लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ……..

1 min read

ಗಣರಾಜ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ……..

ನಾನು ಹಿಂದೂ
ನಾನು ಮುಸ್ಲಿಂ,
ನಾನು ಸಿಖ್,
ನಾನು ಕ್ರಿಶ್ಚಿಯನ್,
ನಾನು ಬೌದ್ಧ,
ನಾನು ಜೈನ,
ನಾನು ಲಿಂಗಾಯತ,
ನಾನು ಒಕ್ಕಲಿಗ,
ನಾನು ದಲಿತ.
ನಾನು ಠಾಕೂರ್,
ನಾನು ಮರಾಠ,
ನಾನು ಪಟೇಲ್,
ನಾನು ಜಾಟ್,
ನಾನು ನಾಯರ್,
ನಾನು ನಂಬೂದಿರಿ,
ನಾನು ಅಯ್ಯರ್,
ನಾನು ಕಮ್ಮು…….

ಇಲ್ಲ ನೀವು ಈ ಎಲ್ಲವನ್ನೂ ಮೀರಿ ಮೊದಲು ಭಾರತೀಯರು….

We the people of India………

ಹೀಗೆ ಹೇಳಿದ್ದು ಭಾರತ ಗಣರಾಜ್ಯಗಳ ಒಕ್ಕೂಟದ ಸಂವಿಧಾನ……

ವೇದ ಉಪನಿಷತ್ತುಗಳು, ಭಗವದ್ಗೀತೆ – ಖುರಾನ್ – ಬೈಬಲ್ – ಗ್ರಂಥ ಸಾಹಿಬ್ – ಬುದ್ದ ಜ್ಞಾನ – ಜೈನ ಪಂಥ – ಬಸವ ತತ್ವ – ಶೈವ ಪಂಥ – ದ್ವೈತ – ಅದ್ವೈತ – ವಿಶಿಷ್ಟಾದ್ವೈತ ಎಲ್ಲವನ್ನೂ ಒಳಗೊಂಡ ಆದರೆ ಎಲ್ಲವನ್ನೂ ಸಂಕಲಿಸಿದ – ಎಲ್ಲವನ್ನೂ ಸಮೀಕರಿಸಿದ ಪರ್ಯಾಯ ಮಾರ್ಗವೇ ಸಂವಿಧಾನ…..

ಧರ್ಮಗಳ ಕೊಳೆಯನ್ನು ತೊಳೆದು ಹೊಳಪು ನೀಡಿ ಸಮಾನತೆ ಸ್ವಾತಂತ್ರ್ಯ ಎಂಬ ಹೊಸ ನಾಗರಿಕ ಲಕ್ಷಣಗಳ ಆಧುನಿಕ ರೂಪವೇ ಸಂವಿಧಾನ…

ಜನರನ್ನು ಶ್ರೇಷ್ಠತೆಯ ವ್ಯಸನದ ಭ್ರಮೆಗಳಿಗೆ ಒಳಪಡಿಸುವ ಧರ್ಮಗಳು, ಆಚರಣೆಗಳ ಮೂಲಕ ವಿಭಜಿಸುವ ಧರ್ಮಗಳು,
ಹುಟ್ಟಿನ ಆಧಾರದ ಮೇಲೆ ಬೇರ್ಪಡಿಸುವ ಜಾತಿಗಳು, ಇವುಗಳಿಗೆ ಬದಲಾವಣೆ ತಂದು ಮನುಷ್ಯತ್ವದ ಆಧಾರದ ಮೇಲೆ ಒಂದು ಗೂಡಿಸುವ ವಿಧಿ ವಿಧಾನಗಳೇ – ನೀತಿ ನಿಯಮಗಳೇ ಸಂವಿಧಾನ……

ಬಹುತ್ವ ಭಾರತ ಬಲಿಷ್ಠ ಭಾರತ ಆಶಯವನ್ನು ವಾಸ್ತವದಲ್ಲಿ ನಿಜವಾಗಿಸಲು ಇರುವ ಅತ್ಯುತ್ತಮ ಮಾರ್ಗ ಸಂವಿಧಾನ…..

ಯಾವ ದೃಷ್ಟಿಕೋನದಿಂದ ನೋಡಿದರು ಭಾರತದಲ್ಲಿ ಮನುಷ್ಯ ಪ್ರೀತಿಯ ಸಂಕೇತ ಸಂವಿಧಾನ ಮಾತ್ರ……

ಇಂತಹ ಸಂವಿಧಾನವನ್ನು ಅಳವಡಿಸಿಕೊಂಡು ಅದನ್ನು ಸಂಭ್ರಮದಿಂದ ಜಾರಿ ಮಾಡಿ ಗಣರಾಜ್ಯಗಳ ಒಕ್ಕೂಟವಾದ ನೆನಪಿನ ದಿನ ಜನವರಿ 26…….

ಸಂವಿಧಾನವೇ ಧರ್ಮವಾದ, ಜಗತ್ತಿನ ಅತ್ಯಂತ ದೊಡ್ಡ ಪ್ರಜಾಸತ್ತಾತ್ಮಕ ಮತ್ತು ವೈವಿಧ್ಯಮಯ ದೇಶ ಭಾರತ. ಅದನ್ನು ವರ್ಣಿಸುವುದೇ ಒಂದು ಹೆಮ್ಮೆ…….

ಜೀವ ನೀಡಿದ ಜನ್ಮಭೂಮಿಯೆ,
ನಿನಗಿದೋ ಬಹುದೊಡ್ಡ ಸಲಾಂ……

ಎಷ್ಟೊಂದು ಅದ್ಭುತ, ಆಶ್ಚರ್ಯ, ವೈವಿಧ್ಯತೆಗಳ ಮಡಿಲು ನಿನ್ನದು…….

ನಿನ್ನಲ್ಲಿರುವ ಜಾತಿಗಳೆಷ್ಟೋ, ಧರ್ಮಗಳೆಷ್ಟೋ, ದೇವರುಗಳೆಷ್ಟೋ,……

ನಿನ್ನಲ್ಲಡಗಿರುವ ಭಾಷೆಗಳೆಷ್ಟೋ, ಪಕ್ಷಗಳೆಷ್ಟೋ, ಪ್ರದೇಶಗಳೆಷ್ಟೋ,…..

ನಿನೊಂದಿರುವ ನದಿಗಳೆಷ್ಟೋ, ಬೆಟ್ಟಗಳೆಷ್ಟೋ, ಸರೋವರಗಳೆಷ್ಟೋ,……

ನೀನಾಚರಿಸುವ ಉತ್ಸವಗಳೆಷ್ಟೋ, ಜಾತ್ರೆಗಳೆಷ್ಟೋ, ಸಂಪ್ರದಾಯಗಳೆಷ್ಟೋ,….

ನಿನ್ನಭಿಮಾನದ ಕಲೆ, ಸಾಹಿತ್ಯ, ಸಂಗೀತ, ತಂತ್ರಜ್ಞಾನಗಳೆಷ್ಟೋ,

ನೀನನುಭವಿಸಿದ ದಾಳಿ, ಹಿಂಸೆ, ದೌರ್ಜನ್ಯ, ಅತ್ಯಾಚಾರಗಳೆಷ್ಟೋ,..

ನಿನ್ನೊಳಗಿನ ಅಮಾಯಕರು, ಅಸಹಾಯಕರು, ಶೋಷಿತರೆಷ್ಟೋ,…..

ನಿಜವಾದ ದೇಶದ್ರೋಹಿಗಳೆಷ್ಟೋ,
ಕಪಟ ದೇಶಭಕ್ತರೆಷ್ಟೋ,
ಕ್ರೂರಿಗಳೆಷ್ಟೋ, ವಂಚಕರೆಷ್ಟೋ,…….

