लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಭಿವೃದ್ಧಿಯ ರೂಪ ಮತ್ತು ಪರಿಣಾಮ – ಜನವರಿ 26 ರ ಗಣರಾಜ್ಯೋತ್ಸವದ ಸನಿಹದಲ್ಲಿ………..

1 min read

ಅಭಿವೃದ್ಧಿಯ ರೂಪ ಮತ್ತು ಪರಿಣಾಮ – ಜನವರಿ 26 ರ ಗಣರಾಜ್ಯೋತ್ಸವದ ಸನಿಹದಲ್ಲಿ………..

ಪ್ರಕೃತಿ ವಿಕೋಪ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸದಿದೆಯೇ ?
ಅನಾರೋಗ್ಯ ಮತ್ತು ಅಭಿವೃದ್ಧಿ ಜೊತೆಗಾರರೇ ?
ಅಪಘಾತ ಅಸಹನೆ ವಂಚನೆ ಮಾನಸಿಕ ರೋಗ ಅಭಿವೃದ್ಧಿಯ ಭಾಗವೇ ?
ಇದು ಅನಿವಾರ್ಯವೇ ?
ಅನಿರೀಕ್ಷಿತವೇ ?
ಸ್ವೀಕಾರಾರ್ಹವೇ ?…

ಪರಿಸರ ತಜ್ಞರ ಅಭಿಪ್ರಾಯ,
ಉದ್ಯಮಿಗಳ ಅಭಿಪ್ರಾಯ,
ಆರ್ಥಿಕ ತಜ್ಞರ ಅಭಿಪ್ರಾಯ,
ರಾಜಕಾರಣಿಗಳ ಅಭಿಪ್ರಾಯ,
ಜನ ಸಾಮಾನ್ಯರ ಅಭಿಪ್ರಾಯ ಏನಿರಬಹುದು ಮತ್ತು ಮಾನವನ ಹಿತಾಸಕ್ತಿಯ ದೃಷ್ಟಿಯಿಂದ ಯಾವುದು ಒಳ್ಳೆಯದು ಎಂದು ಯೋಚಿಸತೊಡಗಿದಾಗ…..

ಭೂಮಿ ಇರುವಷ್ಟೇ ಇದೆ ಮತ್ತು ಹಾಗೆಯೇ ಇರುತ್ತದೆ. ಸ್ವಲ್ಪ ಸಮುದ್ರಗಳ ಕೊರೆತದಿಂದ ಒಂದಷ್ಟು ಸಣ್ಣದಾಗಬಹುದು. ಅದನ್ನು ಸಹ ದೇಶಗಳಾಗಿ ವಿಭಜನೆ ಮಾಡಿ ರಿಜಿಸ್ಟರ್ ಮಾಡಿಸಿಕೊಳ್ಳಲಾಗಿದೆ. ಅದು ಇನ್ನು ದೊಡ್ಡದಾಗುವ ಯಾವ ಸಾಧ್ಯತೆಯೂ ಇಲ್ಲ.
ಇರುವುದರಲ್ಲೇ ಅಡ್ಜೆಸ್ಟ್ ಮಾಡಿಕೊಂಡು ಬದುಕಬೇಕಿದೆ.

ಇನ್ನು ಈ ಜಾಗದಲ್ಲಿ ಇರುವ ಮಾನವ ಅವಶ್ಯಕತೆಯ ನೈಸರ್ಗಿಕ ಸಂಪನ್ಮೂಲಗಳು ಸಾಕಷ್ಟು ವರ್ಷಗಳು, ಸಾಕಷ್ಟು ಜನರಿಗೆ ಸಾಕಾಗುವಷ್ಟು ಇದೆ.

ಆದರೆ ಆ ” ಸಾಕಷ್ಟು ” ಎಂಬುದೇ ಬಹುದೊಡ್ಡ ಪ್ರಶ್ನೆ ಮತ್ತು ನಮ್ಮ ಎದುರಿಗಿರುವ ಸವಾಲು.

ಮಳೆ, ಗಾಳಿ, ಕಾಡು, ನೀರು, ಸಮುದ್ರ, ಗಣಿ, ಕೃಷಿ, ಮಣ್ಣು, ಕಲ್ಲು, ಮುಂತಾದ ಎಲ್ಲವೂ ಒಂದು ಮಿತಿಗೆ ಒಳಪಟ್ಟು ಸಾಕಷ್ಟು ಸಿಗುತ್ತದೆ. ಅದು ಈಗ ಮಿತಿ ಮೀರಿದೆ ಎಂದು ಭಾಸವಾಗುತ್ತಿದೆ.

