ಅಂಬೇಡ್ಕರ್ ಪುತ್ತಳಿ ವಿಚಾರವಾಗಿ ಭೀಮ ಕೊರೆಂಗಾವ್ ವಿಜಯೋತ್ಸವ ತಂಡದ ಎರಡು ಗುಂಪುಗಳ ನಡುವೆ ಘರ್ಷಣೆ
1 min readಅಂಬೇಡ್ಕರ್ ಪುತ್ತಳಿ ವಿಚಾರವಾಗಿ ಭೀಮ ಕೊರೆಂಗಾವ್ ವಿಜಯೋತ್ಸವ ತಂಡದ ಎರಡು ಗುಂಪುಗಳ ನಡುವೆ ಘರ್ಷಣೆ
ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ತಳಿ ತೆರವುಗೊಳಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಶನಿವಾರ ಸಂಜೆ ಗಲಭೆ ನಡೆದಿದ್ದು, ಪೋಲಿಸರ ಮುನ್ನೆಚ್ಚರಿಕೆ ಕ್ರಮದಿಂದ ಗಲಭೆಗೆ ತಾತ್ಕಾಲಿಕ ತಿಲಾಂಜಲಿ ಇಟ್ಟಂತಾಗಿದೆ.
ಜ.3ರಂದು ಭೀಮ ಕೋರೆಂಗಾವ್ ವಿಜಯೋತ್ಸವ ಸಮಿತಿ ವತಿಯಿಂದ ಪಟ್ಟಣದ ಲಯನ್ಸ್ ವೃತ್ತದಲ್ಲಿ ಭೀಮ ಕೋರೆಂಗಾವ್ ವಿಜಯೋತ್ಸವ ಆಚರಿಸಲಾಯಿತು. ಆ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಪುತ್ತಳಿಯನ್ನು ವೇದಿಕೆ ಪಕ್ಕದಲ್ಲಿ ಪರವಾನಗಿ ಪಡೆಯದೇ ಪ್ರತಿಷ್ಠಾಪಿಸಲಾಗಿತ್ತು. ಶನಿವಾರ ಬೆಳಗ್ಗೆ ವೇದಿಕೆ ಸಂಪೂರ್ಣ ತೆರವುಗೊಳಿಸಿದ್ದರೂ ಅಂಬೇಡ್ಕರ್ ಪುತ್ತಳಿ ಮಾತ್ರ ತೆರವುಗೊಳಿಸದೇ ಹಾಗೆಯೇ ಬಿಡಲಾಗಿತ್ತು.
ಜ.10ರಂದು ಭೀಮ ಕೋರೆಂಗಾವ್ ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಇನ್ನೊಂದು ಭೀಮ ಕೋರೆಂಗಾವ್ ಆಚರಣೆ ಸಂಘದ ಸದಸ್ಯರು, ಜ.10ಕ್ಕೆ ಏರ್ಪಡಿಸಿದ್ದ ಭೀಮ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮವನ್ನು ಇದೇ ಅಂಬೇಡ್ಕರ್ ಪುತ್ತಳಿ ಮುಂದೆ ವೇದಿಕೆ ಹಾಕಲು ಚಿಂತನೆ ನಡೆಸಿದ್ದರು. ಅಲ್ಲದೇ ಶನಿವಾರ ಸಂಜೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರ ಸಮ್ಮುಖದಲ್ಲಿ ಅಂಬೇಡ್ಕರ್ ಪುತ್ತಳಿಗೆ ಹಾರ ಹಾಕಿ, ನಂತರ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿತ್ತು.
