯವಂತ ಮಾತ್ರ ಪರಿಪೂರ್ಣ ಬದುಕಿನತ್ತ ಸಾಗಲು ಮತ್ತು ಸಾಧಿಸಲು ಸಾಧ್ಯವಾಗುತ್ತದೆ. ಹಾಗಾದರೆ ದೈಹಿಕ ಮತ್ತು ಮಾನಸಿಕ ಕುಂದು ಅಥವಾ ದೌರ್ಬಲ್ಯ ಇರುವ ವ್ಯಕ್ತಿಗಳು ಯಾರು ಸಾಧಿಸಿಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಖಂಡಿತ ಅದು ಸಹ ಸಾಧ್ಯ. ಅದಕ್ಕಾಗಿಯೇ ಅವರನ್ನು ವಿಶೇಷ ಚೇತನರು ಅಥವಾ ದಿವ್ಯಾಂಗ ಚೇತನರು ಎಂದು ಕರೆಯಲಾಗುತ್ತದೆ. ಆದರೆ ಆ ದೌರ್ಬಲ್ಯಗಳ ನಡುವೆಯೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯವಾಗುತ್ತದೆ. ಅದು ಒಂದು ಕನಿಷ್ಠ ಅಗತ್ಯತೆ.
ಯಾರಿಗಾದರೂ ಆಗಲಿ, ಅದು ಸಾಮಾನ್ಯರೇ
ಆಗಿರಲಿ ಅಥವಾ ದಿವ್ಯಾಂಗರೇ ಆಗಿರಲಿ ಆರೋಗ್ಯವನ್ನು ಯಾರು ಕಠಿಣ ಶ್ರಮದಿಂದ, ಅದರ ನಿರಂತರತೆಯನ್ನು ಕಾಪಾಡಿಕೊಂಡು ಬರುತ್ತಾರೋ, ಯಾರು ತಮ್ಮ ಬದುಕಿನ ಆಯಸ್ಸನ್ನು ಹೆಚ್ಚು ಗುಣಮಟ್ಟದಲ್ಲಿ ಮುಂದುವರಿಸಿಕೊಂಡು ಬರುತ್ತಾರೋ ಅವರಿಗೆ ಸಾಧನೆಯ ಸಾಧ್ಯತೆ ಹೆಚ್ಚಿರುತ್ತದೆ. ಅದು ಬಹುದೊಡ್ಡ ಸಾಧನವೂ
ಆಗುತ್ತದೆ.

ಶ್ರಮ :
ಎರಡನೆಯದಾಗಿ ಶ್ರಮ ಸಹ ಮುಖ್ಯವಾದ ಪಾತ್ರವಹಿಸುತ್ತದೆ. ಶ್ರಮದ ಆಯಾಮಗಳು ವಿವಿಧ ರೀತಿಯಲ್ಲಿ ಇರುತ್ತದೆ. ಅದು ದೈಹಿಕ ಶ್ರಮವೋ, ಮಾನಸಿಕ ಶ್ರಮವೋ, ಅಭ್ಯಾಸವು ಶ್ರಮವೋ ಯಾವುದೇ ಆಗಿರಲಿ ನಿರಂತರವಾಗಿ ಮತ್ತು ಬಹುತೇಕ ಧ್ಯಾನಸ್ಥ ಸ್ಥಿತಿಯಲ್ಲಿ ಶ್ರಮ ಪಡುತ್ತಲೇ ಇರಬೇಕು. ಆಗ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಶ್ರಮದಲ್ಲಿ ಒಂದಷ್ಟು ಬುದ್ಧಿವಂತಿಕೆ ಮತ್ತು ಗುಣ ಮಟ್ಟ ಕಾಯ್ದುಕೊಳ್ಳಬೇಕಾದದ್ದು ತೀರಾ ಅವಶ್ಯಕವಾಗಿರುತ್ತದೆ. ಹೇಗೋ ಏನೋ ಎನ್ನುವ, ಕೇವಲ ಗುರಿಯಿಲ್ಲದ, ಆತ್ಮವಿಶ್ವಾಸವಿಲ್ಲದ ಶ್ರಮದಿಂದ ಹೆಚ್ಚಿನ ಪ್ರತಿಫಲ ನಿರೀಕ್ಷಿಸಲಾಗದು.