ಭಾರತವನ್ನೇ ಒಂದು ಉದಾಹರಣೆಯಾಗಿ ತೆಗೆದುಕೊಳ್ಳೋಣ.
ಸ್ವಾತಂತ್ರ್ಯ ಪೂರ್ವದಲ್ಲಿ ದಟ್ಟ ಕಾಡುಗಳ, ಗಿರಿ ಶಿಖರಗಳ, ಹಿಮಾಚ್ಛಾದಿತ ಪ್ರದೇಶಗಳ ಸಮೃದ್ಧ ನದಿಗಳ ನಾಡಾಗಿತ್ತು. ಈ ಬೃಹತ್ ದೇಶದ ಜನಸಂಖ್ಯೆ ಸ್ವಾತಂತ್ರ್ಯದ ಸಮಯದಲ್ಲಿ ಕೇವಲ ಸುಮಾರು 36 ಕೋಟಿಯಾಗಿತ್ತು. ವಾಹನಗಳು ತುಂಬಾ ಕಡಿಮೆ. ಮನೆಗಳು ಸಹ ಹೆಚ್ಚಿರಲಿಲ್ಲ. ಸಹಜವಾಗಿಯೇ ಕೃಷಿ ಮತ್ತು ಕೈಗಾರಿಕಾ ಆಗಿನ ಅವಶ್ಯಕತೆಗೆ ಮಾತ್ರ ಸೀಮಿತವಾಗಿತ್ತು.

ಸ್ವಾತಂತ್ರ್ಯ ನಂತರ ಬೆಳವಣಿಗೆಯ ವೇಗ ಹೆಚ್ಚಾಗತೊಡಗಿತು. ಜನಸಂಖ್ಯೆ ಅದರ ಜೊತೆಗೆ ಜನರ ಅವಶ್ಯಕತೆಗಳು ಬೆಳೆಯುತ್ತಾ ಹೋದವು. ತಂತ್ರಜ್ಞಾನದ ಕೊಡುಗೆ ಕೂಡ ಇದರ ಜೊತೆಯಾಯಿತು. 1990 ರ ಜಾಗತೀಕರಣದ ಪರಿಣಾಮವಾಗಿ ತೀವ್ರವಾದ ಕ್ರಾಂತಿ ಉಂಟಾಯಿತು. ಜನಸಂಖ್ಯೆ, ವಾಹನಗಳು, ಕಟ್ಟಡಗಳು, ಕೈಗಾರಿಕೆಗಳು, ಕೃಷಿ ಚಟುವಟಿಕೆಗಳು, ರಸ್ತೆಗಳು, ಜಲಾಶಯಗಳು ಎಲ್ಲವೂ ಹಲವಾರು ಪಟ್ಟು ಜಾಸ್ತಿಯಾದವು. ರಿಯಲ್ ಎಸ್ಟೇಟ್ ಎಂಬುದು ಬಹುದೊಡ್ಡ ಉದ್ಯಮ ಮತ್ತು ದಂಧೆಯಾಯಿತು. ಕಾಡುಗಳ ಕಡಿಮೆಯಾದವು, ಕೆರೆಗಳು ಮಾಯವಾದವು, ನದಿ ಮೂಲಗಳನ್ನು ಮುಚ್ಚಲಾಯಿತು, ಕೊಳವೆ ಬಾವಿಗಳು ನೀರನ್ನು ಹೀರಿದವು.

ಈ ಎಲ್ಲವೂ ಸಹ ನಮ್ಮದೇ ಸರಕಾರಗಳು ನಮ್ಮದೇ ಜನರಿಗಾಗಿ ಮಾಡಿದ ಅಭಿವೃದ್ಧಿ ಕೆಲಸಗಳು ಎಂದು ಭಾವಿಸಲಾಗಿದೆ.

ಹಾಗಾದರೆ ಅಭಿವೃದ್ಧಿ ಮತ್ತು ಅದರಿಂದ ಮನುಷ್ಯನಿಗೆ ಆಗುವ ತೊಂದರೆ ಎರಡೂ ಜೊತೆಯಾಗಿಯೇ ಸಾಗುತ್ತದೆ ಎಂದಾಯಿತು. ಅಂದ ಮೇಲೆ ಈ ಗೊಣಗಾಟ ಏಕೆ ?

