ನಾನೆ ಶಾಖಾದ್ರಿ.
1 min readನಾನೆ ಶಾಖಾದ್ರಿ.
ವಿಶ್ವ ಹಿಂದು ಪರಿಷತ್, ಬಜರಂಗದಳದ ಮುಖಂಡರಿಗೆ ಶಾಖಾದ್ರಿ ಕುಟುಂಬದವರ ಬಗ್ಗೆ ಯಾವುದೇ ಜ್ಞಾನ, ಮಾಹಿತಿ ಇದ್ದಂತಿಲ್ಲ. ಅವರಿಗೆ ಗೊತ್ತಿರುವುದು ಶಾಖಾದ್ರಿ ಕುಟುಂಬಸ್ಥರ ಮೂರು, ನಾಲ್ಕು ಜನರ ಹೆಸರು ಬಿಟ್ಟರೇ ಹಿಂದಿನ ತಲೆಮಾರಿನವರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಶಾಖಾದ್ರಿ ಕುಟುಂಬಸ್ಥರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಈ ಮುಖಂಡರು ಗೊಂದಲ ಮೂಡಿಸುವುದನ್ನು ಕೂಡಲೇ ನಿಲ್ಲಿಸಬೇಕು. ತಾನು ಸೈಯದ್ ಬುಡೇನ್ ಶಾ ಖಾದ್ರಿ ವಂಶಸ್ಥ ಎನ್ನುವುದಕ್ಕೆ ತಮ್ಮ ಬಳಿ ದಾಖಲೆ ಇದ್ದು, ಸಂಘಪರಿವಾರದವರ ಸರ್ಟಿಫಿಕೆಟ್‌ನ ಅಗತ್ಯವಿಲ್ಲ ಎಂದು ಸೈಯದ್ ಬುಡೇನ್ ಶಾಖಾದ್ರಿ ವಂಶಸ್ಥ ಸೈಯದ್ ಫಕ್ರುದ್ದೀನ್ ಶಾಖಾದ್ರಿ ತಿಳಿಸಿದ್ದಾರೆ.
ಈ ಸಂಬಂಧ ಗುರುವಾರ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಇತ್ತೀಚೆಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿರುವ ವಿಎಚ್‌ಪಿ ಮುಖಂಡ ರಂಗನಾಥ್ ಎಂಬವರು ಶಾಖಾದ್ರಿ ವಂಶಸ್ಥರ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಮುಖ್ಯವಾಗಿ ತಾನು ಶಾಖಾದ್ರಿ ವಂಶಸ್ಥನೇ ಅಲ್ಲ, ಬಾಬಾಬುಡನ್ ಗಿರಿ ದರ್ಗಾದ ಆವರಣದಲ್ಲಿರುವ ಔದಂಬರ ವೃಕ್ಷದ ಬಳಿ ಇರುವ ಗೋರಿಗಳು ಶಾಖಾದ್ರಿ ವಂಶಸ್ಥರದ್ದಲ್ಲ ಎಂದು ಹೇಳಿಕೆ ನೀಡಿದ್ದಾರೆ. ಬಾಬಾ ಬುಡನ್‌ಗಿರಿ ವಿಚಾರವನ್ನು ಸದಾ ವಿವಾದವಾಗಿರಿಸುವ ಉದ್ದೇಶದಿಂದಲೇ ಸಂಘಪರಿವಾರದವರು ಸುಳ್ಳಿನ ಸರಮಾಲೆಗಳನ್ನೇ ಪದೇ ಪದೇ ಹೇಳುತ್ತಾ ಬಂದಿದ್ದು, ಇಂದಿಗೂ ಅದನ್ನೇ ಮುಂದುವರಿಸಿದ್ದಾರೆ ಎಂದಿದ್ದಾರೆ.