ಶ್ರದ್ಧೆ:
ಸಾಧನೆಯಲ್ಲಿ ಶ್ರದ್ಧೆಯೂ ಬಹು ಮುಖ್ಯ ಪಾತ್ರ ವಹಿಸುತ್ತದೆ. ಶ್ರದ್ಧೆ ಎಂಬುದು ಒಂದು ಅಗೋಚರ ಭಾವ. ಅದನ್ನು ನಿರ್ದಿಷ್ಟವಾಗಿ ಪದಗಳಲ್ಲಿ ಹಿಡಿದಿಡುವುದು ಕಷ್ಟ. ಜೊತೆಗೆ ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಲೂ ಬಹುದು.
ಅರ್ಥ ಮಾತ್ರ ಒಂದೇ. ಆದರೆ ಅನುಷ್ಠಾನದ ಶ್ರದ್ದೆ ಇತರ ಹಲವಾರು ಪೂರಕ ಅಂಶಗಳನ್ನು ಒಳಗೊಂಡಿರುತ್ತದೆ. ಏನೇ ಆಗಲಿ ಶ್ರದ್ಧೆ ಎಂಬುದು ಏಕಾಗ್ರತೆಯ ಅತ್ಯಂತ ಬಹು ಪ್ರಮುಖವಾದ ಅಂಶ ಮತ್ತು ಭಾವ. ಅದನ್ನು ಸಾಧನೆಗೆ ಅಳವಡಿಸಿಕೊಳ್ಳಲೇ ಬೇಕಾದಂತಹ ಮಹತ್ವ ಪಡೆದಿದೆ. ಇದು ಅರ್ಥ ಆಗಬೇಕಾದರೆ ಶ್ರದ್ಧೆಯಿಲ್ಲದ ಉಡಾಫೆ ಮನೋಭಾವದವರ ಗುಣಮಟ್ಟವನ್ನು ನೋಡಿದಾಗ ನಮಗೆ ಶ್ರದ್ಧೆಯ ಮಹತ್ವ
ಅರ್ಥವಾಗುತ್ತದೆ.

ಹಣ :
ಸಾಧನೆಯ ಮತ್ತೊಂದು ಬಹು ಮುಖ್ಯ ಮೂಲ ದ್ರವ್ಯ ಇತ್ತೀಚಿನ ಆಧುನಿಕ ಕಾಲದಲ್ಲಿ ಹಣ ಸಹ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಹಣವಿಲ್ಲದೆ ಅಥವಾ ಆ ಸಾಧನೆಗೆ ಪೂರಕವಾದಷ್ಟು ಹಣವಿಲ್ಲದಿದ್ದರೆ ಸಾಧನೆ ಮಾಡುವುದು ಕಷ್ಟ. ಅದು ನಮ್ಮ ಸ್ವಂತದ್ದೋ ಅಥವಾ ಇತರರ ಸಹಾಯವೋ ಅಥವಾ ಪ್ರಾಯೋಜಕವೋ ಅಥವಾ ಭಿಕ್ಷೆಯೋ ಒಟ್ಟಿನಲ್ಲಿ ಹಣವಂತೂ ಬೇಕೇ ಬೇಕಾಗುತ್ತದೆ. ಹಣವಿಲ್ಲದೆ ಸಾಧಿಸಿರುವ ಕೆಲವು ಅಲ್ಪ ಉದಾಹರಣೆಗಳು ಇರಬಹುದು. ಆದರೆ ಸಾಮಾನ್ಯ ಪರಿಸ್ಥಿತಿಯಲ್ಲಿ ಹಣವಿಲ್ಲದೆ ಯಾವುದೇ ಸಾಧನೆ ಅಸಾಧ್ಯ. ಈ ವಿಷಯದಲ್ಲಿ ಬಹುತೇಕ ಎಲ್ಲರಿಗೂ ಇದೇ
ಅಭಿಪ್ರಾಯ ಇರುವುದರಿಂದ ಈ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ.

