ಅಕಾಲಿಕ ಮಳೆಯಿಂದ ಮುಂದಿನ ವರ್ಷದ ಫಸಲಿಗೆ ಸಂಚಕಾರ |
1 min readಅಕಾಲಿಕ ಮಳೆಯಿಂದ ಮುಂದಿನ ವರ್ಷದ ಫಸಲಿಗೆ ಸಂಚಕಾರ | ಸತತ ಏಳು ವರ್ಷಗಳಿಂದ ಬೆಳೆಗಾರರಿಗೆ ತಪ್ಪದ ಸಂಕಷ್ಟ
ಕೊಯ್ಲಿಗೆ ಮುನ್ನ ಕಾಫಿ ಗಿಡದಲ್ಲಿ ಅರಳಿದ ಹೂವು
ಕಳೆದ ವಾರ ಆಕಾಲಿಕ ಮಳೆಯಾಗಿದ್ದರಿಂದ ಕಾಫಿ ಗಿಡದಲ್ಲಿ ಹೂವು ಅರಳತೊಡಗಿದೆ. ಕಾಫಿ ಕೊಯ್ಲಿಗೆ ಮುಂಚಿತವಾಗಿ -ಹೂವು ಅರಳತೊಡಗಿರುವುದರಿಂದ ಈ ವರ್ಷದ ಫಸಲಿನ ಜತೆಗೆ ಮುಂದಿನ ವರ್ಷದ ಫಸಲು ಕೂಡ ನೆಲಕಚ್ಚಲಿದೆ ಎಂದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಪ್ರತಿವರ್ಷ ಮಾರ್ಚ್ ಕೊನೆಯಲ್ಲಿ ಮಳೆಯಾಗುವುದು ವಾಡಿಕೆ. 2019ರಿಂದ ಪ್ರತಿವರ್ಷ ಜನವರಿಯಲ್ಲಿ ಆಕಾಲಿಕ ಮಳೆಯಾಗುತ್ತಿದೆ. ಈ ವರ್ಷವೂ ಮಳೆ ಮುಂದುವರಿದರೆ ವರ್ಷದ ಆರಂಭದಲ್ಲಿ ಮಳೆಯಾದರೆ ಕಾಫಿ ಗಿಡದಲ್ಲಿ ಹೂವು ಅರಳುವುದು ಸಾಮಾನ್ಯ. ಮಾರ್ಚ್ ಮಧ್ಯದವರೆಗೆ ಕಾಫಿ ಕೊಯ್ದು ಮುಂದುವರಿಯಲಿದೆ. ಕಾಫಿ ಕೊಯ್ಲಿಗೆ ಮುಂಚಿತವಾಗಿ ಮಳೆಯಾದರೆ ಗಿಡದಲ್ಲಿ -ಹೂವು ಅರಳಿ ಕಾಫಿ ಕೊಯ್ಲಿನ ವೇಳೆ ಹೂವುಗಳು -ನೆಲಕಚ್ಚಿದರೆ ಮುಂದಿನ ವರ್ಷದ ಫಸಲಿಗೆ ಸಂಚಕಾರ ಉಂಟಾಗಲಿದೆ. ಅಲ್ಲದೆ ಗಿಡದಲ್ಲಿರುವ ಈಗಿನ ಕಾಫಿ ಫಸಲು ನೆಲಕಚ್ಚುವ ಆತಂಕವಿದೆ. ಕಾಫಿ ಕೊಯ್ದು ಮುಗಿದ ಬಳಿಕ ಮಳೆಯಾದರೆ ರೈತರಿಗೆ ವರದಾನವಾಗಲಿದೆ. ಕೊಯ್ಲಿನ ಬಳಿಕ ಮಳೆಯಾಗದಿದ್ದರೆ ಬೆಳೆಗಾರರು ಸ್ಪಿಂಕ್ಲರ್ ಮೊರೆ ಹೋಗಬೇಕಾಗುತ್ತದೆ. ಕಳೆದ ವಾರ ಮೂಡಿಗೆರೆ ಪಟ್ಟಣ. ಬಿಳಗುಳ, ಹ್ಯಾಂಡ್‌ಪೋಸ್ಟ್, ಬಿದರಹಳ್ಳಿ, ಬೀಜುವಳ್ಳಿ, ಹಳಸೆ, ಹಳೇಮೂಡಿಗೆರೆ ಭಾಗದಲ್ಲಿ ಎರಡು ದಿನ ತುಂತುರು