लाइव कैलेंडर

February 2025
M T W T F S S
 12
3456789
10111213141516
17181920212223
2425262728  
05/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಬೋಧಕ,ಸಂಶೋಧಕ, ಸಾಹಿತಿ ಡಾ. ಮರಳಸಿದ್ದಯ್ಯ ಪಟೇಲ್ ಚಿಕ್ಕಮಗಳೂರು ಜಿಲ್ಲಾ ೨೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ*

ಚಿಕ್ಕಮಗಳೂರು: ಭೌಗೋಳಿಕವಾಗಿ, ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ, ಪ್ರಾಕೃತಿಕವಾಗಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಹಲವು ವೈಶಿಷ್ಟ್ಯಗಳನ್ನು ಹಾಸಿ ಹೊದ್ದುಕೊಂಡಿದೆ. ಈ ನೆಲದ ಅನೇಕ ಶ್ರೀಮಂತ ಸಂಸ್ಕೃತಿ, ಭವ್ಯ ಪರಂಪರೆಗಳು ರಾಜ್ಯದುದ್ದಕ್ಕೂ ಪರಿಚಿತವಾಗಿವೆ. ಬಯಲು ಸೀಮೆ ಮತ್ತು ಮಲೆನಾಡು ಈ ಎರಡು ಭೌಗೋಳಿಕ ಲಕ್ಷಣವನ್ನು ಪ್ರಾಕೃತಿಕವಾಗಿ ತನ್ನದಾಗಿಸಿಕೊಂಡಿರುವ ತರೀಕೆರೆ ತಾಲೂಕಿನಲ್ಲಿ ಬಹುತೇಕ ಎಲ್ಲಾ ಆಹಾರ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಇನ್ನೂ ಕಲೆ ಮತ್ತು ಜಾನಪದ ಸಂಸ್ಕೃತಿಗೆ ತರೀಕೆರೆ ತಾಲ್ಲೂಕು ತವರೂರಿನಂತೆ ಇದೆ. ಅದೆಷ್ಟೋ ಕಲೆ ಸಂಸ್ಕೃತಿಗಳು ಈ ನೆಲದಲ್ಲಿ ಹುಟ್ಟಿ ಮುಗಿಲೆತ್ತರಕ್ಕೆ ಏರಿ, ನಾಡಿನುದ್ದಕ್ಕೂ ಪಸರಿಸಿವೆ. ಜೊತೆಗೆ ಸಾಹಿತ್ಯ ಕೃಷಿಗೂ ತನ್ನದೇ ಆದ ಚಾಪನ್ನು ಈ ತಾಲೂಕು ಮೂಡಿಸಿದೆ.

ತರೀಕೆರೆ ಎಂಬ ಹೆಸರಿನಲ್ಲಿಯೇ ತರಿ ಮತ್ತು ಕೆರೆ ಎರಡು ಇದೆ. ಇಂತಹ ತರೀಕೆರೆ ಪಟ್ಟಣದಲ್ಲಿ ೨೦೨೫ನೇ ಮಾರ್ಚ್ ೦೭ ಮತ್ತು 0೮ ರಂದು ಚಿಕ್ಕಮಗಳೂರು ಜಿಲ್ಲಾ ೨೦ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಭೂಮಿಕೆ ಸಿದ್ಧವಾಗುತ್ತಿದೆ.

ಈ ಬಾರಿ ನಡೆಯುವ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಈ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವು ಇದೇ ತರೀಕೆರೆ ತಾಲೂಕಿನ ರಂಗೇನಹಳ್ಳಿ ಗ್ರಾಮದ ಕೃಷಿಕ ದಂಪತಿಗಳಾದ ಶ್ರೀ ಮರಿಯಪ್ಪಯ್ಯ ಪಟೇಲ್ ಶ್ರೀಮತಿ ಪ್ರತಿಭಾ ಪಟೇಲ್ ಮಗನಾಗಿ, ಬೋಧಕನಾಗಿ, ಸಂಶೋಧಕನಾಗಿ, ಸಾಹಿತಿಯು ಆದ ಡಾ. ಮರಳಸಿದ್ದಯ್ಯ ಪಟೇಲ್ ಅವರಿಗೆ ಒಲಿದಿದೆ.

೨೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಡಾ. ಮರಳಸಿದ್ದಯ್ಯ ಪಟೇಲ್ ಅವರ ಹೆಸರನ್ನು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈಗಾಗಲೇ ಘೋಷಣೆ ಮಾಡಿದೆ.

ಡಾ. ಮರಳಸಿದ್ದಯ್ಯ ಪಟೇಲ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವು ತಮ್ಮ ಹುಟ್ಟುರಾದ ರಂಗೇನಹಳ್ಳಿ ಹಾಗೂ ಲಕ್ಕವಳ್ಳಿಯಲ್ಲಿ ನಡೆದಿದೆ. ನಂತರ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಪಡೆದು, ತದನಂತರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿ ಎಚ್ ಡಿ ಯನ್ನು ಗಳಿಸಿದ್ದಾರೆ.