ಸಮಯ :
ಸಮಯ ಎಂಬುದು ಸಹ ಸಾಧನೆಯಲ್ಲಿ ಪ್ರಮುಖ ಪಾತ್ರವನ್ನೇ ವಹಿಸುತ್ತದೆ. ಏಕೆಂದರೆ ಸಮಯ ಬದುಕಿನಲ್ಲಿ ನಿರಂತರ ಚಲನೆಯನ್ನು ಸೃಷ್ಟಿಸುತ್ತದೆ. ಹಾಗೆಯೆ ಬದುಕು ವಿವಿಧ ಹಂತಗಳಲ್ಲಿ ಸಮಯವನ್ನು ದಾಟಿ ಮುನ್ನಡೆಯುತ್ತಿರುತ್ತದೆ. ಬಾಲ್ಯ, ಪ್ರೌಢ, ಯೌವನ, ಮಧ್ಯ ವಯಸ್ಸು, ಮುಪ್ಪು ಹೀಗೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸಾಶ್ರಮಗಳೆಂಬ ವಿವಿಧ ಹಂತಗಳನ್ನು ಭಾರತೀಯ ಜೀವನ ಶೈಲಿಯಲ್ಲಿ ದಾಟಬೇಕಾಗುತ್ತದೆ. ಈ ನಡುವೆ ನಮ್ಮ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಮಯದ ಮಿತಿಯೂ ಇರುತ್ತದೆ. ಅದನ್ನು ಯಾವ ಯಾವ ಸಂದರ್ಭದಲ್ಲಿ, ಯಾವ ಯಾವ ರೀತಿ ನಾವು ಉಪಯೋಗಿಸಿಕೊಳ್ಳುತ್ತೇವೆಯೋ ಎಂಬುದರ ಮೇಲೆಯೂ ನಮ್ಮ ಸಾಧನೆಯ ಯಶಸ್ಸು ಅವಲಂಬಿತವಾಗಿರುತ್ತದೆ. ಅದರ ಅರ್ಥ ಸಮಯ ಸಂದರ್ಭಕ್ಕೆ ಅತ್ಯಂತ ಹೆಚ್ಚಿನ ಮಹತ್ವ ಕೊಡಬೇಕು. ಸಮಯ ಪಾಲನೆ ಅಂದರೆ ಶಿಸ್ತು ಕಾಪಾಡಬೇಕಾಗುತ್ತದೆ ಎಂದೇ ಅರ್ಥ.

ಸಂಬಂಧ :
ಸಂಬಂಧಗಳ ನಿರ್ವಹಣೆ ಸಹ ವ್ಯಕ್ತಿಯ ಯಶಸ್ಸಿನಲ್ಲಿ ಗಂಭೀರವಾದ ಪಾತ್ರ ನಿರ್ವಹಿಸುತ್ತದೆ. ಅದು ಯಾವುದೇ ರೀತಿಯ ಸಂಬಂಧವಾಗಿರಲಿ ಅಪ್ಪ, ಅಮ್ಮ, ರಕ್ತ ಸಂಬಂಧಗಳು, ಒಡಹುಟ್ಟಿದವರು, ಶಾಲೆ, ಬೀದಿ, ಗೆಳೆಯರು, ಗುರುಗಳು ಹೀಗೆ ಅಥವಾ ಇನ್ಯಾವುದೇ ಸಂಬಂಧಗಳೇ ಆಗಿರಲಿ ಅದನ್ನು ನಾವು ಯಾವ ರೀತಿಯಲ್ಲಿ ನಿರ್ವಹಿಸುತ್ತೇವೆ, ನಮ್ಮ ಮನಸ್ಥಿತಿ ಏನು, ಅದು ವಾಣಿಜ್ಯೀಕರಣಗೊಂಡಿದೆಯೇ ಅಥವಾ ಮಾನವೀಯ ಮೌಲ್ಯಗಳ ತುಡಿತ ಹೊಂದಿದೆಯೇ ಎಂಬುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಈಗಿನ ಕಾಲಮಾನದಲ್ಲಿ ಯಾರನ್ನೂ ಅಷ್ಟು ಸುಲಭವಾಗಿ ವಂಚಿಸಲು ಸಾಧ್ಯವಿಲ್ಲ. ಮುಖವಾಡಗಳು ಒಂದಲ್ಲ ಒಂದು ದಿನ ಬಯಲಾಗುತ್ತದೆ. ಕೆಲವೊಮ್ಮೆ ಮುಖವಾಡಗಳಿಂದ ತಾತ್ಕಾಲಿಕ ಯಶಸ್ಸು ಸಿಗಬಹುದೇ ಹೊರತು ದೊಡ್ಡ ಸಾಧನೆಗೆ ಅದು ಖಂಡಿತವಾಗಲು ಮಾರಕ. ಆದ್ದರಿಂದ ನಾವು ಸಂಬಂಧಗಳನ್ನು ಎಷ್ಟು ಆಳವಾಗಿ, ಗಟ್ಟಿಯಾಗಿ ಹಿಡಿದಿಡುತ್ತೇವೆಯೋ, ಆ ಗುಣಲಕ್ಷಣಗಳು ನಮ್ಮಲ್ಲಿ ಇರುತ್ತವೆಯೋ ಅದರ ಆಧಾರದ ಮೇಲೆ ನಮ್ಮ ಯಶಸ್ಸು ನಿಂತಿರುತ್ತದೆ.

