ಅಗೋಚರ ಶಕ್ತಿಗೆ……
1 min readಅಗೋಚರ ಶಕ್ತಿಗೆ……
ಶಕ್ತಿಯಿದ್ದರೆ ಬಂಗಲೆಯಲ್ಲಿ ಒಬ್ಬ, ಬಯಲಿನಲ್ಲಿ ಒಬ್ಬ ವಾಸಿಸುವುದನ್ನು ತಡೆ,
ಕರುಣೆ ಇದ್ದರೆ ಪುಟ್ಟ ಬಾಲಕಿಯರ ಮೇಲೆ ನಡೆಯುವ ಅತ್ಯಾಚಾರ ತಡೆ,
ಆತ್ಮವಿದ್ದರೆ ಒಬ್ಬನಿಗೆ ಭಕ್ಷ್ಯ ಭೋಜನದ ಸುಖ, ಇನ್ನೊಬ್ಬನಿಗೆ ಹಸಿವಿನ ನೋವು ತಡೆ,
ಧ್ಯೆರ್ಯವಿದ್ದರೆ ನಿನ್ನದೇ ಮುಗ್ಧ ಜನರನ್ನು ಕೊಲ್ಲುವ ಭಯೋತ್ಪಾದಕರನ್ನು ತಡೆ,
ಗೊತ್ತಿದ್ದರೆ ಸಾರ್ವಜನಿಕ ಹಣ ಲೂಟಿ ಹೊಡೆಯುವ ಭ್ರಷ್ಟರನ್ನು ತಡೆ,
ತಿಳಿದಿದ್ದರೆ ಲಕ್ಷಾಂತರ ಜನ ಸಾಯುವ ಅಪಘಾತಗಳನ್ನು ತಡೆ,
ಅರ್ಥವಾದರೆ ಖಾಯಿಲೆಗಳಿಂದ ಜನ ಅಕಾಲಿಕವಾಗಿ ಸಾಯುವುದನ್ನು ತಡೆ,
ಬುದ್ದಿಯಿದ್ದರೆ ರೈತರ ಆತ್ಮಹತ್ಯೆಗಳನ್ನು ತಡೆ,
ಪ್ರೀತಿಯಿದ್ದರೆ ಹೆಣ್ಣಿನ ಮೇಲಿನ ಕಾಮುಕರ ಅಟ್ಟಹಾಸ ತಡೆ,
ಕಾಡು ನಿನ್ನದಾದರೆ ಅದನ್ನು ನಾಶಮಾಡುತ್ತಿದ್ದೇವೆ, ತಡೆ ನೋಡೋಣ,
ನೀರು ನಿನ್ನದಾದರೆ ಅದನ್ನು ಮುಗಿಸುತ್ತಿದ್ದೇವೆ, ತಡೆ ನೋಡೋಣ,
ಗಾಳಿ ನಿನ್ನದಾದರೆ ಅದನ್ನು ಮಲಿನ ಮಾಡುತ್ತಿದ್ದೇವೆ, ತಡೆ ನೋಡೋಣ,
ಪ್ರಾಣಿ ಪಕ್ಷಿಗಳು ನಿನ್ನದಾದರೆ ಅದನ್ನು ಇಲ್ಲವಾಗಿಸುತ್ತಿದ್ದೇವೆ ತಡೆ ನೋಡೋಣ,
ಭೂಮಿ ನಿನ್ನದಾದರೆ ಅದನ್ನು
ಕೊರೆಯುತ್ತಿದ್ದೇವೆ, ತಡೆ ನೋಡೋಣ,
ಏಕೆ ಕಾಣದ ಜಾಗದಲಿ ಮರೆಯಾಗಿರುವೆ,
ಏಕೆ ಮಂದಿರ, ಮಸೀದಿ, ಚರ್ಚುಗಳಲ್ಲಿ ಬಂಧಿಯಾಗಿರುವೆ,
ಏಕೆ ಪೂಜಾರಿ, ಪಾದ್ರಿ, ಮೌಲ್ವಿಗಳ ಬೆನ್ನಹಿಂದೆ ಅಡಗಿರುವೆ,
ಏಕೆ ಪವಿತ್ರ ಗ್ರಂಥಗಳಲ್ಲಿ ಮರೆಮಾಚಿಕೊಂಡಿರುವೆ,
ಅಪ್ಪಾ ಜೀಸಸ್,