ಆಗರ್ಭ ಶ್ರೀಮಂತರೆಷ್ಟೋ, ಹಸಿವಿನಿಂದ ಸತ್ತವರೆಷ್ಟೋ,
ದೇವ ಮಂದಿರಗಳ ವ್ಯೆವಿದ್ಯತೆಯೆಷ್ಟೋ,
ಸ್ಮಶಾನಗಳ ಭಿನ್ನತೆಯೆಷ್ಟೋ,…….

ಮಸೀದಿಗಳೆಷ್ಟೋ,
ಚರ್ಚುಗಳೆಷ್ಟೋ,
ಜೈನ ಮಂದಿರಗಳೆಷ್ಟೋ ಗುರುದ್ವಾರಗಳೆಷ್ಟೋ,
ಬೌದ್ದ ಸ್ತೂಪಗಳೆಷ್ಟೋ,….

ಪ್ರಕೃತಿಯ ವಿಕೋಪಗಳೆಷ್ಟೋ, ಮಾನವನ ಚೇಷ್ಟೆಗಳೆಷ್ಟೋ,….

ಆದರೂ,
ನಿಂತಿರುವೆ ಹೆಬ್ಬಂಡೆಯಾಗಿ, ವಜ್ರದೇಹಿಯಾಗಿ,
ಹೂ ಹೃದಯದ ಮಾತೆಯಾಗಿ, ಶುಭ್ರಮನಸ್ಸಿನ ಮಮತೆಯಾಗಿ,……

ಇಷ್ಟಾದರೂ ಇರಿಯುತ್ತಿದ್ದಾರೆ ನಿನ್ನನ್ನು ನಿನ್ನದೇ ಹಿತಶತ್ರುಗಳು,…..

ನಿನ್ನೊಂದಿಗೆ ತಾವೂ ನಾಶವಾಗುತ್ತೇವೆಂಬ ಅರಿವಿಲ್ಲದ ಮತಿಹೀನರು,…..

ಎಲ್ಲವೂ ತಿಳಿದಿರುವ ಜ್ಞಾನಿಗಳು ನಾವೆಂಬ ಅಹಂಕಾರದ ಅಜ್ಞಾನಿಗಳು,….

ಸ್ವಾತಂತ್ರ್ಯದ ಅರ್ಥಗೊತ್ತಿಲ್ಲ, ಸಮಾನತೆಯ ಮಹತ್ವ ತಿಳಿದಿಲ್ಲ,……

ತಾಳ್ಮೆ ಇಲ್ಲ, ತ್ಯಾಗವಿಲ್ಲ, ಕರುಣೆಯಿಲ್ಲ, ದುರಹಂಕಾರವೇ ಎಲ್ಲಾ…….

ಆದರೂ…….

ನಿನ್ನ ಅಸ್ತಿತ್ವ ಸಹಸ್ರಾರು ವರ್ಷಗಳ ನಿರಂತರ ಚಲನೆಯಿಂದ ಕೂಡಿದೆ……

ನನ್ನ ಭರತ ಖಂಡವೇ ಏನೆಂದು ವರ್ಣಿಸಲಿ – ಎಷ್ಟೆಂದು ವರ್ಣಿಸಲಿ ನಿನ್ನನ್ನು ……

ಪದಗಳು – ಭಾವಗಳು – ಕಲ್ಪನೆಗಳಿಗೂ ನಿಲುಕದ ನಿನ್ನನ್ನು ಹೇಗೆಂದು ಹಿಡಿದಿಡಲಿ ಈ ಪುಟ್ಟ ಹೃದಯದಲಿ….

ರಾಮಾಯಣ – ಮಹಾಭಾರತ – ಭಗವದ್ಗೀತೆಗಳೆಂಬ – ಅಸಾಮಾನ್ಯ ಬೃಹತ್ ಗ್ರಂಥಗಳು ನಿನ್ನಲ್ಲೇ ಸೃಷ್ಟಿಯಾದವು……..