ಸಂಸ್ಕಾರ :
ಯಶಸ್ಸಿಗೆ ಸಂಸ್ಕಾರಗಳು ಸಹ ಮುಖ್ಯವಾಗುತ್ತದೆ. ಇಲ್ಲಿ ಸಂಸ್ಕಾರ ಎಂದರೆ ಧಾರ್ಮಿಕ ಆಚರಣೆಗಳೆಲ್ಲ. ನಮ್ಮ ಗುಣ ನಡತೆಗಳು, ಮಾನವೀಯ ಮೌಲ್ಯಗಳು. ಈ ಸಂಸ್ಕಾರಗಳು ಎಷ್ಟು ತೀವ್ರವಾಗಿ ನಮ್ಮೊಳಗೆ ಅಡಗಿರುತ್ತದೆ ಮತ್ತು ಸಮಾಜದಲ್ಲಿ ಅದು ಪ್ರಕಟಗೊಳ್ಳುತ್ತದೆ ಎಂಬ ಅಂಶಗಳ ಆಧಾರದ ಮೇಲೆ ನಮ್ಮ ಸಾಧನೆಯ ಯಶಸ್ಸು ಅವಲಂಬಿತವಾಗಿರುತ್ತದೆ . ಈ ಗುಣ ನಡತೆಗಳು ಎಂಬ ಸಂಸ್ಕಾರ ನಾಗರೀಕವಾಗಿ, ಜೀವ ಪರವಾಗಿ, ಆತ್ಮೀಯವಾಗಿ ಇದ್ದದ್ದೇ ಆದರೆ ಅದು ಖಂಡಿತವಾಗಲೂ ಸಮಾಜದಲ್ಲಿ ನಮ್ಮ ವ್ಯಕ್ತಿತ್ವವನ್ನು ಸೆಳೆಯುತ್ತದೆ, ಆಕರ್ಷಕವಾಗಿಸುತ್ತದೆ ಮತ್ತು ಅದು ಯಶಸ್ಸಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ನಾವು ಯಾರನ್ನೂ ನಮ್ಮ ವರ್ತನೆಯಲ್ಲಿ ಶಾಶ್ವತವಾಗಿ ವಂಚಿಸಲು ಸಾಧ್ಯವಿಲ್ಲ. ಆದ್ದರಿಂದ ಸಂಸ್ಕಾರಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ.