ನಿನಗೆ ಶಕ್ತಿಯಿದ್ದರೆ – ಪ್ರೀತಿ ಇದ್ದರೆ, ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ, ರಷ್ಯಾ, ಉಕ್ರೇನ್, ಇಸ್ರೇಲ್, ಲೆಬನಾನ್ ಮುಂತಾದ ದೇಶಗಳಲ್ಲಿರುವ ನಿನ್ನದೇ ಭಕ್ತರು ಭಯೋತ್ಪಾದಕರ ಅಟ್ಟಹಾಸಕ್ಕೆ ದಾರುಣವಾಗಿ ಬಲಿಯಾಗುತ್ತಿದ್ದಾರೆ, ಅದನ್ನು ತಡೆ ನೋಡೋಣ,
ಅಣ್ಣಾ ಅಲ್ಲಾಹು,
ನಿನಗೆ ಶಕ್ತಿಯಿದ್ದರೆ – ಕರುಣೆ ಇದ್ದರೇ ನಿನ್ನದೇ ಜನಗಳು ಸಿರಿಯಾ, ಪ್ಯಾಲಿಸ್ಟೇನ್, ಇರಾಕ್, ಆಫ್ಘನಿಸ್ತಾನ್ ಪಾಕಿಸ್ತಾನಗಳಲ್ಲಿ ಬರ್ಬರವಾಗಿ ಹತ್ಯೆಯಾಗುತ್ತಿದ್ದಾರೆ, ತಡೆ ನೋಡೋಣ,
ಅಯ್ಯಾ ಶಿವಪ್ಪ,
ಕಾಶ್ಮೀರದ ಭಯೋತ್ಪಾದಕರು ನಮಗೆ ಮಗ್ಗುಲ ಮುಳ್ಳಾಗಿ ಅನೇಕರನ್ನು ಕೊಲ್ಲುತ್ತಾ ತುಂಬಾ ತೊಂದರೆ ಕೊಡುತ್ತಿದ್ದಾರೆ, ನಿನಗೆ ಶಕ್ತಿಯಿದ್ದರೆ, ಪ್ರೀತಿ ಇದ್ದರೆ ನಿನ್ನ ಮೂರನೇ ಕಣ್ಣನ್ನು ತೆರೆದು ಅವರನ್ನು ಭಸ್ಮ ಮಾಡು ನೋಡೋಣ,
ಹೋಗಲಿ ಬಿಡು ಅದು ಅಸಾಧ್ಯ, ನೀವು ಇದ್ದರೆ ಅಲ್ಲವೇ ಅದನ್ನು ಮಾಡುವುದು,
ನಿಮ್ಮನ್ನು ಸೃಷ್ಟಿಸಿದ್ದೇ ಈ ಹುಲುಮಾನವರು,
ಅಪ್ಪಾ ಕ್ರೈಸ್ತರೇ,
ಬೈಬಲ್ ನ ಆರಾಧಕರೇ – ಅನುಯಾಯಿಗಳೇ, ಬೈಬಲ್ ಓದಿ ಅರ್ಥ ಮಾಡಿಕೊಂಡಿರುವಿರಲ್ಲವೇ, ವಿಶ್ವವೇ ಜೀಸಸ್ ಅವರ ಸೃಷ್ಟಿ ಎಂದು ಹೇಳುವಿರಲ್ಲವೇ ? ಹಾಗಾದರೆ ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡಿ ನೋಡೋಣ,
ಅಣ್ಣಾ, ಇಸ್ಲಾಮಿಯರೇ,
ಖುರಾನ್ ನ ಆರಾಧಕರೇ – ಆಜ಼್ಞಾಪಾಲಕರೇ, ಅದನ್ನು ಓದಿ ಅರ್ಥಮಾಡಿಕೊಂಡಿರುವಿರಲ್ಲವೇ ? ಈ ಸೃಷ್ಟಿ ಅಲ್ಲಾನ ಕೃಪೆ ಎಂದು ಹೇಳುವಿರಲ್ಲವೇ ? ಹಾಗಾದರೆ ಇಡೀ ವಿಶ್ವವನ್ನು ನೆಮ್ಮದಿಯ ತಾಣ ಮಾಡಿ ನೋಡೋಣ,
ಅಯ್ಯಾ ಹಿಂದೂ ಭಾಂಧವರೇ,
ಸರ್ವಶಕ್ತ – ಸರ್ವವ್ಯಾಪಿ ಶಿವನೇ ಸೃಷ್ಟಿಯ ಮೂಲವಲ್ಲವೇ ? ಅವರಿಗೆ ಹೇಳಿ ವಿಶ್ವವನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ವಿಶ್ವಗುರುವಾಗಿ ನೋಡೋಣ,