ಪಟೇಲ್ ಅವರು ಎಂಎಸ್ಸಿ. ಪಿಜಿಡಿಸಿಪಿ. ಪಿ ಹೆಚ್ ಡಿ ಪದವೀಧರರಾಗಿದ್ದು, ಕನ್ನಡ,ಹಿಂದಿ, ಇಂಗ್ಲೀಷ್, ತಮಿಳು ಭಾಷೆಗಳನ್ನು ಅರಿತಿದ್ದಾರೆ. ಹಾಗೂ ಬೋಧಕರಾಗಿ ,ಸಂಶೋಧಕರಾಗಿ ಸಾಹಿತ್ಯ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕರ್ನಾಟಕ ಕೊರಗ ಬುಡಕಟ್ಟು ಜನಾಂಗದಲ್ಲಿ ಸಾಮಾಜಿಕ ಆರ್ಥಿಕ ಬದಲಾವಣೆ ವಿಷಯದಲ್ಲಿ ಮಹಾಪ್ರಬಂಧ ಮಂಡಿಸಿ ಪಿ ಎಚ್ ಡಿ ಪದವಿ ಹೊಂದಿದ್ದಾರೆ.

ಭಾರತೀಯ ಮಾನವ ವಿಜ್ಞಾನ ಸರ್ವೇಕ್ಷಣ ಇತಿಹಾಸ, ಕುರುಬರ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ಇತಿಹಾಸ. ಕಾಡು ಕುರುಬರು. ಜೇನು ಕುರುಬರು. ಬುಡಕಟ್ಟು ಸಮುದಾಯಗಳು. ಕೊರಗರು. ಮಲೆಕುಡಿಯರು. ಸೋಲಿಗರು. ಕರ್ನಾಟಕ ಹಳ್ಳಿಕಾರರ ಸಮಗ್ರ ಕೈಪಿಡಿ. ಮಾನವ ಶಾಸ್ತ್ರ ಒಂದು ಅಧ್ಯಯನ. ಚಂದ್ರಯಾನ. ಕಾಕನಕೋಟೆಯ ಮಲೆಯ ಮದು ಮಕ್ಕಳು. ಪ್ರವಾಸೋದ್ಯಮ ಮತ್ತು ಸುಸ್ಥಿರ ಅರಣ್ಯ ಅಭಿವೃದ್ಧಿ. ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮುದಾಯಗಳು. ಸುಳ್ಳೆಕ್ಯಾತರು. ಹಾಗೂ ಚಿಕ್ಕಮಗಳೂರು ಜಿಲ್ಲೆಯ ಜಾನಪದ ಕಲೆ. ಜಾನಪದ ಸಂಸ್ಕೃತಿ. ಜಾನಪದ ಸಂಪ್ರದಾಯ ಕುರಿತಂತೆ ಸುಮಾರು ಇಪ್ಪತ್ನಾಲ್ಕುಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸತ್ವ ಲೋಕಕ್ಕೆ ನೀಡಿದ್ದಾರೆ.

ತಾಲೂಕು ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದವರೆಗೂ ಅನೇಕ ಪ್ರಶಸ್ತಿಗಳು ಇವರಿಗೆ ಒಲಿದಿವೆ. ಅಂತರಾಷ್ಟ್ರೀಯ ಪ್ರತಿಷ್ಠಿತ ಅಮೆರಿಕನ್ ಬಯೋಲಾಜಿಕಲ್ ಸೊಸೈಟಿಯಿಂದ ಮ್ಯಾನ್ ಆಫ್ ದಿ ಇಯರ್ ೨೦೧೦ ಪ್ರಶಸ್ತಿಯ ಗೌರವಕ್ಕೆ ಭಾಜನರಾಗಿದ್ದಾರೆ.

ಭಾರತ ಸೇರಿದಂತೆ, ಚೀನಾ, ಟರ್ಕಿ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ಡಂ , ಲಂಡನ್, ಜಪಾನ್, ಹಾಂಗ್ ಕಾಂಗ್, ಮಲೇಶಿಯಾ, ಥೈಲ್ಯಾಂಡ್ ಮುಂತಾದ ದೇಶಗಳಲ್ಲಿ ತಮ್ಮ ಪ್ರಬಂಧವನ್ನು ಮಂಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ದೇವಗೊಂಡನಹಳ್ಳಿಯ ಗ್ರಾಮದ ಅಧ್ಯಯನ ಮಾಡಿ, ಅಮೂರ್ತ ಮತ್ತು ಮೂರ್ತ ಹಾಗೂ ಸಾಂಸ್ಕೃತಿಕ ಪರಂಪರೆಗಳು ಹಾಗೂ ಸಂಪ್ರದಾಯ ಜ್ಞಾನಗಳ ಬಗ್ಗೆ ಕ್ಷೇತ್ರ ಅಧ್ಯಯನ ಮಾಡಿ ಇದೆಲ್ಲವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ.