ತಾಳ್ಮೆ :
ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ ಎಂಬ ಮಾತಿದೆ. ತಾಳ್ಮೆ ನಮ್ಮ ಯಶಸ್ಸಿನ ಅದ್ಭುತ ಭಾವ. ಏಕೆಂದರೆ ತಾಳ್ಮೆಯಿಂದಲೇ ನಮ್ಮ ಮನಸ್ಸು ನಮ್ಮ ಹಿಡಿತಕ್ಕೆ ಸಿಗುತ್ತದೆ. ಒಮ್ಮೆ ಮನಸ್ಸು ಹಿಡಿತಕ್ಕೆ ಸಿಕ್ಕರೆ ಅದರ ಸದುಪಯೋಗ ಖಂಡಿತ ಆಗುತ್ತದೆ. ಸಮಾಜ ಅದನ್ನು ಗುರುತಿಸುತ್ತದೆ ಸಹ. ತಾಳ್ಮೆ ಕಳೆದುಕೊಂಡರೆ ನಮ್ಮ ಗುರಿ ತಲುಪುವುದು ಕಷ್ಟ ಅಥವಾ ಆ ಗುರಿಯ ದಿಕ್ಕು ತಪ್ಪಬಹುದು. ಆದ್ದರಿಂದ ತಾಳ್ಮೆ ಯಾವುದೇ ಸಾಧನೆಗೆ ಅತ್ಯುತ್ತಮ ಬ್ರಹ್ಮಾಸ್ತ್ರ.

ಗ್ರಹಿಕೆ :
ಸಾಧನೆಯ ಯಶಸ್ಸಿಗೆ ಗ್ರಹಿಕೆ ಅತ್ಯಮೂಲ್ಯ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಎಲ್ಲರೂ ಯಶಸ್ವಿಯಾಗದೆ ಕೆಲವರು ಮಾತ್ರ ಯಶಸ್ವಿಯಾಗಲು ಬಹು ಮುಖ್ಯ ಕಾರಣ ಅವರ ಗ್ರಹಿಕೆ. ಅಂದರೆ ಯಾರು, ಯಾವಾಗ, ಎಲ್ಲಿ, ಎಷ್ಟು, ಹೇಗೆ, ಏಕೆ, ಯಾವರೀತಿ, ಎಲ್ಲಿಂದ ಹೀಗೆ ಸಮಾಜವನ್ನು, ವ್ಯಕ್ತಿಯನ್ನು, ಸಿದ್ಧಾಂತಗಳನ್ನು ಗ್ರ‌ಹಿಸುವುದಿದೆಯಲ್ಲ ಅದು ಬಹಳ ಮುಖ್ಯವಾಗುತ್ತದೆ. ಸರಿಯಾದ ಗ್ರಹಿಕೆ ನಮ್ಮನ್ನು ಯಶಸ್ಸಿನ ದಾರಿಯಲ್ಲಿ ನಡೆಸಿದರೆ, ತಪ್ಪು ಗ್ರಹಿಕೆ ನಮ್ಮನ್ನು ಕೆಳಕ್ಕೆ ಬೀಳಿಸಬಹುದು ಅಥವಾ ದಾರಿ ತಪ್ಪಿಸಬಹುದು. ಗ್ರಹಿಕೆ ಅಷ್ಟು ಸುಲಭವಾಗಿ ಸಿಗುವುದೂ ಇಲ್ಲ. ಅದಕ್ಕೆ ಬಹುದೊಡ್ಡ ಮತ್ತು ಆಳವಾದ ತಿಳಿವಳಿಕೆ ಬೇಕಾಗುತ್ತದೆ. ಅದನ್ನು ಪಡೆದಾಗ ಬಹುತೇಕ ನಮ್ಮ ಗ್ರಹಿಕೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ಆದ್ದರಿಂದ ಬದುಕಿನ ಎಲ್ಲವನ್ನು ‌ಸರಿಯಾಗಿ ಗ್ರಹಿಸುವುದು ಬಹಳ ಮುಖ್ಯವಾಗುತ್ತದೆ.