ಹೇಗಿದೆ ನೋಡಿ ಈ ದೇವರು ಧರ್ಮಗಳ ಪೊಳ್ಳುತನ – ಮನೆ ಮುರುಕುತನ ಮತ್ತು ಅಜ್ಞಾನ,
ನಿಜವಾಗಲೂ ಈ ಕ್ಷಣದ ದೇವರುಗಳು ಮತ್ತು ವಿಶ್ವವನ್ನು ಶಾಂತಿ ನೆಲೆಸುವಂತೆ ಮಾಡುವವ ಶಕ್ತಿ ಇರುವವರು ಯಾರು ಗೊತ್ತೆ ?,
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್,
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್,
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್,
ಭಾರತದ ಪ್ರಧಾನಿ ನರೇಂದ್ರ ಮೋದಿ,
ಪಾಕಿಸ್ತಾನದ ಪ್ರಧಾನಿ,
ಇಂಗ್ಲೆಂಡಿನ ಪ್ರಧಾನಿ,
ಹಾಗು ಇಸ್ರೇಲ್, ಫ್ರಾನ್ಸ್ ಜರ್ಮನಿ, ಕೊರಿಯಾ, ಜಪಾನ್, ಆಸ್ಟ್ರೇಲಿಯಾ ಮುಂತಾದ ವಿಶ್ವದ ಕನಿಷ್ಠ 100 ಪ್ರಬಲ ರಾಷ್ಟ್ರಗಳ ಮುಖ್ಯಸ್ಥರು,
ವಿಶ್ವದಲ್ಲಿ ಶಾಂತಿಯುತ ಸಹಭಾಳ್ವೆ ನಡೆಸಲು ಸಾಧ್ಯ ಮಾಡಬಹುದಾದ ಧರ್ಮಗಳೆಂದರೆ ಆಯಾ ದೇಶಗಳ ಸಂವಿಧಾನಗಳು,
ಅಂದರೆ ನಿಜವಾದ ದೇವರುಗಳು ಮತ್ತು ಧರ್ಮ
ಆಯಾ ದೇಶದ ಮುಖ್ಯಸ್ಥರು ಮತ್ತು ಸಂವಿಧಾನ,
ಬಹುಶಃ ಇಂದಿನ ವಾಸ್ತವ ಇದೇ,
ಉಳಿದದ್ದು ಭ್ರಮೆ ಮತ್ತು ನಂಬಿಕೆ ಮಾತ್ರ,
ಸರ್ವಶಕ್ತ, ನಿನಗೇ
ಅಂಜಿಕೆಯಾದರೆ ನಮ್ಮಂತ ಹುಲುಮಾನವರ ಗತಿಯೇನು,
ನಿನ್ನನ್ನು ಪ್ರಶ್ನಿಸಿದಾಗ ಉತ್ತರಿಸುವವರು ಇನ್ಯಾರೋ,
ಭಯಪಡಿಸುವವರು ಇನ್ಯಾರೋ,
ತರ್ಕ ಬೇಡ, ಚರ್ಚೆ ಬೇಡ, ಬುದ್ದಿಯ ಪ್ರದರ್ಶನ ಬೇಡ,
ಶುದ್ದನೋ, ಅಶುದ್ಧನೋ, ಪಾಪಿಯೋ ಗೊತ್ತಿಲ್ಲ ನನಗೆ ನಾನೇನೆಂದು,
ಕಾಣಿಸಿಕೋ ನನಗೊಮ್ಮೆ, ಅರ್ಪಿಸಿಕೊಳ್ಳುತ್ತೇನೆ ನನ್ನನ್ನು ನಿನಗೊಮ್ಮೆ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…….