ಲಕ್ಕವಳ್ಳಿ ಹೋಬಳಿ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಡಾ. ಮರಳಸಿದ್ದಯ್ಯ ಪಟೇಲ್ ಅವರು, ಅಜ್ಜಂಪುರದಲ್ಲಿ ನಡೆದ ೧೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಿರಿ ಪ್ರಶಸ್ತಿ, ೨೦೧೪ರಲ್ಲಿ ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಸಹ ಪ್ರಶಸ್ತಿ ಪಡೆದು ಗೌರವಕ್ಕೆ ಭಾಜನರಾಗಿದ್ದಾರೆ.

ಸಾಕ್ಷಾಚಿತ್ರ ನಿರ್ಮಾಣ, ಮೈಸೂರು ಆಕಾಶವಾಣಿಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸೇರಿದಂತೆ ಏಳು ಪಿಎಚ್ ಡಿ ವಿದ್ಯಾರ್ಥಿಗಳಿಗೆ ಗೈಡಾಗಿ ಮಾರ್ಗದರ್ಶನ ನೀಡಿದ್ದಾರೆ.

ಕೆನಡ ದೇಶದ ವಿಂಡ್ಸರ್ ವಿಶ್ವವಿದ್ಯಾಲಯ ಸೇರಿದಂತೆ ಡೆಹ್ರಾಡೂನ್ , ದೆಹಲಿ, ಮೈಸೂರು ಸೇರಿದಂತೆ ದೇಶದ ವಿವಿಧಡೆಯಲ್ಲಿ ತಮ್ಮ ಸಾರ್ವಜನಿಕ ಸೇವೆ ಸಲ್ಲಿಸಿರುವ ಡಾ.ಮರುಳಸಿದ್ದಯ್ಯ ಪಟೇಲ್ ಅವರು ಕೇಂದ್ರ ಸರ್ಕಾರದ ಭಾರತೀಯ ಮಾನವ ವಿಜ್ಞಾನ ಸರ್ವೇಕ್ಷಣಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಈಗ ಮೈಸೂರಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದು, ತನ್ನ ಹುಟ್ಟೂರು ರಂಗೇನಹಳ್ಳಿಗೆ ಆಗಾಗ ಬಂದು ತಮ್ಮ ಕೃಷಿ ಕಾಯಕವನ್ನು ಮಾಡುತ್ತಿದ್ದಾರೆ.

೬೪ರ ವಯೋಮಾನದ ಡಾ. ಮರಳಸಿದ್ದಯ್ಯ ಪಟೇಲ್ ಅವರ
ಈ ಎಲ್ಲಾ ಸಾಹಿತ್ಯದ ಸಾಧನೆಯನ್ನು ಪರಿಗಣಿಸಿ , ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಇಪ್ಪತ್ತನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವನ್ನು ಕೊಡಮಾಡಿದೆ.

೨೦೨೫ನೇ ಮಾರ್ಚ್ ೦೭ಮತ್ತು ೦೮ರಂದು ತರೀಕೆರೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ಸಾಹಿತ್ಯ ಸಮ್ಮೇಳನವು ಗುರುತರವಾದ ಜವಾಬ್ದಾರಿಯೊಂದಿಗೆ, ಅರ್ಥಪೂರ್ಣವಾಗಿ ಡಾ. ಮರುಳಸಿದ್ದಯ್ಯ ಪಟೇಲ್ ಅವರ ಸರ್ವಾಧ್ಯಕ್ಷತೆಯಲ್ಲಿ ಹೊರ ಹೊಮ್ಮಲಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಸಾಹಿತ್ಯ ವಲಯದೊಳಗೆ ತಮ್ಮ ಸಂಬಂಧ ಅವಿರತವಾಗಿ ಜೊತೆ ಜೊತೆಗಿದ್ದು, ಇಲ್ಲಿನ ಏಳು ಬೀಳುಗಳ ಬಗ್ಗೆ ಸದಾ ಸದ್ದು ಮಾಡುತ್ತಿರಲಿ ಎಂಬುದು ನ್ಯೂಸ್ ಕಿಂಗ್ ಆಶಯ.
••••••••••••••••••••••••✒️ಬರಹ
ಡಿ.ಎಂ. ಮಂಜುನಾಥಸ್ವಾಮಿ

About Author

Leave a Reply

Your email address will not be published. Required fields are marked *