ದೂರ ದೃಷ್ಟಿ :
ಇದು ಸಹ ಸಾಧನೆಯ ಹಾದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭವಿಷ್ಯವನ್ನು ನಾವು ಯಾವ ರೀತಿ, ಯಾವ ದೃಷ್ಟಿಕೋನದಲ್ಲಿ ನೋಡುತ್ತೇವೆ, ಅದು ಮುಂದಿನ ದಿನಗಳಲ್ಲಿ ಸಮಾಜ, ದೇಶ, ಆರ್ಥಿಕ, ರಾಜಕೀಯ ಪರಿಸ್ಥಿತಿಗಳು ಯಾವ ದಿಕ್ಕಿನತ್ತ ಸಾಗಬಹುದು ಎಂಬ ಊಹೆ ಅಥವಾ ಕಲ್ಪನೆ ನಮ್ಮ ಯಶಸ್ಸಿಗೆ ಬಹು ಮುಖ್ಯ ಕಾರಣವಾಗುತ್ತದೆ. ಅನೇಕ ಸಾಧಕರನ್ನು ನೋಡಿದಾಗ ಅವರಲ್ಲಿ ಅವರ ದೂರ
ದೃಷ್ಟಿಯ ಚಿಂತನೆಗಳೇ ಎದ್ದು ಕಾಣುತ್ತದೆ. ಅವರು ಎಲ್ಲರಿಗಿಂತ ವೇಗವಾಗಿ ಮುಂದಿನ ಪರಿಣಾಮಗಳನ್ನು ಊಹಿಸಿರುತ್ತಾರೆ. ಆದ್ದರಿಂದ ದೂರದೃಷ್ಟಿಯೂ ನಮ್ಮ ಯಶಸ್ವಿಗೆ ಬಹಳ ಮುಖ್ಯ.

ವಿಶಾಲತೆ :
ಸಾಧನೆಯ ಹಾದಿಯಲ್ಲಿ ಪ್ರಮುಖ ಅಸ್ತ್ರ ಮನೋ ವಿಶಾಲತೆ ಬಹಳ ಮುಖ್ಯವಾದದ್ದು. ಏಕೆಂದರೆ ಮನೋ ವಿಶಾಲತೆ ಸಮಗ್ರ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಸಂಕುಚಿತ ಮನೋಭಾವವನ್ನು ಹೊಡೆದೋಡಿಸುತ್ತದೆ. ಯಾವುದೇ ಇಸಂಗಳಗೆ ಒಳಗಾಗುವುದನ್ನು ತಪ್ಪಿಸುತ್ತದೆ. ವಿಶಾಲವಾಗಿ, ಅನಂತವಾಗಿ ಎಲ್ಲವನ್ನೂ ಅರಿತುಕೊಳ್ಳುವ, ಸ್ವೀಕರಿಸುವ, ವಿಮರ್ಶಿಸುವ ಶಕ್ತಿಯನ್ನು ಕೊಡುವುದೇ ಮನೋ ವಿಶಾಲತೆ. ನಮ್ಮ ಸಣ್ಣತನವನ್ನು ಅದು ತೋರಿಸಿಕೊಡುತ್ತದೆ. ಜ್ಞಾನದ ಬಲದಿಂದ ಅಜ್ಞಾನದ ಕೇಡನ್ನು ನೋಡುವಂತೆ ಮಾಡುತ್ತದೆ. ಹೌದು ನಮ್ಮ ಸಾಧನೆಗೆ ಅತ್ಯುತ್ತಮ ಮಾರ್ಗದರ್ಶನವಾಗುತ್ತದೆ. ಆದ್ದರಿಂದ ವಿಶಾಲತೆಯು ಸಾಧನೆಯ ಬಹು ಮುಖ್ಯ ಮತ್ತು ಬಹುದೊಡ್ಡ ಸಾಧನ.