ವಿಎಚ್‌ಪಿ ಮುಖಂಡ ರಂಗನಾಥ್ ಅವರಿಗೆ ಶಾಖಾದ್ರಿ ವಂಶಸ್ಥರ ಯಾವುದೇ ಮಾಹಿತಿ ಇಲ್ಲ,
ಅವರು ಶಾಖಾದ್ರಿ ವಂಶಸ್ಥರಾದ ಗೌಸ್ ಶಾಖಾದ್ರಿ, ಮುರ್ತಜಾ ಶಾಖಾದ್ರಿ, ಗೌಸ್ ಮೊಹಿದ್ದೀನ್ ಶಾಖಾದ್ರಿ ಹಾಗೂ ಪೀರ್ ಮೊಹಮ್ಮದ್ ಶಾಖಾದ್ರಿ ಎಂಬ ನಾಲ್ಕು ತಲೆಮಾರಿನ ಶಾಖಾದ್ರಿಗಳ ಹೆಸರುಗಳನ್ನು ಮಾತ್ರ ಪ್ರಸ್ತಾಪಿಸಿದ್ದು, ಈ ನಾಲ್ಕು ತಲೆಮಾರಿನವರ ಪೂರ್ವಜರ ಬಗ್ಗೆ ಯಾವುದೇ ಮಾಹಿತಿ ಇದ್ದಂತಿಲ್ಲ. ವಿಎಚ್‌ಪಿ ಮುಖಂಡರು ಹೇಳಿರುವ ಶಾಖಾದ್ರಿಗಳ ಪೂರ್ವಜರ ವಂಶವೃಕ್ಷದ ದಾಖಲೆ ತಮ್ಮ ಬಳಿ ಇದ್ದು, ಈ ದಾಖಲೆಗಳನ್ನು ಅಧ್ಯಯನ ಮಾಡಿದಲ್ಲಿ ತಾನು ಶಾಖಾದ್ರಿ ವಂಶಸ್ಥನೋ ಅಲ್ಲವೋ ಎಂಬುದು ಖಾತ್ರಿಯಾಗುತ್ತದೆ. ತಾನು ಶಾಖಾದ್ರಿ ವಂಶಸ್ಥ ಎಂಬುದಕ್ಕೆ ತಮ್ಮ ಬಳಿ ದಾಖಲೆ ಇದೆ ಎಂದಿರುವ ಅವರು, ಸುಳ್ಳನ್ನೇ ಸತ್ಯ ಮಾಡಲು ಹೊರಟಿರುವ ಸಂಘ ಪರಿವಾರದವರಿಗೆ ಸತ್ಯ ತಿಳಿದುಕೊಳ್ಳುವ ತವಕವೇ ಇರುವುದಿಲ್ಲ.
ಈ ಕಾರಣದಿಂದಾಗಿಯೇ ಅವರು ದಾಖಲೆಗಳನ್ನು ಅಧ್ಯಯನ ಮಾಡದೇ ಪದೇ ಪದೇ ಸುಳ್ಳನ್ನೇ ಹೇಳುತ್ತಾ ಸುಳ್ಳನ್ನೇ ಸತ್ಯ ಮಾಡಲು ಹೊರಟಿದ್ದಾರೆ, ಆದರೆ ಸತ್ಯಕ್ಕೆ ಜಯಸಿಗುವ ನಂಬಿಕೆ ತಮಗಿದೆ. ಶಾಖಾದ್ರಿ ಅವರು ವಂಶಸ್ಥರ ಬಗ್ಗೆ ಅರೆಜ್ಞಾನ ಹೊಂದಿರುವ ಸಂಘಪರಿವಾರದವರಿಂದಾಗಿ ಜಿಲ್ಲೆಯ ಜನರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆಯೇ ಹೊರತು ಈ ವಿಚಾರದಲ್ಲಿ ನಾವು ಸತ್ಯ ಮತ್ತು ನಮ್ಮ ಪೂರ್ವಜನರು ಸಂರಕ್ಷಿಸಿಕೊಂಡು ಬಂದಿರುವ ದಾಖಲೆ ಆಧರಿಸಿ ತಾನು ಸತ್ಯವನ್ನೇ ಜನರ ಮುಂದಿಡುತ್ತಿದ್ದೇನೆ ಎಂದಿದ್ದಾರೆ.