ಗೌತಮ ಬುದ್ಧ – ಮಹಾವೀರರೆಂಬ ಚಿಂತನ ಚಿಲುಮೆಗಳಿಗೆ ಜನ್ಮ ನೀಡಿದ್ದು ನೀನೇ…….

ಹಿಮಗಿರಿಯ ಸೌಂದರ್ಯ – ನಿತ್ಯ ಹರಿದ್ವರ್ಣದ ಕಾಡುಗಳು – ತುಂಬಿ ತುಳುಕುವ ನದಿಗಳು – ಕೌತುಕದ ಬೆಟ್ಟ ಗುಡ್ಡಗಳು – ಆಕರ್ಷಕ ಮರುಭೂಮಿ – ವಿಸ್ತಾರವಾದ ಬಯಲುಗಳು ಅಡಗಿರುವುದೂ ನಿನ್ನಲ್ಲೇ….

ಹಿಂದೂ – ಮುಸ್ಲಿಂ – ಕ್ರಿಶ್ಚಿಯನ್ – ಸಿಖ್ – ಬುದ್ಧ – ಜೈನ – ಪಾರ್ಸಿಗಳೆಲ್ಲರ ಆಶ್ರಯದಾತ ನೀನೇ…..

ಋಷಿ ಮುನಿಗಳ – ದಾಸ ಆಚಾರ್ಯರ – ಪಂಡಿತ ಪಾಮರರ ನೆಲೆವೀಡು ನಿನ್ನದೇ……‌

ಸಮಾನತೆಯ ಹರಿಕಾರ – ಪ್ರಜಾ ಕ್ರಾಂತಿಯ ಧೀಮಂತ ಬಸವಣ್ಣ ಜನಿಸಿದ್ದು ಈ ಮಣ್ಣಿನಲ್ಲಿಯೇ…..

ವಿಶ್ವ ದಾರ್ಶನಿಕ – ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು ಹುಟ್ಟಿದ್ದು ಈ ನೆಲದಲ್ಲೇ…..

ಹಿಂದೆಂದೂ ಹುಟ್ಟಿರದ ಮುಂದೆಂದೂ ಹುಟ್ಟಲಸಾಧ್ಯವಾದ ಅಂಬೇಡ್ಕರ್ ಎಂಬ ಜ್ಞಾನದ ಬೆಳಕಿನ ಕಿಡಿ ಬೆಳಗಿದ್ದು ನಿನ್ನ ತೋಳಿನಲ್ಲೇ….

ಮಾನವ ಜನಾಂಗದ ಕೌತುಕ ಗಾಂಧಿ ಎಂಬ ಮಹಾತ್ಮ ಬದುಕಿದ್ದುದು ನಿನ್ನ ಮಡಿಲಲ್ಲೇ….

ಹೆಣ್ಣೆಂಬುದು ದೇವತೆಯಾದದ್ದು ನಿನ್ನೀ ಮನದ ಭಾವನೆಗಳಲ್ಲೇ…..

ತಂದೆ – ತಾಯಿಗಳೇ ದೇವರಾದದ್ದು ನಿನ್ನೀ ನೆಲದ ಮಹಿಮೆಯಿಂದಲೇ….

ಸತ್ಯ – ಅಹಿಂಸೆ – ಆಧ್ಯಾತ್ಮ – ವೈಚಾರಿಕತೆ – ಸ್ವಾತಂತ್ರ್ಯ ಬೆಳೆದದ್ದು ನಿನ್ನೀ ಗುಣದಿಂದಲೇ…..