ಇಲ್ಲಿ ಈ ಎರಡರ ನಡುವಿನ ಸಮತೋಲನದ ವಿವೇಚನೆ ಬಹಳ ಮುಖ್ಯ.

ಸರ್ಕಾರವನ್ನು ನಡೆಸುವ ಪಕ್ಷಗಳಿಗೆ ಅಧಿಕಾರ ಒಂದು ತಾತ್ಕಾಲಿಕ ಬಾಡಿಗೆ ಮನೆ ಇದ್ದಂತೆ. ಅದು ತುಂಬಾ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಕೇವಲ ತೇಪೆ ಹಾಕುವ ಕೆಲಸ ಮಾತ್ರ ಮಾಡುತ್ತದೆ.

ಜನಸಂಖ್ಯೆಗೆ ಒಂದು ಮಿತಿ ಹಾಕಬೇಕಾಗಿತ್ತು. ಅದು ಸಾಧ್ಯವಾಗಲಿಲ್ಲ. ದೂರದೃಷ್ಟಿಯ ಯೋಜನೆಗಳನ್ನು ರೂಪಿಸಬೇಕಾಗಿತ್ತು. ಆ ಕೆಲಸವನ್ನು ಮಾಡಲಿಲ್ಲ. ಪ್ರಕೃತಿಗೆ ಹೆಚ್ಚಿನ ತೊಂದರೆಯಾಗದ ರೀತಿ ಅತ್ಯಂತ ಸೂಕ್ಷ್ಮವಾಗಿ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಾಗಿತ್ತು. ಅದನ್ನು ಯಾರೂ ಮಾಡಲಿಲ್ಲ. ಈಗ ಅದರ ಪರಿಣಾಮ ಭೀಕರವಾಗಿದೆ.

ಎಲ್ಲರೂ ಈಗ ಹೇಳುತ್ತಿರುವುದು ಪ್ರಕೃತಿಯ ಮೇಲೆ ಮನುಷ್ಯ ಮಾಡಿದ ದೌರ್ಜನ್ಯಕ್ಕೆ ಪ್ರತಿಫಲವಾಗಿ ಪ್ರಕೃತಿ ಈಗ ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ. ಇದು ನಿರೀಕ್ಷಿವಲ್ಲವೇ ?

ಪ್ರಕೃತಿ ವಿಕೋಪಗಳಾದ ಭೂಕಂಪ, ಸುನಾಮಿ, ಪ್ರವಾಹ, ಬರ ಮುಂತಾದುವು ಪ್ರತಿನಿತ್ಯವೂ ಆಗುವುದಿಲ್ಲ. ಯಾವಾಗಲೋ ಅಪರೂಪಕ್ಕೆ ಸಂಭವಿಸುತ್ತದೆ. ಆದರೆ ಅದು ಮಾಡುವ ಅಪಘಾತ ತೀವ್ರ ಸ್ವರೂಪದ್ದಾಗಿರುತ್ತದೆ.

ಯೂರೋಪಿಯನ್ ದೇಶಗಳು ಈ ವಿಷಯದಲ್ಲಿ ನಮಗೆ ಮಾರ್ಗದರ್ಶನ ಮಾಡಬಹುದು. ಏಕೆಂದರೆ ಅವು ಸಾಕಷ್ಟು ಅಭಿವೃದ್ಧಿ ಹೊಂದಿಯೂ ಪ್ರಕೃತಿಯ ಸಹಜತೆಯನ್ನು ಕಾಪಾಡಿಕೊಂಡು ಬಂದಿವೆ.

ಒಟ್ಟಿನಲ್ಲಿ ಅಭಿವೃದ್ಧಿಯ ಮೂಲ ಅಂಶಗಳಾದ ರಸ್ತೆ, ವಾಹನ, ಸಂಪರ್ಕ, ಔಷಧಿ, ಮೊಬೈಲ್, ಬಂದೂಕು, ಬಾಂಬುಗಳು ಇತ್ಯಾದಿ ಎಲ್ಲವೂ ಮೇಲ್ನೋಟಕ್ಕೆ ಮನುಷ್ಯನನ್ನು ಹೆಚ್ಚು ನೆಮ್ಮದಿ ಮತ್ತು ಆರಾಮದಾಯಕ ಜೀವನದತ್ತ ಮುನ್ನಡೆಸುತ್ತಿದೆ ಎಂದು ಭಾಸವಾದರು ಆಂತರ್ಯದಲ್ಲಿ ಇದೇ ಅಭಿವೃದ್ಧಿ ಮನುಷ್ಯನನ್ನು ಅವಸಾನದತ್ತ ಕೊಂಡೊಯ್ಯುತ್ತಿದೆ. ಗಂಟಲಿನಲ್ಲಿರುವ ಬಿಸಿ ತುಪ್ಪದಂತಾಗಿದೆ ನಮ್ಮ ಪರಿಸ್ಥಿತಿ.
ಎಂತಹ ವಿಪರ್ಯಾಸ……