ಒಳ್ಳೆಯತನ : ಅನುಮಾನವೇ ಇಲ್ಲ ಯಾವುದೇ ಸಾಧನೆಗೆ ನಮ್ಮೊಳಗಿನ ಒಳ್ಳೆಯತನ ಬಹಳ ಮುಖ್ಯವಾಗುತ್ತದೆ. ಆ ಒಳ್ಳೆಯತನ ಎಲ್ಲಾ ಕಡೆ ಪಸರಿಸುವುದರಿಂದ, ಜನ ಒಳ್ಳೆಯತನವನ್ನು ಗುರುತಿಸುವುದರಿಂದ ಖಂಡಿತವಾಗಲೂ ಯಶಸ್ಸು ಸಾಧ್ಯ. ಹೌದು ಕೆಲವು ಕಡೆ ಕೆಟ್ಟವರು ಯಶಸ್ವಿಯಾಗಿರುವುದನ್ನು ಕಾಣುತ್ತೇವೆ. ಹಾಗೆಂದು ಅದು ಯಶಸ್ಸಿನ ಸಾಧನವಲ್ಲ. ಆ ಕ್ಷಣದ ತಾತ್ಕಾಲಿಕ ಮತ್ತು ಒಂದಷ್ಟು ಪರಿಸ್ಥಿತಿಯ ಒತ್ತಡದಿಂದ ಕೆಟ್ಟವರಿಗೆ ಯಶಸ್ಸು ಸಿಕ್ಕಿರಬಹುದು.
ನಿಜವಾದ ಯಶಸ್ಸಿನಲ್ಲಿ ಒಳ್ಳೆಯತನದ್ದೇ ಬಹುಮುಖ್ಯ ಪಾತ್ರವಾಗಿರುತ್ತದೆ. ಒಳ್ಳೆಯತನ ಎಂದರೇನು ಎಂಬುದು ವಿವರಿಸಬೇಕಾದ ವಿಷಯವಲ್ಲ. ಬಹುತೇಕ ಎಲ್ಲರಿಗೂ ಒಳ್ಳೆಯತ ಎಂದರೇನು ಎಂಬ ಸಾಮಾನ್ಯ ಜ್ಞಾನ ಇದ್ದೇ ಇರುತ್ತದೆ. ಆದ್ದರಿಂದ ಯಶಸ್ವಿಯಾಗಲು ಒಳ್ಳೆಯವರಾಗಿರಬೇಕಾಗಿದ್ದು ಕಡ್ಡಾಯವಾಗಿರುತ್ತದೆ.

ಪ್ರಬುದ್ಧತೆ :
ಈ ಅಂಶ ಸಾಧನೆಗೆ ಕಳಸವಿದ್ದಂತೆ. ಅದು ಆಂತರಿಕವಾಗಿ ಬಹುದೊಡ್ಡ ಪರಿಣಾಮ ಬೀರುತ್ತದೆ. ಈ ಪ್ರಬುದ್ಧತೆಯನ್ನು ಸಹ ನಿರ್ಧಿಷ್ಟವಾಗಿ ಪದಗಳಲ್ಲಿ ಹಿಡಿದಿಡುವುದು ಕಷ್ಟ. ಏಕೆಂದರೆ ಪ್ರಬುದ್ಧತೆ ಎಂಬುದೇ ಒಂದು ಉತ್ಕೃಷ್ಟ ಮಾನಸಿಕ ಸ್ಥಿತಿ. ಅದನ್ನು ತಲುಪಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ದೇಹ, ಮನಸ್ಸುಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿ, ಜ್ಞಾನದ ಬಲದಿಂದ ಕ್ರಿಯೆ ಪ್ರತಿಕ್ರಿಯೆಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಇರುವಂತೆ ನೋಡಿಕೊಳ್ಳುವುದೇ ಪ್ರಬುದ್ಧತೆ. ಅದು ಯಶಸ್ಸಿನ ಬಹುದೊಡ್ಡ ಭಾಗ ಅಥವಾ ಕಿರೀಟವಿದ್ದಂತೆ.

ಕ್ರಿಯಾಶೀಲತೆ :
ನಮ್ಮ ಸಾಧನೆಗಳ ನಿಜವಾದ ಆತ್ಮ ಕ್ರಿಯಾಶೀಲತೆ. ಏಕೆಂದರೆ ಮೇಲೆ ಹೇಳಿದ ಎಲ್ಲವನ್ನು ಎಲ್ಲರೂ ಮಾಡಬಹುದು. ಆದರೆ ಅದರಲ್ಲಿ ಯಶಸ್ಸು ಅಥವಾ ವಿಶಿಷ್ಟತೆ ಅಥವಾ ವಿಶೇಷವನ್ನು ಎತ್ತಿ ತೋರಿಸುವುದೇ ಕ್ರಿಯಾಶೀಲತೆ. ನಮ್ಮೊಳಗಿನ ಕ್ರಿಯಾಶೀಲತೆ ಎಷ್ಟು ಆಕರ್ಷಕ, ಸುಂದರ, ಜನಪ್ರಿಯ ಮತ್ತು ಉತ್ತಮ ಗುಣಮಟ್ಟದ್ದಾಗಿರುತ್ತದೆ ಅಷ್ಟರಮಟ್ಟಿಗೆ ನಾವು ಯಶಸ್ವಿಯಾಗಲು ಸಾಧ್ಯ. ಈ ಆತ್ಮವೇ ಬಹುತೇಕ ಯಶಸ್ಸು ಮತ್ತು ಸೋಲನ್ನು ನಿರ್ಧರಿಸುತ್ತದೆ.