ಮೈಸೂರು ಮಹಾರಾಜರು ಹಿಂದೆ ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ದರ್ಗಾದ ಉಸ್ತುವಾರಿಗೆ ಗೌಸ್ ಶಾ ಖಾದ್ರಿ ಎಂಬವರನ್ನು ಮ್ಯಾನೇಜರ್ ಆಗಿ ನೇಮಿಸಿದ್ದರೆಂದು ವಿಎಚ್‌ಪಿ ಮುಖಂಡ ರಂಗನಾಥ್ ಹೇಳಿದ್ದಾರೆ, ಶಾಖಾದ್ರಿ ಅವರ ನೇಮಕ ಮಾಡುವುದು ಶಾಖಾದ್ರಿ ಕುಟುಂಬಸ್ಥರ ಆಂತರಿಕ ವಿಚಾರ ಎಂದು ಹಿಂದಿನ ಸರಕಾರಿ ದಾಖಲೆಗಳಲ್ಲೇ ಸ್ಪಷ್ಟವಾಗಿ ಹೇಳಲಾಗಿದೆ.
ಈ ಸಂಬಂದ ಸಂಘಪರಿವಾರದವರಿಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ದಾಖಲೆಗಳಲ್ಲೂ ನೀಡಲು ಸಿದ್ಧ ಎಂದಿದ್ದಾರೆ.
ಬಾಬಾ ಬುಡೆನ್ ದರ್ಗಾದ ಗುಹೆಯೊಳಗಿನ ಧ್ಯಾನಸ್ಥಳ, ಪಾದುಕೆ, ನಂದಾದೀಪದ ವಿಚಾರದಲ್ಲಿ ನಾವು ಯಾವುದೇ ಸುಳ್ಳು ಹೇಳಿಲ್ಲ, ಸರಕಾರಿ, ಮುಜರಾಯಿ ಇಲಾಖೆ ದಾಖಲೆಗಳಲ್ಲಿರುವುದನ್ನೇ ಹೇಳಿದ್ದೇವೆ ಎಂದ ಅವರು, ಔದಂಬರ ವೃಕ್ಷದ ಆವರಣದಲ್ಲಿರುವ ಗೋರಿಗಳು ತಮ್ಮ ಕುಟುಂಬಸ್ಥರದ್ದೇ ಎನ್ನುವುದಕ್ಕೂ ನಮ್ಮ ಬಳಿ ದಾಖಲೆಗಳಿದ್ದು, ಗೋರಿಗಳ ಮೇಲೆ ಉರ್ದು ಭಾಷೆಯಲ್ಲಿರುವ ಹೆಸರುಗಳೇ ಇದಕ್ಕೆ ಸಾಕ್ಷಿ. ಹಿಂದೂ ಸಾಧುಗಳ ಸಮಾಧಿಯಾಗಿದ್ದರೇ ಅವುಗಳ ಮೇಲೆ ಉರ್ದು ಹೆಸರುಗಳು ಬರೆದದ್ದು ಯಾರು?, ಹಿಂದೂ ಸಾಧುಗಳು ಸೂಫಿ ಸಮುದಾಯದವರ ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದರಾ? ಎಂದು ಅವರು ಪ್ರಶ್ನಿಸಿದ್ದಾರೆ.
ಬಾಬಾ ಬುಡೆನ್ ದರ್ಗಾದ ಆವರಣದಲ್ಲಿ ನಾವು ಹೊಸ ಆಚರಣೆಗಳಿಗೆ ಚಾಲನೆ ನೀಡಿದ್ದೇವೆ ಎಂಬ ವಿಎಚ್‌ಪಿ ಮುಖಂಡರ ಹೇಳಿಕೆ ಸುಳ್ಳು, ನಾವು ಹಿಂದಿನಿಂದ ಆಚರಿಸಲ್ಪಡುತ್ತಿದ್ದ, ದಾಖಲೆಗಳಲ್ಲಿರುವ ಆಚರಣೆಗಳನ್ನೇ ಮಾಡಲು ಮುಂದಾಗಿದ್ದೆವು, ಆದರೆ ಮುಜರಾಯಿ ಇಲಾಖೆ ಅಧಿಕಾರಿಗಳು ಹಿಂದಿನ ಆಚರಣೆಗಳಿಗೆ ಅವಕಾಶ ನೀಡಿಲ್ಲ, ಅವರ ವಿರುದ್ಧ ಕ್ರಮ ಜರುಗಿಸಬೇಕೆಂಬ ನಮ್ಮ ಆಗ್ರಹಕ್ಕೆ ಈಗಲೂ ಬದ್ಧ ಎಂದಿದ್ದಾರೆ.