ಭಾರತದ ಮಟ್ಟಿಗೆ……

ಅಭಿವೃದ್ಧಿಯ ಮಾನದಂಡಗಳು…..

ದೆಹಲಿಯಿಂದ ರಾಷ್ಟ್ರಪತಿ ಮತ್ತು ಪ್ರಧಾನಿಗಳು ……………….

ಬೆಂಗಳೂರಿನಿಂದ ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳು………………

ಜಿಲ್ಲಾ ಕೇಂದ್ರಗಳಿಂದ ಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳು…………….

ತಾಲ್ಲೂಕುಗಳಿಂದ ತಾಲ್ಲೂಕು ಪಂಚಾಯತ್ ಅಧ್ಯಕ್ಷರು, ಶಾಸಕರು ಮತ್ತು ತಹಸೀಲ್ದಾರ್…………

ಗ್ರಾಮಗಳಿಂದ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪಿಡಿಓ ಅಧಿಕಾರಿಗಳು …….

ಜನವರಿ 26 ರಂದು ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಿಸಿ
ರಾಷ್ಟ್ರದ ಏಕತೆ – ಸಮಗ್ರತೆ – ಅಖಂಡತೆ – ಭಾವೈಕ್ಯತೆ – ಸಮೃಧ್ಧಿ – ಅಭಿವೃದ್ಧಿ ಬಗ್ಗೆ ಕಂಚಿನ ಕಂಠದ ಘೋಷಣೆಗಳು, ದೇಶದ ಹೆಮ್ಮೆಯ ಸಂವಿಧಾನ – ಅದರ ಆಶಯಗಳು – ಸಮಾನತೆ – ಸ್ವಾತಂತ್ರ್ಯ – ನ್ಯಾಯದ ಬಗ್ಗೆ ಪುಂಖಾನುಪುಂಖ ಭಾಷಣಗಳು, ಪತ್ರಿಕೆ ಟಿವಿಗಳಲ್ಲಿ ಅತ್ಯದ್ಭುತ ಲೇಖನ – ಕಾರ್ಯಕ್ರಮಗಳು, ಕೆಲವೆಡೆ ಔತಣಕೂಟಗಳು, ಹಲವೆಡೆ ಸಿಹಿ ಹಂಚಿಕೆ, ಕೊನೆಗೆ ದಿನದ ಮುಕ್ತಾಯ.
ಭಾರತ್ ಮಾತಾಕಿ ಜೈ…….ಮೇರಾ ಭಾರತ್ ಮಹಾನ್ ………….

ಮುಂದೆ……………….

ನಮ್ಮ ದೇಶದಲ್ಲಿ ಶೇಕಡ 60/70% ರೈತ ಕಾರ್ಮಿಕರಿದ್ದಾರೆ. ಅಂದರೆ ಸರಿಸುಮಾರು 70/80 ಕೋಟಿ ಜನರು ಕೃಷಿ ಮತ್ತು ಅದಕ್ಕೆ ಪೂರಕ ಕೆಲಸಗಳ ಮೇಲೆ ಅವಲಂಬಿತರು. ಅವರ ಪರಿಸ್ಥಿತಿ ಹೇಗಿದೆ ಗೊತ್ತೆ…………..

ದಯವಿಟ್ಡು ನಗಬೇಡಿ ……..

4 ನಿಂಬೆಹಣ್ಣಿನ ಬೆಲೆ ಕೇವಲ 10 ರೂಪಾಯಿ…..