ಪ್ರೀತಿ – ತ್ಯಾಗ – ನಿಸ್ವಾರ್ಥ – ಮಾನವೀಯತೆ ತವರೂರು ನಿನ್ನಲ್ಲೇ ಅಡಗಿದೆ……

ಬಲಪಂಥ – ಎಡಪಂಥ – ಭಕ್ತಿಪಂಥ – ಕಾಯಕಪಂಥ – ಜ್ಞಾನಪಂಥ, ಆ ವಾದ ಈ ವಾದಗಳ ಪ್ರಯೋಗ ನಡೆಯುತ್ತಿರುವುದು ನಿನ್ನ ಒಡಲಾಳದಲ್ಲೇ…‌…

ಇಷ್ಟೊಂದು ಭಿನ್ನತೆಗಳು ಈ ಸೃಷ್ಟಿಯಲ್ಲಡಗಿರುವುದು ನಿನ್ನಲ್ಲಿ ಮಾತ್ರ………

ಶಾಂತಿ – ಸಹೋದರತೆ – ಭಾತೃತ್ವಗಳ ಈ ನಿನ್ನ ಮಡಿಲಲ್ಲಿ ಬೆಳೆಯುತ್ತಿರುವ ಅದೃಷ್ಟವಂತ ನಾನು…

ಮೇಲೆ ನೋಡಿದರೆ ಹಿಮರಾಶಿಯ ಕಾಶ್ಮೀರ,

ಕೆಳಗೆ ನೋಡಿದರೆ ನೀಲಿ ಸಾಗರದ ಕನ್ಯಾಕುಮಾರಿ,

ಪೂರ್ವಕ್ಕೆ ಸಪ್ತ ಸೋದರಿಯರ ಸುಂದರ ನಾಡು,

ಪಶ್ಚಿಮದಲ್ಲಿ ವಾಣಿಜ್ಯ ನಗರಿಯ ಬೀಡು,

ಮಧ್ಯದಲ್ಲಿ ವಿಂಧ್ಯ ಗಿರಿ,

ಅಗೋ ಅಲ್ಲಿ ನೋಡು ಹರಿಯುತ್ತಿದ್ದಾಳೆ ಗಂಗೆ,

ಇಗೋ ಇಲ್ಲಿ ನೋಡು ನಲಿಯುತ್ತಿದ್ದಾಳೆ ಕಾವೇರಿ,

ಅಲ್ಲಲ್ಲಿ ಮುದನೀಡುವ ಮನೋಹರ ನದಿ ಕಾಡುಗಳು,
ಅಲ್ಲಿಯೇ ಹುಲಿಯ ಘರ್ಜನೆ,
ನವಿಲ ನರ್ತನ, ಕುಹೂ ಕುಹೂ ಗಾನ,