ಖಾವಿ ಹಾಕಿ ಕೆಲವರು ಸುಳ್ಳು ಹೇಳುತ್ತಾ ಸಮಾಜದ ಸ್ವಾಸ್ಥ ಕೆಡಿಸುತ್ತಿದ್ದಾರೆ. ಆದರೆ ನಾವು ಖಾವಿ ಹಾಕಿಕೊಂಡು ಸತ್ಯವನ್ನೇ ಹೇಳುತ್ತಿದ್ದೇವೆ. ನಮ್ಮ ಸಮುದಾಯದವರಲ್ಲಿ ಖಾವಿ, ಹಸಿರು, ಬಿಳಿ ಬಟ್ಟೆಗೆ ವಿಶೇಷ ಅರ್ಥ, ಗೌರವ ಇದೆ. ಈ ಬಟ್ಟೆಗಳನ್ನು ನಮ್ಮ ಹಿರಿಯರೂ ಬಳಸುತ್ತಿದ್ದರು. ನನ್ನ ತಂದೆ, ಅಜ್ಜ ಹಾಗೂ ಅವರ ಹಿರಿಯರೂ ಈ ಬಟ್ಟೆಗಳನ್ನು ಧರಿಸುತ್ತಿದ್ದರು, ಖಾವಿ ಬಟ್ಟೆಯ ವಿಚಾರವನ್ನು ಸಂಘಪರಿವಾರದವರಿಂದ ತಿಳಿಯುವ ಅಗತ್ಯ ತಮಗಿಲ್ಲ ಎಂದಿದ್ದಾರೆ.
ಸೈಯದ್ ಗೌಸ್ ಶಾಖಾದ್ರಿ ಅವರ ಹಿರಿಯರು ಸೈಯದ್ ಮೀರ ಶಾಖಾದ್ರಿ ಆಗಿದ್ದು, ಅವರ ತಂದೆ ಸೈಯದ್ ಜಮಾಲ್ ಶಾಖಾದ್ರಿ ಆಗಿದ್ದಾರೆ, ಇವರ ತಂದೆ ಸೈಯದ್ ಬುಡನ್ ಶಾಖಾದ್ರಿ ಆಗಿದ್ದಾರೆ. ಇದೆ ಸಜ್ಜಾದ ನಶೀನ್ ಆದ ಹಜ್ರತ್ ಸೈಯದ್ ಬುಡನ್ ಶಾ ಖಾದ್ರಿ ಅವರ ಮಗ ಸಜ್ಜಾದ ನಶೀನ್ ಹಜ್ರತ್ ಸೈಯದ್ ಜಮಾಲ್ ಶಾಖಾದ್ರಿ ಆಗಿದ್ದಾರೆ, ಇವರ ಮಗ ಸಜ್ಜಾದ ನಶೀನ್ ಹಜ್ರತ್ ಸೈಯದ್ ಮೀರ ಶಾಖಾದ್ರಿ, ಇವರ ಮಗ ಹಜ್ರತ್ ಸೈಯದ್ ಮೊಹಿದ್ದೀನ್ ಶಾಖಾದ್ರಿ, ಇವರ ಮಗ ಸೈಯದ್ ಬುಡನ್ ಶಾಖಾದ್ರಿ, ಇವರ ಮಗ ಸೈಯದ್ ಹುಸೇನ್ ಶಾಖಾದ್ರಿ, ಇವರ ಮಗ ಸೈಯದ್ ಲತೀಫ್ ಶಾಖಾದ್ರಿ, ಇವರ ಮಗ ಸೈಯದ್ ಹಸೇನ್ ಶಾಖಾದ್ರಿ ಆಗಿದ್ದು, ಇವರ ಮಗನೇ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ಆಗಿದ್ದಾರೆ. ಬಾಬಾ ಬುಡನ್ ದರ್ಗಾಕೆ ಹಲವು ದಶಕಗಳ ಇತಿಹಾಸ ಇದೆ. ಈವರು ಹೇಳದಂಗೆ ಬರಿ 4 ತಲೆಮಾರದಲ್ಲ.
– ಸೈಯದ್ ಫಕ್ರುದ್ದೀನ್ ಶಾಖಾದ್ರಿ