ಮಳೆಯಾಗಿದೆ. ಗೋಣಿಬೀಡು, ಕಮ್ಮರಗೋಡು, ಅಗ್ರಹಾರ, ಹೊಸಳ್ಳಿ, ಉದುಸೆ, ಕಿರುಗುಂದ, ಉಗ್ಗೆಹಳ್ಳಿ, -ಹಂತೂರು, ದೇವರುಂದ, ಮಾಕೋನಹಳ್ಳಿ, ಬಣಕಲ್, ಬಾಳೂರು ಮತ್ತಿತರ ಕಡೆ ಮಳೆ ಹೆಚ್ಚಾಗಿದ್ದು ಎಲ್ಲ ಕಡೆ ಕಾಫಿ ಗಿಡದಲ್ಲಿ ಹೂವು ಅರಳಿದೆ. ಕೆಲ ತೋಟದಲ್ಲಿ ಕಾಫಿ ಫಸಲು ನೆಲಕಚ್ಚಿದೆ.
ಹೂವು ಅರಳಿರುವ ತೋಟಗಳಿಗೆ ಇನ್ನು 15 ದಿನದಲ್ಲಿ ಮತ್ತೊಮ್ಮೆ ನೀರಾಯಿಸದಿದ್ದಲ್ಲಿಗಿಡದಲ್ಲಿ ಅರಳಿರುವ ಹೂವುಗಳು ಸುಟ್ಟು ಹೋಗುತ್ತವೆ. ನೀರಾಯಿಸಿದರೆ ಮುಂದಿನ ವರ್ಷದ ಫಸಲಿಗೆ ಕಾಯಿ ಕಟ್ಟುವಿಕೆ ಮುಂದುವರಿಯುತ್ತದೆ. ಕಾಫಿ ಕೊಯ್ದಾಗದೆ ಅಕಾಲಿಕ ಮಳೆಯಿಂದ ಗಿಡದಲ್ಲಿ ಅರಳಿರುವ ಹೂವು ವ್ಯರ್ಥವಾಗುವುದು ನಿಶ್ಚಿತ ಎಂಬಂತಾಗಿದೆ.
ಹಳೇ ಮೂಡಿಗೆರೆ ಗ್ರಾಮದ ಕಾಫಿ ತೋಟದಲ್ಲಿ ಹೂವು ಅರಳಿರುವುದು. ಕಾಫಿ ಹಣ್ಣಿನ ಜತೆ ಹೂವು ಇರುವುದು.
ಸರ್ವೇ ನಡೆಸಿ ಸರ್ಕಾರಕ್ಕೆ ವರದಿ
ಅಕಾಲಿಕ ಮಳೆಯಿಂದ ಕೊಯ್ಲಿಗೆ ಮುಂಚಿತವಾಗಿ ಕಾಫಿ ಗಿಡದಲ್ಲಿ ಹೂವು ಅರಳಿದೆ. ಇದರಿಂದ ಈ ವರ್ಷದ ಕಾಫಿ ಫಸಲು ಕೊಯ್ದು ಮಾಡಲು ಅಡ್ಡಿಯಾಗಿದೆ. ಮುಂದಿನ ವರ್ಷದ ಫಸಲಿಗೂ ಸಂಚಕಾರ ಉಂಟಾಗಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ತಿಳಿಸಿದ್ದಾರೆ. ಹಾನಿಯ ಬಗ್ಗೆ ಕಾಫಿ ಮಂಡಳಿಯಿಂದ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗುವುದು. ಬೆಳೆಗಾರರು ಹಾನಿಗೆ ವಿಮೆ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಕಾಫಿಗೆ ವಿಮೆ ಯೋಜನೆ ಇಲ್ಲದಿರುವುದರಿಂದ ವಿಮೆ ಯೋಜನೆ ಜಾರಿಗೊಳಿಸಲು ಕಾಫಿ ಮಂಡಳಿಯಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಉನ್ನತ ಮಟ್ಟದ ಮೂರು ಸಭೆ ಕೂಡ ನಡೆದಿದೆ. ಸದ್ಯದಲ್ಲೇ ವಿಮೆ ಯೋಜನೆ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಸಕ್ತ ಬಾರಿ ಮುಕ್ತ ಮಾರುಕಟ್ಟೆಯಲ್ಲಿ ಕಾಫಿ ಧಾರಣೆ ಉತ್ತಮವಾಗಿದೆ. ಬೆಳೆಗಾರರು ನೆಮ್ಮದಿ ನಿಟ್ಟುಸಿರು ಬಿಡುವ ಮುನ್ನ ಮತ್ತೊಂದು ಆತಂಕ ಎದುರಾಗಿದೆ. ಕಳೆದ ವಾರ ಸುರಿದ ಮಳೆ ಬೆಳೆಗಾರರಿಗೆ ಕಹಿಯನ್ನುಂಟುಮಾಡಿದೆ. ಕಾಫಿ ಕೊಯ್ಲಿನ ಬಳಿಕ ಮರಕಸಿ ಮಾಡಿ ಮುಂದಿನ ವರ್ಷದ ಫಸಲಿಗಾಗಿ ತೋಟಕ್ಕೆ ನೀರಾಯಿಸಿದರೆ ಅಥವಾ ಮಳೆಯಾದರೆ ಗಿಡದಲ್ಲಿ ಹೂವು ಅರಳುತ್ತದೆ. 15 ದಿನದಲ್ಲಿ ಮತ್ತೊಮ್ಮೆ ನೀರಾಯಿಸಿದರೆ ಕಾಯಿ ಕಟ್ಟುವಿಕೆ ಆರಂಭವಾಗುತ್ತದೆ. ಈ ರೀತಿಯಾದರೆ ಮುಂದಿನ ವರ್ಷದ ಫಸಲಿಗೆ ತೊಂದರೆ ಉಂಟಾಗುವುದಿಲ್ಲ. ಆದರೆ ಈ ವರ್ಷ ಯೋಜನೆಗಳು ತಲೆಕೆಳಗಾಗಿ ಬೆಳೆಗಾರರ ನಿದ್ದೆಗೆಡಿಸುತ್ತಿದೆ.
ಬೆಳೆಗಾರರ ನೆರವಿಗೆ ಧಾವಿಸಿ
ಭಾರಿ ಮಳೆಯಾದ ಕೆಲವೆಡೆ ಮಾತ್ರ ಹಾನಿ ಸಂಭವಿಸಿದೆ. ಬಹುತೇಕ ಕಡೆಗಳಲ್ಲಿ ಕಡಿಮೆ ಮಳೆಯಾಗಿದೆ. ಹೂವು ಅರಳಿರುವ ಕಾರಣ ಬೆಳೆಗಾರರು ಇನ್ನೂ 10 ದಿನ ಫಸಲು ಕೊಯ್ಲಿಗೆ ಹೋಗ ಬಾರದು ಎಂದು ತಾಲೂಕು ಬೆಳೆಗಾರರ ‘ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣತಿಳಿಸಿದ್ದಾರೆ.
ಕೊಯಿಲಾದ ಬಳಿಕ ಸ್ಪಿಂಕ್ಲರ್ ಮಾಡಿದರೆ ಅಥವಾ ಮಳೆಯಾದರೆ ಮುಂದಿನ ವರ್ಷದ ಅರ್ಧದಷ್ಟು ಫಸಲನ್ನಾದರೂ ಕಾಪಾಡಿಕೊಳ್ಳಬಹುದಾಗಿದೆ. ಫಸಲಿರುವಾಗಲೇ ಹೂವಾಗಿರುವ ತೋಟಗಳನ್ನು ಕಾಫಿ ಮಂಡಳಿ ಅಧಿಕಾರಿಗಳು ಪರಿಶೀಲಿಸಿ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.