ಹಾಡಲೊಂದು ಶಾಸ್ತ್ರೀಯ ಸಂಗೀತ,
ಕೇಳಲೊಂದು ಕರ್ನಾಟಕ ಸಂಗೀತ,

ಅಲ್ಲೊಂದಿಷ್ಟು ಮರುಭೂಮಿ, ಇಲ್ಲೊಂದಿಷ್ಟು ಪಶ್ಚಿಮ ಘಟ್ಟಗಳು,

ಓದಲು ರಾಮಾಯಣ, ಮಹಾಭಾರತ,
ಕಲಿಯಲು ಬೃಹತ್ ಸಂವಿಧಾನ,

ಅರಿಯಲೊಬ್ಬ ಬುದ್ದ, ಅಳವಡಿಸಿಕೊಳ್ಳಲೊಬ್ಬ ಬಸವ,

ಬುದ್ಧಿ ಹೇಳಲೊಬ್ಬ ವಿವೇಕಾನಂದ,
ತಿಳಿವಳಿಕೆ ಮೂಡಿಸಲೊಬ್ಬ ಅಂಬೇಡ್ಕರ್,
ಎಲ್ಲರೊಳಗೊಬ್ಬ ಗಾಂಧಿ,

ಗುರುಹಿರಿಯರೆಂಬ ಗೌರವ,
ಮಕ್ಕಳೇ ಮಾಣಿಕ್ಯವೆಂಬ ಸಂಸ್ಕಾರ,

ಆಡಲು ಹಾಕಿ, ನೋಡಲು ಕ್ರಿಕೆಟ್, ಕಾಯಲೊಬ್ಬ ಪ್ರಧಾನಮಂತ್ರಿ,
ಕರುಣಿಸಲೊಬ್ಬ ಮುಖ್ಯಮಂತ್ರಿ,

ಸಂಭ್ರಮಿಸಲು ಸಂಕ್ರಾಂತಿ,
ಸ್ವಾಗತಿಸಲು ಯುಗಾದಿ,
ಕುಣಿದು ಕುಪ್ಪಳಿಸಲು ಗಣೇಶ,
ಮನರಂಜಿಸಲು ದೀಪಾವಳಿ,

ವಿಜೃಂಬಿಸಲು ದಸರಾ,
ಭಾವೈಕ್ಯತೆಯ ರಂಜಾನ್,
ರಂಗುರಂಗಿನ ಕ್ರಿಸ್ ಮಸ್,

ಸತ್ಯ, ಅಹಿಂಸೆ, ಮಾನವೀಯತೆ ಎಂಬ ಸಂಪ್ರದಾಯ,
ದಯವೇ ಧರ್ಮದ ಮೂಲವಯ್ಯ ಎಂಬ ಸಂಸ್ಕೃತಿ,

ಧನ್ಯ ಈ ನೆಲವೇ ಧನ್ಯ ಧನ್ಯ,
ನನ್ನುಸಿರಾಗಿರುವ ಭಾರತ ದೇಶವೇ,
ನಿನಗೆ ನನ್ನ ಶುಭಾಶಯದ ಹಂಗೇಕೆ,
ನೀನಿರುವುದೇ ನನಗಾಗಿ,
ನನ್ನ ಜೀವವಿರುವುದೇ ನಿನಗಾಗಿ,

ಭಿನ್ನತೆಯಲ್ಲೂ ಐಕ್ಯತೆ, ಅದುವೇ,
ನಮ್ಮ ಭಾರತೀಯ ಗಣರಾಜ್ಯ.

ಈ ನನ್ನ ಜೀವ ನಿನಗಾಗಿ….ಎಂದೆಂದಿಗೂ ‌…

ಏರುತಿಹುದು – ಹಾರುತಿಹುದು
ನೋಡು ನಮ್ಮ ಬಾವುಟ……..