ಇವುಗಳ ಜೊತೆಗೆ ಅದೃಷ್ಟ ಮತ್ತು ದುರಾದೃಷ್ಟವೆಂಬ ವಿವರಿಸಲಾಗದ, ಊಹಿಸಲಾಗದ, ನಿರೀಕ್ಷಿಸಲಾಗದ ಒಂದು ಮಾನದಂಡವಿದೆ. ಯಶಸ್ವಿಯಾದರೆ ಅದು ಅದೃಷ್ಟ, ಸೋಲಾದರೆ ದುರಾದೃಷ್ಟ ಎಂದು ಅರ್ಥ ಮಾಡಿಕೊಳ್ಳಬೇಕು. ಕೆಲವೊಮ್ಮೆ ನಮ್ಮ ನಿರೀಕ್ಷೆಗೂ ಮೀರಿ ಅನೇಕ ಅಂಶಗಳು ನಮಗೆ ಪೂರಕವಾಗಿ ಕೆಲಸ ಮಾಡಬಹುದು ಅದು ಅದೃಷ್ಟ. ಕೆಲವೊಮ್ಮೆ ನಮ್ಮ ನಿರೀಕ್ಷೆ ಮೀರಿ ಏನೇನೋ ಕಾರಣಗಳು ನಮಗೆ ತೊಂದರೆ ಕೊಡಬಹುದು ಅದು ದುರಾದೃಷ್ಟ. ಅದರಲ್ಲಿ ಅಪಘಾತ, ಅನಾರೋಗ್ಯ, ಹಣದ ಲಾಟರಿ ಹೊಡೆಯುವುದು, ಶತ್ರುನಾಶ ಮುಂತಾದವು ನಮ್ಮ ಅರಿವಿಗೆ ಬಾರದೆ ಸಂಭವಿಸಬಹುದು. ಅದನ್ನು ಅದೃಷ್ಟ ದುರಾದೃಷ್ಟ ಎನ್ನಬಹುದು.

ಇದು ಕೆಲವು ಮುಖ್ಯ ಅಂಶಗಳು ಮಾತ್ರ. ಇದನ್ನು ಮೀರಿಯೂ ಇತರ ಅನೇಕ ವಂಶಗಳು ಇರಬಹುದು. ಈ ಎಲ್ಲಾ ಇದ್ದೂ ವಿಫಲವಾಗಬಹುದು. ಇದರಲ್ಲಿ ಕೆಲವು ಕೈಹಿಡಿಯಬಹುದು. ಒಟ್ಟಿನಲ್ಲಿ ಒಂದಷ್ಟು ಮೇಲಿನ ಅಂಶಗಳು ನಮ್ಮ ಯಶಸ್ಸಿಗೆ ಕಾರಣವಾಗಬಹುದು ಅಥವಾ ಕಾರಣವಾಗುತ್ತದೆ ಎಂಬುದು ನನ್ನ ಇಲ್ಲಿಯವರೆಗಿನ ಬದುಕಿನ ಅನುಭವದ ನುಡಿಗಳು. ಇದಕ್ಕಿಂತ ಹೆಚ್ಚಿನ ಮಾಹಿತಿ ನಿಮ್ಮಲ್ಲಿದ್ದರೆ ಹಂಚಿಕೊಳ್ಳಬಹುದು……

ಎಲ್ಲರೂ ಸಾಧಕರಾಗಲು ಪ್ರಯತ್ನಿಸಿ. ನಮ್ಮಿಷ್ಟದಂತೆ ಬದುಕುವುದೇ ಒಂದು ಸಾಧನೆ…….

ಪ್ರಬುದ್ಧ ಮನಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ, ವಿವೇಕಾನಂದ. ಎಚ್. ಕೆ. 9844013068……….

About Author

Leave a Reply

Your email address will not be published. Required fields are marked *