ಅವೈಜ್ಞಾನಿಕ ಕಾಮಗಾರಿ: ಸಂಚಾರಕ್ಕೆ ಪರದಾಟ
1 min readಅವೈಜ್ಞಾನಿಕ ಕಾಮಗಾರಿ: ಸಂಚಾರಕ್ಕೆ ಪರದಾಟ
ಮೂಡಿಗೆರೆ: ಪಟ್ಟಣದ ಛತ್ರಮೈದಾನ ಬಡಾವಣೆಯಲ್ಲಿ ಚರಂಡಿ ನಿರ್ಮಿಸಲು ಕಾಂಕ್ರೀಟ್ ರಸ್ತೆಯನ್ನು ಅಗೆದು ಚರಂಡಿಯನ್ನು ನಿರ್ಮಿಸದೆ ಪೈಪ್ ಅಳವಡಿಸದೆ ಹಾಗೆಯೇ ಬಿಟ್ಟು ಹೋಗಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ವಕೀಲ ಕೆ.ಸಿ.ಚಂದ್ರಶೇಖರ್ ದೂರಿದರು.
ಅಮೃತ್ ಯೋಜನೆಯಲ್ಲಿ ಬಿಡುಗಡೆಯಾದ 18 ಕೋಟಿ ರೂ ವೆಚ್ಚದಲ್ಲಿ ಪಟ್ಟಣಕ್ಕೆ ನೀರೊದಗಿಸಲು ಕಾಮಗಾರಿ ಆರಂಭಿಸಿ 3 ತಿಂಗಳು ಕಳೆದಿದೆ. ಪಟ್ಟಣದ ಕೆಲವು ಕಡೆ ಪೈಪ್ ಅಳವಡಿಸಿ ಚರಂಡಿಮುಚ್ಚಿದ್ದು ಪಟ್ಟಣವೆಲ್ಲಾ ಧೂಳುಮಯವಾಗಿದೆ. ಇದರಿಂದಾಗಿ ಸಾರ್ವಜನಿಕರು ಮತ್ತು ರಸ್ತೆ ಪಕ್ಕದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಪೈಪ್ ಅಳವಡಿಸಿದ ಬಳಿಕ ಚರಂಡಿ ತೆಗೆದ ಜಾಗಕ್ಕೆ ಕಾಂಕ್ರೀಟ್ ಹಾಕದೆ ಹಾಗೇ ಬಿಟ್ಟ ಪರಿಣಾಮ ಪಟ್ಟಣದ ಕಾಂಕ್ರೀಟ್ ರಸ್ತೆಯಲ್ಲಿ ಉಬ್ಬುತಗ್ಗುಗಳು ಹೆಚ್ಚಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಆರೋಪಿಸಿದರು.
ಛತ್ರಮೈದಾನ ಬಡಾವಣೆಯ ಬಹುತೇಕ ರಸ್ತೆಗಳ ಮಧ್ಯಭಾಗದಲ್ಲಿ ರಸ್ತೆ ಉದ್ದಕ್ಕೂ ಬಗೆದು ಕಾಂಕ್ರೀಟ್ ಚೂರುಗಳನ್ನು ಹಾಗೇ ಬಿಡಲಾಗಿದೆ. ಬೆಳ್ಳಂಬೆಳಗ್ಗೆ ಹೋಗುವವರು ವಾಯುವಿಹಾರಕ್ಕೆ ಕಾಂಕ್ರೀಟ್ ಅವಶೇಷಗಳನ್ನು ಗಮನಿಸದೆ ಮುಗ್ಗರಿಸಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ಸೇರಿದ ನಿದರ್ಶನವಿದೆ. ಈ ರಸ್ತೆಗಳಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದಾಡಲು ಹರಸಾಹಸ ಪಡಬೇಕಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೊನಚಾದ ಕಾಂಕ್ರಿಟ್ ಚೂರುಗಳಿಂದ ವಾಹನಗಳ ಚಕ್ರ ಪಂಕ್ಚರ್ ಆಗುತ್ತಿದೆ. ಕಾಮಗಾರಿಯಲ್ಲಿ ಅಧಿಕಾರಿಗಳ ಕರ್ತವ್ಯ ಲೋಪದಿಂದ ಗುತ್ತಿಗೆದಾರ ಮನಸೋ ಇಚ್ಛೆ ಕಾಮಗಾರಿ ನಡೆಸಿದ್ದಾರೆ. ಕೂಡಲೇ ಜಿಲ್ಲಾಡಳಿತ ಕಾಮಗಾರಿಯನ್ನು ಪರಿಶೀಲಸಿ ತುರ್ತು ಕ್ರಮಕೈಗೊಂಡು ಬೇಕಾಬಿಟ್ಟಿ ಕೆಲಸ ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು.ಮತ್ತು ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.