ಶನಿವಾರ ರಾತ್ರಿ 8ಗಂಟೆಗೆ ಜ.3ರಂದು ನಡೆಸಿದ ಭೀಮ ಕೋರೆಂಗಾವ್ ಸಮಿತಿ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಅಂಬೇಡ್ಕರ್ ಪುತ್ತಳಿ ಕಾರ್ಯಕ್ರಮಕ್ಕಾಗಿ ಮಾತ್ರ ಪ್ರತಿಷ್ಟಾಪಿಸಲಾಗಿತ್ತು. ಪಟ್ಟಣದಲ್ಲಿ ಅಂಬೇಡ್ಕರ್ ಪುತ್ತಳಿ ಪ್ರತಿಷ್ಠಾಪಿಸಲು ಈ ಹಿಂದೆಯೇ ಪ.ಪಂ.ಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಜಾಗ ಗುರುತು ಮಾಡಿರಲಿಲ್ಲ. ಹಾಗಾಗಿ ಉತ್ತಮ ಸ್ಥಳದಲ್ಲಿ ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ. ಈಗ ತೆರವುಗೊಳಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಆಗ ಪೊಲೀಸರು ಪುತ್ತಳಿ ತೆರವುಗೊಳಿಸಲು ಮುಂದಾದಾಗ ಕೆಲ ದಲಿತ ಮುಖಂಡರು ಅಂಬೇಡ್ಕರ್ ಪುತ್ತಳಿಯನ್ನು ಕಾರ್ಯಕ್ರಮಕ್ಕೆ ಮಾತ್ರ ಬಳಸಿಕೊಂಡಿದ್ದರೆ, ಕಾರ್ಯಕ್ರಮ ಮುಗಿದ ಕೂಡಲೇ ತೆರವುಗೊಳಿಸಬೇಕಿತ್ತು. ಮರು ದಿನ ಸಂಜೆ ಕಳೆದರೂ ಹಾಗೆಯೇ ಯಾಕೆ ಬಿಟ್ಟಿದ್ಯಾಕೆ? ಪುತ್ತಳಿಯನ್ನು ಯಾರೂ ತೆರವುಗೊಳಿಸಬಾರದೆಂದು ಪಟ್ಟು ಹಿಡಿದರು. ಆಗ ಎರಡೂ ಗುಂಪುಗಳ ನಡುವೆ ಗಲಭೆ ಸೃಷ್ಟಿಯಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪೊಲೀಸರ ಸಮಯ ಪ್ರಜ್ಞೆಯಿಂದ ಗಲಭೆ ತಿಳಿಗೊಳಿಸಿದರು. ಈ ಸಂದರ್ಭದಲ್ಲಿ ಸಿಪಿಐ ಸೋಮೇಗೌಡ ಮಾತನಾಡಿ, ನಾಳೆ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಉತ್ತಮ ಸ್ಥಳದಲ್ಲಿ ಅಂಬೇಡ್ಕರ್ ಪುತ್ತಳಿ ನಿರ್ಮಿಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು. ಅದಕ್ಕೆ ಒಪ್ಪಿ ಅಲ್ಲಿದ್ದ ಅಂಬೇಡ್ಕರ್ ಪುತ್ತಳಿ ತೆರವುಗೊಳಿಸಲು ಅನುವು ಮಾಡಿಕೊಟ್ಟರು.
****
ಪಟ್ಟಣದ ಲಯನ್ಸ್ ವೃತ್ತದ ಮೇಲೆ ದೊಡ್ಡ ಕನ್ನಡ ಭಾವುಟ ಹಾರಾಡುತ್ತಿತ್ತು. ಅದನ್ನು ಡಿ.3 ರಂದು ನಡೆಸುವ ಭೀಮ ಕೊರೆಂಗಾವ್ ವಿಜಯೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ತೆರವುಗೊಳಿಸಲಾಗಿತ್ತು. ಇದರಿಂದ ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕೂಡಲೆ ಎಚ್ಚೆತ್ತುಕೊಂಡ ಕೊರೆಂಗಾವ್ ಸಮಿತಿ ಕೂಡಲೆ ಸಣ್ಣ ಕನ್ನಡ ಭಾವುಟ ಕಟ್ಟಿದ್ದು, ದೊಡ್ಡ ಭಾವುಟವನ್ನು ಕಾರ್ಯಕ್ರಮ ಮುಗಿದ ಮೇಲೆ ಹಾಕಲಾಗುವುದು ಎಂದು ಕನ್ನಡಪರ ಸಂಘಟಕರಿಗೆ ಮನವಿ ಮಾಡಿಕೊಂಡಿದ್ದರು. ಈಗ ಅಂಬೇಡ್ಕರ್ ಪುತ್ಥಳಿ ವಿಚಾರವಾಗಿ ಗಲಭೆ ಸೃಷ್ಟಿಯಾಗಿದೆ.