ಬಡವರ ಒಡಲಾಳದಿಂದ ಹೊರಟ ಕೆಂಬಾವುಟ,

ಬ್ರಾಹ್ಮಣ ಅಗ್ರಹಾರಗಳಿಂದ ಹೊರಟ ಕೇಸರಿ ಬಾವುಟ,

ದಲಿತ ಕೇರಿಗಳಿಂದ ಹೊರಟ ನೀಲಿ ಬಾವುಟ,

ರೈತರ ಹೊಲಗದ್ದೆಗಳಿಂದ ಹೊರಟ ಹಸಿರು ಬಾವುಟ,

ಮುಸ್ಲಿಮರ ಮನೆಗಳಿಂದ ಹೊರಟ ಹಸಿರಿನದೇ ಬಾವುಟ,

ಎಲ್ಲಾ ಶೋಷಿತರ ಕನಸಿನಾಳದಿಂದ ಹೊರಟ ಕಪ್ಪು ಬಾವುಟ,

ಶಾಂತಿಪ್ರಿಯರ ಮನಸ್ಸಿನಾಳದಿಂದ ಹೊರಟ ಹಾಲು ಬಿಳುಪಿನ ಬಾವುಟ,

ಕ್ರಿಶ್ಚಿಯನ್ನರ ಹೃದಯದಾಳದಿಂದ ಹೊರಟ ಬಿಳಿಯದೇ ಬಾವುಟ,

ಪ್ರಕೃತಿಯ ಮಡಿಲಿನಿಂದ ಹೊರಟ ಭೂ ಬಣ್ಣದ ಬಾವುಟ,

ಎಲ್ಲವೂ ಆಕಾಶದಲ್ಲಿ ಕಾಮನಬಿಲ್ಲಿನಂತೆ ಮೂಡಿ,

ಅಲೆ ಅಲೆಯಾಗಿ ತೇಲುತ್ತಾ ತೇಲುತ್ತಾ ತೇಲುತ್ತಾ,

ಭಾರತ ಮಾತೆಯ ಮೈ ಹೊದಿಕೆಯಂತೆ ಅವರಿಸಿಕೊಂಡಾಗ,

ಏನೆಂದು ವರ್ಣಿಸಲಿ ಆ ಸೌಂದರ್ಯವನ್ನು,

ವಿಶ್ವ ಸುಂದರಿಯರ ಸುಂದರಿಯಂತೆ,

ಮೊನಲಿಸಾಳ ನಗುವೂ ಮಾಸುವಂತೆ,

ಸೃಷ್ಟಿಯನ್ನೇ ಮೆಟ್ಟಿನಿಂತ ದೈತ್ಯಳಂತೆ,

ಸ್ವಾತಂತ್ರ್ಯ ದೇವರುಗಳ ದೇವತೆಯಂತೆ,

ಸಮಾನತೆಯ ಸಾರುವ ಬೆಳಕಿನಂತೆ,

ಮಾನವೀಯತೆಯೇ ಪ್ರತ್ಯಕ್ಷಳಾದಂತೆ,

ಕಂಗೊಳಿಸುತ್ತದೆ……

ಇದು ಕಲ್ಪನೆಯೂ ಅಲ್ಲ,
ಅಸಾಧ್ಯವೂ ಅಲ್ಲ.

ನಮ್ಮ ನಿಮ್ಮ ಮನಗಳಲ್ಲಿ, ಪ್ರಬುದ್ಧತೆಯ ಬೀಜಾಂಕುರವಾದಾಗ,

ಯೋಚನಾಶಕ್ತಿ ವಿಶಾಲವಾದಾಗ
ಆಗ ಇದು ಸಾಧ್ಯವಾಗುತ್ತದೆ.

ನಾವು ಉಸಿರಾಡುತ್ತಿರುವಾಗಲೇ ಇದನ್ನು ನಿರೀಕ್ಷಿಸೋಣ, ………

ಇಲ್ಲದಿದ್ದರೆ ನಾವು ಪ್ರತಿನಿತ್ಯ ಹೆಣ ಉರುಳುವ,

ಆ ಹೆಣದ ರಕ್ತ ಮಾಂಸಗಳಿಗೆ ಹಾತೊರೆಯುವ ರಕ್ಕಸ ಸಂತತಿಯ ಹದ್ದುಗಳ ನಡುವೆ ಬದುಕುತ್ತಾ,

ನಾವೇ ಸರಿ ನಾವೇ ಶ್ರೇಷ್ಠ ನಮ್ಮ ಚಿಂತನೆಯೇ ಅತ್ಯುತ್ತಮ ಎಂಬ ಹುಚ್ಚಿಗೆ ಬಲಿಯಾಗಿ,

ಇಡೀ ಸಮಾಜ ಹುಚ್ಚರ ಸಂತೆಯಾಗುವುದರಲ್ಲಿ ಸಂದೇಹವಿಲ್ಲ.

ಈಗಲಾದರೂ ಎಚ್ಚೆತ್ತುಕೊಳ್ಳೋಣ……

ಇಡೀ ಭಾರತೀಯ ಸಮೂಹಕ್ಕೆ,

ಗಣರಾಜ್ಯೋತ್ಸವದ ಶುಭಾಶಯಗಳೊಂದಿಗೆ…..

ಭವ್ಯ ಭವಿಷ್ಯದ ಕನಸುಗಳನ್ನು ಕಾಣುತ್ತಾ….ನಿಮ್ಮೊಂದಿಗೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…….

About Author

Leave a Reply

Your email address will not be published. Required fields are marked *