1 KG ತೂಗುವ ಸುಮಾರು 15 ಟಮ್ಯಾಟೋ ಬೆಲೆ 10/15 ರೂಪಾಯಿ,….

ಸಾವಿರಾರು ಕಾಳು ಸೇರಿಸಿ 1 KG ಆಗುವ ಅಕ್ಕಿ ರಾಗಿ ಗೋದಿ ಜೋಳ ಬೇಳೆ ಕಾಳುಗಳ ಬೆಲೆ 30 ರಿಂದ 100/120 ರೂಪಾಯಿಗಳು……

ನೂರಾರು ಗಿಡ ಬಳ್ಳಿಗಳು ಸೇರಿ ಕಟ್ಟುವ ಒಂದು ದೊಡ್ಡ ಸೊಪ್ಪಿನ ಕಟ್ಟಿಗೆ 10/20 ರೂಪಾಯಿಗಳು…..

ಒಂದು ಲೀಟರ್ ನಷ್ಟು ಹಾಲಿಗೆ 35/40 ರೂಪಾಯಿಗಳು. ಇನ್ನೂ ಇನ್ನೂ ಅನೇಕ ………..

ಮನುಷ್ಯ ಬದುಕಿರುವುದೇ ಈ ಪದಾರ್ಥಗಳಿಂದ. ಅವನ ಆರೋಗ್ಯ – ನೆಮ್ಮದಿ – ಉತ್ಸಾಹ – ವಂಶಾಭಿವೃದ್ಧಿ ಎಲ್ಲಕ್ಕೂ ಈ ಆಹಾರಗಳೇ ಕಾರಣ…..

ಇದನ್ನು ಬೆಳೆಸಲು ರೈತರು ಪಡುವ ಕಷ್ಟದ ಅಂದಾಜಿದೆಯೇ. ಅವನ ಶ್ರಮ, ಸಮಯ, ಸವೆಸುವ ಬದುಕು, ಅನುಭವಿಸುವ ಯಾತನೆ ಯಾವ ಸಾಹಿತಿ ಕಲಾವಿದನಿಗೂ ವರ್ಣಿಸಲು ಸಾಧ್ಯವಾಗುವುದಿಲ್ಲ………..

ಮಾಲ್ ಗಳಲ್ಲಿ ಕಾರ್ ಪಾರ್ಕಿ೦ಗ್ ಗೆ ಗಂಟೆಗೆ 50/100 ಇದೆ……

ರೊಟ್ಟಿಯಂತ Pizza ಗೆ 400/500 ಬೆಲೆ ಇದೆ……

ಸಾಧಾರಣ ದರ್ಜೆಯ ಷೂ ಮತ್ತು ಬಟ್ಟೆಗೆ ಸಾವಿರಾರು ರೂಪಾಯಿ,….

ಲಿಪ್ ಸ್ಟಿಕ್, ಪರ್ಪ್ಯೂಂ ಬೆಲೆಗೆ ಮಿತಿಯೇ ಇಲ್ಲ…….

ಮೊಬೈಲ್ ಕಂಪ್ಯೂಟರ್ ಗಳ ಬೆಲೆಯಂತೂ ನಿಮ್ಮ ಹಣದ ತಾಕತ್ತನ್ನು ಅವಲಂಬಿಸಿದೆ………

ಏಕೆ ಈ ಅಸಮಾನತೆ. ರೈತರೇನು ಗುಲಾಮರೇ. ಅವರು ಬೆಳೆದ ಫಸಲಿಗೆ ಒಂದು ವೈಜ್ಞಾನಿಕ ಬೆಲೆ ಬೇಡವೇ. ಒಂದು ಒಳ್ಳೆಯ ಮಾರುಕಟ್ಟೆ ಬೇಡವೇ. ಅವರು ಬೆಳೆಯುವುದೇನು ಕಸ ಕಡ್ಡಿಯೇ…….

ರಾಜಕಾರಣಿಗಳೇ – ಅಧಿಕಾರಿಗಳೇ – ಪತ್ರಕರ್ತರೇ – ದೇಶಪ್ರೇಮಿಗಳೇ ನೆನಪಿಡಿ. ಭಾರತವಿನ್ನೂ ಅಭಿವೃದ್ಧಿ ಹೊಂದಿಲ್ಲ. ಮೇಲ್ನೋಟದ ಭ್ರಮೆಗೆ ಒಳಗಾಗದಿರಿ. ನಿಲ್ಲಿಸಿ ನಿಮ್ಮ ನಾಟಕ……‌‌

ಎಲ್ಲಿಯವರೆಗೆ ರೈತ ಕಾರ್ಮಿಕರೆಲ್ಲಾ ಸೇರಿದಂತೆ ಇರುವ ಸುಮಾರು ನೂರು ಕೋಟಿಯಷ್ಟು ಭಾರತೀಯರ ಮುಖದಲ್ಲಿ ನಗು ಕಾಣುವುದಿಲ್ಲವೋ, ಎಲ್ಲಿಯವರೆಗೆ ಅವರ ದಿನನಿತ್ಯದ ಬವಣೆಗಳು ಕಡಿಮೆಯಾಗಿ ನೆಮ್ಮದಿ ಮೂಡುವುದಿಲ್ಲವೋ ಅಲ್ಲಿಯವರಗೆ ಭಾರತ ಮುಂದುವರಿಯಲು ಪ್ರಯತ್ನಿಸುತ್ತಿರುವ ಹಿಂದುಳಿದ ದೇಶ………

ನಾವಿನ್ನೂ ಅಭಿವೃದ್ಧಿಯ ಮೊದಲ ಮೆಟ್ಟಿಲ ಹತ್ತಿರದಲ್ಲಿದ್ದೇವೆ ಅಷ್ಟೆ. ಭ್ರಮೆಗಳಿಂದ ಹೊರಬಂದು ನಿಜವಾದ ಸರ್ವತೋಮುಖವಾದ ಅಭಿವೃದ್ಧಿ ಸಾಧಿಸೋಣ………

ಆಗ ಮಾತ್ರ ಗಣರಾಜ್ಯೋತ್ಸವದ ನಿಮ್ಮ ಸಂಭ್ರಮಕ್ಕೆ ಒಂದು ಅರ್ಧ ಸಿಗುತ್ತದೆ…….

ಇತ್ತೀಚಿನ ಒಂದು ಖಾಸಗಿ ಸಂಸ್ಥೆಯ ಅಧ್ಯಯನದ ವರದಿಯ ಪ್ರಕಾರ ದೇಶದ ಶೇಕಡಾ 40% ಸಂಪತ್ತು ಕೇವಲ 1% ಜನರ ಬಳಿ ಇದೆ. 70 ಕೋಟಿ ಜನರಲ್ಲಿ ಇರುವ ಆಸ್ತಿಗೆ ಸಮಾನಾದ ಆಸ್ತಿ ಕೇವಲ 10 ಜನರ ಬಳಿ ಇದೆ…………..

ಇದಕ್ಕೆ ದೇಶದ ಆರ್ಥಿಕ ನೀತಿಗಳೇ ಕಾರಣ ಎಂದು ಹೇಳಲಾಗುತ್ತದೆ. ಕೋವಿಡ್ ನಂತರ ಶ್ರೀಮಂತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ ಮತ್ತು ಅದೇ ರೀತಿ ಬಡತನವೂ ಹೆಚ್ಚಾಗುತ್ತಿದೆ……..

ಆತ್ಮಸಾಕ್ಷಿ ಇರುವ ಯಾರೇ ಆದರು ಇದನ್ನು ಗಮನಿಸಿ ಪ್ರತಿಕ್ರಿಯಿಸಬೇಕು.
ಬೆಲೆ ಏರಿಕೆಯ ಬಿಸಿ ಕೆಳ ಮಧ್ಯಮ ವರ್ಗದ ಜನರ ಜೀವನದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಬೇಕು…..

ನುಣುಪಾದ ರಸ್ತೆ, ಜಗಮಗಿಸುವ ವಿಮಾನ ನಿಲ್ದಾಣ, ಅತ್ಯಾಕರ್ಷಕ ಮಾಲ್ ಗಳು, ಅದ್ದೂರಿ ಕಾರುಗಳು, ತುಂಡು ಬಟ್ಟೆಗಳು ಮಾತ್ರ ಅಭಿವೃದ್ಧಿಯ ಮಾನದಂಡಗಳಲ್ಲ…..

ಎಲ್ಲಾ ಜನರ ನೆಮ್ಮದಿಯ ಗುಣಮಟ್ಟ ಮಾತ್ರ ಸುಸ್ಥಿರ ಅಭಿವೃದ್ಧಿಯ ಸಂಕೇತ.
ಇದು ಆದಷ್ಟು ಬೇಗ ಸಾಧ್ಯವಾಗಲಿ. ಆಗ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವಗಳ ಆಚರಣೆಗೆ ನಿಜವಾದ ಅರ್ಥ ಬರುತ್ತದೆ. ಅಲ್ಲಿಯವರೆಗೂ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…….

About Author

Leave a Reply

Your email address will not be published. Required fields are marked *